ನಾಸದೀಯ ಸೂಕ್ತ, ಋಗ್ವೇದದ ಹತ್ತನೆಯ ಮಂಡಲದಲ್ಲಿ ಉಕ್ತವಾಗಿರುವ ಒಂದುನೂರ ಇಪ್ಪತ್ತೊಂಬತ್ತನೆಯ ಸೂಕ್ತ. ಈ ಸೂಕ್ತ ಪರತತ್ತ್ವಾನ್ವೇಷಣೆಯಲ್ಲಿ ತೊಡಗಿ ತನ್ನ ಚಿಂತನೆಗಳಲ್ಲಿ ನ ಅಸತ್ ಇತ್ಯಾದಿ ನಿಷೇಧ ರೂಪದ ಪ್ರಾರಂಭವುಳ್ಳದ್ದಾಗಿ ನಾಸದೀಯ ಸೂಕ್ತವೆನಿಸಿಕೊಂಡಿದೆ. ಏಕೈಕವಾಗಿರುವ ಪರಾತ್ಪರ ವಸ್ತುವೇ ತತ್ತ್ವವಾಗಿದ್ದಿರಬಹುದೆಂಬ ನಂಬಿಕೆಯನ್ನು ಈ ಸೂಕ್ತ ಕಡೆಯ ಭಾಗಗಳಲ್ಲಿ ವ್ಯಕ್ತಪಡಿಸುತ್ತದೆ. ಪರಮೇಷ್ಠೀ ಎಂಬ ಹೆಸರುಳ್ಳ ಪ್ರಜಾಪತಿಯೇ ಈ ಸೂಕ್ತಕ್ಕೆ ಸಂಬಂಧಪಟ್ಟ ಋಷಿ. ಇದರಲ್ಲಿ ಆಕಾಶಾದಿಗಳ ಮತ್ತು ಸೃಷ್ಟಿ ಪ್ರಳಯ ಮುಂತಾದವುಗಳ ವಿಚಾರವಿರುವುದರಿಂದ ಅವುಗಳ ಕರ್ತೃವಾದ ಪರಮಾತ್ಮನೇ ದೇವತೆಯೆಂದು ಸಾಯಣ ಭಾಷ್ಯದಲ್ಲಿ ವಿವರಣೆ ಇದೆ.
ಇದರಲ್ಲಿ ಏಳು ಋಕ್ಕುಗಳಿವೆ. ಮೊದಲನೆಯ ಎರಡು ಋಕ್ಕುಗಳಲ್ಲಿ ಮತ್ತು ಮೂರನೆಯದರ ಪೂರ್ವಾರ್ಧದಲ್ಲಿ ಜಗತ್ತಿನ ಸೃಷ್ಟಿಗೆ ಮುಂಚಿನ ಸ್ಥಿತಿಯ ವರ್ಣನೆ ಇದೆ. ಆಗ ಇಂದ್ರಿಯಗಳಿಗೆ ಗೋಚರವಾಗದ ಅಸತ್ ಮತ್ತು ಗೋಚರವಾಗುವ ಸತ್-ಇವುಗಳಾಗಲಿ, ಲೋಕ ಅಂತರಿಕ್ಷಗಳಾಗಲಿ ಇರಲಿಲ್ಲ. ಮೃತ್ಯು ಅಮರಣಗಳಿರಲಿಲ್ಲ. ರಾತ್ರಿ ಹಗಲುಗಳ ಪರಿಜ್ಞಾನವಿರಲಿಲ್ಲ. ಆ ಏಕೈಕ ವಸ್ತು ಮಾತ್ರ ಶ್ವಾಸೋಚ್ಛ್ವಾಸರಹಿತವಾಗಿ ಸ್ವಸಾಮಥ್ರ್ಯದಿಂದ ಜೀವಂತವಾಗಿದ್ದಿತು.
ಅನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ
ಆ ವಸ್ತುವಲ್ಲದೆ ಆಗ ಬೇರೆ ಏನೂ ಇರಲಿಲ್ಲ. ಯಾವುದನ್ನೂ ತಿಳಿಯಲು ಅಸಾಧ್ಯವಾಗುವಂತೆ ಅಂಧಕಾರಮಯ ಕತ್ತಲೋ ಸರ್ವವ್ಯಾಪಿಯಾದ ಉದಕವೋ ಇದ್ದಿರಬೇಕು-ಇವೇ ಮುಂತಾದವು ವರ್ಣನೆಯ ವಿಷಯಗಳು. ಅಂಥ ಸ್ಥಿತಿಯಲ್ಲಿ ಏಕೈಕವಾಗಿದ್ದ ಒಂದು ಅವ್ಯಕ್ತಸ್ವರೂಪ ತಪೋಮಹಿಮೆಯಿಂದ ಜಗತ್ತಾಗಿ ಪರಿಣಮಿಸಿತೆಂಬುದೂ ಮಾನಸಿಕ ಕ್ರಿಯೆಯನ್ನು ಬೀಜರೂಪವಾಗಿ ಪಟಡದ ಸೃಷ್ಟಿಸಂಕಲ್ಪದ ಉತ್ಪತ್ತಿಯೂ ಅನಂತರ ಬಂದ ಸತ್, ಸೃಷ್ಟಿಗೆ ಮುಂಚಿನ ಅವ್ಯಕ್ತಸ್ವರೂಪದ ಅಸತ್ತಿನೊಡನೆ ಸಂಬಂಧವುಳ್ಳದ್ದೆಂಬುದನ್ನು ಋಷಿಗಳು ಬಲ್ಲರೆಂಬುದೂ ಮೂರನೆಯ ಋಕ್ಕಿನ ಉತ್ತರಾರ್ಧದ ಮತ್ತು ನಾಲ್ಕನೆಯದರ ವಿಷಯಗಳು. ಕೆಳಗೆ, ಮೇಲೆ, ಅಡ್ಡಲಾಗೆ ಎಲ್ಲೆಲ್ಲೂ ಅತಿ ವೇಗದಿಂದ ನಡೆದ ಸೃಷ್ಟಿಕಾರ್ಯ ಪ್ರಾರಂಭ, ಭೋಗ್ಯಗಳು ಮತ್ತು ಅವುಗಳಲ್ಲಿ ಭೋಕ್ತøಗಳು ಶ್ರೇಷ್ಠವೆಂಬ ವಿಚಾರ-ಇವು ಐದನೆಯ ಋಕ್ಕಿನಲ್ಲಿ ಪ್ರತಿಪಾದಿತವಾಗಿವೆ. ಆರನೆಯದರಲ್ಲಿ ಜಗತ್ತಿನ ಸೃಷ್ಟಿಯ ರಹಸ್ಯವನ್ನು ಯಾರು ಅರಿತಿರುವರೆಂಬುದನ್ನು ಕುರಿತ ಸಂಶಯ ವ್ಯಕ್ತಗೊಂಡು ದೇವತೆಗಳು ಸೃಷ್ಟಿಯ ತರುವಾಯ ಬಂದವರಾದ್ದರಿಂದ ಆ ರಹಸ್ಯವನ್ನು ನಿಜವಾಗಿ ಬಲ್ಲವರು ಯಾರೆಂಬ ಸಂಶಯ ಪುನರುಕ್ತವಾಗಿದೆ. ಸ್ವಪ್ರಕಾಶದಲ್ಲಿ ಬೆಳಗುತ್ತಿರುವ ಪರಮಾತ್ಮನಿಗೆ ಸೃಷ್ಟಿಯ ರಹಸ್ಯ ತಿಳಿದೇ ಇರಬೇಕೆಂಬುದೂ ಏಳನೆಯ ಋಕ್ಕಿನಲ್ಲಿ ಕಂಡು ಬರುವ ಚಿಂತನೆಗಳು (ಮಾಹಿತಿ : ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ)
ನಾಸದೀಯ ಸೂಕ್ತವನ್ನು ಕನ್ನಡಕ್ಕೆ ಕೆಲವರು ಪದ್ಯರೂಪದಲ್ಲಿಯೇ ಅನುವಾದಿಸಿದ್ದು; ಅರಳಿಮರದ ಖಾಸಗಿ ಸಂಗ್ರಹದಲ್ಲಿದ್ದ ಡಾ.ಎಚ್.ರಾಮಚಂದ್ರ ಸ್ವಾಮಿ ಅವರ ಅನುವಾದವನ್ನು ಇಲ್ಲಿ ನೀಡಿದೆ:
ಸತ್ತೆಂಬುದಿರಲಿಲ್ಲ, ಅಸತ್ತೂ ಇರಲಿಲ್ಲ;
ಲೋಕ, ನೀಲಾಕಾಶ, ಅವುಗಳಾಚೆಯದೂ ಇರಲಿಲ್ಲ.
ಯಾರು ಬಲ್ಲರು ಅದನು ಯಾವ ಆಶ್ರಯದಲ್ಲಿ
ಏನನಾಧರಿಸಿತ್ತು, ಜಲಧಿಯಿತ್ತೆ?
ಮೃತ್ಯುವೂ ಇರಲಿಲ್ಲ, ಅಮರತ್ವವೂ ಇರಲಿಲ್ಲ,
ರಾತ್ರಿಹಗಲುಗಳ ಭೇದವಿರಲಿಲ್ಲ;
ರಾತ್ರಿಹಗಲುಗಳಿನ್ನೂ ಹುಟ್ಟಿರಲೇ ಇಲ್ಲದಿರೆ –
ಆದಿಮೂಲವದೊಂದು ಉಸಿರಾಡುತಿತ್ತು:
ಗಾಳಿಯಿಲ್ಲದೆ ಉಸಿರ ಹೊರೆಯುತಿತ್ತು.
ಅದ ಹೊರತು ಬೇರೇನೂ ಇರಲಿಲ್ಲ ವಿಶ್ವದಲಿ,
ಅಡಗಿತ್ತು ಕತ್ತಲೆಯ ಕಾಳಗರ್ಭದಲಿ
ಎಲ್ಲವೂ ಅವ್ಯಕ್ತ ಜಲಧಿಯಾಗಿತ್ತು.
ಕಾರಣಶರೀರವದು ಈ ಲೋಕ ಹಾಗಿತ್ತು –
ಹುಟ್ಟಿದೆಲ್ಲವು ಶೂನ್ಯದಿಂದ ಕವಿದಿತ್ತು.
ಅದರ ತಪ, ಅದರಿಚ್ಛೆಯಿಂದ ಮೇಲೆದ್ದಿತ್ತು ಅದು –
ಕಾಳಗರ್ಭದ ಹೊರಗೆ ಮನಸು ಬಂದಿತ್ತು.
ಈ ಇಚ್ಛೆ ಎಲ್ಲಿಯದು, ಈ ಕಾಮವೆಲ್ಲಿಯದು?
ಅದರೆದೆಯಲಡಗಿತ್ತು ಮೊಳೆತ ಬೀಜ;
ನಶಿತಲೋಕದ ಬೀಜ, ಕಾಲಚಕ್ರದ ಬೀಜ;
ಋಷಿಹೃದಯದಲಿ ಹೊಳೆದ ಮೊದಲ ಬೀಜ.
ಏನು ಯೋಚನೆ, ಶಬ್ದ, ಮೇಲಿಲ್ಲ, ಕೆಳಗಿಲ್ಲ –
ಯಾರು ಬಲ್ಲರು ಏನು ಲೋಕಕಾರಣವೆಂದು
ಭೋಕ್ತೃ ಪರವಾಗಿರಲು ಭೋಗ್ಯಾಪರವಾಗಿತ್ತು;
ಅದೆ ಗರ್ಭ ಕಟ್ಟಿಸಿತು, ಅದೆ ಗರ್ಭ ತಾಳಿತ್ತು.
ಅದನು ತಿಳಿದವರಾರರು ಏಕೆಂದು, ಹೇಗೆಂದು?
ಅದು ಹುಟ್ಟಿ ನಂತರದಿ ಬಂದವರು ದೇವರುಗಳೆನೆ
ಯಾರಿಗೆ ಅದರರಿವು ಅದರ ಹೊರತು?
s