ಅಸುರ ರಾಜನಿಂದ ದೇವರಾಜ ಇಂದ್ರ ಕಲಿತ ಪಾಠವೇನು ಗೊತ್ತಾ? : ಪುರಾಣ ಕಥೆ

ದೇವೇಂದ್ರನು ಶುಕ್ರಾಚಾರ್ಯರಲ್ಲಿಗೆ ಬಂದು ಮೋಕ್ಷ ಸಾಧನೆಯ ಜ್ಞಾನವನ್ನು ಪಡೆದುಕೊಂಡನು. ಅನಂತರ “ಗುರುವೆ, ಇದಕ್ಕಿಂತ ಮಿಗಿಲಾದ ಶ್ರೇಯಸ್ಸು ಉಂಟೆ?” ಎಂದು ಕೇಳಿದನು. ಅವರು “ಉಂಟು, ಅದನ್ನು ಯುದ್ಧದಲ್ಲಿ ನಿನ್ನನ್ನು ಜಯಿಸಿದ ಪ್ರಹ್ಲಾದ ಬಲ್ಲನು, ಹೋಗಿ ಆತನನ್ನು ಕೇಳು” ಎಂದರು. ಆಮೇಲೆ….

ಭಗವಂತನು ನರಸಿಂಹಾವತಾರ ತಾಳಿ ದೈತ್ಯ ಚಕ್ರವರ್ತಿ ಹಿರಣ್ಯಕಷಿಪುವನ್ನು ಸಂಹರಿಸಿದ ನಂತರ ಅವನ ಮಗ ಪ್ರಹ್ಲಾದ ಪಟ್ಟಕ್ಕೇರಿದನು. ಭಕ್ತಭಾಗವತನಾಗಿದ್ದ ಪ್ರಹ್ಲಾದ, ಮೂರು ಲೋಕಗಳನ್ನೂ ಉತ್ತಮವಾಗಿ ಆಳ್ವಿಕೆ ಮಾಡುತ್ತ ಮೆಚ್ಚುಗೆಗೆ ಪಾತ್ರನಾಗಿದ್ದನು. ಆವನ ಆಳ್ವಿಕೆಯಲ್ಲಿ ಎಲ್ಲರೂ  ನೆಮ್ಮದಿಯಿಂದ ಬಾಳುತ್ತಿದ್ದರು.  ಎಲ್ಲೆಲ್ಲಿಯೂ ಶಾಂತಿ ಧರ್ಮ ನೆಲೆಸಿತ್ತು. ಸಮೃದ್ಧಿ ತಾನೇತಾನಾಗಿದ್ದಿತು. ತನ್ನ ಸದ್ಗುಣ ಶೀಲಗಳಿಂದ ಉಂಟಾದ ಶಕ್ತಿಯಿಂದ, ಇಂದ್ರನನ್ನು ಸೋಲಿಸಿ ಅಮರಾವತಿಯನ್ನು ತನ್ನದಾಗಿ ಮಾಡಿಕೊಂಡಿದ್ದನು.

praಪ್ರಹ್ಲಾದನ ಅಧಿಕಾರ ಮತ್ತು ಆದರ್ಶಮಯ ಬದುಕಿನೆದುರು ದೇವೇಂದ್ರನ ವರ್ಚಸ್ಸು ಕಳೆಗುಂದಿತು. ಇದರಿಂದ ದಿಕ್ಕುಗಾಣದಂತಾದ ಇಂದ್ರ ದೇವಗುರು ಬೃಹಸ್ಪತ್ಯಾಚಾರ್ಯರ ಮುಂದೆ ನಿಂತು, “ಆಚಾರ್ಯ, ನಿಜವಾಗಿ ಮಂಗಳವಾಗುವುದಕ್ಕೆ, ಶ್ರೇಯಸ್ಸಿಗೆ ದಾರಿ ಯಾವುದು?” ಎಂದು ಕೇಳಿದ. ಆಗ ಆಚಾರ್ಯರು, “ಮುಕ್ತಿಗೆ ಕಾರಣವಾದ ಜ್ಞಾನದಿಂದ ಉತ್ತಮವಾದ ಶ್ರೇಯಸ್ಸು ಉಂಟಾಗುವುದು,” ಎಂದರು. “ಆದರೆ ಅದಕ್ಕಿಂತಲೂ, ವಿಶೇಷವಾದ ಮಾರ್ಗ ಯಾವುದಾದರೂ ಉಂಟೇ?” ಎಂದು ಇಂದ್ರನು ಕೇಳಿದನು. “ಉಂಟು, ಅದನ್ನು ಅಸುರ ಗುರುಗಳಾದ ಶುಕ್ರಾಚಾರ್ಯರು ಬಲ್ಲರು, ನೀನು ಅವರನ್ನು ಆಶ್ರಯಿಸು,” ಎಂದರು.

ಅನಂತರ ದೇವೇಂದ್ರನು ಶುಕ್ರಾಚಾರ್ಯರಲ್ಲಿಗೆ ಬಂದು ಮೋಕ್ಷ ಸಾಧನೆಯ ಜ್ಞಾನವನ್ನು ಪಡೆದುಕೊಂಡನು. ಅನಂತರ “ಗುರುವೆ, ಇದಕ್ಕಿಂತ ಮಿಗಿಲಾದ ಶ್ರೇಯಸ್ಸು ಉಂಟೆ?” ಎಂದು ಕೇಳಿದನು. ಅವರು “ಉಂಟು, ಅದನ್ನು ಯುದ್ಧದಲ್ಲಿ ನಿನ್ನನ್ನು ಜಯಿಸಿದ ಪ್ರಹ್ಲಾದ ಬಲ್ಲನು, ಹೋಗಿ ಆತನನ್ನು ಕೇಳು” ಎಂದರು.

ಇಂದ್ರನಿಗೆ ಬಹಳ ಆಶ್ಚರ್ಯವಾಯಿತು. ಆತನು ಬ್ರಾಹ್ಮಣನ ವೇಷವನ್ನು ಧರಿಸಿ ಪ್ರಹ್ಲಾದನ ಅರಮನೆಯ ಬಾಗಿಲಲ್ಲಿ ನಿಂತನು. ಪ್ರಹ್ಲಾದನು ಅವನನ್ನು ಒಳಕ್ಕೆ ಕರೆದು ಸತ್ಕಾರ ಮಾಡಿದನು. ಅನಂತರ ಇಂದ್ರನು “ದೈತ್ರೇಂದ್ರ, ಅತ್ಯುತ್ತಮವಾದ ಶ್ರೇಯಸ್ಸು ಯಾವುದರಿಂದ ಉಂಟಾಗುತ್ತದೆಯೋ ಅದನ್ನು ನನಗೆ ತಿಳಿಸು” ಎಂದು ಕೇಳಿದನು. ಆಗ ಪ್ರಹ್ಲಾದನು, “ಅಯ್ಯಾ, ನನಗೆ ಮೂರು ಲೋಕಗಳನ್ನು ಚೆನ್ನಾಗಿ ಪಾಲಿಸಬೇಕೆಂಬ ಚಿಂತೆ. ನಿನಗೆ ಉಪದೇಶಿಸಲು ಹೊತ್ತೆಲ್ಲಿ?” ಎಂದನು.

ಆದರೆ ಇಂದ್ರ ಬಿಡಲಿಲ್ಲ. “ನಿನಗೆ ಯಾವಾಗ ಅವಕಾಶವಾಗುವುದೋ ಆವಾಗ ಹೇಳು. ನಾನು ಕಾಯುತ್ತೇನೆ” ಎಂದು ಪಟ್ಟುಹಿಡಿದ. ಪ್ರಹ್ಲಾದನು ಒಪ್ಪಿದನು. ಅಂದಿನಿಂದ ಇಂದ್ರನು ಪ್ರಹ್ಲಾದನ ಶಿಷ್ಯನಾದನು. ಕ್ರಮಕ್ರಮವಾಗಿ ಜ್ಞಾನವನ್ನು ಪಡೆದನು. ಪ್ರಹ್ಲಾದ ಮೆಚ್ಚುವಂತೆ ಪರಿಚರ್ಯೆ ಮಾಡಿದನು. ಮಾರುವೇಷದಲ್ಲಿದ್ದ ಇಂದ್ರನ ಶ್ರದ್ಧಾನಿಷ್ಠಗಳನ್ನು ಕಂಡು ಪ್ರಹ್ಲಾದ ಮಹಾರಾಜನು ಸಂತುಷ್ಟನಾದನು.

ಒಮ್ಮೆ ಪ್ರಹ್ಲಾದ ಮಹಾರಾಜನು ಸುಪ್ರೀತನಾಗಿರುವ ಹೊತ್ತಿನಲ್ಲಿ ಒಂದು ದಿನ ಇಂದ್ರನು ಕೇಳಿದನು: “ಮಹಾತ್ಮ, ನೀನು ಮೂರು ಲೋಕಗಳನ್ನೂ, ಜಯಿಸಿದ್ದು ಹೇಗೆ? ಯಾವ ಉಪಾಯದಿಂದ?”  ಅದಕ್ಕೆ ಉತ್ತರವಾಗಿ ಪ್ರಹ್ಲಾದ ಹೀಗೆಂದನು, “ನಾನು ನನ್ನ ಸನ್ನಡತೆಯ ಶೀಲದಿಂದಲೇ  ಮೂರೂ ಲೋಕಗಳನ್ನೂ ಜಯಿಸಿದೆ. ನನಗೆ ಒಡೆಯನೆಂಬ ಗರ್ವವಿಲ್ಲ. ಅಸೂಯೆಯಿಲ್ಲ. ಆಚಾರ್ಯರಿಗೆ ವೀಧೇಯನಾಗಿದ್ದೇನೆ. ಗುರುಹಿರಿಯರ ಶುಶ್ರೂಷೆ ಮಾಡುತ್ತ ಅವರ ಉಪದೇಶದಂತೆ ನಡೆಯುತ್ತೇನೆ. ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡಿದ್ದೇನೆ.  ಆದ್ದರಿಂದಲೇ ಪರಮ ಶ್ರೇಯಸ್ಸನ್ನು ಪಡೆದೆ” ಎಂದನು.

ಅನಂತರ ಪ್ರಹ್ಲಾದ, ತನ್ನ ಶಿಷ್ಯನಿಗೆ ಶ್ರೇಯಸ್ಸಿನ ವಿಚಾರದಲ್ಲಿ ಇರುವ ಆಸಕ್ತಿಯನ್ನು ಕಂಡು ಸುಪ್ರೀತನಾಗಿ, “ನಿನ್ನ ಆಸಕ್ತಿ ನನಗೆ ಮೆಚ್ಚುಗೆಯಾಗಿದೆ. ನಿನಗೇನು ವರ ಬೇಕೋ ಕೇಳು” ಎಂದನು. ಇದಕ್ಕಾಗಿಯೇ ಕಾದಿದ್ದ ಇಂದ್ರನಿಗೆ ಹಿಗ್ಗಿನಿಂದ ಮೈ ಉಬ್ಬಿತು. “ದೈತ್ಯರಾಜ, ನೀನು ಪ್ರಸನ್ನನಾಗಿದ್ದರೆ, ನನಗೆ ಪ್ರಿಯವಾಗಬೇಕೆಂದಿದ್ದರೆ ನಿನ್ನ ಸನ್ನಡತೆಯ ಶೀಲವನ್ನು ನನಗೆ ಕೊಡು” ಎಂದನು.

ಈ ಮಾತನ್ನು ಕೇಳಿ ಪ್ರಹ್ಲಾದನಿಗೆ ಚಿಂತೆಯಾಯಿತು. ತನ್ನ ಶೀಲ ಹೋದ ನಂತರ ತೇಜಸ್ಸೂ ಪದವಿಯೂ ಹೋಗುತ್ತದೆ ಎಂದು ಅರ್ಥವಾಯಿತು ಆದರೇನು? ಕೊಟ್ಟ ಮಾತನ್ನು ಮುರಿಯುವಂತಿಲ್ಲ. “ಒಳ್ಳೆಯದು, ನನ್ನ ಶೀಲವನ್ನು ನಿನಗೆ ಕೊಡುತ್ತೇನೆ. ಅದನ್ನು ಕಾಯ್ದುಕೋ” ಎಂದನು.

ಪ್ರಹ್ಲಾದನ ದೇಹದಿಂದ ಒಂದಾದ ಮೇಲೆ ಒಂದರಂತೆ ಶೀಲವೂ, ಸಚ್ಚಾರಿತ್ರವೂ ಧರ್ಮವೂ ಸತ್ಯವೂ ಬಲವೂ ತೇಜೋರೂಪಿಗಳಾಗಿ ಹೊರಟು ಇಂದ್ರನನ್ನು ಸೇರಿದವು. ಅನಂತರ ಪ್ರಹ್ಲಾದನು ಶಾಂತಮನಸ್ಕನಾಗಿ ಪ್ರಾಣವಿಯೋಗದಿಂದ ನರಹರಿಯನ್ನು ಸೇರಿದನು. ಇತ್ತ ದೈತ್ಯರಾಜನಿಂದ ಶೀಲಾದಿಗಳನ್ನು ಪಡೆದ ದೇವೇಂದ್ರ ಸಚ್ಚಾರಿತ್ರವಂತನಾಗಿ ದೇವಲೋಕವನ್ನು ಆಳಿದನು.

 

1 Comment

  1. ಮರದಂತೆ ಬೆಳೆದ ಜ್ನಾನವನೂ ಯಾರು ಕದಿಯಲಾರರು ಸುಜ್ನಾನವ ರೂಡಿಸಿಕೊಂಡಿರುವ ಮನುಜರನು ದೇವರೆ ಹೋಗಳುವನ್ನು

Leave a Reply