ಬದುಕಿನಲ್ಲಿ ಪ್ರಜ್ಞಾಪೂರ್ವಕ ಉದ್ದೇಶವಿರದೆ ಯಾರೂ ಎಂದೂ ತಲುಪಲಾರರು. ಅಂತಹ ಪ್ರಜ್ಞಾಪೂರ್ವಕ ಹಂಬಲ ನಾವು ವಿಚಾರ ಮಾಡಿದಾಗ ಮಾತ್ರ ಸಿಗುತ್ತದೆ ~ ಓಶೋ ರಜನೀಶ್
ಚಿಂತನ ಮನನಗಳಿಂದ ಸತ್ಯದ ಹಂಬಲ ಹುಟ್ಟುತ್ತದೆ. ಬದುಕಿನ ಕುರಿತು ನಮ್ಮಲ್ಲಿ ತುಂಬ ಕಡಿಮೆ ಜನ ಆಲೋಚನೆ ನಡೆಸುತ್ತೇವೆ. ಬಹುತೇಕ ಮಂದಿ ಮರದ ತುಂಡನ್ನು ನೀರಿನಲ್ಲಿ ಹರಿಯಬಿಟ್ಟವರಂತೆ ಜೀವಿಸುತ್ತಾರೆ. ನೀರು ಹೇಗೆಲ್ಲ ಹರಿಯುತ್ತದೋ ಹಾಗೆಯೇ ಆ ಮರದ ತುಂಡೂ ಹರಿಯುತ್ತ ಸಾಗುತ್ತದೆ. ಆ ಮರದ ತುಂಡಿಗೆ ತನ್ನದೇ ಗುರಿ ಎಂಬುದು ಇರುವುದಿಲ್ಲ.
ಆ ಮರದ ತುಂಡಿನ ಬದುಕಿಗೂ ನಮ್ಮಲ್ಲಿ ಬಹುತೇಕ ಮಂದಿಯ ಬದುಕಿಗೂ ಅಷ್ಟೇನೂ ವ್ಯತ್ಯಾಸವಿಲ್ಲ. ಸಂದರ್ಭಗಳು ಕರೆದೊಯ್ದಂತೆ ನಾವು ಜೀವನ ನಡೆಸುತ್ತಿದ್ದೇವೆ. ನಾವು ಸಹ ಆ ಮರದ ತುಂಡಿನಂತೆ, ಒಂದು ತರಗೆಲೆಯಂತೆ ಜೀವಿಸಬೇಕೆ ಅಥವಾ ನಮಗೂ ನಮ್ಮದೇ ಆದ ಒಂದು ವ್ಯಕ್ತಿತ್ವವಿದೆಯೇ ಎಂಬ ಸಂಶಯ ನಮ್ಮಲ್ಲಿ ಮೂಡಿದಾಗ ಬದುಕಿನ ಕುರಿತು ನಮ್ಮೊಳಗೂ ಆಲೋಚನೆ ಮೊಳೆಯಲಾರಂಭಿಸುತ್ತದೆ.
ಮನುಷ್ಯನ ಅತ್ಯಂತ ಶ್ರೇಷ್ಠವಾದ ಸೃಷ್ಟಿ ಎಂದರೆ ಅದು ಸ್ವಯಂ ಮನುಷ್ಯನೇ. ಸ್ವಯಂನಿರ್ಮಾಣವೇ ಮನುಷ್ಯನ ಕಟ್ಟಕಡೆಯ ಸೃಜನಶೀಲತೆಯಾಗಿದೆ. ಅದರೆದುರು ನಾವು ತಯಾರಿಸುವ ಉಳಿದೆಲ್ಲವೂ ನಿಷ್ಪ್ರಯೋಜನಕಾರಿಯಾದುದು. ಪ್ರತಿಯೊಂದೂ ನೀರಿನ ಮೇಲೆ ಮೂಡಿಸುವ ಗೆರೆಯಂತೆ ಅಳಿಸಿಹೋಗುವಂತಹುದು. ಅಂತರಂಗದ ಬದಲಾವಣೆಯಾದರೂ ಬಂಡೆಯ ಮೇಲೆ ಬರೆದ ಅಕ್ಷರಗಳಂತೆ ಚಿರಸ್ಥಾಯಿಯಾಗಿ ಉಳಿಯುತ್ತದೆ.
ನೀವು ನಿಜಕ್ಕೂ ನೀರಿನಲ್ಲಿ ಹರಿಯತ್ತಿರುವ ಮರದ ತುಂಡಿಗೆ ಸರಿಸಮರೇ ಅಥವಾ ಮರದಿಂದ ಕೆಳಕ್ಕುದುರಿ ಗಾಳಿಗೆ ತೂರಿದ ಒಂದು ತರಗೆಲೆಗೆ ಸಮಾನರೆ ಎಂದು ನಿಮ್ಮ ಕುರಿತು ನೀವೇ ವಿಚಾರ ಮಾಡಬೇಕು. ನೀವು ಬದುಕಿನಲ್ಲಿ ಪ್ರಜ್ಞಾಪೂರ್ವಕವಾಗಿ ವಿಕಾಸಗೊಂಡಿರುವಿರೋ ಅಥವಾ ಗಾಳಿ ಬಂದಂತೆ ತೂರುವ ತರಗೆಲೆಯಂತೆ ಜೀವಿಸುತ್ತಿರುವಿರೋ? ಗಾಳಿಗೆ ತೂರಿದ ತರಗೆಲೆ ಎಲ್ಲಾದರೂ ತನ್ನ ಗುರಿಯನ್ನು ತಲುಪಬಲ್ಲುದೆ? ಯಾರಾದರೂ ಎಂದಾದರೂ ಹಾಗೆ ತಲುಪಿರುವರೇ? ಬದುಕಿನಲ್ಲಿ ಅಂತಹ ಪ್ರಜ್ಞಾಪೂರ್ವಕ ಉದ್ದೇಶವಿರದೆ ಯಾರೂ ಎಂದೂ ತಲುಪಲಾರರು. ಅಂತಹ ಪ್ರಜ್ಞಾಪೂರ್ವಕ ಹಂಬಲ ನಾವು ವಿಚಾರ ಮಾಡಿದಾಗ ಮಾತ್ರ ಸಿಗುತ್ತದೆ.
ಬುದ್ಧನ ಕತೆ ನಿಮಗೆ ತಿಳಿದಿರಬಹುದು. ಯಾವ ಕಾರಣದಿಂದ ಅವನಿಗೆ ವಿರಕ್ತಿಯುಂಟಾಯಿತು, ಅವನಲ್ಲಿ ಸತ್ಯದ ಹಂಬಲ ಜನಿಸಿತು ಎಂಬ ಕತೆ ತುಂಬ ಜನಜನಿತವಾದುದು, ತುಂಬ ಅರ್ಥಪೂರ್ಣವಾದುದು.ಈ ವ್ಯಕ್ತಿ ಮುಂದೆ ಬಹುದೊಡ್ಡ ಚಕ್ರವರ್ತಿಯಾಗುವನು ಇಲ್ಲವೆ ಬಹುದೊಡ್ಡ ಸನ್ಯಾಸಿಯಾಗುವನು ಎಂದು ಅವನು ಚಿಕ್ಕವನಿದ್ದಾಗಲೇ ಭವಿಷ್ಯ ನುಡಿಯಲಾಗಿತ್ತು.
ಸನ್ಯಾಸಿಯಾಗಲು ಕಾರಣವಾಗಬಹುದಾದ ಬದುಕಿನ ಯಾವ ಕಷ್ಟವೂ ಇವನಿಗೆ ತಿಳಿಯಬಾರದೆಂದು ಅವನ ತಂದೆ ಅವನನ್ನು ಸುಖದ ಸುಪ್ಪತ್ತಿಗೆಯಲ್ಲೇ ಬೆಳೆಸಿದ. ಅತ್ಯಂತ ಶ್ರೇಷ್ಠವಾದ ಅರಮನೆಗಳನ್ನು, ಉದ್ಯಾನವನಗಳನ್ನು ಅವನಿಗಾಗಿ ಕಟ್ಟಿಸಿದ. ಬೇಸಿಗೆ, ಮಳೆಗಾಲ, ಚಳಿಗಾಲಗಳಿಗೆ ಪ್ರತ್ಯೇಕವಾದ ಭವನಗಳನ್ನು ನಿರ್ಮಿಸಿದ್ದ. ಅವನು ಒಂದು ಬಾಡಿದ ಹೂವಿನ ಪಕಳೆಯೂ ಬುದ್ಧನ ಕಣ್ಣಿಗೆ ಬೀಳಬಾರದು ಎಂದು ಪರಿಚಾರಕರಿಗೆ ಅಪ್ಪಣೆ ಮಾಡಿದ್ದ. ಹೂವು ಬಾಡುವಂತೆ ನನ್ನ ಶರೀರವೂ ಮುಂದೊಂದು ದಿನ ಬಾಡಿಹೋಗದೇ ಎಂಬ ವಿಚಾರ ಅವನಲ್ಲಿ ಮೂಡಬಾರದೆಂದು ಉದ್ಯಾನವನದ ಗಿಡಮರದ ಎಲೆಗಳು ಮತ್ತು ಹೂವುಗಳು ಸ್ವಲ್ಪ ಬಾಡಿದರೂ ಅವನ್ನು ತೆಗೆದುಹಾಕಲಾಗುತ್ತಿತ್ತು, ಸಾಯವಂತಿದ್ದ ಗಿಡಮರಗಳನ್ನು ಕತ್ತರಿಸಿ ಹಾಕಲಾಗುತ್ತಿತ್ತು. ಜನ ವಯೋವೃದ್ಧರಾಗುವಂತೆ ನಾನೂ ಮುದುಕನಾಗುವುದಿಲ್ಲವೇ ಎಂಬ ಸಂಶಯ ಅವನಲ್ಲಿ ಮೂಡದಿರಲೆಂದು ಅವನ ಅಂತಃಪುರದಲ್ಲಿ ಯುವಕ, ಯುವತಿಯರಿಗೆ ಮಾತ್ರ ಪ್ರವೇಶವಿರುತ್ತಿತ್ತು.
ಹೀಗೆ ಯುವಕನಾಗುವವರೆಗೂ ಲೋಕದಲ್ಲಿ ಸಾವು ಎಂಬುದೂ ಇರುತ್ತದೆ ಎಂದು ಅವನಿಗೆ ತಿಳಿದೇ ಇರಲಿಲ್ಲ. ಆ ರೀತಿ ಅವನನ್ನು ಬೆಳೆಸಲಾಯಿತು.ಅವನ ಊರಿನಲ್ಲಿ ಜನ ಸಾಯುತ್ತಿದ್ದರೂ ಆ ಸುದ್ದಿ ಅವನ ತನಕ ಬರುತ್ತಿರಲಿಲ್ಲ. ನಾನಿಲ್ಲಿ ಆಲೋಚನೆಯ ಅರ್ಥವನ್ನು ನಿಮಗೆ ವಿವರಿಸುತ್ತಿದ್ದೇನೆ. ಆಲೋಚನೆಯೆಂದರೆ ನಮ್ಮ ಸುತ್ತ ಏನು ಸಂಭವಿಸುತ್ತಿದೆಯೋ ಅದನ್ನು ಕಣ್ಣು ಬಿಟ್ಟು ನೋಡುವುದು ಎಂದರ್ಥ.ನಮ್ಮ ಸುತ್ತ ಕ್ರಮೇಣ ವೃದ್ಧಾಪ್ಯ ಕಾಣಿಸಿಕೊಳ್ಳುವಾಗ ಮರಣ ಸಂಭವಿಸುತ್ತಿರುವಾಗ, ಯೋಚಿಸಿ ನೋಡಿ, ನಾವು ಸಹ ಮುಂದೊಮ್ಮೆ ಮುದುಕರಾಗುವುದಿಲ್ಲವೆ, ಸಾಯುವುದಿಲ್ಲವೇ?
ಬುದ್ಧನ ಮನಸ್ಸಿನಲ್ಲಿ ಇಂತಹ ಪ್ರಶ್ನೆಗಳು ಏಳಬಾರದೆಂದು ಅವನ ತಂದೆ ಎಲ್ಲ ರೀತಿಯಲ್ಲಿ ವ್ಯವಸ್ಥೆ ಮಾಡಿದ. ನಾನಾದರೂ ಇಂತಹ ಪ್ರಶ್ನೆಗಳು ಉದ್ಭವಿಸಲೆಂದು ಎಲ್ಲ ರೀತಿಯ ವ್ಯವಸ್ಥೆಗಳನ್ನೂ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅಷ್ಟೆಲ್ಲ ಜಾಗರೂಕತೆಯ ನಡುವೆಯೂ ಮುಂದೊಂದು ದಿನ ಅವನ ಮನಸ್ಸಿನಲ್ಲಿ ಈ ಬಗೆಯ ಪ್ರಶ್ನೆಗಳು ಹುಟ್ಟಿಕೊಂಡೇ ತೀರಿದವು.
ಒಮ್ಮೆ ಅರಮನೆಯ ಹೊರಗೆ ವಿಹಾರಕ್ಕೆ ತೆರಳಿದಾಗ ಒಬ್ಬ ಮುದುಕನು ಅವನಿಗೆದುರಾದ. ಅವನು ತನ್ನ ಸಾರಥಿಯನ್ನು ಕುರಿತು “ಈ ವ್ಯಕ್ತಿಗೇನಾಗಿದೆ? ಮನುಷ್ಯ ಹೀಗೂ ಇರುತ್ತಾನೆಯೇ?”ಎಂದು ಕೇಳಿದ.ಸಾರಥಿ “ನಾನೇಕೆ ಸುಳ್ಳು ನುಡಿಯಲಿ? ಪ್ರತಿಯೊಬ್ಬ ವ್ಯಕ್ತಿಯೂ ಕೊನೆಗೊಮ್ಮೆ ಹೀಗಾಗುತ್ತಾನೆ” ಎಂದ.
“ನಾನೂ ಕೂಡ!”
“ಭಗವನ್, ನಾನು ಹೇಗೆ ಸುಳ್ಳಾಡಲಿ? ಯಾರೂ ಇದಕ್ಕೆ ಅಪವಾದವಲ್ಲ, ಯಾರಿಗೂ ವಿನಾಯಿತಿ ಇಲ್ಲ”
“ರಥವನ್ನು ಹಿಂದಕ್ಕೆ ತಿರುಗಿಸು, ನಿನ್ನ ಮಾತುಗಳನ್ನು ಕೇಳಿ ನಾನು ಈಗಾಗಲೇ ಮುದುಕನಾಗಿಬಿಟ್ಟೆ” ಎಂದ.
ನಾಳೆಯ ದಿನ ಮುದುಕನಾಗಿಯೇ ತೀರಬೇಕು ಎಂದು ತಿಳಿದರೆ ಮುಗಿಯಿತು. ಇದನ್ನೇ ನಾನು ವಿವೇಕ ಎಂದು ಕರೆಯುವುದು.
ಸಾರಥಿಯು “ನಾಳೆಯ ದಿನ ಯುವಮಹೋತ್ಸವಕ್ಕೆ ಹೋಗಬೇಕು, ಎಲ್ಲರೂ ತಯಾರಿ ನಡೆಸಿಕೊಂಡು ಕಾಯುತ್ತಿರುತ್ತಾರೆ ಹೋಗೋಣವೇ?”ಎಂದು ಕೇಳಿದಾಗ ಬುದ್ಧನು “ಆ ಜಾಗಕ್ಕೆ ಹೋಗುವುದರಲ್ಲಿ ಅರ್ಥವಿಲ್ಲ. ವ್ಯಕ್ತಿ ಮುದುಕನಾಗಿಯೇ ತೀರುವನೆಂದು ತಿಳಿದ ಮೇಲೆ ಯೌವನವನ್ನು ಆಚರಣೆ ಮಾಡುವುದು ಅಸಂಗತ” ಎಂದು ಹೇಳಿದ.
ಹೀಗೆ ಹಿಂದಿರುಗುವಾಗ ದಾರಿಯಲ್ಲಿ ಒಂದು ಶವವನ್ನು ಹೊತ್ತುಕೊಂಡು ಮಸಣದೆಡೆಗೆ ಸಾಗುತ್ತಿದ್ದರು. ಅದನ್ನು ಕಂಡ ಬುದ್ಧ “ಇದೇನು ಸಾಗುತ್ತಿರುವುದು?ಈ ಜನ ಏನು ಮಾಡುತ್ತಿದ್ದಾರೆ?”ಎಂದು ಕೇಳಿದ.
“ಹೆಗಲ ಮೇಲೆ ಏನನ್ನು ಹೊತ್ತು ನಡೆಯುತ್ತಿದ್ದಾರೆ?”
“ಹೇಗೆ ಹೇಳಲಿ, ಇದನ್ನು ವಿವರಿಸಲು ನನಗೆ ಅಪ್ಪಣೆ ಇಲ್ಲ. ಆದರೂ ಸುಳ್ಳನ್ನಾಡಲಾರೆ, ಅವನು ಮರಣ ಹೊಂದಿದ್ದಾನೆ, ಜನ ಅವನನ್ನು ಹೊತ್ತು ನಡೆಯುತ್ತಿದ್ದಾರೆ”
ಮರಣ ಹೊಂದುವುದು ಎಂದರೇನು? ಎಂದು ಬುದ್ಧ ಕೇಳಿದ. ಬದುಕಿನ ಹೊಳೆ ಮುಂದೊಮ್ಮೆ ಬತ್ತಿಹೋಗುತ್ತದೆ, ಆಗ ವ್ಯಕ್ತಿ ಮರಣ ಹೊಂದುತ್ತಾನೆ ಎಂಬುದು ಬುದ್ಧನಿಗೆ ಮನವರಿಕೆಯಾಯಿತು.“ಇಲ್ಲ, ರಥವನ್ನು ಹಿಂದಿರುಗಿಸು, ನಾನು ಈಗಾಗಲೇ ಮರಣ ಹೊಂದಿದ್ದೇನೆ” ಎಂದ.
ಸತ್ತಿರುವನು ಆ ವ್ಯಕ್ತಿಯಲ್ಲ, ಮರಣವು ಈ ಕ್ಷಣದಲ್ಲಿ ನನ್ನೊಳಗೆ ಸಂಭವಿಸಿದೆ ಎಂಬ ಈ ತಿಳಿವನ್ನೇ ನಾನು ವಿವೇಕ ಎಂದು ಕರೆಯುವುದು. ಇನ್ನೊಬ್ಬನನ್ನು ಕಂಡು ತಿಳಿಯುವುದೇ ನಿಜವಾದ ವಿವೇಕವಾಗಿದೆ, ಇನ್ನೊಬ್ಬನಿಗೆ ಸಂಭವಿಸುವುದೇ ನನಗೂ ಸಂಭವಿಸುವುದು ಎಂಬುದನ್ನು ಮನಗಂಡವನೇ ನಿಜವಾದ ವಿವೇಕಿ ಎನಿಸಿಕೊಳ್ಳುವನು.
(ಓಶೋ ಅವರ ‘ಧ್ಯಾನಸೂತ್ರ’ ಕೃತಿಯಿಂದ | ಕನ್ನಡಕ್ಕೆ : ಡಾ.ಟಿ.ಎನ್.ವಾಸುದೇವ ಮೂರ್ತಿ | ಪ್ರಕಾಶನ ” OSHO IN KARNATAKA, ಮೈಸೂರು)