ಆಚಾರ್ಯರು ರಾಜಕುಮಾರನಿಗೆ ಒದ್ದಿದ್ದು ಯಾಕೆ?

“ನಾನೀಗ ಸಾಮ್ರಾಟ. ಈ ಪದವಿ ಪಡೆದ ಕೂಡಲೇ ನಾನು ಮಾಡಬೇಕು ಅಂದುಕೊಂಡಿದ್ದ ಮೊದಲ ಕೆಲಸವನ್ನೀಗ ಮಾಡಲು ಹೊರಟಿದ್ದೇನೆ. ಆಚಾರ್ಯರು ಎಲ್ಲಿದ್ದರೂ ಮುಂದೆ ಬರಬೇಕು” ಅಂದ. ಆಚಾರ್ಯರು ಮುಂದೆ ಬಂದು ನಿಂತರು….

ಮಗಧ ಸಾಮ್ರಾಜ್ಯ ಭರತ ಖಂಡದಲ್ಲಿ ಪ್ರತಿಷ್ಠಿತ ಸಾಮ್ರಾಜ್ಯವೆಂದು ಹೆಸರಾಗಿದ್ದ ಕಾಲವದು. ಮಗಧ ಸಾಮ್ರಾಟನಿಗೊಬ್ಬ ಮಗ ಇದ್ದ. ಪ್ರಾಪ್ತ ವಯಸ್ಕನಾಗುತ್ತಲೇ ಆತನನ್ನು ಗುರುಕುಲಕ್ಕೆ ಕಳುಹಿಸಲಾಯಿತು.

ಗುರುಕುಲದಲ್ಲಿ ರಾಜಕುಮಾರ ಚೆನ್ನಾಗಿ ಅಭ್ಯಾಸ ಮಾಡುತ್ತಿದ್ದ. ಬಹಳ ಚುರುಕಾಗಿದ್ದ. ಗುರುಕುಲದ ಆಚಾರ್ಯರಿಗೂ ಶಿಷ್ಯನ ಬಗ್ಗೆ ವಿಪರೀತ ಹೆಮ್ಮೆ.

ಹೀಗಿರುತ್ತ, ಒಮ್ಮೆ ರಾಜಕುಮಾರ ಕೊಳದ ಬಳಿ ನಿಂತಿದ್ದ. ಆಚಾರ್ಯ ಎಲ್ಲಿಂದಲೋ ಧಾವಿಸಿ ಬಂದವರು ಆತನನ್ನು ಹಿಂದಿನಿಂದ ಒದ್ದುಬಿಟ್ಟರು. ಆ ಹೊಡೆತಕ್ಕೆ ರಾಜಕುಮಾರ ಮುಗ್ಗರಿಸಿ ಬಿದ್ದ. ಎಲ್ಲರೂ ಜೋರಾಗಿ ನಕ್ಕರು. ಅವನು ಸಾವರಿಸಿಕೊಂಡು ಎದ್ದವನೇ ಬಹಳ ಸಮಾಧಾನದಿಂದ, “ಆಚಾರ್ಯ, ನನ್ನ ಪ್ರಮಾದವೇನು? ನನಗೆ ಒದ್ದಿದ್ದು ಏಕೆ?” ಎಂದು ಕೇಳಿದ.
ಆಚಾರ್ಯ ಉತ್ತರಿಸದೆ ಅಲ್ಲಿಂದ ಹೊರಟುಹೋದರು.

ಅದಾಗಿ ಬಹಳ ದಿನಗಳವರೆಗೆ ರಾಜಕುಮಾರ ಆಚಾರ್ಯರನ್ನು ಕೇಳುತ್ತಲೇ ಇದ್ದ. ಅವನ ಸಹಪಾಠಿಗಳೂ ಆಚಾರ್ಯರ ಬಾಯಿ ಬಿಡಿಸುವಲ್ಲಿ ಸೋತರು. ಕೊನೆಗೆ ರಾಜಕುಮಾರ ಸುಮ್ಮನಾದ.

ವರ್ಷಗಳು ಉರುಳಿದವು. ರಾಜಕುಮಾರ ವಿದ್ಯಾಭ್ಯಾಸ ಮುಗಿಸಿ ಅರಮನೆಗೆ ಮರಳಿದ. ಅದಾಗಿ ನಾಲ್ಕೈದು ವರ್ಷಕ್ಕೆ ಸಾಮ್ರಾಟ ತಮ್ಮ ಮಗನಿಗೆ ಪಟ್ಟ ಕಟ್ಟಲು ಬಯಸಿದ. ಅದಕ್ಕಾಗಿ ಕಾರ್ಯಕ್ರಮವೂ ಏರ್ಪಾಟಾಯಿತು. ಮುಖ್ಯ ಅತಿಥಿಗಳ ಪಟ್ಟಿಯಲ್ಲಿ ಆಚಾರ್ಯರ ಹೆಸರನ್ನೂ ಸೇರಿಸುವಂತೆ ಮಗ ಕೇಳಿಕೊಂಡ. ಅದರಂತೆ ಆಚಾರ್ಯರಿಗೂ ಆಹ್ವಾನ ಹೋಯಿತು.

ಪಟ್ಟಾಭಿಷೇಕ ಅದ್ದೂರಿಯಿಂದ ನಡೆಯಿತು. ರಾಜಕುಮಾರ ಸಾಮ್ರಾಟ ಪದವಿ ಸ್ವೀಕರಿಸಿದ ಕೂಡಲೇ ದರ್ಬಾರಿನ ಗಮನ ಸೆಳೆದು ಎದ್ದು ನಿಂತ.

“ನಾನೀಗ ಸಾಮ್ರಾಟ. ಈ ಪದವಿ ಪಡೆದ ಕೂಡಲೇ ನಾನು ಮಾಡಬೇಕು ಅಂದುಕೊಂಡಿದ್ದ ಮೊದಲ ಕೆಲಸವನ್ನೀಗ ಮಾಡಲು ಹೊರಟಿದ್ದೇನೆ. ಆಚಾರ್ಯರು ಎಲ್ಲಿದ್ದರೂ ಮುಂದೆ ಬರಬೇಕು” ಅಂದ.
ಆಚಾರ್ಯರು ಮುಂದೆ ಬಂದು ನಿಂತರು.

“ಹೇಳಿ ಆಚಾರ್ಯ! ಅಂದು ನೀವು ಕಾರಣವೇ ಇಲ್ಲದೆ ನನ್ನನ್ನು ಒದ್ದಿರಿ. ಹಾಗೇಕೆ ಮಾಡಿದಿರಿ?” ಪ್ರಶ್ನಿಸಿದ.
ಆಚಾರ್ಯರ ಮುಖದಲ್ಲಿ ನಗು ಸುಳಿಯಿತು. “ನೀನಿನ್ನೂ ಅದನ್ನು ಮರೆತಿಲ್ಲವೆ?” ಕೇಳಿದರು.
“ನಾನು ತಪ್ಪೇ ಮಾಡಿರಲಿಲ್ಲ. ಆದರೂ ನೀವು ಒದ್ದಿರಿ. ಆ ಅನ್ಯಾಯವನ್ನು ಮರೆಯುವುದು ಹೇಗೆ? ಅಂದಿನಿಂದ ಈವರೆಗೆ ಅದರ ಯೋಚನೆಯಲ್ಲಿ ಎಷ್ಟು ನಿದ್ರೆ ಕಳೆದುಕೊಂಡೆ… ಕೋಪ, ಬೇಸರ, ಹತಾಶೆ, ಅಸಹನೆ, ಸೇಡಿನ ಕಿಚ್ಚುಗಳನ್ನು ಅನುಭವಿಸಿದೆ… ಇಂದು ಅವೆಲ್ಲಕ್ಕೂ ಅಂತ್ಯ ಹಾಡಬೇಕು. ನನ್ನ ಪ್ರಶ್ನೆಗೆ ಉತ್ತರ ಕೊಡಿ. ಒಬ್ಬ ಸಾಮ್ರಾಟನಾಗಿ ಆದೇಶ ನೀಡುತ್ತಿದ್ದೇನೆ!” ಅಂದ.

“ನನ್ನ ಒಂದು ಅನ್ಯಾಯದ ವರ್ತನೆ, ತಪ್ಪೇ ಮಾಡದೆ ಶಿಕ್ಷೆ ನೀಡಿದ ನಡೆ, ನಿನ್ನನ್ನು ಎಷ್ಟು ವಿಚಲಿತಗೊಳಿಸಿತಲ್ಲವೆ? ಇಷ್ಟು ವರ್ಷಗಳ ಕಾಲ ನಿನ್ನನ್ನು ಬೇಯಿಸಿತು ಅಲ್ಲವೆ? ರಾಜನ ಮೊದಲ ಕರ್ತವ್ಯ ನ್ಯಾಯ ದಾನ. ನ್ಯಾಯವಾಗಿ ನಡೆದುಕೊಳ್ಳಬಲ್ಲ ಸಾಮ್ರಾಟನಿದ್ದರೆ ಮಾತ್ರ ಸಾಮ್ರಾಜ್ಯ ಸುಭಿಕ್ಷವಾಗಿರಲು ಸಾಧ್ಯ. ನೀನೀಗ ಮಗಧ ದೇಶದ ದೊರೆ. ಅನ್ಯಾಯದ ಅನುಭವ ಹೇಗಿರುತ್ತದೆ ಅನ್ನುವುದನ್ನು ಸ್ವತಃ ಅನುಭವಿಸಿ ಕಂಡುಕೊಂಡಿರುವೆ. ಆ ಪಾಠವನ್ನು ಯಾವತ್ತೂ ಮರೆಯಬೇಡ. ಪ್ರಜೆಗಳೊಂದಿಗೆ ನ್ಯಾಯವಾಗಿ ನಡೆದುಕೋ. ತಪ್ಪೇ ಮಾಡದ ಪ್ರಜೆಗಳು ಶಿಕ್ಷೆ ಅನುಭವಿಸುವುದು ಬೇಡ”

ಆಚಾರ್ಯ ಅರೆ ಘಳಿಗೆ ಮೌನವಾದರು. ಇಡಿಯ ದರ್ಬಾರು ಅವರನ್ನೇ ನೋಡುತ್ತಿತ್ತು. ಹೊಸ ಸಾಮ್ರಾಟ ತನ್ನ ಆಚಾರ್ಯನೆದುರು ತಲೆಬಾಗಿ ನಿಂತಿದ್ದ.

“ಕ್ಷಮೆ ಇರಲಿ. ಈ ಪಾಠವನ್ನು ಪರಿಣಾಮಕಾರಿಯಾಗಿ ಬೋಧಿಸಲು ಬೇರೆ ಮಾರ್ಗವಿರಲಿಲ್ಲ”
ಆಚಾರ್ಯ ಮಾತು ಮುಗಿಸುವ ಹೊತ್ತಿಗೆ ಸಾಮ್ರಾಟ ಅವರ ಪದತಲದಲ್ಲಿದ್ದ.
ದರ್ಬಾರಿನಲ್ಲಿ ಆಚಾರ್ಯರ ಪರವಾಗಿ ಜಯಕಾರ ಮೊಳಗಿತು.

(ಸಂಗ್ರಹ ಮತ್ತು ಅನುವಾದ : ಅಲಾವಿಕಾ)

Leave a Reply