ಪುರಂದರ ದಾಸರಿಗೆ ಮುಯ್ಯಿ ತೀರಿಸಿದ ಪಾಂಡುರಂಗ ವಿಠಲ!!

ನಿನಗೆ ಭಕ್ತ ವತ್ಸಲನೆಂಬ ಬಿರುದು ಗಳಿಸಬೇಕಾಗಿದ್ದರೆ, ನೀನು ಈ ಲೋಕದಲ್ಲಿ ನಮಗೆ ಕೊಟ್ಟಿರುವ ಹುಟ್ಟು ಎಂಬ ಬಂಧನದ ಕಂಕಣವನ್ನು ಕಿತ್ತು ಎಸೆಯೋ ಎಂದು ವಿಠಲನಿಗೇ ಸವಾಲು ಹಾಕಿದಂತಹ ಮಹಾತ್ಮರು ನಮ್ಮ ಪುರಂದರದಾಸರು!

ಪುರಂದರ ದಾಸರು ಶರಣಾಗತ ಭಕ್ತರಷ್ಟೇ ಅಲ್ಲ, ತಮ್ಮ ಇಷ್ಟದೈವ ಪಾಂಡುರಂಗ ವಿಠಲನನ್ನು ಸಖನಾಗಿಯೂ ಕಂಡವರು. ಆದ್ದರಿಂದಲೇ ತಮ್ಮ ಕೀರ್ತನೆಗಳಲ್ಲಿ ತಿಳಿ ಹಾಸ್ಯ, ವಿಡಂಬನೆ, ನಿಂದಾಸ್ತುತಿಗಳನ್ನೂ ಬಳಸಿರುವರು. ಅಂತಹಾ ಹಲವು ರಚನೆಗಳಲ್ಲಿ ಈ ಕೀರ್ತನೆ ಸ್ವತಃ ಪುರಂದರ ದಾಸರ ಜೀವನದಲ್ಲಿ ನಡೆದ ಘಟನೆಯೊಂದರ ಬಗ್ಗೆ ಹೇಳುತ್ತದೆ ಎನ್ನಲಾಗಿದೆ.  ಆ ಕೀರ್ತನೆ ಇಲ್ಲಿದೆ :

ಮುಯ್ಯಕ್ಕೆ ಮುಯ್ಯಿ ತೀರಿತು ಜಗದಯ್ಯ ವಿಜಯ ಸಹಾಯ ಪಂಢರೀರಾಯ ||ಪಲ್ಲವಿ||

ಸಣ್ಣವನೆಂದು ನಾ ನೀರು ತಾರೆಂದರೆ
ಬೆಣ್ಣೆಗಳ್ಳ ಕೃಷ್ಣ ಮರೆಯ ಮಾಡಿ
ಚಿನ್ನದ ಪಾತ್ರೆಯ ನೀರು ತಂದಿತ್ತರೆ
ಕಣ್ಣು ಕಾಣದೆ ನಾ ಠೊಣೆದೆ ಪಂಢರಿರಾಯ ||1 ||

ಎನ್ನ ಪೆಸರು ಮಾಡಿ ಸೂಳೆಗೆ ಕಂಕಣ-
ವನ್ನು ನೀನಿತ್ತೆ ನಿಜರೂಪದಿ
ಎನ್ನ ಪಿಡಿಸಿ ಪರಮ ಭಂಡನ ಮಾಡಿ
ನಿನ್ನ ಮುಯ್ಯಕ್ಕೆ ಮುಯ್ಯಿ ತೀರಿಸಿಕೊಂಡೆಯಯ್ಯ! ||2||

ಭಕ್ತವತ್ಸಲನೆಂಬ ಬಿರುದು ಬೇಕಾದರೆ
ಭಕ್ತರಾಧೀನನಾಗಿರಬೇಡವೇ
ಯುಕ್ತಿಯಲಿ ನಿನ್ನಂಥ ದೇವರ ನಾಕಾಣೆ
ಮುಕ್ತೀಶ ಪುರಂದರವಿಟ್ಠಲ ಪಂಢರಿರಾಯ ||3||

ಕೀರ್ತನೆಯ ಹಿನ್ನೆಲೆ

ಒಮ್ಮೆ ಪುರಂದರದಾಸರು ರಾತ್ರಿ ತಡವಾಗಿ ಮನೆಗೆ ಮರಳುವ ಹೊತ್ತಿಗೆ, ಅವರಿಗೆ ಕೈಕಾಲು ತೊಳೆಯಲು ನೀರುಕೊಡುತ್ತಿದ್ದ ಅಪ್ಪಣ್ಣನೆಂಬ ಶಿಷ್ಯ ನಿದ್ದೆಹೋಗಿಬಿಟ್ಟಿದ್ದ. ಅದಕ್ಕೆಂದೇ, ಸಾಕ್ಷಾತ್ ವಿಠಲನೇ, ಅಪ್ಪಣ್ಣನ ರೂಪ ಧರಿಸಿ ನೀರು ತಂದು ಕೊಟ್ಟನಂತೆ. ಆ ನೀರು ಹೆಚ್ಚು ಬಿಸಿಯಾಗಿದ್ದರಿಂದ, ಪುರಂದರದಾಸರಿಗೆ ಕೋಪಬಂದು ಆ ಪಾತ್ರೆಯಲ್ಲೇ ಅಪ್ಪಣ್ಣನಿಗೆ ಹೊಡೆದುಬಿಟ್ಟರಂತೆ. ಮರುದಿನ ಎದ್ದನಂತರ ಅಪ್ಪಣ್ಣನಲ್ಲಿ ತನ್ನ ಕೋಪಕ್ಕೆ ಕ್ಷಮಿಸೆಂದು ಕೇಳಲು ನೋಡಿದರೆ, ಅವನಿಗೇನೂ ಆಗೇ ಇಲ್ಲ! ರಾತ್ರಿ ತಾನು ನೀರು ಕೊಡಲೇ ಇಲ್ಲವೆಂದು ಅಪ್ಪಣ್ಣ ಹೇಳಿದಾಗ, ದಾಸರಿಗೆ ಇದು ಪಂಢರೀರಾಯ ವಿಠಲನದ್ದೇ ಕೆಲಸವೆಂದು ತೋರಿತು. ಅದೇ ಕ್ಷಣ ದೇವಾಲಯಕ್ಕೆ ಹೋಗಿ ನೋಡಿದರೆ, ಮೂರ್ತಿಯ ಹಣೆಯಲ್ಲಿ ಗುಬುಟೊಂದು ಇತ್ತಂತೆ! ತಮ್ಮ ತಪ್ಪನ್ನು ಮನ್ನಿಸಬೇಕೆಂದು ದಾಸರು ಕ್ಷಮೆ ಕೋರಿದರು.

ಆ ರಾತ್ರಿ ವಿಠಲನು ಪುರಂದರದಾಸರ ವೇಷತಾಳಿ  ಊರಿನ ವೇಶ್ಯೆಯೊಬ್ಬಳ ಮನೆಗೆ ಹೋದನಂತೆ. ಅವಳ ನರ್ತನವನ್ನು ಮೆಚ್ಚಿ ಕೈಯಲ್ಲಿದ್ದ ಕಂಕಣವನ್ನು ಬಿಚ್ಚಿ ಆಕೆಗೆ ಕೊಟ್ಟುಬಿಟ್ಟನಂತೆ. ಮರುದಿನ ಅರ್ಚಕರು ಗರ್ಭಗುಡಿಯನ್ನು ತೆರೆದು ನೋಡಿದರೆ, ಪಾಂಡುರಂಗನ ಕೈಯ ಚಿನ್ನದ ಕಂಕಣವೇ ಇರಲಿಲ್ಲ. ಅದೇ ಸಮಯಕ್ಕೆ ಅಲ್ಲಿ ದೇವರ ದರ್ಶನಕ್ಕೆ ಬಂದ ಆ ನರ್ತಕಿಯ ಕೈಯಲ್ಲಿತ್ತು ಆ ಚಿನ್ನದ ಕಡಗ! ಅವಳನ್ನು ವಿಚಾರಿಸಲಾಗಿ ಪುರಂದರದಾಸರು ತನ್ನ ಮನೆಗೆ ಬಂದದ್ದನ್ನೂ, ತನಗೆ ಬಳುವಳಿಯಾಗಿ ಆ ಕಡಗವನ್ನು ಕೊಟ್ಟಿದ್ದನ್ನೂ ಅವಳು ಹೇಳಿದಳು.

ಇದನ್ನು ಕೇಳಿದ ದೇವಾಲಯದ ಅಧಿಕಾರಿಗಳು ದಾಸರನ್ನು ಕರೆತರಿಸಿ, ಕಂಬಕ್ಕೆ ಕಟ್ಟಿ ಚಾವಟಿಯೇಟು ಕೊಡಿಸಿದರಂತೆ. ಆ ಸಮಯದಲ್ಲಿ ಪುರಂದರದಾಸರು ಬಾಯಲ್ಲಿ ಹೊರಟ ಹಾಡಿದು ಎನ್ನುವುದು ಪರಂಪರೆಯಿಂದ ಬಂದ ನಂಬಿಕೆ.

ನೀನು ಹೀಗೆ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡೆಯೇನು? ನಿನಗೆ ಭಕ್ತ ವತ್ಸಲನೆಂಬ ಬಿರುದು ಗಳಿಸಬೇಕಾಗಿದ್ದರೆ, ನೀನು ಈ ಲೋಕದಲ್ಲಿ ನಮಗೆ ಕೊಟ್ಟಿರುವ ಹುಟ್ಟು ಎಂಬ ಬಂಧನದ ಕಂಕಣವನ್ನು ಕಿತ್ತು ಎಸೆಯೋ ಎಂದು ವಿಠಲನಿಗೇ ಸವಾಲು ಹಾಕಿದಂತಹ ಮಹಾತ್ಮರು ನಮ್ಮ ಪುರಂದರದಾಸರು!

Leave a Reply