ಸಿನಿಕತನದಲ್ಲಿ ವಿಕಾಸದ ಪ್ರಗತಿಪರ ಪ್ರವಾಹವು ದಿಕ್ಕು ತಪ್ಪಿ ನಿಂತ ನೀರಾಗಿ ಪರ್ಯವಸಾನವಾಗುತ್ತದೆ. ಆ ನಿಂತ ನೀರೇ ಸ್ವಾರ್ಥ ಕೇಂದ್ರದ ವ್ಯಕ್ತಿತ್ವ…. ಅದು ನಿಜದಲ್ಲಿ ವ್ಯಕ್ತಿತ್ವವೇ ಅಲ್ಲ! ಬರ್ನಾಡ್ ಷಾ ನ ಮಾತುಗಳಲ್ಲಿ ಹೇಳುವುದಾದರೆ ಇದು, “ತನ್ನನ್ನು ಸುಖವಾಗಿಡಲು ಜಗತ್ತು ಪ್ರಯತ್ನಿಸುತ್ತಿಲ್ಲ ಎಂದು ಸದಾ ಗೊಣಗುತ್ತಿರುವ ರೋಗ, ದೂರುಗಳ ಮುದ್ದೆ” ~ ಸ್ವಾಮಿ ರಂಗನಾಥಾನಂದ
ಸಿನಿಕತನದ ಫಲ ವ್ಯಕ್ತಿಯ ವ್ಯಕ್ತಿಯ ಆಧ್ಯಾತ್ಮಿಕ ಮರಣ. ಎಲ್ಲ ಮೌಲ್ಯಗಳನ್ನೂ ಅದು ಹೀನಾಯಿಸುತ್ತದೆ. ಎಲ್ಲ ಪಕ್ಕಾ ಐಹಿಕವಾದಕ್ಕೂ ಅಂತಿಮವಾಗಿ ಆಗುವ ಶಾಸ್ತಿ ಅದೇ. ಹೆಚ್ಚು ಕಡಿಮೆ ಪ್ರತಿಯೊಂದು ನಾಗರಿಕತೆಯನ್ನೂ ಅದು ಸಂಕಟಕ್ಕೆ ಗುರಿ ಮಾಡಿದೆ. ಆದರೆ ಆಧುನಿಕ ನಾಗರಿಕತೆಯಲ್ಲಿ ಮೇಲುಗೈಯಾಗಿರುವ ಮನೋಭಾವ ಇದೇ. ಐಹಿಕ ವಸ್ತುಗಳಿಗೂ ದೇಹಸುಖಗಳಿಗೂ ಹೆಚ್ಚು ಬೆಲೆ ಕೊಡುವುದರ ಮೂಲಕ ಮಾನವನು ಆಧ್ಯಾತ್ಮಿಕವಾಗಿ ದುರ್ಬಲನಾದಾಗ, ಸರ್ವದಾ ಇರುವ ತನ್ನ ಅಂತರಾತ್ಮದ ತತ್ತ್ವವನ್ನು ಉಪೇಕ್ಷಿಸಿದಾಗ ಸಿನಿಕತನದ ಮನೋಭಾವ ಪ್ರವೇಶಿಸುತ್ತದೆ. ಅನುಭವಗಳನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ಮಾನವನು ಆಗ ಕಳೆದುಕೊಳ್ಳುತ್ತಾನೆ. ಬದಲಿಗೆ ಅದೇ ಅವನನ್ನು ಅರಗಿಸಿಬಿಡುತ್ತದೆ.
ಸಿನಿಕತನದಲ್ಲಿ ವಿಕಾಸದ ಪ್ರಗತಿಪರ ಪ್ರವಾಹವು ದಿಕ್ಕು ತಪ್ಪಿ ನಿಂತ ನೀರಾಗಿ ಪರ್ಯವಸಾನವಾಗುತ್ತದೆ. ಆ ನಿಂತ ನೀರೇ ಸ್ವಾರ್ಥ ಕೇಂದ್ರದ ವ್ಯಕ್ತಿತ್ವ. ಅದು ನಿಜದಲ್ಲಿ ವ್ಯಕ್ತಿತ್ವವೇ ಅಲ್ಲ. ಬರ್ನಾಡ್ ಷಾ ನ ಮಾತುಗಳಲ್ಲಿ ಹೇಳುವುದಾದರೆ ಇದು, “ತನ್ನನ್ನು ಸುಖವಾಗಿಡಲು ಜಗತ್ತು ಪ್ರಯತ್ನಿಸುತ್ತಿಲ್ಲ ಎಂದು ಸದಾ ಗೊಣಗುತ್ತಿರುವ ರೋಗ, ದೂರುಗಳ ಮುದ್ದೆ”.
ಪ್ರಾಚೀನ ನಾಗರಿಕತೆಗಳಲ್ಲಿ ಸಿನಿಕತನ ಎಂಬುದು ಹೊರವಲಯದಲ್ಲಿ ಮಾತ್ರ ಸುಳಿಯುತ್ತಿದ್ದ ಮನೋಭಾವವಾಗಿತ್ತು. ವಯಸ್ಸಾಗುತ್ತ ಹೋದಂತೆ ಬದುಕಿನ ಯುದ್ಧಭೂಮಿಯಲ್ಲಿ ದೊರೆತ ಕುಲುಕಾಟ, ಅಪಜಯಗಳಿಂದಾಗಿ ಸ್ತ್ರೀಪುರುಷರು ಸಿನಿಕ ಪ್ರವೃತ್ತಿಯನ್ನು ತೋರುತ್ತಿದ್ದರು. ಆದರೆ ಅದು ಅವರ ಬದುಕಿನ ಆರಂಭದ ದಿನಗಳ ಮನೋಭಾವವಾಗಿರುತ್ತಿದ್ದುದು ತುಂಬಾ ಅಪರೂಪ. ಆದರೆ ಆಧುನಿಕ ಯುಗದಲ್ಲಾದರೋ, ಎಲ್ಲ ವಯಸ್ಸಿನ ಜನರನ್ನೂ ಹಿಂಸಿಸುತ್ತಿರುವ ಕೇಂದ್ರ ಮನೋಭಾವವೇ ಅದಾಗಿದೆ. ಹದಿಹರೆಯವನ್ನೂ ದಾಟದವರಿಂದ ಶುರುವಾಗಿ, ಹೆಮ್ಮೆಯ ಬುದ್ಧಿಜೀವಿಗಳೂ ಸೇರಿ, ಕೋಲೂರಿ ತತ್ತರಿಸುತ್ತಿರುವ ವೃದ್ಧರವರೆಗೆ ಎಲ್ಲರನ್ನೂ ಅದು ವ್ಯಾಪಿಸಿಕೊಂಡಿದೆ. ಒಂದು ನಾಗರಿಕತೆಯ ಅವನತಿಗೆ, ಅದರ ಸಂಪೂರ್ಣ ಅಸಮರ್ಥತೆಗೆ, ಅದರ ಆಧ್ಯಾತ್ಮಿಕ ದಾರಿದ್ರ್ಯಕ್ಕೆ ಇದು ಖಚಿತವಾದ ಸೂಚಿಯಾಗಿದೆ.
ಮಾನವನು ತನ್ನಲ್ಲಿ ತಾನು ಶ್ರದ್ಧೆಯನ್ನು ಕಳೆದುಕೊಂಡಾಗ, ಪ್ರತಿಯೊಬ್ಬರಲ್ಲಿಯೂ, ಪ್ರತಿಯೊಂದರಲ್ಲಿಯೂ ಶ್ರದ್ಧೆಯನ್ನು ಕಳೆದುಕೊಂಡಾಗ, ಸರ್ವತೋಮುಖವಾದ ಅವನತಿಗೆ ಹೆಬ್ಬಾಗಿಲನ್ನು ತೆರೆದಂತೆಯೇ. ಅರವತ್ತು ವರ್ಷಗಳಿಗೆ ಹಿಂದೆಯೇ ಸ್ವಾಮಿ ವಿವೇಕಾನಂದರು ಭಾರತದ ಜನರ ಶತಮಾನಗಳಷ್ಟು ಹಳೆಯದಾದ ಶ್ರದ್ಧಾನಷ್ಟದ ಬಗ್ಗೆ ಎಚ್ಚರಿಕೆ ನೀಡಿದ್ದರು. ಈಗ ತೀವ್ರ ಸಿನಿಕ ವ್ಯಾಧಿಯು ನಮ್ಮ ನಾಗರಿಕತೆಯ ಮೇಲೆ ಆಕ್ರಮಣ ಮಾಡುತ್ತಿದೆ. ಅದೊಂದು ವ್ಯಾಧಿ ಎಂದು ಗುರುತಿಸಿ ಮೂಲೋತ್ಪಾಟನೆ ಮಾಡದೆ ಹೋದರೆ ನಮ್ಮ ಸಮಾಜಕ್ಕೆ ಉದ್ಧಾರವೇ ಇಲ್ಲ. ಕಾಲರಾ, ಸಿಡುಬು, ಕ್ಷಯ, ಕುಷ್ಠರೋಗ ಮುಂತಾದವನ್ನು ಮೂಲೋತ್ಪಾಟನೆ ಮಾಡುವ ಯೋಜನೆಗಳನ್ನು ಇಟ್ಟುಕೊಂಡಿದ್ದೇವೆ. ನಮ್ಮ ರಾಷ್ಟ್ರೀಯ ಆರೋಗ್ಯಕ್ಕೆ ಇದು ಅತ್ಯಗತ್ಯ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಮಾನವನ ಹೃದಯವನ್ನು ಕೊರೆದು ಹಾಕುತ್ತಿರುವ ಸಿನಿಕತನ, ಶ್ರದ್ಧಾನಷ್ಟವೇ ಮೊದಲಾದ ಸಾಂಕ್ರಾಮಿಕ ವಿಷಗಳನ್ನು ಮೂಲೋತ್ಪಾಟನೆ ಮಾಡುವುದು ಕೂಡ ಅಷ್ಟೇ ಮುಖ್ಯ. ಆಧ್ಯಾತ್ಮಿಕ ಶಿಕ್ಷಣದ ಮೂಲಕ ಮಾತ್ರ ಇದು ಸಾಧ್ಯ.
ಆಧ್ಯಾತ್ಮಿಕ ಶಿಕ್ಷಣವು ನಮ್ಮ ಜನರಿಗೆ ಮಾತ್ರವಲ್ಲ, ಜಗತ್ತಿನ ಎಲ್ಲ ಜನರಿಗೂ ಅತ್ಯಗತ್ಯ. ಮಾನವ ಮತ್ತು ಅವನ ಭವಿತವ್ಯದ ಬಗ್ಗೆ ತರ್ಕಬದ್ಧವೂ ಕಾರ್ಯಯೋಗ್ಯವೂ ವಿಶ್ವವ್ಯಾಪಕವೂ ಆಗಿದ್ದು, ಆಧುನಿಕ ಯುಗದ ತೀವ್ರವಾದ ಪ್ರೇರಣೆಗಳಿಗೆ ಅನುಗುಣವೂ ಆದ ಒಂದು ತತ್ತ್ವವನ್ನು ಮಾನವನಿಗೆ ನೀಡುವುದರ ಮೂಲಕ ಅವನ ಅಂತರಂಗದ ಬದುಕಿಗೆ ಅದು ಶಕ್ತಿಯನ್ನು ನೀಡುತ್ತದೆ. ಮಾನವನಲ್ಲಿ ಅವನ ಉನ್ನತ ಭವಿತವ್ಯದಲ್ಲಿ ಶ್ರದ್ಧೆಯನ್ನು ಸಂಪಾದಿಸಲು, ಬದುಕಿನುದ್ದಕ್ಕೂ ತನ್ನ ಯೌವನದ ಆಸಕ್ತಿ, ಆನಂದಗಳನ್ನು ಉಳಿಸಿಕೊಳ್ಳಲು ಅದು ನೆರವು ನೀಡುತ್ತದೆ.