ಗೋಡೆಗೆಸೆದ ಚೆಂಡಿನಂತೆ ಕರ್ಮ ಮತ್ತು ಕರ್ಮಫಲ

ಚೆಂಡನ್ನು ಸರಿಯಾಗಿ ಎಸೆಯುವಷ್ಟೇ, ಅದನ್ನು ಮರಳಿ ಹಿಡಿಯುವುದೂ ಮುಖ್ಯ. ಕರ್ಮ ಮಾಡುವಷ್ಟೇ ಅದರ ಫಲವನ್ನು ಸರಿಯಾಗಿ ಅರಗಿಸಿಕೊಳ್ಳುವುದೂ ಮುಖ್ಯ ~ ಗಾಯತ್ರಿ

ಪ್ರತಿ ಮುಂಜಾನೆ ಎದ್ದ ಕೂಡಲೇ ಪ್ರತಿಯೊಬ್ಬರೂ ತಮ್ಮ ತಮ್ಮ ರೂಢಿಗೆ ಅನುಸಾರವಾಗಿ ಮೊದಲ ಕ್ರಿಯೆ ನಡೆಸುತ್ತೀರಲ್ಲವೆ? ಕೆಲವರು ಅಂಗೈ ಉಜ್ಜಿ ಕಣ್ಣಿನ ಮೇಲಿರಿಸಿಕೊಳ್ಳುತ್ತಾರೆ. ಆಯಾ ಧರ್ಮಗಳ ಧಾರ್ಮಿಕ ಪ್ರವೃತ್ತಿಯವರು ತಮ್ಮ ತಮ್ಮ ರಿವಾಜುಗಳಂತೆ ಪ್ರಾರ್ಥಿಸುತ್ತಾರೆ. ಹೊಸ ತಲೆಮಾರಿನ ಜನ ಮೊಬೈಲ್ ನೋಡುತ್ತಾರೆ… ಹೀಗೆ.
ಈ ಮೊದಲ ಕ್ರಿಯೆ ಮುಗಿದ ಮೇಲೆ, ಮುಂದಿನ ಕೆಲಸಕ್ಕೆ ಅಣಿಯಾಗುವ ಮುನ್ನ ನೀವು ನೆನಪಿಸಿಕೊಳ್ಳಬೇಕಾದ ಮಂತ್ರವೊಂದಿದೆ. ಅದು, “ಗೋಡೆಗೆ ಚೆಂಡನ್ನು ಎಸೆಯುವುದು”!

ಹೌದು. ನಾವು ಕರ್ಮ ಮತ್ತು ಕರ್ಮಫಲದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ನಾವು ಏನು ಕರ್ಮ (ಕೆಲಸ) ನಡೆಸುತ್ತೀವೋ ಅದರಂತೆ ಫಲ ಸಿಗುತ್ತದೆ. ಇದರ ಹಿಂದಿನ ತಾಥ್ವಮಿಕ ಗಹನ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಸಮಯವಾಗಲೀ ವ್ಯವಧಾನವಾಗಲೀ; ಇದ್ದರೂ ಪ್ರತಿದಿನ ಅದನ್ನು ನೆನಪಿಸಿಕೊಳ್ಳುವ ಪುರುಸೊತ್ತಾಗಲೀ ನಿಮಗೆ ಇಲ್ಲದೆಹೋಗಬಹುದು.

ಆದ್ದರಿಂದ, ಪ್ರತಿದಿನ ಕೆಲಸಕ್ಕೆ ತೊಡಗುವ ಮೊದಲು ಗೋಡೆಗೆ ಚೆಂಡನ್ನು ಎಸೆಯುವ ಕ್ರಿಯೆ – ಪ್ರತಿಕ್ರಿಯೆ ನೆನಪಿಸಿಕೊಳ್ಳಿ.

ನೀವು ಎಷ್ಟು ವೇಗವಾಗಿ ಚೆಂಡನ್ನು ಎಸೆಯುತ್ತೀರೋ ಅಷ್ಟೇ ವೇಗವಾಗಿ ಅದು ನಿಮ್ಮತ್ತ ಬರುತ್ತದೆ. ನಿಧಾನಕ್ಕೆ ಎಸೆದರೆ, ನಿಧಾನವಾಗಿ. ಯದ್ವಾತದ್ವಾ ಎಸೆದರೆ, ಅದು ಮರಳಿಬರುವುದೂ ಹಾಗೇನೇ. ಇದು ನಾವು ಹೇಗೆ ಕೆಲಸ ಮಾಡುತ್ತೇವೋ, ಯಾವ ಕರ್ಮ ಮಾಡುತ್ತೇವೋ ಅದರಂತೆ ಫಲಿತಾಂಶ ಅನ್ನುವುದಕ್ಕೆ ರೂಪಕ.

ಇಲ್ಲಿ ಇನ್ನೊಂದು ಅಂಶ ನೆನಪಿಟ್ಟುಕೊಳ್ಳಬೇಕು. ನಾವು ಮರಳಿ ಬಂದ ಚೆಂಡನ್ನು ಸರಿಯಾಗಿ ಕ್ಯಾಚ್ ಹಿಡಿಯಬೇಕು. ಅಂದರೆ, ನಮ್ಮ ಕರ್ಮಫಲವನ್ನು ಸರಿಯಾಗಿ ನಿಭಾಯಿಸಬೇಕು. ಇಲ್ಲವಾದರೆ; ಚೆಂಡು ನೆಲಕ್ಕೆ ಬಿದ್ದು ಉರುಳಿ ಹೋಗುವಂತೆ, ನಾವು ಅದರ ಬೆನ್ನತ್ತಿ ಹಿಡಿಯಲು ಹರಸಾಹಸ ಪಡುವಂತೆ ಕರ್ಮಫಲವೂ ನಮ್ಮನ್ನು ಸತಾಯಿಸುವುದು.
ಆದ್ದರಿಂದ, ಚೆಂಡನ್ನು ಸರಿಯಾಗಿ ಎಸೆಯುವಷ್ಟೇ, ಅದನ್ನು ಮರಳಿ ಹಿಡಿಯುವುದೂ ಮುಖ್ಯ. ಕರ್ಮ ಮಾಡುವಷ್ಟೇ ಅದರ ಫಲವನ್ನು ಸರಿಯಾಗಿ ಅರಗಿಸಿಕೊಳ್ಳುವುದೂ ಮುಖ್ಯ.

ಪ್ರತಿ ಬೆಳಗ್ಗೆ ಇಷ್ಟನ್ನು ನೆನಪಿಸಿಕೊಳ್ಳುವುದು ರೂಢಿ ಮಾಡಿಕೊಳ್ಳಿ. ಮೊದಮೊದಲು ಒತ್ತಾಯಪೂರ್ವಕವಾಗಿ, ಕೃತಕವಾಗಿ ಮಾಡಿಕೊಳ್ಳಿ. ಬಹಳ ಬೇಗ ನಿಮಗೆ ಅದು ರೂಢಿಯಾಗಿ, ಅನೈಚ್ಛಿಕವಾಗಿ ತಾನಾಗೇ ನೆನಪಾಗತೊಡಗುತ್ತದೆ. ಅನಂತರ, ಪ್ರತಿಯೊಂದು ಕೆಲಸ ಮಾಡುವಾಗಲೂ ಈ ತತ್ತ್ವ ಅನ್ವಯವಾಗುವಂತೆ ಗಮನವಹಿಸಿ. ಪ್ರಜ್ಞಾಪೂರ್ವಕವಾಗಿ ಅನ್ವಯಗೊಳಿಸಿ. ಕೆಲಸ ಮಾತ್ರವಲ್ಲ, ಮಾತಾಡುವಾಗಲೂ, ಪ್ರತಿಕ್ರಿಯೆ ನೀಡುವಾಗಲೂ ಈ ತತ್ತ್ಬ ನಿಮ್ಮ ಪ್ರಜ್ಞೆಯಲ್ಲಿರಲಿ.

ಇದರ ಪ್ರಯೋಜನವೇನು? ಅದನ್ನು ಸ್ವತಃ ಕಂಡುಕೊಳ್ಳಿ!

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.