ಭೀಷ್ಮನ ಸೋಲಿಗೆ ಶಿಖಂಡಿ ಕಾರಣವಾದ ಕಥೆ

ಶಿಖಂಡಿ ಹೆಣ್ಣೋ, ಗಂಡೋ? ಅಥವಾ ಲಿಂಗಾಂತರಿಯೋ? ಹೆಣ್ಣಾಗಿ ಹುಟಟಿದ ಶಿಖಂಡಿ ಗಂಡಾಗಿದ್ದು ಹೇಗೆ? ಮಹಾಭಾರತದ ಉದ್ಯೋಗಪರ್ವದಲ್ಲಿ ಬರುವ ಕಥೆ ಹೀಗಿದೆ…

ಮಹಾಭಾರತದ ನಿರ್ಣಾಯಕ ಪಾತ್ರಗಳಲ್ಲೊಂದಾದ ಶಿಖಂಡಿಯ ಹೆಸರನ್ನು ನೀವು ಕೇಳಿಯೇ ಇದ್ದೀರಿ. ಹೆಣ್ಣಾಗಿ ಹುಟ್ಟಿ, ಗಂಡಾಗಿ ಬೆಳೆದು, ಕೊನೆಗೆ ಸಂಪೂರ್ಣ ಗಂಡೇ ಆದನೆಂದು ಹೇಳಲಾಗುವ ಶಿಖಂಡಿ, ಕುರುಕ್ಷೇತ್ರ ಯುದ್ಧದಲ್ಲಿ ಭೀಷ್ಮನ ಸೋಲಿಗೆ ಕಾರಣವಾಗುತ್ತಾನೆ. ಭೀಷ್ಮನೆದುರು ಯುದ್ಧಕ್ಕೆ ನಿಲ್ಲುವಾಗ ಶಿಖಂಡಿ ಗಂಡಾಗಿದ್ದರೂ ಭೀಷ್ಮ ‘ಹೆಣ್ಣಿನೊಡನೆ ನಾನು ಯುದ್ಧ ಮಾಡಲಾರೆ’ ಎಂದು ಕೈಚೆಲ್ಲುತ್ತಾನೆ.

ಹಾಗಾದರೆ ಶಿಖಂಡಿ ಹೆಣ್ಣೋ, ಗಂಡೋ? ಅಥವಾ ಲಿಂಗಾಂತರಿಯೋ? ಹೆಣ್ಣಾಗಿ ಹುಟಟಿದ ಶಿಖಂಡಿ ಗಂಡಾಗಿದ್ದು ಹೇಗೆ? ಮಹಾಭಾರತದ ಉದ್ಯೋಗಪರ್ವದಲ್ಲಿ ಬರುವ ಕಥೆ ಹೀಗಿದೆ:

ಪಾಂಚಾಲದ ದ್ರುಪದ ಮಹಾರಾಜನಿಗೆಮೂರು ಮಕ್ಕಳು. ದೃಷ್ಟದ್ಯುಮ್ನ, ದ್ರೌಪದಿ ಮತ್ತು ಶಿಖಂಡಿ. ಹೆಣ್ಣಾಗಿ ಹುಟ್ಟಿದ ಶಿಖಂಡಿಗೆ ಮಹಾದೇವ ಶಿವನು ಗಂಡಾಗುವಂತೆ ವರ ನೀಡುತ್ತಾನೆ. ಅದರಂತೆ ದ್ರುಪದ ದಂಪತಿ ಶಿಖಂಡಿಯನ್ನು ಹುಡುಗನಂತೆಯೇ ಬೆಳೆಸಿ, ಒಂದು ಹೆಣ್ಣನ್ನು ತಂದು ಮದುವೆಯನ್ನೂ ಮಾಡುತ್ತಾರೆ. ಆದರೆ ವಧುವಿಗೆ ಶಿಖಂಡಿ ಗಂಡಲ್ಲವೆಂಬ ಸಂಗತಿ ತಿಳಿದು ತನ್ನ ಆಪ್ತ ಸಖಿಯ ಬಳಿ ಹೇಳಿಕೊಂಡು ಸುಃಖಿಸುತ್ತಾಳೆ. ಶಿಖಂಡಿಯ ಮಾವ ಕೋಪಗೊಂಡು ಪಾಂಚಾಲ ರಾಜ್ಯಕ್ಕೆ ಮುತ್ತಿಗೆ ಹಾಕುವುದಾಗಿ ಘೋಷಿಸುತ್ತಾನೆ. ತನ್ನಿಂದ ಇಷ್ಟೆಲ್ಲಾ ಆದುದಕ್ಕೆ ಬೇಸರಗೊಂಡ ಶಿಖಂಡಿ ಪ್ರಾಯೋಪವೇಶದಿಂದ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ, ಕಾಡಿಗೆ ಹೋಗುತ್ತಾಳೆ. ಹೀಗೆ ಅವಳು ಪ್ರವೇಶಿಸಿದ ಕಾಡಿನ ಅರಣ್ಯಪಾಲ ಸ್ಥೂಲಕರ್ಣನೆಂಬ ಯಕ್ಷ.

300px-Shikhandiಸ್ಥೂಲಕರ್ಣ ಶಿಖಂಡಿಯ ಆತ್ಮಹತ್ಯೆಯನ್ನು ತಪ್ಪಿಸಿ ಅವಳ ಕಥೆಯನ್ನು ಕೇಳಿ ಕನಿಕರಪಡುತ್ತಾನೆ. ಅವಳಿಗೆ ಸಹಾಯ ಮಾಡುವ ಮನಸ್ಸಾಗುತ್ತಾದೆ. ಕೆಲವು ದಿನಗಳವರೆಗೆ ತನ್ನ ಗಂಡಸುತನವನ್ನು ಎರವಲು ಕೊಟ್ಟು ತಾನು ಹೆಂಗಸಾಗಿ ಇರುವುದಾಗಿ ಹೇಳಿ ಹತ್ತು ದಿನಗಳ ಗಡುವನ್ನು ನೀಡುತ್ತಾನೆ.

ಶಿಖಂಡಿಯು ಗಂಡಸಾಗುತ್ತಾನೆ ಎಂದು ಆ ಮೊದಲೇ ಶಿವ ವರ ನೀಡಿದ್ದರಿಂದ, ಅದನ್ನು ನೆರವೇರಿಸಲು ಸ್ಥೂಲಕರ್ಣನು ನಿಮಿತ್ತನಾಗಿ ಒದಗುತ್ತಾನೆ.

ನಿರ್ಧಿಷ್ಟ ಅವಧಿಯೊಳಗಾಗಿ ತನ್ನ ಹೆಂಡತಿ, ಮಾವನನ್ನು ಸಂತೈಸಿ ಮರಳಿ ಬರುವುದಾಗಿ ಶಿಖಂಡಿ ಮಾತುಕೊಟ್ಟು, ಶಿಖಂಡಿ ಸ್ಥೂಲಕರ್ಣನಿಂದ ಪುರುಷತ್ವ ಎರವಲು ಪಡೆಯುತ್ತಾಳೆ.

ಶಿಖಂಡಿ ಅತ್ತ ಹೋದ ಮೇಲೆ ಅರಣ್ಯದಲ್ಲಿ ಒಮದು ಅನಿರೀಕ್ಷಿತ ಘಟನೆ ನಡೆಯುತ್ತದೆ. ಯಕ್ಷಪತಿ ಕುಬೇರ ಅಲ್ಲಿಗೆ ಭೇಟಿ ನೀಡುತ್ತಾನೆ. ಆ ಹೊತ್ತು ಸ್ತ್ರೀ ದೇಹದಲ್ಲಿದ್ದ ಸ್ಥೂಲಕರ್ಣ ಯಕ್ಷಾಧಿಪನೆದುರು ಹೋಗಲು ನಾಚುತ್ತಾನೆ. ಹೀಗಾಗಿ ಅವನನ್ನು ಬರಮಾಡಿಕೊಂಡು ಸತ್ಕಾರ ಮಾಡದೆ ಅಪಚಾರ ಎಸಗುತ್ತಾನೆ.

ಇದರಿಂದ ಕೋಪಗೊಂಡ ಕುಬೇರ ಅಲ್ಲೇನು ನಡೆದಿದೆಯೆಂದು ಯೋಗದೃಷ್ಟಿಯಿಂದ ತಿಳಿಯುತ್ತಾನೆ. ಅನಂತರ ಸ್ಥೂಲಕರ್ಣನಿಗೆ  “ಕರ್ತವ್ಯಲೋಪ ಎಸಗಿರುವ ನೀನು ಶಾಶ್ವತವಾಗಿ ಹೆಣ್ಣಾಗು” ಎಂದುಬಿಡುತ್ತಾನೆ.

ಇತ್ತ ಪುರುಷದೇಹದ ಶಿಖಂಡಿ ಸಮಯಕ್ಕೆ ಸರಿಯಾಗಿ ಮರಳಿಬಂದರೂ ಸ್ಥೂಲಕರ್ಣ ತನ್ನ ಪುರುಷದೇಹ ಪಡೆಯಲಾಗದೆಹೋಗುತ್ತಾನೆ.

ಅಲ್ಲಿಗೆ ಮಹಾದೇವನ ವರವೂ ಸಿದ್ಧಿಯಾಗುತ್ತದೆ. ಶಿಖಂಡಿ ಪುರುಷನಾಗಿ ಉಳಿಯುತ್ತಾನೆ.

ಆದೆ ಶಿಖಂಡಿ ಹಿಂದೊಮ್ಮೆ ಹೆಣ್ಣಾಗಿದ್ದರಿಂದ ಭೀಷ್ಮ ಅವನನ್ನು ಹೆಣ್ಣೆಂದೇ ಪರಿಗಣಿಸುತ್ತಾನೆ. ಅಲ್ಲದೆ, ಶಿಖಂಡಿ ಭೀಷ್ಮ ಮದುವೆಯಾಗಲು ತಿರಸ್ಕರಿಸಿದ್ದ ಅಂಬೆಯ ಪುನರ್ಜನ್ಮ. ಶಾಲ್ವನೊಂದಿಗೆ ತನ್ನ ಮದುವೆ ತಪ್ಪಿಸಿ, ತಾನೂ ಮದುವೆಯಾಗದ ಭೀಷ್ಮನ ಸಾವಿಗೆ ತಾನೇ ಕಾರಣನಾಗುವೆನೆಂದು ಅಂಬೆ ಶಪಥ ಮಾಡಿರುತ್ತಾಳೆ. ಅನಂತರ ಬೆಂಕಿಗೆ ಧುಮುಕಿ ಪ್ರಾಣ ತೊರೆದು, ದ್ರುಪದ ನಡೆಸಿದ ಯಜ್ಞಜ್ವಾಲೆಯಲ್ಲಿ ಜನಿಸಿರುತ್ತಾಳೆ.

ಆ ಕಾರಣಕ್ಕೂ ಭೀಷ್ಮ ಶಿಖಂಡಿಯೊಡನೆ ಯುದ್ಧ ಮಾಡಲು ನಿರಾಕರಿಸುತ್ತಾನೆ. ಈ ಸಂದರ್ಭವನ್ನು ಬಳಸಿಕೊಂಡು ಅರ್ಜುನ ಅವನ ಮೇಲೆ ಬಾಣಗಳ ಮಳೆಗರೆಯುತ್ತಾನೆ. ಕೊನೆಗೆ ಇಚ್ಛಾಮರಣಿಯಾದ ಭೀಷ್ಮ ಶರಶಯ್ಯೆಯಲ್ಲಿ ಮಲಗಿ, ಉತ್ತರಾಯಣ ಪುಣ್ಯಕಾಲದವರೆಗೆ ಕಾದು ಪ್ರಾಣ ತೊರೆಯುತ್ತಾನೆ. ಹೀಗೆ ಸ್ಥೂಲಕರ್ಣನೊಡನೆ ಲಿಂಗವಿನಿಮಯ ಮಾಡಿಕೊಂಡ ಶಿಖಂಡಿ ಭೀಷ್ಮನ ಅಂತ್ಯಕ್ಕೆ ಕಾರಣವಾಗುತ್ತಾಳೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.