ಆ ಗೆಳೆತನದ ಬಗ್ಗೆ ಇನ್ನು ಒಂದು ಮಾತೂ ಆಡಲಾರೆ… : ಒಂದು ಷಮ್ಸ್ ಪದ್ಯ

ಮೂಲ : ಷಮ್ಸ್ ಎ ತಬ್ರೀಝ್ | ಕನ್ನಡಕ್ಕೆ: ಚಿದಂಬರ ನರೇಂದ್ರ

ನಿಜದ ಬಗೆಗಿನ 
ರೂಮಿಯ ತಿಳುವಳಿಕೆ ತುಂಬ ಸೂಕ್ಷ್ಮ.
ಹೀಗಿರುವಾಗ ಅವನ ಸಾನಿಧ್ಯದಲ್ಲಿ
ಹರಟೆ, ತಮಾಷೆ ಮಾತ್ರ ಸಾಧ್ಯ ನನಗೆ .

ಪ್ರೇಮದ ಬಗ್ಗೆ ಮಾತು ಸಾಕು
ಈಗ ಸ್ವಲ್ಪ ನಮ್ಮ ಭಯಗಳ ಬಗ್ಗೆ…

ಇಬ್ಬರು ಮನುಷ್ಯರಿದ್ದರು.

ಒಬ್ಬ 
ತನ್ನ ಸೊಂಟದ ಸುತ್ತ ಯಾರಿಗೂ ಕಾಣಿಸದಂತೆ 
ಒಂದು ಅದೃಶ್ಯ ಬಟ್ಟೆಯಲ್ಲಿ 
ಬಂಗಾರ ಸುತ್ತಿಟ್ಟುಕೊಂಡಿದ್ದ.

ಇನ್ನೊಬ್ಬನಿಗೆ ಈ ವಿಷಯ ಗೊತ್ತು,
ಮೊದಲನೇಯವ ನಿದ್ದೆ ಹೋಗುವುದನ್ನೇ
ಇವ ಕಾಯುತ್ತಿದ್ದ.

ಆದರೆ 
ಬಂಗಾರ ಸುತ್ತಿಕೊಂಡಿದ್ದ ಮನುಷ್ಯ
ಸದಾ ಅರ್ಧ ಎಚ್ಚರಿಕೆಯಲ್ಲಿ,
ಆಗಾಗ ಕಿರು ನಿದ್ರೆ
ಅವನ ಸ್ವಭಾವವೇ ಎಚ್ಚರಿಕೆ ಮತ್ತು ಅರಿವು
ಹೀಗೆ ಆತ ಲೆಕ್ಕವಿರದಷ್ಟು ಹೊತ್ತು ಕಳೆಯಬಲ್ಲ.

ಈ ಇಬ್ಬರೂ ಜೊತೆಯಾಗಿ
ಎಷ್ಟೋ ದೂರ ಪ್ರಯಾಣ ಮಾಡಿದರು.
ಕೊನೆಯ ಜಾಗ ಹತ್ತಿರವಾದಾಗ
ಬಂಗಾರ ಕದಿಯಲು 
ಯೋಜನೆ ಹಾಕಿಕೊಂಡಿದ್ದವನಿಗೆ ನಿರಾಶೆಯಾಯಿತು.

ಎಷ್ಟು ಜಾಗರೂಕ ಈ ಮನುಷ್ಯ
ಏನೇ ಆಗಲಿ ಬಂಗಾರ ಕದಿಯಲು ಬಿಡಲಾರ
ಬದಲಾಗಿ ಇವನ ಜೊತೆ ಕೊಂಚ ತಮಾಷೆ ಮಾಡುತ್ತ
ಉಳಿದ ಹೊತ್ತು ಕಳೆದರಾಯ್ತು.

ಮಹಾಶಯ,
ಸ್ವಲ್ಪ ಹೊತ್ತು ನೀನು ಯಾಕೆ ನಿದ್ದೆ ಮಾಡಬಾರದು?

ಯಾಕೆ? ನಾನ್ಯಾಕೆ ನಿದ್ದೆ ಹೋಗಲಿ?

ನಿದ್ದೆಯಲ್ಲಿರುವಾಗ
ನಿಮ್ಮ ತಲೆ ಮೇಲೊಂದು ಕಲ್ಲು ಎತ್ತಿ ಹಾಕಿ
ನೀವು ಸೊಂಟಕ್ಕೆ ಸುತ್ತಿಕೊಂಡಿರುವ
ಬಂಗಾರ ಕದಿಯುವಾಸೆ.

ಓಹ್ ಈಗ ಗೊತ್ತಾಯಿತು ನೀನ್ಯಾರೆಂದು.
ನೀನು ನನಗಿಷ್ಚ
ಇನ್ನು ಸಮಾಧಾನದಿಂದ ನಿದ್ದೆ ಮಾಡಬಹುದು.

ಹೀಗೆನ್ನುತ್ತ ಆತ ನಿದ್ದೆಗೆ ಜಾರಿದ.

ಸಧ್ಯ, 
ಒಂದು ಅಪಾಯಕಾರಿ ಪಯಣದಲ್ಲಿ,
ಮನುಷ್ಯ ಇನ್ನೂ ನಿದ್ದೆಯಲ್ಲಿ.

ಭಗವಂತನ ಗೆಳೆಯನೊಬ್ಬ 
ಅವನನ್ನು ಎಚ್ಚರಿಸಲು ಬಂದಿದ್ದಾನೆ.
ಹೀಗಿರುವಾಗಲೇ ನಿದ್ದೆಯಲ್ಲಿರುವವ 
ಎಚ್ಚರಿಸಲು ಬಂದವನ ಜೊತೆ 
ಆತ್ಮ ಸಾಂಗತ್ಯದಲ್ಲಿ ನಿರತನಾಗಿದ್ದಾನೆ.

ಈ ರೀತಿ ನಿದ್ದೆ ಮಾಡುವವನ
ಗುಣ ಲಕ್ಷಣಗಳನ್ನು ಬಿಡಿಸಿ ಹೇಳಿದರೆ
ನೀವು ಧೈರ್ಯಗೆಡಬಹುದು.
ನಿದ್ದೆ ಮಾಡುವವನ ಮತ್ತು ಎಚ್ಚರಿಸುವವನ
ಗೆಳೆತನದ ಬಗ್ಗೆ ಇನ್ನು ಒಂದು ಮಾತೂ ಆಡಲಾರೆ.

ನಿಮ್ಮೊಳಗಿನ ಭಯವನ್ನೆಲ್ಲ ಆಚೆ ಹಾಕಿ,

ಭರವಸೆಯಿರಲಿ… ನಂಬಿಕೆಯಿರಲಿ.

Leave a Reply