ಬ್ರಹ್ಮವಾದಿನಿ ಗಾರ್ಗಿ ಋಷಿ ಯಾಜ್ಞವಲ್ಕ್ಯನಿಗೆ ಕೇಳಿದ ಪ್ರಶ್ನೆಗಳು ಯಾವುವು ಗೊತ್ತೆ?

ಸಮೂಹದಲ್ಲಿದ್ದ ಗಾರ್ಗಿಯು ಅದನ್ನು ತಡೆಯುತ್ತ ಎದ್ದು ನಿಂತು, ತಾನು ಕೆಲವು ಪ್ರಶ್ನೆಗಳನ್ನು ಕೇಳುವುದಿದೆ ಎಂದಳು. ಇಡಿಯ ಬ್ರಹ್ಮ ಸಭೆ ಅವಾಕ್ಕಾಯಿತು. ಮಹಾಜ್ಞಾನಿ ಯಾಜ್ಞವಲ್ಕ್ಯರನ್ನು ಓರ್ವ ಸ್ತ್ರೀಯು ಪ್ರಶ್ನಿಸುವುದೆ? ಅವರೆದುರು ನಿಂತು ವಾದ ಮಾಡುವುದೆ?’ ಎಂದು ತಮ್ಮತಮ್ಮಲ್ಲೆ ಮಾತಾಡಿಕೊಂಡರು. ಆದರೆ ಗಾರ್ಗಿಯು ಯಾವುದೇ ಅಳುಕಿಲ್ಲದೆ ಪ್ರಶ್ನೆಗಳನ್ನು ಕೇಳಲಾರಂಭಿಸಿದಳು. ~ ಚೇತನಾ

gargi

ವೇದಕಾಲೀನ ಭಾರತದ ಋಷಿಕೆಯರಲ್ಲಿ ಗಾರ್ಗೀ ವಾಚಕ್ನವಿಯ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಅಧ್ಯಾತ್ಮ ಚಿಂತಕಿಯೂ ತತ್ತ್ವಜ್ಞಾನಿಯೂ ಆಗಿದ್ದ ಗಾರ್ಗೀ ಗುರುಕುಲದಲ್ಲಿ ಶಿಕ್ಷಣ ಪಡೆದು ಪಂಡಿತಳೆಂದು ಗುರುತಿಸಿಕೊಂಡಿದ್ದಳು. ವಿದೇಹ ರಾಜ್ಯದ ವಿದ್ವಾಂಸ ವಲಯದಲ್ಲಿ ಈಕೆಗೆ ವಿಶೇಷ ಗೌರವವಿತ್ತು. ಈಕೆ ಅಸ್ತಿತ್ವ ಮೂಲದ ಕುರಿತು ಎತ್ತಿದ ಪ್ರಶ್ನೆಗಳು ಬೃಹದಾರಣ್ಯಕ ಉಪನಿಷತ್ತಿನಲ್ಲಿ ಸ್ಥಾನ ಪಡೆದುಕೊಂಡಿವೆ.
ಗರ್ಗ ಗೋತ್ರದಲ್ಲಿ ಜನಿಸಿದವಳಾದುದರಿಂದ ಈಕೆಗೆ `ಗಾರ್ಗೀ’ ಎಂಬ ಹೆಸರು. ಹಾಗೂ ವಚಕ್ನು ಋಷಿಯ ಮಗಳಾದ್ದರಿಂದ ಈಕೆ ವಾಚಕ್ನವಿ.

ಗಾರ್ಗೀ ಒಬ್ಬ ಬ್ರಹ್ಮವಾದಿನಿ. ವೇದಕಾಲೀನ ಸಂಸ್ಕೃತಿಯಲ್ಲಿ ಹೆಣ್ಣುಮಕ್ಕಳಿಗೂ ಉಪನಯನಾಧಿಕಾರ ಇರುತ್ತಿತ್ತು. ಕೆಲವರು ಸ್ವ ಇಚ್ಛೆಯಿಂದ ಬಾಲ್ಯದಲ್ಲೇ ಉಪನಯನ ಸಂಸ್ಕಾರ ಪಡೆದು, ವೇದಾಧ್ಯಯನ ನಡೆಸಿ ಪರಬ್ರಹ್ಮ ಉಪಾಸನೆಯನ್ನು ಕೈಕೊಳ್ಳುತ್ತಿದ್ದರು. ಇವರನ್ನು ಬ್ರಹ್ಮವಾದಿನಿಯರೆಂದು ಕರೆಯಲಾಗುತ್ತಿತ್ತು. ಹಾಗೆ ಅಧ್ಯಯನ ನಡೆಸುವ ಬದಲು ಗೃಹಸ್ಥ ಜೀವನದಲ್ಲಿ, ಕಾರ್ಯಗಳಲ್ಲಿ ಒಲವು ತೋರುತ್ತಿದ್ದ ಹೆಣ್ಣುಮಕ್ಕಳನ್ನು ಸದ್ಯೋವಧುಗಳೆಂದು ಕರೆಯಲಾಗುತ್ತಿತ್ತು. ಅವರಿಗೆ ಮದುವೆಯ ಹಿಂದಿನ ದಿನ ಉಪನಯನ ಮಾಡಿ, ಅನಂತರ ಧಾರೆ ಎರೆದುಕೊಡಲಾಗುತ್ತಿತ್ತು.
ಗಾರ್ಗೀ ಸತತ ಅಧ್ಯಯನ – ಅಭ್ಯಾಸಗಳಿಂದ ಶಾಸ್ತ್ರಾರ್ಥದಲ್ಲಿ ವಿಶೇಷಾಧಿಕಾರ ಹೊಂದಿದ್ದಳು. ಪ್ರಾಶ್ನಿಕ ಬುದ್ಧಿಯವಳಾಗಿದ್ದ ಆಕೆ, ಪ್ರತಿಯೊಂದನ್ನೂ ಪ್ರಶ್ನಿಸಿ, ಪರಾಂಬರಿಸಿ ಅಧ್ಯಯನ ನಡೆಸುತ್ತಿದ್ದಳು. ಹಾಗೆಂದೇ ರಾಜರ್ಷಿ ಜನಕ ಮಹಾರಾಜ ತಾನು ಕೈಕೊಂಡ ಯಜ್ಞ ಪೂರ್ತಿಯಾದ ಅನಂತರ ಏರ್ಪಡಿಸಿದ್ದ ಸಂತುಷ್ಟ ಬ್ರಹ್ಮ ಸಭೆಗೆ ಗಾರ್ಗಿಯನ್ನೂ ಆಹ್ವಾನಿಸಿದ್ದು.

ಜನಕ ರಾಜನು ಏರ್ಪಡಿಸಿದ್ದ ಈ ಸಂತುಷ್ಟ ಬ್ರಹ್ಮ ಸಭೆಯಲ್ಲಿ ಕುರು, ಪಾಂಚಾಲ ಇತ್ಯಾದಿ ಅನೇಕ ದೇಶಗಳ ಬ್ರಾಹ್ಮಣ ವಿದ್ವಾಂಸರು ಸೇರಿದ್ದರು. ಸ್ವತಃ ಪಂಡಿತನೂ, ವಿದ್ವಾಂಸನೂ, ಜ್ಞಾನಿಯೂ ಆಗಿದ್ದ ಜನಕನ ಮನಸ್ಸಿನಲ್ಲಿ ಅಲ್ಲಿ ಬಂದಿರುವವರಲ್ಲಿ ಎಲ್ಲರಿಗಿಂತ ಹೆಚ್ಚು ತತ್ತ್ವವೇತ್ತ ಹಾಗೂ ಪಂಡಿತರು ಯಾರಾಗಿರಬಹುದು ಎಂಬುದನ್ನು ಕಂಡುಹಿಡಿಯಬೇಕೆನ್ನುವ ಅಭಿಲಾಷೆ ಹುಟ್ಟಿತು. ಇದಕ್ಕಾಗಿ ಗೋಶಾಲೆಯಲ್ಲಿನ ಒಂದು ಸಾವಿರ ಗೋವುಗಳನ್ನು ಪಣವಾಗಿಟ್ಟನು. ಅವುಗಳಲ್ಲಿ ಪ್ರತಿಯೊಂದು ಹಸುವಿನ ಪ್ರತಿಯೊಂದು ಕೊಂಬಿಗೂ ಹತ್ತು ಸುವರ್ಣಗಳನ್ನು ಕಟ್ಟಿಸಿದನು ಹಾಗೂ `ನಿಮ್ಮಲ್ಲಿ ಯಾರು ಅತ್ಯಂತ ದೊಡ್ಡ ಬ್ರಹ್ಮವೇತ್ತರೋ ಅವರು ಈ ಎಲ್ಲ ಗೋವುಗಳನ್ನೂ ತೆಗೆದುಕೊಂಡು ಹೋಗಬಹುದು’ ಎಂದು ಘೋಷಿಸಿದನು.

ಆದರೆ ಆ ಗೋವುಗಳನ್ನು ತೆಗೆದುಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಹಾಗೆ ಮುಂದೆ ಬಂದವರು ಅಷ್ಟೂ ಜನ ಬ್ರಾಹ್ಮಣರನ್ನು ವಾದದಲ್ಲಿ, ಶಾಸ್ತ್ರಾರ್ಥದಲ್ಲಿ ಗೆಲ್ಲಬೇಕು. ಅದೆಲ್ಲಿ ಸಾಧ್ಯ? ಅವರಿಗೆ ತಮ್ಮ ತಮ್ಮ ಬ್ರಹ್ಮವೇತ್ತತೆಯಲ್ಲಿಯೇ ಅನುಮಾನ ಬಂದಿತು. ಈ ಸೂಕ್ಷ್ಮವನ್ನು ಅರಿತ ಅವರೆಲ್ಲರೂ ಸುಮ್ಮನಾದರು. ಇದನ್ನು ಗಮನಿಸಿದ ಯಾಜ್ಞವಲ್ಕ್ಯರು, `ಆ ಹಸುಗಳನ್ನೆಲ್ಲ ತೆಗೆದುಕೊಂಡು ನಡೆ!’ ಎಂದು ಸಾಮವೇದಾಧ್ಯಯನಿಯಾದ ತಮ್ಮ ಶಿಷ್ಯ ಸೋಮದೇವನಿಗೆ ಹೇಳಿದರು. ಇದನ್ನು ಆಲಿಸಿದ ಬ್ರಾಹ್ಮಣವರ್ಗದವರೆಲ್ಲರೂ ಕ್ಷುಬ್ಧರಾದರು.

ಆಗ ವಿದೇಹ ರಾಜನ ಪುರೋಹಿತನಾದ ಅಶ್ವಲನು, `ತಾವು ಎಲ್ಲರಿಗಿಂತಲೂ ಹೆಚ್ಚು ಬ್ರಹ್ಮವೇತ್ತರೊ?’ ಎಂದು ಯಾಜ್ಞ್ಯವಲ್ಕ್ಯರನ್ನು ಕೇಳಿದನು.
ಆತ ನಮ್ರತೆಯಿಂದ, `ಇಲ್ಲಿನ ಬ್ರಹ್ಮವೇತ್ತರಿಗೆಲ್ಲ ವಂದಿಸುತ್ತೇನೆ. ನನಗೆ ಹಸುಗಳ ಆವಶ್ಯಕತೆ ಇದೆ. ಆದ್ದರಿಂದ ತೆಗೆದುಕೊಂಡು ಹೋಗುತ್ತಿದ್ದೇನೆ. ಇಲ್ಲಿ ನನ್ನನ್ನು ಶಾಸ್ತ್ರಾರ್ಥದಲ್ಲಿ ಸೋಲಿಸಬಲ್ಲವರಿದ್ದರೆ ತಡೆಯಬಹುದು’ ಎಂದು ಹೇಳಿದರು.

ಯಾಜ್ಞವಲ್ಕ್ಯರು ಮಾತು ಮುಗಿಸುತ್ತಲೇ ಹಸುಗಳನ್ನು ಕೊಂಡೊಯ್ಯಲು ಅವರ ಯೋಗ್ಯತೆಯನ್ನು ನಿರ್ಣಯಿಸುವ ಶಾಸ್ತ್ರಾರ್ಥ ಪ್ರಾರಂಭ ಆಗಿಯೇಬಿಟ್ಟಿತು. ಪ್ರತಿಯೊಬ್ಬ ಬ್ರಾಹ್ಮಣ ವಿದ್ವಾಂಸನೂ ಯಾಜ್ಞವಲ್ಕ್ಯರನ್ನು ಪ್ರಶ್ನಿಸತೊಡಗಿದ. ವಾದಕ್ಕೆ ಪ್ರಚೋದಿಸಿದ. ಆದರೆ ಅವರು ಎಲ್ಲ ಪ್ರಶ್ನೆಗಳಿಗೂ ಧೈರ್ಯದಿಂದ ಉತ್ತರಿಸಿದರು. ಜರತ್ಕಾರು ಗೋತ್ರದ ಆರ್ತ ಭಾಗ, ಲಾಹ್ಯಾಯನಿ, ಭುಜ್ಯು, ಚಾಕ್ರಾಯಣ, ಉಷಸ್ತ, ಕೌಷೀತಕೇಯ, ಕಹೋಲ ಇತ್ಯಾದಿ ವಿದ್ವಾಂಸರೆಲ್ಲ ವಾದಮಾಡಿ ಸುಮ್ಮನಾದರು. ಯಾಜ್ಞವಲ್ಕ್ಯರು ತಮ್ಮ ಶಿಷ್ಯರೊಂದಿಗೆ ಗೋವುಗಳನ್ನು ಕೊಂಡೊಯ್ಯಲು ಅನುವಾದರು.

ಆದರೆ ಆ ಸಮೂಹದಲ್ಲಿದ್ದ ಗಾರ್ಗಿಯು ಅದನ್ನು ತಡೆಯುತ್ತ ಎದ್ದು ನಿಂತು, ತಾನು ಕೆಲವು ಪ್ರಶ್ನೆಗಳನ್ನು ಕೇಳುವುದಿದೆ ಎಂದಳು. ಇಡಿಯ ಬ್ರಹ್ಮ ಸಭೆ ಅವಾಕ್ಕಾಯಿತು. ಮಹಾಜ್ಞಾನಿ ಯಾಜ್ಞವಲ್ಕ್ಯರನ್ನು ಓರ್ವ ಸ್ತ್ರೀಯು ಪ್ರಶ್ನಿಸುವುದೆ? ಅವರೆದುರು ನಿಂತು ವಾದ ಮಾಡುವುದೆ?’ ಎಂದು ತಮ್ಮತಮ್ಮಲ್ಲೆ ಮಾತಾಡಿಕೊಂಡರು.

ಗಾರ್ಗಿ ಬುದ್ಧಿವಂತೆ. ಆಕೆ ಕೇವಲ ಪ್ರಶ್ನಿಸುವ ಚಪಲದಿಂದ ಎದ್ದು ನಿಲ್ಲಲಿಲ್ಲ. ಮಹಾಜ್ಞಾನಿಯಾಗಿದ್ದ ಯಾಜ್ಞವಲ್ಕ್ಯರಿಂದ ಕೆಲವು ಅಮೂಲ್ಯ ಸಂಗತಿಗಳನ್ನು ತಿಳಿಯಲು ಅದೊಂದು ಸದವಕಾಶವೆಂದು ಅವಳು ಭಾವಿಸಿದಳು. ಹಾಗೆಂದೇ ತಾನು ಚಿಂತನೆ ನಡೆಸುತ್ತಿದ್ದ ಅಸ್ತಿತ್ವ ಮೂಲದ ವಿಷಯದ ಬಗ್ಗೆ ಯಾಜ್ಞವಲ್ಕ್ಯರ ವ್ಯಾಖ್ಯಾನವನ್ನು ಕೇಳಿ ತಿಳಿಯಲು ಅವಳು ಬಯಸಿದ್ದಳು.

ಗಾರ್ಗಿಯು ಯಾವುದೇ ಅಳುಕಿಲ್ಲದೆ ಪ್ರಶ್ನೆಗಳನ್ನು ಕೇಳಲಾರಂಭಿಸಿದಳು.
`ಈ ಪಾರ್ಥಿವ ಪದಾರ್ಥಗಳೆಲ್ಲವೂ ನೀರಿನಲ್ಲಿ ಹಾಸುಹೊಕ್ಕಾಗಿವೆ. ಆದರೆ ನೀರು ಯಾವುದರಲ್ಲಿ ಹಾಸು ಹೊಕ್ಕಾಗಿದೆ?‘ ಎಂದು ಪ್ರಶ್ನಿಸಿದಳು.
`ನೀರು ವಾಯುವಿನಲ್ಲಿ ಹಾಸುಹೊಕ್ಕಾಗಿದೆ’ ಎಂದು ಯಾಜ್ಞವಲ್ಕ್ಯರು ಉತ್ತರಿಸಿದರು.
ಈ ರೀತಿ ಮುಂದುವರಿದ ವಾದ-ಪ್ರತಿವಾದಗಳು ವಾಯು, ಆಕಾಶ, ಅಂತರಿಕ್ಷ, ಗಂಧರ್ವಲೋಕ, ಆದಿತ್ಯಲೋಕ, ಚಂದ್ರಲೋಕ, ನಕ್ಷತ್ರಲೋಕ, ದೇವಲೋಕ, ಇಂದ್ರಲೋಕ, ಪ್ರಜಾಪತಿಲೋಕಗಳಿಗೆ ಸಂಬಂಧಪಟ್ಟ ಪ್ರಶ್ನೋತ್ತರಗಳಾದವು. ಯಾಜ್ಞವಲ್ಕ್ಯರು ಗಾರ್ಗಿಯಲ್ಲಿರುವ ಬ್ರಹ್ಮಜ್ಞಾನವನ್ನು ಗುರ್ತಿಸಿದರು. ಅಂತೆಯೇ ತಾವೂ ಅವಳನ್ನು ಬಹಳವಾಗಿ ಪ್ರಶ್ನಿಸಿದರು.
`ಬ್ರಹ್ಮಲೋಕವು ಯಾವುದರಲ್ಲಿ ಸಮ್ಮಿಳಿತವಾಗಿದೆ?’ ಎಂದು ಗಾರ್ಗೀ ಪಟ್ಟು ಹಿಡಿದವಳಂತೆ ಕೇಳಿದಳು.
`ಗಾರ್ಗೀ, ಇದೊಂದು ಅತೀತ ಪ್ರಶ್ನೆ. ಇದು ಉತ್ತರ ನೀಡುವುದರ ಎಲ್ಲೆಯಾಗಿದೆ. ಇದರಾಚೆ ಯಾವ ಪ್ರಶ್ನೆಯೂ ಬರಬಾರದು. ಹಾಗೆ ಮಾಡಿದ್ದೇ ಆದರೆ ನಿನ್ನ ತಲೆಯೂ ಛಿದ್ರವಾಗುವುದು.’ ಎನ್ನುತ್ತಾರೆ. ಆದರೆ ಸಭೆಗೆ ಉತ್ತರಿಸಲೇಬೇಕಿರುವುದು ಅನಿವಾರ್ಯವಾಗಿದ್ದರಿಂದ ಬ್ರಹ್ಮ ಯಾವುದು ಎಂದು ವಿವರಿಸುವುದಕ್ಕೆ ನೇತಿ-ನೇತಿ ವಿಧಾನವನ್ನು ಅನುಸರಿಸುತ್ತಾರೆ. ಅಂದರೆ ಯಾವುದೆಲ್ಲ ಬ್ರಹ್ಮ ಅಲ್ಲ ಎಂದು ಹೇಳುತ್ತಾ ಹೋಗುತ್ತಾರೆ. `ಸ್ಥೂಲವಾಗಿ ಬ್ರಹ್ಮ ಆಕಾಶವಲ್ಲ, ಭೂಮಿಯೂ ಅಲ್ಲ; ನೀರು ಅಲ್ಲ, ಘನವೂ ಅಲ್ಲ; ಗಾಳಿಯೂ ಅಲ್ಲ, ನೀರವವೂ ಅಲ್ಲ; ಬೆಳಕೂ ಅಲ್ಲ, ಕತ್ತಲೆಯೂ ಅಲ್ಲ; ಶಬ್ದವೂ ಅಲ್ಲ, ನಿಶ್ಶಬ್ದವೂ ಅಲ್ಲ; ಆಕಾರವೂ ಅಲ್ಲ ನಿರಾಕಾರವೂ ಅಲ್ಲ; ಅದಲ್ಲ, ಇದೂ ಅಲ್ಲ …’ ಎಂದು ಉತ್ತರಿಸುತ್ತಾರೆ.

ಅಲ್ಪಜ್ಞರಿಗೆ ಈ ಉತ್ತರ ಅಧಿಕಪ್ರಸಂಗದ್ದಾಗಿ ಕಂಡರೂ ವಿದುಷಿಯಾದ ಗಾರ್ಗಿಯು ಯಾಜ್ಞವಲ್ಕ್ಯರ ಒಳ ಅಭಿಪ್ರಾಯವನ್ನು ಅರಿತಳು. ಬ್ರಹ್ಮವನ್ನು ನಿರೂಪಿಸಲು ಬಾರದು. ಹಾಗೊಮ್ಮೆ ಅದನ್ನು ಹೇಳಿದ್ದು – ಕೇಳಿದ್ದೇ ಆದರೆ, ಆ ತಿಳಿವಳಿಕೆಯು ಆತ್ಮವನ್ನು ದೇಹದಲ್ಲಿ ಬಹಳ ಕಾಲ ಬಂಧಿಯಾಗಿರಲು ಬಿಡಲಾರದು ಅನ್ನುವುದು ಅವರ ಉತ್ತರದ ಅಂತರಾರ್ಥವಾಗಿತ್ತು. ಅದನ್ನರಿತ ಗಾರ್ಗಿಯು ಸುಮ್ಮನಾಗುತ್ತಾಳೆ. 

ಅವಳ ಅನಂತರ, ಏಳನೆಯವನಾಗಿ ಪ್ರಶ್ನಿಸಿದ ಉದ್ದಾಲಕನು ಸೋತುಹೋಗುತ್ತಾನೆ. ಆಗ ಗಾರ್ಗಿಯು ತಡೆಯಲಾರದೆ, ಬ್ರಹ್ಮಸಭೆಯ ಅಪ್ಪಣೆಯೊಂದಿಗೆ ಮತ್ತೆರಡು ಪ್ರಶ್ನೆಗಳನ್ನು ಕೇಳುತ್ತಾಳೆ. ಸ್ವರ್ಗ – ಮರ್ತ್ಯಗಳನ್ನು ಸದಾಕಾಲವೂ ಆವರಿಸಿದ್ದು ಯಾವುದು ಎಂಬ ಪ್ರಶ್ನೆಗೆ ಯಾಜ್ಞವಲ್ಕ್ಯನಿಂದ ಆಕಾಶವೆಂಬ ಉತ್ತರ ಸಿಗುತ್ತದೆ.
`ಆಕಾಶವನ್ನು ಆವರಿಸಿದ್ದು ಯಾವುದು?’ ಎಂದು ಕೇಳುತ್ತಾಳೆ ಗಾರ್ಗೀ.
ಆಗ ಯಾಜ್ಞವಲ್ಕ್ಯನು, `ಆಕಾಶವನ್ನು ಯಾವುದು ತಾನೇ ಆವರಿಸಬಲ್ಲದು?’ ಎಂದು ಮರುಪ್ರಶ್ನೆ ಹಾಕುತ್ತಾ, `ಆಕಾಶ ಎಲ್ಲದರಲ್ಲಿದ್ದು ಎಲ್ಲವನ್ನೂ ಮೀರಿದ್ದು, ಬ್ರಹ್ಮನನ್ನು ಸಂಪುರ್ಣವಾಗಿ ಅರಿಯುವುದು ಯಾರಿಂದಲೂ ಎಂದಿಗೂ ಸಾಧ್ಯವಿಲ್ಲ ‘ ಎಂದು ಉತ್ತರಿಸುತ್ತಾನೆ. ಯಾಜ್ಞ ವಲ್ಕ್ಯನ ಉತ್ತರದಿಂದ ಗಾರ್ಗೀ ಸಂತೃಪ್ತಿ ಹೊಂದಿ ಯಾಜ್ಞವಲ್ಕ್ಯನನ್ನು ಬ್ರಹ್ಮಿಷ್ಠನೆಂದು ಮನ್ನಿಸಲು ಸಭೆಯನ್ನು ಕೇಳಿಕೊಳ್ಳುತ್ತಾಳೆ.

ಗಾರ್ಗಿಯ ಈ ಪ್ರಶ್ನೋತ್ತರ ಸಂವಾದದಿಂದ ಇಡಿಯ ಜನಕ ಸಭೆಗೆ ಉಪಯೋಗವಾಗುತ್ತದೆ. ಪ್ರಶ್ನೆ ಕೇಳುವವರಲ್ಲಿ ಸೂಕ್ತ ಜ್ಞಾನ ಇದ್ದರಷ್ಟೆ ಉತ್ಕೃಷ್ಟ ಉತ್ತರಗಳನ್ನು ಪಡೆಯಲು ಸಾಧ್ಯ. ತನ್ನ ಗಾರ್ಗೀ – ಯಾಜ್ಞವಲ್ಕ್ಯರ ಈ ಸಂವಾದವು ಬೃಹದಾರಣ್ಯಕ ಉಪನಿಷತ್ತಿನ ಮೂರನೆ ಅಧ್ಯಾಯದಲ್ಲಿ ಸ್ಥಾನ ಪಡೆಯುತ್ತದೆ. ಇದು ಗಾರ್ಗಿಯ ಜ್ಞಾನಕ್ಕೆ ದೊರೆತ ಮನ್ನಣೆಯಾಗಿದೆ.

Leave a Reply