ಇಳಿ ವಯಸ್ಸನ್ನು ನಗುನಗುತ್ತ ಸ್ವಾಗತಿಸೋಣ…

ಅದು ಗಂಡಾಗಿರಲಿ ಅಥವಾ ಹೆಣ್ಣು… ವಯಸ್ಸಾದ ಮೇಲೆ ಇಂಥವರ ಸೊಂಟದ ಸುತ್ತಳತೆಯಲ್ಲಿ ಸಾಕಷ್ಟು ಬದಲಾವಣೆ ಆಗಿರಬಹುದು, ಹಾಗಿದ್ದೂ ಸದಾ ಲವಲವಿಕೆಯಿಂದ ಇರುತ್ತಾ ಆಕರ್ಷಣೆಯ ಕೇಂದ್ರವಾಗಿರುತ್ತಾರೆ. ಇದಕ್ಕೆ ಕಾರಣ ಇಷ್ಟೇ, ಹೊಸತನಕ್ಕೆ ತೆರೆದುಕೊಳ್ಳುತ್ತಲೇ ಇರುವಂಥವರು ಯಾವತ್ತೂ ಲವಲವಿಕೆಯಿಂದ ಇರುತ್ತಾರೆ ~ ಅಲಾವಿಕಾ

ಮುಖದ ಮೇಲೆ ಸುಕ್ಕು. ಕಣ್ಣ ಕೆಳಗೆ ಕಪ್ಪು. ಕೂದಲಲ್ಲಿ ಬೆಳ್ಳಿದಾರ, ಹೊಟ್ಟೆ ಸುತ್ತ ನಿರಿಗೆ. ಅಷ್ಟೇ  ಅಲ್ಲ, ಮನೆ ಮಂದಿ ಮಾತಿಗೆ ಜೊತೆ ಕೂರೋದಿಲ್ಲ. `ಬರೀ ಕಿರಿಪಿರಿ’ ಅಂತ ದೂರ ಓಡ್ತಾರೆ. ನನಗಿಂತ ಚಿಕ್ಕವರಿಗೆ ಇಷ್ಟಕ್ಕೂ ನನಗೆ ಏನಾಗಿದೆ?

ಇಂಥದೊಂದು ಆತಂಕ ಐವತ್ತರ ಅಂಚಿಂದಲೆ ಶುರುವಾಗಿಬಿಡುತ್ತೆ.  ವಯಸ್ಸಿನ ಜತೆ ಸೌಂದರ್ಯವನ್ನ ತಳಕುಹಾಕಿಕೊಂಡರಂತೂ ಮುಗಿದೇಹೋಯ್ತು. ವಯಸ್ಸಾಗ್ತಿದೆಯೆನ್ನುವ ತಲ್ಲಣ ಬಗೆಹರಿಯುವುದೇ ಇಲ್ಲ. ಏರುತ್ತಿರುವ ವಯಸ್ಸಿನ ಜೊತೆ ಕಾಡುವುದು ಒಂದಕ್ಕೊಂದು ತೀರಾ ವಿರುದ್ಧವಾದ ಸಂಗತಿಗಳು. ಹಿರಿಯರೆಂಬ ಮೇಲರಿಮೆ ಒಂದಾದರೆ, ಚಿಕ್ಕವರಾಗಿ ಉಳಿದಿಲ್ಲ ಅನ್ನುವ ಕೀಳರಿಮೆ ಮತ್ತೊಂದು. ಇವುಗಳ ನಡುವೆ ಸಿಕ್ಕಿಕೊಂಡ  ಮನಸ್ಥಿತಿ ಸಂಕೀರ್ಣವಾಗುತ್ತಾ ಹೋಗಿ ಅದು ನಡವಳಿಕೆಯಲ್ಲಿ ಪ್ರತಿಬಿಂಬಿಸ್ತಾ ಜನರಿಂದ ದೂರವಾಗುವುದು, ಪರಿಣಾಮ ಕೊನೆಯಿರದ ಒಂಟಿತನದಲ್ಲಿ ಮುಳುಗುವುದು.

ವಯಸ್ಸು ಅನ್ನೋದು ಏರುಗತಿ ಮಾತ್ರ ಗೊತ್ತಿರುವ ಎಣಿಕೆಯಷ್ಟೆ. ಅದಕ್ಕೆ ಆತಂಕ ಪಟ್ಟುಕೊಳ್ಳಬೇಕಿಲ್ಲ. ದೇಹವನ್ನ ಕಾಲದೊಟ್ಟಿಗೆ ಹೊಂದಿಸ್ಕೊಂಡು, ಮನಸ್ಸನ್ನ ಅದಕ್ಕೆ ಸಮವಾಗಿ ಮಾಗಿಸ್ಕೊಂಡು, ಹುಡುಹುಡುಗಾಗಿ ಇರೋದು ಕಷ್ಟವೇನಲ್ಲ. ಪ್ರತಿ ಹಂತದಲ್ಲೂ ದೇಹ ತನ್ನದೇ ಆದ ಘನತೆ ಮತ್ತು ವಿಶೇಷತೆಯನ್ನ ಹೊಂದಿರುತ್ತೆ. ಆಯಾ ವಯಸ್ಸಿನಲ್ಲಿ ಸಹಜವೆನಿಸುವ ರೂಪವನ್ನ ನಾವು ಒಪ್ಪಿಕೊಳ್ಳಬೇಕು. ತಾರುಣ್ಯದಲ್ಲಿ ಕತ್ತೆಯೂ ಚೆಂದ ಕಾಣುತ್ತೆ ಅನ್ನುವ ಮಾತಿದೆ. ಹಾಗೆಯೇ ನಡು ವಯಸ್ಸಿನಲ್ಲಿ ಪ್ರಬುದ್ಧತೆ, ಅನುಭವ ಮತ್ತು ಕ್ರಿಯಾಶೀಲತೆಗಳು ಹೆಣ್ಣಿನ ಚೆಲುವನ್ನು ಹೆಚ್ಚಿಸುತ್ತವೆ. ಇಳಿವಯಸ್ಸಿನ ಚೆಲುವು ಮನಸ್ಸಿನ ಮಾಗುವಿಕೆ ಹಾಗೂ ಬದುಕಿನ ಅಷ್ಟೂ ವಿಭಾಗಗಳಲ್ಲಿ ನಾವೆಷ್ಟು ನುರಿತಿದ್ದೇವೆ ಅನ್ನುವುದರ ಮೇಲೆ ಡಿಪೆಂಡ್ ಆಗಿರುತ್ತೆ. ಈ ವಯಸ್ಸು ಒಂದು ಥರ ಫೈನಲ್ ಎಗ್ಸಾಮ್ ಇದ್ದ ಹಾಗೆ. ಈ ಹಂತದಲ್ಲಿ ನಾವು ಹೇಗೆ ಬಿಹೇವ್ ಮಾಡ್ತೇವೆ ಅನ್ನುವುದರ ಮೇಲೆ ಅಷ್ಟೂ ದಿನಗಳ ಬದುಕಿನ ಸಾರ್ಥಕತೆ ನಿರ್ಧಾರವಾಗುತ್ತೆ.

ಇನ್ನು ಕೆಲವರು ಹೀಗಿರ್ತಾರೆ. ತಮ್ಮ ಕೈಲಾಗದಿದ್ರೂ ತಮ್ಮಲ್ಲಿನ್ನೂ ತಾರುಣ್ಯವಿದೆ ಅಂತ ಭಾವಿಸ್ಕೊಳ್ತಾರೆ. ಮಾನಸಿಕವಾಗಿ ಹಾಗಿರುವುದು ಒಳ್ಳೆಯದೇ. ಆದರೆ ದೈಹಿಕ ಚಟುವಟಿಕೆಗಳ ಮೂಲಕವೂ ಅದನ್ನ ಸಾಬೀತುಪಡಿಸಲಿಕ್ಕೆ ಹೋದರೆ ತೊಂದರೆ ಖಚಿತ. ಚಿಕ್ಕ ವಯಸ್ಸಿನವರು ಮಾಡುವ ಎಲ್ಲಾ ಕೆಲಸ, ಸಾಹಸ, ಅವರ ರೀತಿಯ ಉಡುಗೆ ತೊಡುಗೆಗಳು- ಇವೆಲ್ಲದರತ್ತ ಮನಸ್ಸು ಚಾಚಿಕೊಳ್ಳುವುದು ಸರಿಯೇ. ಆದರೆ ನಾವು ಅವೆಲ್ಲವನ್ನೂ ದಾಟಿಯೇ ಬಂದವರು ಅನ್ನುವ ಎಚ್ಚರ ಅಗತ್ಯ. ನಮ್ಮ ಸರದಿ ಮುಗಿದಿರೋದನ್ನ ಒಪ್ಪಿಕೊಂಡು, ಮುಂದಿನ ಜನರೇಶನ್‌ಗೆ ಅದನ್ನು ಬಿಟ್ಟುಕೊಡಬೇಕು. ನಮಗಾಗಿ ನಿಗದಿ ಮಾಡಲಾದ ಕೌಂಟರಿನಲ್ಲಿ ಮುಂದಿನದಕ್ಕೆ ಕಾಯಬೇಕು. ಇಲ್ಲವಾದರೆ ಅಸಹಜ ಚಟುವಟಿಕೆಗಳಿಂದ ಗೊಂದಲವಾಗಿ ಮುಷ್ಕರ ಹೂಡುವ ದೇಹಾರೋಗ್ಯ, ಕೆಲಸ ಕೈಗೂಡದೆ ಆಗುವ ಬೇಸರಗಳಿಂದ ತಪ್ಪಿಸ್ಕೊಳ್ಳಲು ಸಾಧ್ಯವಿಲ್ಲ.

ಉಡುಗೆ ತೊಡುಗೆಗಳ ವಿಷಯದಲ್ಲೂ ಅಷ್ಟೇ. ವಯಸ್ಸಿಗೆ ಹೊಂದದ, ಯೌವನ ಸೂಚಿಸುವ ಬಣ್ಣ ಮತ್ತು ಅಲಂಕಾರಗಳು ಗೌರವ ಮೂಡಿಸುವುದಿಲ್ಲ ಮಾತ್ರವಲ್ಲ, ಯಾವ ಕೋನದಿಂದಲೂ ಚೆಂದ ಕಾಣಿಸೋದಿಲ್ಲ. ಬಿಳಿಕೂದಲು ಮುಚ್ಚಿಕೊಳ್ಳಲು ಹಚ್ಚಿಕೊಳ್ಳುವ ಗಾಢ ಕಪ್ಪು ಬಣ್ಣ ಕೂಡ ಕೆಲವೊಮ್ಮೆ ನಾಟಕೀಯವಾಗಿ ಕಾಣಿಸುವುದುಂಟು. ಆದ್ದರಿಂದ ಅಲಂಕರಿಸಿಕೊಳ್ಳುವಾಗಲೂ ವಯಸ್ಸಿನೊಡನೆ ತಾಳೆಯಾಗುವಂತೆ, ಆ ಹಂತದ ವ್ಯಕ್ತಿತ್ವಕ್ಕೆ, ಮಾನಸಿಕತೆಗೆ ಹೊಂದುವಂತೆ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಕೆಲವೊಮ್ಮೆ `ಅವರಂತೆ ಕಾಣಿಸ್ಕೊಳ್ಳಲು ನನಗೆ ಸಾಧ್ಯವಾಗೋದಿಲ್ಲ’ ಅನ್ನುವ ನಿಜದ ಅರಿವೇ ಮನಸ್ಸು ಮುದುಡಿಸುವುದುಂಟು. ಅದ್ಯಾಕೋ ಮುದಿತನವನ್ನು ಒಪ್ಪಿಕೊಳ್ಳುವಲ್ಲಿ ಗಂಡಸರಿಗಿಂತ ಹೆಂಗಸರು ಹೆಚ್ಚು ಮೊಂಡು ಹಿಡಿಯುತ್ತಾರೆ. ಎಲ್ಲಕ್ಕಿಂತ ಹೆಚ್ಚು ನಮ್ಮನ್ನು ಡಿಸ್ಟರ್ಬ್ ಮಾಡೋದು, ನಮ್ಮ ಸೌಂದರ್ಯ  ಕಳೆದುಹೋಗ್ತಿದೆ ಅನ್ನುವ ವಾಸ್ತವ. ಕೆಲವರು ತಮಗಿಂತ ಕಿರಿಯ ಹೆಣ್ಣುಗಳೊಡನೆ ಸ್ಪರ್ಧೆಗಿಳಿಯೋದು, ಗೆಲ್ಲಲಾಗದ ಸಂಕಟಕ್ಕೆ ಅನಗತ್ಯ ರಗಳೆಗಳನ್ನು ಶುರುಹಚ್ಚೋದು  ಇತ್ಯಾದಿ ಮೈಮೇಲೆ ಎಳೆದುಕೊಳ್ಳೋದೂ ಉಂಟು. ಕಾಲದೊಟ್ಟಿಗೆ ರೂಪವೂ ಬದಲಾಗುತ್ತಾ ಹೋಗುತ್ತೆ ಅನ್ನೋದನ್ನ ತಿಳಿದು, ಯಾವತ್ತೂ ಕಳೆಗುಂದದ ವ್ಯಕ್ತಿತ್ವದ ಸೌಂದರ್ಯಕ್ಕೆ ಮಹತ್ವ ಕೊಡಬೇಕು. ಆಗ ಮಾತ್ರ ಚಿರ ಯೌವನ ಮತ್ತು ಸೌಂದರ್ಯಗಳು ನಮ್ಮದಾಗುತ್ತವೆ. ಆಗ ಬೇಕಿದ್ದರೆ  ನಾವು ವ್ಯಕ್ತಿತ್ವ ಸ್ಪರ್ಧೆಯಲ್ಲಿ ಯಾರೊಂದಿಗಾದರೂ ಮುಕಾಬಿಲೆ ಮಾಡಬಹುದು, ಕಿರಿಯರನ್ನೂ ಸೋಲಿಸಬಹುದು!

ವಯಸ್ಸಾದ ಮೇಲೂ ಪ್ರತಿಯೊಂದು ವ್ಯಕ್ತಿಯಲ್ಲಿ ಯೌವನದ ಚಿಲುಮೆ ಇರುತ್ತದೆ. ಅದು ಸೃಜನಶೀಲತೆಯಲ್ಲಿ, ಕಲಿಕೆಯಲ್ಲಿ ಚಿಮ್ಮಿ ಬರುತ್ತದೆ. ಸದಾ ಏನಾದರೊಂದು ಚಟುವಟಿಕೆ ನಡೆಸುತ್ತಲೇ ಇರುವವರು  ಒಂದಲ್ಲ ಒಂದು ರೀತಿಯಲ್ಲಿ ಕಳಕಳೆಯಾಗಿ ತೋರುತ್ತಾರೆ. ಅದು ಗಂಡಾಗಿರಲಿ ಅಥವಾ ಹೆಣ್ಣು… ವಯಸ್ಸಾದ ಮೇಲೆ ಇಂಥವರ ಸೊಂಟದ ಸುತ್ತಳತೆಯಲ್ಲಿ ಸಾಕಷ್ಟು ಬದಲಾವಣೆ ಆಗಿರಬಹುದು, ಹಾಗಿದ್ದೂ ಸದಾ ಲವಲವಿಕೆಯಿಂದ ಇರುತ್ತಾ ಆಕರ್ಷಣೆಯ ಕೇಂದ್ರವಾಗಿರುತ್ತಾರೆ. ಇದಕ್ಕೆ ಕಾರಣ ಇಷ್ಟೇ, ಹೊಸತನಕ್ಕೆ ತೆರೆದುಕೊಳ್ಳುತ್ತಲೇ ಇರುವಂಥವರು ಯಾವತ್ತೂ ಮಾನಸಿಕವಾಗಿ ಮತ್ತು ತೋರ್ಪಡಿಕೆಯಿಂದಲೂ ತಾಜಾ ಆಗಿರುತ್ತಾರೆ.

ಜೊತೆಗೆ, ವಯಸ್ಸಾದ ಮೇಲಾದರೂ (ವಾಸ್ತವವಾಗಿ ಇದು ಯೌವನ ಕಾಲದಲ್ಲಿ ಆರಂಭಿಸಬೇಕಾದ ಸಂಗತಿ) ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಕಣ್ಮುಚ್ಚಿ ಕೂರುವ ಧ್ಯಾನ ಸಾಧ್ಯವಾಗದೆ ಹೋದರೆ, ‘ಸಂಗೀತ ಧ್ಯಾನ’, ‘ಚಹಾ ಧ್ಯಾನ’ ಇತ್ಯಾದಿಯನ್ನಾದರೂ ರೂಢಿಸಿಕೊಳ್ಳಬೇಕು. ಇದು ಮನಸ್ಸನ್ನು ನಿಯಂತ್ರಣದಲ್ಲಿರಿಸಿ, ಒತ್ತಡ, ಖಿನ್ನತೆ ಮೊದಲಾದವುಗಳಿಂದ ರಕ್ಷಣೆ ನೀಡಬಲ್ಲದು. 

ಈವತ್ತು ನಮ್ಮೆದುರು ಘನತೆಯ ಬದುಕು ಕಟ್ಟಿಕೊಳ್ಳಲು ಬಹಳಷ್ಟು ಆಯ್ಕೆಗಳಿವೆ. ಯಾವತ್ತೂ ಮಾಸದ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲು ಅವಕಾಶಗಳಿವೆ. ಪ್ರತಿ ವರ್ಷ ಆರಿಸುವ ಕ್ಯಾಂಡೆಲ್‌ಗಳ ಲೆಕ್ಕ ಎಣಿಸುತ್ತಾ, ಕತ್ತಲಿಗೆ ಕಾಲಿಡಬೇಕಿಲ್ಲ. ಇಂದಲ್ಲ ನಾಳೆ ಬರುವ ಇಳಿ ವಯಸ್ಸನ್ನ  ಸ್ವಾಗತಿಸಲಿಕ್ಕೆ ಇವತ್ತೇ ರೆಡಿಯಾಗಿರೋಣ, ಖುಷಿಖುಷಿಯಿಂದ.

Leave a Reply