ಭಾಷೆ ಎಷ್ಟೇ ಉಪಯುಕ್ತವಾದುದಾದರೂ ಅದನ್ನು ಬಲ್ಲವರಿಗಷ್ಟೆ ಪ್ರಯೋಜನ. ಮತ್ಯಾವುದೋ ಪ್ರಾಂತ್ಯದಲ್ಲಿ ನಮ್ಮ ಭಾಷೆಯ ಮೂಲಕ ಸಂವಹನ ನಡೆಸಲು ಸಾಧ್ಯವಿಲ್ಲ. ನಮ್ಮ ಇರುವಿಕೆ, ಅಗತ್ಯ ಹಾಗೂ ಸಂಪನ್ಮೂಲಗಳೇ ಅಲ್ಲಿ ಸಂವಹನದ ಆಕರಗಳಾಗಿ ಒದಗುತ್ತವೆ ~ ಗಾಯತ್ರಿ
ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಅರ್ಥ ಇರಬೇಕೆಂದು ಬಯಸುವಂಥವರು. ಆಡುವ ಪ್ರತಿ ಮಾತಿಗೂ ಅರ್ಥ ಇರಬೇಕೆಂದು ಅಪೇಕ್ಷೆ ಪಡುವವರು. ಅರ್ಥವಿಲ್ಲದ ಮಾತು, ನಿರುದ್ದಿಶ್ಯ ಕೆಲಸಗಳು ನಮಗೆ ಸಮಯದ ಅಪವ್ಯಯದಂತೆ ತೋರುವುದು. ಆದರೆ ನಾವು ಕಾರಣಸಹಿತ ಕೆಲಸಗಳನ್ನಾಗಲೀ ಅರ್ಥಸಹಿತ ಮಾತುಗಳನ್ನಾಗಲೀ ಪ್ರಜ್ಞಾ ಪೂರ್ವಕವಾಗಿ ಆಡುತ್ತೇವಾ? ಪೂರ್ವಾಗ್ರಹವಿಲ್ಲದೆ ಮಾಡುತ್ತೇವಾ? ಹಾಗೆ ಪೂರ್ವಾಗ್ರಹವಿಟ್ಟುಕೊಂಡು, ಪ್ರಜ್ಞಾಶೂನ್ಯರಾಗಿ ಮಾಡುವ, ಅಪ್ರಾಮಾಣಿಕರಾಗಿ ಮಾಡುವ ಕೆಲಸಗಳು, ಆಡುವ ಮಾತುಗಳು ಎಷ್ಟು ಅರ್ಥವತ್ತಾಗಿದ್ದರೆ ತಾನೆ ಏನು? ಎಷ್ಟು ಲಾಭದಾಯಕವಾದರೆ ತಾನೆ ಏನು ಪ್ರಯೋಜನ?
ವಾಸ್ತವದಲ್ಲಿ, ಯಾರು ಹೆಚ್ಚು ಸುಳ್ಳು ಹೇಳುತ್ತಾರೋ, ಪೆÇಳ್ಳಾಗಿರುತ್ತಾರೋ ಅವರು ಹೆಚ್ಚು ಮಾತಾಡುತ್ತಾರೆ. ಏಕೆಂದರೆ ಅವರಿಗೆ ತಮ್ಮ ಇರುವನ್ನು ಕಂಡುಕೊಳ್ಳಲು ಒಂದು ಆಸರೆ ಬೇಕಿರುತ್ತದೆ. `ಸತ್ಯವನ್ನು ಮಾತುಗಳ ಮೂಲಕ ವಿವರಿಸಲು ಸಾಧ್ಯವಿಲ್ಲ. ಹಾಗೊಮ್ಮೆ ವಿವರಿಸಲು ಸಾಧ್ಯವಾದರೆ, ಅದು ಸತ್ಯವೇ ಅಲ್ಲವೆಂದು ತಿಳಿ’ ಎನ್ನುತ್ತವೆ ವೇದಗಳು. ಸತ್ಯ ಎನ್ನುವುದು ಸೂರ್ಯನಂತೆ. ಅದು ಸ್ವಯಂಪ್ರಕಾಶ ಉಳ್ಳದ್ದು. ಅದನ್ನು ಯಾರೋ ವಿವರಿಸಿ ಹೇಳಬೇಕಾದ ಅಗತ್ಯವೇ ಇರುವುದಿಲ್ಲ.
ಘಟಿಸಿದಂತೆ ಅರ್ಥ
ಮನುಷ್ಯ ಪದ, ಸಂಕೇತ, ಭಾಷೆಗಳೊಳಗೆ ಕಳೆದುಹೋಗಿದ್ದಾನೆ ಎನ್ನುತ್ತಾರೆ ಓಶೋ ರಜನೀಶ್. ಯಾವುದೇ ಪದ, ಶಬ್ದ, ಕೇಳುಗರ ಕಿವಿಯಲ್ಲಿ, ಅವರ ಅರಿವಿಗೆ ತಕ್ಕಂತೆ ಅರ್ಥ ಪಡೆಯುತ್ತದೆ. ಮಾತು ಎನ್ನುವುದು ಮಾಯೆಯಂತೆ. ಅದು ಸಮ್ಮೋಹಗೊಳಿಸುತ್ತದೆ. ನಮ್ಮನ್ನು ಒಂದು ಅರ್ಥಕ್ಕೆ ಬದ್ಧರಾಗಿ ಕಟ್ಟಿಹಾಕುತ್ತದೆ. ಆ ಅರ್ಥದ ಪಾಶದಿಂದ ಬಿಡಿಸಿಕೊಳ್ಳುವುದು ಬಹಳ ಕಷ್ಟ. ಹೇಗೆಂದರೆ, ನಮಗೆ ಯಾವುದೋ ಒಬ್ಬ ವ್ಯಕ್ತಿಯನ್ನು ಕಂಡರೆ ಇಷ್ಟ ಇರುವುದಿಲ್ಲ. ಆ ಹೆಸರು ಎಲ್ಲಿಯೇ ಕಿವಿಗೆ ಬಿದ್ದರೂ ನಮಗೆ ತತ್‍ಕ್ಷಣ ಆ ವ್ಯಕ್ತಿ ನೆನಪಾಗುತ್ತಾನೆ. ಹಾಗೆಯೇ ಆತನ ಮೇಲಿನ ದ್ವೇಷ ಭಾವನೆಯೂ ಹಣಕಿಹಾಕುತ್ತದೆ ಮತ್ತು ಕಹಿ ಹರಡುತ್ತದೆ. ಇದು ಕೇವಲ ನಕಾರಾತ್ಮಕ ಚಿಂತನೆಗಳಿಗಲ್ಲ, ಸಕಾರಾತ್ಮಕ ಚಿಂತನೆಗಳಿಗೂ ಅನ್ವಯ. ನಮಗೆ ಮುದ ಕೊಡುವ ಯಾವುದೋ ಹೆಸರು, ಮಾತು – ಈ ಎಲ್ಲವೂ ನಮ್ಮನ್ನು ಪ್ರಸ್ತುತ ಕ್ಷಣದಲ್ಲಿ ಇರಗೊಡದೆ, ನೆನಪಿನ ಸಂಚಿ ಬಿಚ್ಚಿ ಭೂತಕಾಲದ ಅನುಭವಗಳೆಡೆಗೆ ಓಡುವಂತೆ ಮಾಡುತ್ತವೆ.
ಈ ಅನುಭಾವಗಳಾದರೋ, ಈ ಪ್ರಸ್ತುತ ಕ್ಷಣದಲ್ಲಿ ಕೇವಲ ಆಲೋಚನೆಯ ರೂಪದಲ್ಲಿ ದಕ್ಕುವಂಥವು. ಅವು ಕನಸಿನಂಥವು. ಅವು ಈ ಕ್ಷಣಕ್ಕೆ ಬೇರೆಯೇ ಬಗೆಯಲ್ಲಿ ದಕ್ಕಬಹುದಾದಂಥವು. ಆದರೆ ನಾವು ಆ ಹೊಸ ಸಾಧ್ಯತೆಗೆ ತೆರೆದುಕೊಳ್ಳುವುದೇ ಇಲ್ಲ.
ಅರ್ಥಗಳಾದರೂ ಅಷ್ಟೇ. ಮೇಲೆ ಹೇಳಿರುವಂತೆ ಕೇಳುಗರ ಗ್ರಹಿಕೆಯಂತೆ ಅದು ಘಟಿಸುತ್ತದೆ. ಈ ಕುರಿತು ಉಪನಿಷತ್ತಿನಲ್ಲೊಂದು ಉಲ್ಲೇಖವಿದೆ.
ಒಮ್ಮೆ ಅಸ್ತಿತ್ವವು ಗುಡುಗಿ `ದ…ದ…ದ…’ ಎಂಬ ಸದ್ದು ಹೊರಡಿಸುತ್ತದೆ. ಅದನ್ನು ದೇವ, ದಾನವ, ಮಾನವ – ಮೂರೂ ಸಮುದಾಯ ಕೇಳಿಸಿಕೊಳ್ಳುತ್ತದೆ. ದೇವತೆಗಳು ಇದನ್ನು `ದಾಮ್ಯತ’ ಎಂದು ಅರ್ಥೈಸಿಕೊಂಡರೆ, ಮಾನವರು `ದತ್ತ’ ಎಂದು ಗ್ರಹಿಸುತ್ತಾರೆ. ಹಾಗೂ ದಾನವರು `ದಯಾ’ ಎಂದು ಅರ್ಥಮಾಡಿಕೊಳ್ಳುತ್ತಾರೆ.
ಮಹಾಭಾರತದಲ್ಲಿ ಪಾಂಡವರ ಕತೆಯೂ ಹೀಗೇ ಅಲ್ಲವೆ? ಬಹುಮೂಲ್ಯವಾದ ಸಂಪತ್ತು ಗೆದ್ದು ತಂದಿದ್ದೇವೆಂದು ಮಕ್ಕಳು ಹೇಳಿದ ಮಾತನ್ನು ಕುಂತಿ ತನ್ನ ನಿರೀಕ್ಷೆಗೆ ತಕ್ಕಂತೆ ಗ್ರಹಿಸುತ್ತಾಳೆ. ಮತ್ತು ಅದನ್ನು ಸಮನಾಗಿ ಹಂಚಿಕೊಳ್ಳಿ ಅನ್ನುತ್ತಾಳೆ. ಆ ಹೊತ್ತು ಮಕ್ಕಳು ತರುವ ಭಿಕ್ಷಾನ್ನದ ನಿರೀಕ್ಷೆಯಲ್ಲಿದ್ದ ಆಕೆಗೆ ಸಂಪತ್ತು ಎನ್ನುವುದು ಭಿಕ್ಷಾನ್ನವೆಂದೇ ತೋರುತ್ತದೆ. ಪಾಂಡವರಿಗಾದರೋ ಅರ್ಜುನ ಪಣದಲ್ಲಿ ಗೆದ್ದ ಕನ್ಯಾರತ್ನ ದ್ರೌಪದಿಯೇ ಆಹೊತ್ತಿನ ಪರಮ ಸಂಪತ್ತು. ಹೀಗೆ ಅವರವರ ಅಗತ್ಯ ಹಾಗೂ ಆದ್ಯತೆಗಳಿಗೆ ತಕ್ಕಂತೆ ಅರ್ಥವು ರೂಪುಗೊಳ್ಳುತ್ತದೆ.
ಮಹಾಭಾರತದಲ್ಲಿ ಇನ್ನೂ ಒಂದು ಇಂಥದೇ ಘಟನೆ ಬರುತ್ತದೆ. ಯುಧಿಷ್ಠಿರ `ಅಶ್ವತ್ಥಾಮಾ ಹತಃ’ ಎನ್ನುವುದು ಆ ಹೆಸರಿನ ಆನೆ ಸತ್ತಿತು ಎಂದು ಹೇಳಲು. ಆದರೆ ಅದೇ ಹೆಸರಿನ ಮಗನನ್ನು ಹೊಂದಿದ್ದ ದ್ರೋಣ, ತನ್ನ ಮಗನೇ ಮಡಿದನೆಂದು ಗ್ರಹಿಸುತ್ತಾನೆ.
ರಾಮಾಯಣದಲ್ಲಿ ಮಾರೀಚ `ಹಾ ಸೀತಾ… ಹಾ ಲಕ್ಷ್ಮಣಾ…!’ ಎನ್ನುತ್ತ ಜೀವ ತೊರೆಯುವುದೂ; ಗುಹೆಯಲ್ಲಿ ವಾಲಿಯಿಂದ ಹತನಾಗುವ ರಕ್ಕಸ `ಹಾ ಸುಗ್ರೀವಾ!!’ ಎಂದು ಪ್ರಾಣ ಬಿಡುವುದೂ ಮಾತು ದಾರಿ ತಪ್ಪಿಸುವುದನ್ನು ತೋರುವ ಇನ್ನಿತರ ನಿದರ್ಶನಗಳು.
ಶಬ್ದ ಸಂತೆ
ನಾವು ಭಾಷೆಯ ಬಗ್ಗೆ ಮಾತನಾಡುತ್ತೇವೆ. ಅದು ಎಷ್ಟೇ ಉಪಯುಕ್ತವಾದುದಾದರೂ ಅದನ್ನು ಬಲ್ಲವರಿಗಷ್ಟೆ ಪ್ರಯೋಜನ. ಮತ್ಯಾವುದೋ ಪ್ರಾಂತ್ಯದಲ್ಲಿ ನಮ್ಮ ಭಾಷೆಯ ಮೂಲಕ ಸಂವಹನ ನಡೆಸಲು ಸಾಧ್ಯವಿಲ್ಲ. ನಮ್ಮ ಇರುವಿಕೆ, ಅಗತ್ಯ ಹಾಗೂ ಸಂಪನ್ಮೂಲಗಳೇ ಅಲ್ಲಿ ಸಂವಹನದ ಆಕರಗಳಾಗಿ ಒದಗುತ್ತವೆ. ನಾವು ಬಳಸುವ ಭಾಷೆ ಅರ್ಥ ಪಡೆಯಲಿಲ್ಲವಾದರೆ, ಅದು ಸಾರ್ಥಕಗೊಳ್ಳಲಿಲ್ಲವಾದರೆ ಕೇವಲ ಶಬ್ದ ಸಂತೆಯಾಗಿ ಉಳಿಯುತ್ತದೆ. ನಮ್ಮ ಸುತ್ತಲಿನ ನಾಲ್ಕು ಜನ ನಮಗೆ ತಿಳಿಯದ ಭಾಷೆಯಲ್ಲಿ ಮಾತಾಡುತ್ತಿದ್ದರೆ ನಮಗದು ಗೌಜಿಯಂತೆ ಕೇಳಿಸುತ್ತದೆ.
ಅರ್ಥ ಅರಿವಾಗದ ಈ ಶಬ್ದ ಸಂತೆಯು ಒಂದು ರೀತಿಯಲ್ಲಿ ಒಳ್ಳೆಯದೇ. ಅದು ನಮ್ಮನ್ನು ಮೊದಲು ಗೊಂದಲಗೊಳಿಸಿ, ಅನಂತರ ಖಾಲಿಯಾಗಿಸುತ್ತಾ ಸಾಗುತ್ತದೆ. ಈ ಎಳೆಯನ್ನು ಹಿಡಿದುಕೊಂಡು ಗೈಬರ್ ಎನ್ನುವ ಝೆನ್ ಸಂತ ಧ್ಯಾನ ಪದ್ಧತಿಯೊಂದನ್ನು ಪರಿಚಯಿಸಿದ. ಅದು `ಗಿಬ್ರಿಶ್’ ಎಂದು ಖ್ಯಾತವಾಯಿತು. ತರ್ಕವಿಲ್ಲದ, ಸುಸಂಬದ್ಧವಿಲ್ಲದ ಪದಗಳನ್ನು ಗಟ್ಟಿಯಾಗಿ ಉಚ್ಚರಿಸುತ್ತ ಕೂರುವುದೇ ಗಿಬ್ರಿಶ್. ಅದಕ್ಕೆ ಅರ್ಥವಾಗಲೀ ವ್ಯಾಖ್ಯಾನವಾಗಲೀ ಇರುವುದಿಲ್ಲ. ಗಿಬ್ರಿಶ್ ಮಾತಾಡುವಾಗ ನಮ್ಮೊಳಗೆ ಯಾವ ಚಿತ್ರವೂ ಮೂಡುವುದಿಲ್ಲ. ಯಾವ ನೆನಪೂ ಬಿಚ್ಚಿಕೊಳ್ಳುವುದಿಲ್ಲ. ಅಲ್ಲಿ ಪೂರ್ವಾಗ್ರಹಕ್ಕಾಗಲೀ ತೀರ್ಮಾನಕ್ಕಾಗಲೀ ಅವಕಾಶವೇ ಇರುವುದಿಲ್ಲ.
ಅರ್ಥವಂತಿಕೆಯ ಮಾತಾಡುತ್ತಾ ಅಪ್ರಜ್ಞಾಪೂರ್ವಕವಾಗಿ ನಡೆದುಕೊಳ್ಳುತ್ತಿರುವ ಇಂದಿನ ಪೀಳಿಗೆಗೆ ಬಹುಶಃ ಗಿಬ್ರಿಶ್ ಧ್ಯಾನವೊಂದು ಮದ್ದಾಗಬಲ್ಲದೇನೋ!