‘ದಡ್ಡ ರೂಮಿ!’ ಶಮ್ಸ್ ಹಾಗಂದಿದ್ದೇಕೆ….. : ಸೂಫಿ ಪದ್ಯ

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ನನಗೆ ಖಾತ್ರಿ ಇದೆ
ಮುಂದಿನ ಕೆಲ ವರ್ಷಗಳಲ್ಲಿ
ಜನ ಹೀಗೆ ಮಾತನಾಡಿಕೊಳ್ಳುತ್ತಾರೆ.

ರೂಮಿ ಇದ್ದಾಗ, ನಾವೂ ಇದ್ದರೆ ಎಷ್ಟು ಚೆನ್ನಿತ್ತು,
ಅವನ ಗೆಳೆತನದ ಭಾಗ್ಯ ನಮಗೂ ಸಾಧ್ಯವಾಗುತ್ತಿತ್ತು,
ಅವನ ಮಾತುಗಳನ್ನ ಸಾಕ್ಷಾತ್
ಅವನು ಮಾತಾಡುತ್ತಿರುವಾಗಲೇ
ಕೇಳುವ ಅವಕಾಶ ಲಭ್ಯವಾಗುತ್ತಿತ್ತು.

ಗೆಳೆಯರೇ
ಅವನ ಸಂಗಾತ
ನಮಗೆ ಈಗ ಸಾಧ್ಯವಾಗಿದೆ,
ಯಾವ ಜಾಣರಾದರೂ ಈ ಅವಕಾಶ ಬಿಡುವುದುಂಟೆ?

ಸಮಸ್ತ ಪ್ರವಾದಿಗಳ ಆತ್ಮಗಳು
ಅವನನ್ನು ದಿಟ್ಟಿಸಿ ನೋಡುತ್ತಿರುವ
ದಿವ್ಯ ದೃಶ್ಯವನ್ನ ನೋಡಿ ಕಣ್ತುಂಬಿಕೊಳ್ಳಿ
ಆದರೆ ಮೊದಲು ನಿಮ್ಮ
ಸಂಶಯದ ಚೆಹರೆಗಳನ್ನ ಕಳಚಿಟ್ಟು.

~

ರೂಮಿ ಹೇಳುತ್ತಿದ್ದಾನಂತೆ,
“ನನ್ನಂಥವನ ಒಳಗೆ
ಭಗವಂತನನ್ನು ಕಾಣ ಬಯಸುತ್ತಿದ್ದಾನೆ
ಈ ಶಮ್ಸ್…”

ದಡ್ಡ ರೂಮಿ! ಇದು ಪೂರ್ಣ ತಪ್ಪು ತಿಳುವಳಿಕೆ…
ನಾನು, ಭಗವಂತನ ಒಳಗೆ
ರೂಮಿಯನ್ನು ಹುಡುಕುತ್ತಿದ್ದೇನೆ.

Leave a Reply