ಜಗನ್ಮಾತೆ ಭವಾನಿಯನ್ನು ಕುರಿತು ಶ್ರೀ ಶಂಕರಾಚಾರ್ಯರು ರಚಿಸಿದ ಭವಾನೀ ಅಷ್ಟಕ ಸ್ತೋತ್ರದ ಮೂಲಪಾಠ ಮತ್ತು ಸರಳ ಕನ್ನಡಾನುವಾದ ಇಲ್ಲಿದೆ. ತಾಯಿ ಭವಾನಿಯನ್ನು ಕುರಿತು ನೀನೇ ನನಗೆ ಗತಿ, ಕಾಪಾಡು ಎಂದು ಬೇಡಿಕೊಳ್ಳುವ ಸ್ತೋತ್ರಮಾಲೆಯಿದು. ಶರಣಾಗತಿ ಭಾವದ ಈ ಸ್ತೋತ್ರಗಳನು ನಮಗೆ ತಾಯಿಯ ಕಾರುಣ್ಯವನ್ನೂ ಮನಶ್ಶಾಂತಿ ಹಾಗೂ ಸುರಕ್ಷಾ ಭಾವವನ್ನೂ ನೀಡುತ್ತವೆ.
ನ ತಾತೋ ನ ಮಾತಾ ನ ಬಂಧುರ್ನ ದಾತಾ
ನ ಪುತ್ರೋ ನ ಪುತ್ರೀ ನ ಭೃತ್ಯೋ ನ ಭರ್ತಾ |
ನ ಜಾಯಾ ನ ವಿದ್ಯಾ ನ ವೃತ್ತಿರ್ಮಮೈವ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನೀ ||1||
ಭಾವಾರ್ಥ: ನನಗೆ ತಂದೆಯಿಲ್ಲ, ತಾಯಿಯಿಲ್ಲ, ಬಂಧುವಿಲ್ಲ, ಬಳಗವಿಲ್ಲ, ಕೊಡುವವನಿಲ್ಲ, ಕೊಳ್ಳುವನಿಲ್ಲ. ಮಗನಿಲ್ಲ, ಮಗಳಿಲ್ಲ, ಪತಿಯಿಲ್ಲ, ಸತಿಯಿಲ್ಲ, ವಿದ್ಯೆಯಿಲ್ಲ, ಬುದ್ಧಿಯಿಲ್ಲ, ನನ್ನದೆಂಬ ವೃತ್ತಿಯಿಲ್ಲ, ನೀನೊಬ್ಬಳೇ ನನಗೆ ಗತಿ. ಹೇ! ಭವಾನಿ, ನೀನೊಬ್ಬಳೇ ನನಗೆ ದಿಕ್ಕು. ತಾಯಿ, ನಿನಗೆ ನನ್ನ ನಮಸ್ಕಾರಗಳು
ಭವಾಬ್ದ ಪಾರೇ ಮಹಾದುಃಖಭೀರುಃ
ಪಪಾತ ಪ್ರಕಾಮಿ ಪ್ರಲೋಭೀ ಪ್ರಮತ್ತಃ|
ಕುಸಂಸಾರಪಾಶಪ್ರಬದ್ಧಃ ಸದಾಹಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನೀ ||2||
ಭಾವಾರ್ಥ: ಅನಂತವಾಗಿರುವ ಈ ಭವ ಸಾಗರದಲ್ಲಿ ಮಹಾದುಃಖಗಳ ಭೀತಿಗೊಳಪಟ್ಟು ಸಿಲುಕಿಕೊಂಡಿರುವೆ. ನಾನು ಕಾಮುಕ, ಜಿಪುಣ, ಕರ್ತವ್ಯ ಭ್ರಷ್ಟನಾಗಿರುವೆ. ಹೇ! ಭವಾನಿ, ಸಂಸಾರಬಂಧನದೊಳಗೆ ಸಿಲುಕಿಕೊಂಡಿರುವ ನನಗೆ ನೀನೊಬ್ಬಳೇ ಗತಿ. ಹೇ! ಭವಾನಿ, ನೀನೊಬ್ಬಳೇ ನನಗೆ ದಿಕ್ಕು. ತಾಯಿ, ನಿನಗೆ ನನ್ನ ನಮಸ್ಕಾರಗಳು
ನ ಜಾನಾಮಿ ದಾನಂ ನ ಚ ಧ್ಯಾನಯೋಗಂ
ನ ಜಾನಾಮಿ ತಂತ್ರಂ ನ ಚ ಸ್ತೋತ್ರಮಂತ್ರಮ್ |
ನ ಜಾನಾಮಿ ಪೂಜಾಂ ನ ಚ ನ್ಯಾಸಯೋಗಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನೀ ||3||
ಭಾವಾರ್ಥ: ದಾನ ಮಾಡಿ ಅರಿಯೆ, ಧ್ಯಾನ ಮಾಡಿ ಅರಿಯೆ; ಯೋಗವೆಂದರೂ ಅರಿಯೆ; ಸ್ತೋತ್ರ – ಮಂತ್ರಗಳನ್ನೂ ಅರಿಯೆ. ನೀನೊಬ್ಬಳೇ ನನಗೆ ಗತಿ. ಹೇ! ಭವಾನಿ, ನೀನೊಬ್ಬಳೇ ನನಗೆ ದಿಕ್ಕು. ತಾಯಿ, ನಿನಗೆ ನನ್ನ ನಮಸ್ಕಾರಗಳು.
ನ ಜಾನಾಮಿ ಪುಣ್ಯಂ ನ ಜಾನಾಮಿ ತೀರ್ಥಂ
ನ ಜಾನಾಮಿ ಮುಕ್ತಿಂ ಲಯಂ ವಾ ಕದಾಚಿತ್ |
ನ ಜಾನಾಮಿ ಭಕ್ತಿಂ ವ್ರತಂ ವಾಪಿ ಮಾತ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನೀ ||4||
ಭಾವಾರ್ಥ: ಪುಣ್ಯದ ಬಗ್ಗೆ ನನಗೆ ತಿಳಿಯದು. ತೀರ್ಥಯಾತ್ರೆಗಳ ಬಗ್ಗೆ ನನಗೆ ಗೊತ್ತೇ ಇಲ್ಲ. ಮುಕ್ತಿಯ ಜ್ಞಾನವೆನಗೆ ಸ್ವಲ್ಪವೂ ಇಲ್ಲ. ಲಯದ ಕುರಿತಾಗಿಯೂ ಜ್ಞಾನವಿಲ್ಲ. ಭಕ್ತಿಯಾಗಲೀ ವ್ರತದ ಕುರಿತಾಗಿಯಾಗಲೀ ನನಗೆ ತಿಳಿಯದು. ನಾನು ನಂಬಿರುವುದು ಇಷ್ಟೇ; ನೀನೊಬ್ಬಳೇ ನನಗೆ ಗತಿ. ಹೇ! ಭವಾನಿ, ನೀನೊಬ್ಬಳೇ ನನಗೆ ದಿಕ್ಕು. ತಾಯಿ, ನಿನಗೆ ನನ್ನ ನಮಸ್ಕಾರಗಳು
ಕುಕರ್ಮೀ ಕುಸಂಗೀ ಕುಬುದ್ಧಿಃ ಕುದಾಸಂ
ಕುಲಾಚಾರಹೀನಃ ಕದಾಚಾರಲೀನಃ|
ಕುದೃಷ್ಟಿಃಕುವಾಕ್ಯಪ್ರಬಂಧಃಸದಾಸಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನೀ ||5||
ಭಾವಾರ್ಥ: ದುಷ್ಟ ಕಾರ್ಯಗಳನ್ನು ಮಾಡಿದವನು ನಾನು. ದುರ್ಜನ ಸಂಘದಲ್ಲಿಯೇ ಯಾವಾಗಲೂ ಇದ್ದವನು ನಾನು. ದುರ್ಬುದ್ಧಿಯವರ ಸೇವೆಗೈದವನು ನಾನು. ನಾನೆಂದೂ ಆಚಾರಗಳಲ್ಲಿ ಮಗ್ನನಾದವನಲ್ಲ. ಎಲ್ಲರನ್ನೂ ತುಚ್ಛವಾಗಿ ಕಂಡವನು ನಾನು. ದುರ್ವಚನಗಳ ಪ್ರಯೋಗದಲ್ಲಿ ನಿರತನಾಗಿದ್ದವನು ನಾನು. ನನ್ನನ್ನು ಕ್ಷಮಿಸು ಮಾತೆ! ನೀನೊಬ್ಬಳೇ ನನಗೆ ಗತಿ. ಹೇ! ಭವಾನಿ, ನೀನೊಬ್ಬಳೇ ನನಗೆ ದಿಕ್ಕು. ತಾಯಿ, ನಿನಗೆ ನನ್ನ ನಮಸ್ಕಾರಗಳು
ಪ್ರಜೇಶಂ ರಮೇಶಂ ಮಹೇಶಂ ಸುರೇಶಂ
ದಿನೇಶಂ ನಿಶೀಥೇಶ್ವರಂ ವಾ ಕದಾಚಿತ್ |
ನ ಜಾನಾಮಿ ಚಾನ್ಯತ್ ಸದಾಸಂ ಶರಣ್ಯೇ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನೀ ||6||
ಭಾವಾರ್ಥ: ಹೇ! ಭವಾನೀ; ಪ್ರಜಾಪತಿ ಬ್ರಹ್ಮನಾಗಲೀ, ರಮಾಕಾಂತ ವಿಷ್ಣುವಾಗಲೀ, ಲಯಕರ್ತ ಶಿವನಾಗಲೀ, ಅಮರೇಶ ಇಂದ್ರನಾಗಲೀ, ಸೂರ್ಯ-ಚಂದ್ರರ ಕುರಿತಾಗಲೀ ನನಗೆ ಎಂದಿಗೂ ತಿಳಿಯದು. ನನಗೆ ನಿನ್ನ ಪರಿಚಯವಷ್ಟೇ ಇರುವುದು. ನಿನ್ನಲ್ಲಿ ಶರಣು ಬಂದಿರುವೆ; ನೀನೊಬ್ಬಳೇ ನನಗೆ ಗತಿ. ಹೇ! ಭವಾನಿ, ನೀನೊಬ್ಬಳೇ ನನಗೆ ದಿಕ್ಕು. ತಾಯಿ, ನಿನಗೆ ನನ್ನ ನಮಸ್ಕಾರಗಳು
ವಿವಾದೇ ವಿಷಾದೇ ಪ್ರಮಾದೇ ಪ್ರವಾಸೇ
ಜಲೇ ಚಾನಲೇ ಪರ್ವತೇ ಶತ್ರುಮಧ್ಯೇ |
ಅರಣ್ಯೇ ಶರಣ್ಯೇ ಸದಾ ಮಾ ಪ್ರಪಾಹಿ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನೀ ||7||
ಭಾವಾರ್ಥ: ತಾಯಿ, ಶರಣು ಬಂದಿರುವ ನನ್ನನ್ನು ವಾಗ್ವಾದಗಳಲ್ಲಿ, ಶೋಕ ಸಂದರ್ಭದಲ್ಲಿ, ಪ್ರವಾಸ ಮಾಡುವಾಗ, ತಪ್ಪು ಮಾಡಿದಾಗಲೂ, ನೀರಿನಲ್ಲೂ ಬೆಂಕಿಯಲ್ಲೂ ಪರ್ವತದಲ್ಲೂ ಶತ್ರುಗಳ ನಡುವಲ್ಲೂ, ಕಾಡಿನಲ್ಲೂ – ಎಲ್ಲೆಡೆಯಲ್ಲೂ ಎಲ್ಲ ಸಂದರ್ಭದಲ್ಲೂ ಕೈಹಿಡಿದು ಕಾಪಾಡು. ನೀನೊಬ್ಬಳೇ ನನಗೆ ಗತಿ. ಹೇ! ಭವಾನಿ, ನೀನೊಬ್ಬಳೇ ನನಗೆ ದಿಕ್ಕು. ತಾಯಿ, ನಿನಗೆ ನನ್ನ ನಮಸ್ಕಾರಗಳು
ಅನಾಥೋ ದರಿದ್ರೋ ಜರಾರೋಗಯುಕ್ತೋ
ಮಹಾಕ್ಷೀಣದೀನಃ ಸದಾ ಜಾಡ್ಯವಕ್ತ್ರಃ |
ವಿಪತ್ತೌ ಪ್ರವಿಷ್ಟಃ ಪ್ರನಷ್ಟಃ ಸದಾಸ್ಹಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನೀ ||8||
ಭಾವಾರ್ಥ: ಅಮ್ಮಾ ನಾನು ಅನಾಥನೂ ದರಿದ್ರನೂ ಆಗಿದ್ದು, ಮುಪ್ಪು ಬೇನೆಗಳಿಗೆ ಸಿಲುಕುವಂಥವನಾಗಿರುವೆ. ಅಶಕ್ತನೂ ದೀನನೂ ಆಗಿದ್ದು, ವಿಪತ್ತುಗಳಿಗೆ ಸಿಲುಕುತ್ತಲೇ ಇರುವೆ. ಮತ್ತು ಈ ಎಲ್ಲದರಿಂದ ಸದಾ ನಷ್ಟವನ್ನೇ ಅನುಭವಿಸುತ್ತಿರುವೆ. ಇಂಥಾ ನನ್ನನ್ನು ಕಾಪಾಡು ಮಾತೆ! ನೀನೊಬ್ಬಳೇ ನನಗೆ ಗತಿ. ಹೇ! ಭವಾನಿ, ನೀನೊಬ್ಬಳೇ ನನಗೆ ದಿಕ್ಕು. ತಾಯಿ, ನಿನಗೆ ನನ್ನ ನಮಸ್ಕಾರಗಳು