ಪ್ರೊಮಿಥ್ಯೂಸ್, ಆ ಬೆಂಕಿಯನ್ನು ಕದ್ದು ತಂದು ಮನುಷ್ಯರಿಗೆ ನೀಡಲು ನಿರ್ಧರಿಸಿದ. ಒಮ್ಮೆ ಅದು ಮನುಷ್ಯರಿಗೆ ಸಿಕ್ಕಿಬಿಟ್ಟರೆ ಯಾರೂ ಅದನ್ನು ಮರಳಿ ಪಡೆಯಲಾರರು, ಸ್ವತಃ ಸ್ಯೂಸ್ ಕೂಡ! ಆದ್ದರಿಂದ ದೃಢ ನಿರ್ಧಾರ ಮಾಡಿದ ಪ್ರೊಮಿಥ್ಯೂಸ್, ಸ್ವರ್ಗವನ್ನು ಹೊಕ್ಕು, ಅಡಗಿಸಿಟ್ಟಿದ್ದ ಬೆಂಕಿಯ ಜ್ವಾಲೆಯೊಂದನ್ನು ಕದ್ದು, ಅದನ್ನು ಬಳ್ಳಿಯಲ್ಲಿ ಬಚ್ಚಿಟ್ಟುಕೊಂಡು ಭೂಮಿಗೆ ತಂದು ಮನುಷ್ಯರಿಗೆ ಕೊಟ್ಟ ಅನ್ನುತ್ತದೆ ಗ್ರೀಕ್ ಪುರಾಣ.
ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ
ಪ್ರೊಮಿಥ್ಯೂಸ್ ಗ್ರೀಕ್ ಪೌರಾಣಿಕ ವ್ಯಕ್ತಿಗಳಲ್ಲೇ ಅತ್ಯಂತ ಪ್ರಮುಖನಾದವನು. ದೂರದೃಷ್ಟಿಯುಳ್ಳ ಈತನ ಹೆಸರಿನ ಅರ್ಥವೂ ‘ದೂರದರ್ಶಿ’, ‘ಭವಿಷ್ಯದ್ದರ್ಶಿ’ ಎಂದೇ ಇತ್ತು. ಪ್ರೊಮಿಥ್ಯೂಸ್ ದಾನವ ದಂಪತಿಯ ಮಗ. ಸ್ವರ್ಗಲೋಕದ ಅಧಿಪತ್ಯಕ್ಕಾಗಿ ದೇವ – ದಾಣವರ ನಡುವೆ ಹತ್ತು ವರ್ಷಗಳ ಕಾಲ ಯುದ್ಧ ನಡೆಯಿತು. ಆಗ ತನ್ನ ವೀಶೇಷ ಶಕ್ತಿಯಿಂದ ದೇವತೆಗಳೇ ಗೆಲ್ಲುವರೆಂದು ತಿಳಿದುಕೊಂಡ ಪ್ರೊಮಿಥ್ಯೂಸ್, ಯಾರ ಬಣವನ್ನೂ ಸೇರದೆ ತಟಸ್ಥನಾಗಿ ಉಳಿದ. ತನ್ನ ತಮ್ಮ ಎಪಿಮಿಥ್ಯೂಸನಿಗೂ ಹಾಗೆ ಮಾಡುವಂತೆ ಸೂಚಿಸಿದ್ದ.
ಯುದ್ಧ ಮುಗಿದು ದೇವತೆಗಳ ಅಧಿಪತಿ ಸ್ಯೂಸ್ ಸ್ವರ್ಗದ ಅಧಿಪತಿಯಾದ. ತಟಸ್ಥನಾಗಿರುವ ಮೂಲಕ ದೇವತೆಗಳಿಗೆ ಹಾನಿ ಮಾಡದೆ ಉಳಿದ ಪ್ರೊಮಿಥ್ಯೂಸನಿಗೆ ಉಡುಗೊರೆ ನೀಡಿ, ಸ್ವರ್ಗಲೋಕಕ್ಕೆ ಪ್ರವೇಶಾವಕಾಶವನ್ನೂ ನೀಡಿದ. ಇದೇ ಅರ್ಹತೆಯ ಮೇಲೆ ಸೃಷ್ಟಿಕರ್ತ ದೇವತೆಯು ಭೂಮಿಯಲ್ಲಿ ಜೀವರಾಶಿಯನ್ನು ತುಂಬುವ ಕೆಲಸವನ್ನು ಪ್ರೊಮಿಥ್ಯೂಸ್ ಮತ್ತು ಎಪಿಮಿಥ್ಯೂಸ್ ಸಹೋದರರಿಗೆ ವಹಿಸಿದ. ಇಬ್ಬರೂ ಸೇರಿ ಪ್ರಾಣಿ ಪಕ್ಷಿ ಮರಗಿಡಗಳನ್ನೆಲ್ಲ ಸೃಷ್ಟಿಸಿದ ಮೇಲೆ ಪ್ರೊಮಿಥ್ಯೂಸ್, ಬರೀ ನೆಲ ನೋಡಿ ನಡೆಯುವ ಪ್ರಾಣಿಗಳೇ ಇದ್ದಾವೆಂದು, ಎರಡು ಕಾಲಿನ, ತಲೆ ಎತ್ತಿ ನಡೆಯುವ ಪ್ರಾಣಿಯನ್ನು ಸೃಷ್ಟಿಸಿದ. ಈ ಪ್ರಾಣಿಯೇ ಮನುಷ್ಯ.
ತನ್ನದೇ ಸೃಷ್ಟಿಯಾದ ಮನುಷ್ಯ ಕುಲದ ಮೇಲೆ ಪ್ರೊಮಿಥ್ಯೂಸನಿಗೆ ವಿಶೇಷ ಪ್ರೀತಿ. ಯೋಚಿಸಬಲ್ಲ ಈ ಜೀವಸಂಕುಲವನ್ನು ದೇವತೆಗಳಿಗೆ ಸರಿಸಮನಾಗಿ ಮಾಡಬೇಕು ಎಂದು ಅವನು ಯೋಚಿಸಿದ. ಮನುಷ್ಯರ ಕೈಗೆ ಬೆಂಕಿ ಸಿಕ್ಕುಬಿಟ್ಟರೆ ಅವರು ದೇವತೆಗಳನ್ನೂ ಮೀರಿಸುತ್ತಾರೆ ಎಂದು ಯೋಚಿಸಿದ. ಆದರೆ ಸ್ಯೂಸ್ ದೇವನ ಕಣ್ತಪ್ಪಿಸಿ ಸ್ವರ್ಗದಿಂದ ಬೆಂಕಿಯನ್ನು ತರುವುದು ಕಷ್ಟವೇ ಆಗಿತ್ತು. ಸ್ಯೂಸ್ ಬೆಂಕಿಯು ಮನುಷ್ಯರಿಗೆ ಸಿಗದ ಹಾಗೆ ಸ್ವರ್ಗದಲ್ಲಿ ಅಡಗಿಸಿಟ್ಟಿದ್ದ. ಇದಕ್ಕೆ ಕಾರಣವೂ ಇತ್ತು.
ಬಲಿ ನೀಡಲಾದ ಪ್ರಾಣಿಗಳಲ್ಲಿ ದೇವತೆಗಳಿಗೆ ಯಾವ ಪಾಲು, ಮನುಷ್ಯರಿಗೆ ಯಾವ ಪಾಳು ಸಲ್ಲಬೇಕೆಂಬ ವ್ಯಾಜ್ಯ ಎದ್ದಾಗ, ಎರಡು ಕುಲಕ್ಕೂ ಸೇರದ ದಾನವ (ಟೈಟನ್) ಪ್ರೊಮಿಥ್ಯೂಸನನ್ನು ನ್ಯಾಯಕ್ಕಾಗಿ ನೇಮಿಸಲಾಯ್ತು. ಮನುಷ್ಯರ ಮೇಲೆ ಪ್ರೀತಿಯುಳ್ಳ ಪ್ರೊಮಿಥ್ಯೂಸ್, ಮಾಂಸಲವಾದ ಪಾಲನ್ನು ಮನುಷ್ಯರಿಗೂ ಮೂಳೆ ಸ್ನಾಯುಗಳು ದೇವತೆಗಳಿಗೂ ಸಲ್ಲುವಂತೆ ಮಾಡಿಬಿಟ್ಟ. ಇದರಿಂದ ಮಹಾದೇವ ಸ್ಯೂಸ್ ಕೆರಳಿಹೋದ. ಪ್ರೊಮಿಥ್ಯೂಸನು ಸ್ವರ್ಗಕ್ಕೆ ಕಾಲಿಡದಂತೆ ಬಹಿಷ್ಕಾರ ಹಾಕಿ, “ಈ ಮನುಷ್ಯರು ಹಸಿ ಮಾಂಸವನ್ನೇ ತಿಂದುಕೊಂಡು ಬಿದ್ದಿರಲಿ” ಎಂದು ಅವರ ಕೈಗೆ ಬೆಂಕಿಯೇ ಸಿಗದ ಹಾಗೆ ಬಚ್ಚಿಟ್ಟು ಕಾವಲು ಹಾಕಿದ.
ಈಗ ಪ್ರೊಮಿಥ್ಯೂಸ್, ಆ ಬೆಂಕಿಯನ್ನು ಕದ್ದು ತಂದು ಮನುಷ್ಯರಿಗೆ ನೀಡಲು ನಿರ್ಧರಿಸಿದ. ಒಮ್ಮೆ ಅದು ಮನುಷ್ಯರಿಗೆ ಸಿಕ್ಕಿಬಿಟ್ಟರೆ ಯಾರೂ ಅದನ್ನು ಮರಳಿ ಪಡೆಯಲಾರರು, ಸ್ವತಃ ಸ್ಯೂಸ್ ಕೂಡ! ಆದ್ದರಿಂದ ದೃಢ ನಿರ್ಧಾರ ಮಾಡಿದ ಪ್ರೊಮಿಥ್ಯೂಸ್, ಸ್ವರ್ಗವನ್ನು ಹೊಕ್ಕು, ಅಡಗಿಸಿಟ್ಟಿದ್ದ ಬೆಂಕಿಯ ಜ್ವಾಲೆಯೊಂದನ್ನು ಕದ್ದು, ಅದನ್ನು ಬಳ್ಳಿಯಲ್ಲಿ ಬಚ್ಚಿಟ್ಟುಕೊಂಡು ಭೂಮಿಗೆ ತಂದು ಮನುಷ್ಯರಿಗೆ ಕೊಟ್ಟ. ಇದಕ್ಕಾಗಿ ಅವನು ಭಾರೀ ಸಾಹಸವನ್ನೇ ಮಾಡಬೇಕಾಯಿತು. ಈ ಸಾಹಸಕ್ಕೆ ಸರಿಯಾದ ಬೆಲೆಯನ್ನೂ ಪ್ರೊಮಿಥ್ಯೂಸ್ ತೆರಬೇಕಾಯ್ತು. ಕೋಪದಿಂದ ಕೆಂಡಾಮಂಡಲವಾದ ಸ್ಯೂಸ್, ಪ್ರೊಮಿಥ್ಯೂಸನನ್ನು ಉಗ್ರ ಶಿಕ್ಷೆಗೆ ಗುರಿಪಡಿಸಿದ.
ತನಗೆ ಅಪಾಯ ತಂದುಕೊಂಡು ಮನುಷ್ಯ ಕುಲಕ್ಕೆ ಮಹದುಪಕಾರವನ್ನೆ ಮಾಡಿದ ದಾನವ ಪ್ರೊಮಿಥ್ಯೂಸ್ ಜನ ಮಾನಸದಲ್ಲಿ ಅಭಿಮಾನದ ನೆನಪಾಗಿ ಉಳಿದುಹೋದ.
(ಚಿತ್ರಕೃಪೆ: ಇಂಟರ್ನೆಟ್)