“ನಾವೆಲ್ಲರೂ ಜೀವನವೆಂಬ ಅಟಕ್ ನದಿಯನ್ನು ದಾಟಲೇಬೇಕಾದ ಅನಿವಾರ್ಯತೆಯಲ್ಲಿ ಇರುವವರು. ಅನುಮಾನಿಸುತ್ತಾ ನಿಂತರೆ ಮುಳುಗಿಹೋಗುತ್ತೇವೆ, ರಣಜೀತ ಸಿಂಹ ಮತ್ತವನ ಸೇನೆಯಂತೆ ಮುನ್ನುಗ್ಗಿದ್ದರೆ, ನಮ್ಮನ್ನು ಮುಳುಗಿಸಬಲ್ಲ ನದಿಯೇ ಉಳಿಯುವುದಿಲ್ಲ!” ಇದು ಸ್ವಾಮಿ ರಾಮತೀರ್ಥರು ನೀಡಿದ ದೃಷ್ಟಾಂತದ ಅಂತರಾರ್ಥ ~ ಪ್ರಣವ ಚೈತನ್ಯ | ಕಲಿಕೆಯ ಟಿಪ್ಪಣಿಗಳು
ಬಹಳ ಹಿಂದೆ ನಾರ್ವೆಯಲ್ಲಿ ಒಬ್ಬ ರಾಜನಿದ್ದ. ಈ ರಾಜ ತನ್ನ ಕೋಣೆಯಲ್ಲಿ ಒಂದು ಕೊಳವೆಯನ್ನು ನೇತು ಬಿಟ್ಟಿದ್ದನು, ಅದರ ತಳದಲ್ಲಿ ನೀರು ತುಂಬಿತ್ತು. ಅವನು ಒಂದು ಘೋಷಣೆಯನ್ನು ಹೊರಡಿಸಿದ. ಆ ಕೊಳವೆಯಲ್ಲಿದ್ದ ನೀರನ್ನು ಯಾರಾದರೂ ಸಂಪೂರ್ಣವಾಗಿ ಕುಡಿದರೆ ಅವರಿಗೆ ಅವನ ಸಂಪೂರ್ಣ ರಾಜ್ಯವನ್ನು ಕೊಡುತ್ತೇನೆ ಅನ್ನುವುದು ಈ ಘೋಷಣೆಯ ಸಂದೇಶವಾಗಿತ್ತು. ಆದರೆ ಆ ಕೊಳವೆಯಲ್ಲಿರುವ ನೀರನ್ನು ಯಾರು ಕುಡಿಯಲು ಸಾಧ್ಯವಾಗಲಿಲ್ಲ. ಆ ಕೊಂಬು ಮತ್ತು ಅದರ ತಳದಲ್ಲಿದ್ದ ನೀರು ನೋಡುವುದಕ್ಕೆ ಬಹಳ ಕಡಿಮೆ ಕಾಣಿಸಿದರೂ ಅದನ್ನು ಕುಡಿದು ಖಾಲಿ ಮಾಡಲು ಯಾರಿಂದಲು ಸಾಧ್ಯವಾಗಲಿಲ್ಲ. ಏಕೆಂದರೆ ಆ ಕೊಂಳವೆಯ ಇನ್ನೊಂದು ತುದಿಯನ್ನು ಸಮುದ್ರದೊಡನೆ ಹೊಂದಿಸಲಾಗಿತ್ತು. ಸಮುದ್ರವನ್ನು ಕುಡಿದು ಮುಗಿಸಲು ಯಾರಿಗಾದರೂ ಸಾಧ್ಯವೇ!? ನೋಡಲೇನೋ ಸ್ವಲ್ಪವೇ ನೀರು ಕಾಣಿಸುತ್ತಿದೆ. ಆದರೆ ಅದರ ಕೊಳವೆಯ ಮತ್ತೊಂದು ತುದಿ ಸಮುದ್ರಕ್ಕೆ ಬೆಸೆದುಕೊಂಡಿದೆ!
ಹಾಗೆಯೇ, ನಮ್ಮ ಶರೀರ ಕೂಡಾ. ನಮ್ಮ ಶರೀರವು ನೋಡಲು ಬಹಳ ಚಿಕ್ಕದಾಗಿದ್ದರೂ ನಮ್ಮೊಳಗೆ ಒಂದು ಮಹಾಸಾಗರವು ಇರುತ್ತದೆ; ಆ ಮಹಾಸಾಗರವೇ ನಮ್ಮ ಆತ್ಮ. ನಮ್ಮ ಆತ್ಮದಲ್ಲಿ ಎಂದೂ ಖಾಲಿಯಾಗದಂತಹ ಶಕ್ತಿಯಿರುತ್ತದೆ. ಏಕೆಂದರೆ ನಮ್ಮ ಆತ್ಮದಲ್ಲಿ ಆ ಭಗವಂತನೆ ನೆಲೆಸಿರುತ್ತಾನೆ. ನಾವೆಲ್ಲರೂ ಆ ಭಗವಂತನ ಅಂಶ. ನಮ್ಮೊಡನೆ ಈ ಭಗವಂತನ ಸಂಬಂಧವು ನಾವು ಜೀವತ್ಯಾಗ ಮಾಡುವವರೆಗೂ ಇರುತ್ತದೆ. ಆದರೆ ಅದನ್ನು ಕೆಲವರು ಮಾತ್ರ ಅರ್ಥ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಸತ್ತಮೇಲೆ ಅವರ ಆತ್ಮವು ಆ ಭಗವಂತನ ಅನಂತ ಶಕ್ತಿಯಲ್ಲಿ ಲೀನವಾದಾಗ ಅದರ ಅರಿವಾಗುತ್ತದೆ. ಆದರೆ ನಾವು ಜೀವಂತವಾಗಿದ್ದಾಗ ಇದನ್ನು ಅರ್ಥ ಮಾಡಿಕೊಂಡರೆ ನಮ್ಮ ಬದುಕು ಸಂಪೂರ್ಣವಾಗುತ್ತದೆ, ನಮ್ಮ ಬದುಕಿಗೆ ಒಂದು ಸಾರ್ಥಕತೆ ಸಿಗುತ್ತದೆ, ಮತ್ತು ನಾವು ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬ ಅರಿವು ನಮಗಾಗುತ್ತದೆ.
ಇದನ್ನು ಅರ್ಥ ಮಾಡಿಸಲು ಸ್ವಾಮಿ ರಾಮತೀರ್ಥರು ನಮ್ಮ ಮುಂದೆ ಒಂದು ಐತಿಹಾಸಿಕ ದೃಷ್ಟಾಂತವನ್ನು ಇಡುತ್ತಾರೆ:
ಪಂಜಾಬಿನ ಸಿಂಹ ಮಹರಾಜ ರಣಜೀತ ಸಿಂಗ್, ಅಟಕ್ ನದಿಯ ತೀರದಲ್ಲಿ ತನ್ನ ಸೈನ್ಯದೊಂದಿಗೆ ಬೀಡು ಬಿಟ್ಟಿರುತ್ತಾನೆ. ಅದೇ ನದಿಯ ಇನ್ನೊಂದು ತೀರದಲ್ಲಿ ಅವನ ಶತ್ರುವಿನ ವಿಶಾಲ ಸೈನ್ಯವು ಬೀಡುಬಿಟ್ಟಿರುತ್ತದೆ. ಆದರೆ ಆ ದಿನ ರಾತ್ರಿಯ ಅಂಧಕಾರದಲ್ಲಿ ನದಿಯು ಪ್ರವಾಹದಿಂದ ಉಕ್ಕೇರುತ್ತಿತ್ತು. ಆ ರಾತ್ರಿ ನದಿಯನ್ನು ದಾಟಲು ದೋಣಿಯಿಂದಾಗಲಿ ಇನ್ಯಾವುದೇ ಮಾರ್ಗದಿಂದಾಗಲಿ ಸಾದ್ಯವೇ ಇಲ್ಲದಂತೆ ಕಾಣಿಸುತ್ತಿತ್ತು. ಆದರೆ ಆ ರಾತ್ರಿ ಪಂಜಾಬಿನ ಸಿಂಹರಾಜನು ಆಕ್ರಮಣ ಮಾಡಲೆಬೇಕಿತ್ತು, ಏಕೆಂದರೆ ಆಕ್ರಮಣ ಮಾಡಲು ಇದು ಸರಿಯಾದ ಸಮಯ ಎಂದು ಅವನು ಬಹಳ ಚೆನ್ನಾಗಿ ಅರಿತುಕೊಂಡಿದ್ದ. ಪ್ರವಾಹದಿಂದ ಉಕ್ಕೇರುತ್ತಿದ್ದ ನದಿಯನ್ನು ನೋಡಿ ಇನ್ನೊಂದು ತುದಿಗೆ ಇಷ್ಟೊಂದು ಸೈನಿಕರನ್ನು ದಾಟಿಸಲು ಸಾಧ್ಯವೇ ಇಲ್ಲದಂತೆ ಕಾಣಿಸುತ್ತಿದ್ದರೂ ರಾಜನಿಗೆ ತನ್ನಲ್ಲಿ ಹಾಗು ತಾನು ನಂಬಿದ ಶ್ರೀಕೃಷ್ಣನಲ್ಲಿ ನಂಬಿಕೆಯಿತ್ತು. ಅವನು ಶ್ರೀಕೃಷ್ಣನು ಮಹಾಭಾರತದಲ್ಲಿ ಕೃಷ್ಣನು ಅರ್ಜುನಿಗೆ ಮಾಡಿದ ಉಪದೇಶಗಳನ್ನು ನೆನಪಿಸಿಕೊಂಡ.
ಆಗ ರಾಜನಿಗೆ ತನ್ನ ಆತ್ಮದ ಮೇಲೆ ನಂಬಿಕೆ ಇನ್ನೂ ಹೆಚ್ಚಾಯಿತು. ಎದೆಗುಂದುವ ಪ್ರಶ್ನೆಯೇ ಅವನ ಮನಸ್ಸಿನಲ್ಲಿ ಇರಲ್ಲಿಲ್ಲ, ಅವನ ಯೋಚನೆಗಳು ಬಹಳ ನೇರವಾಗಿದ್ದವು. ಅವನು ತನ್ನ ಅಷ್ಟು ಸೈನಿಕರನ್ನು ಒಂದು ಕಡೆ ಸೇರಿಸಿದ, “ನಾನು ಈಗ ಅಟಕ್ ನದಿಯನ್ನು ದಾಟಲಿದ್ದೇನೆ, ನನ್ನ ಹಿಂದೆ ಎಷ್ಟು ಸೈನಿಕರು ದಾಟುತ್ತಾರೋ ಅವರಿಗೆ ಬಹುಮಾನ ನೀಡುತ್ತೇನೆ, ಯಾವ ಸೈನಿಕರು ದಾಟುವುದಿಲ್ಲವೋ ಅವರು ಹೇಗೂ ಜೀವತೆರುತ್ತಾರೆ” ಏಂದು ಹೇಳುತ್ತಾ ತನ್ನ ಕುದುರೆಯನ್ನೇರಿ ನದಿಗೆ ಧುಮುಕುತ್ತಾನೆ, ನದಿಯನ್ನು ದಾಟಲು ಮುಂದಾಗುತ್ತಾನೆ. ಇದನ್ನು ನೋಡಿದ ಸೈನಿಕರಿಗೆ ರಾಜನೇ ದಾಟಿದ ಮೇಲೆ ನಾವು ದಾಟಬಹುದು, ಇಲ್ಲೆ ಇದ್ದು ಸಾಯುವುದಕ್ಕಿಂತ ಪ್ರಯತ್ನಿಸಿ ಅಥವಾ ಹೋರಾಡಿಯಾದರೂ ಸಾಯಬಹುದು ಎಂಬ ಯೋಚನೆ ಬರುತ್ತದೆ. ಅವರು ರಾಜನ ಶೈಲಿಯಲ್ಲಿಯೇ ಅವನ ಹಿಂದೆ ತಮ್ಮ ಕುದುರೆಗಳಲ್ಲಿ ಧುಮುಕುತ್ತಾರೆ. ರಾಜನಿಂದ ಹಿಡಿದು ಇಡೀ ಸೈನ್ಯವು ನದಿಯನ್ನು ಸಂಪೂರ್ಣವಾಗಿ ದಾಟುತ್ತಾರೆ.
ಇದನ್ನು ನೋಡಿದ ಶತ್ರು ಸೈನ್ಯದ ಸೈನಿಕರಿಗೆ ಎದೆಯಲ್ಲಿ ನಡುಕ ಶುರುವಾಗತ್ತದೆ, ಇಂತಹ ರಾತ್ರಿಯಲ್ಲಿ, ಇಷ್ಟೊಂದು ಪ್ರವಾಹದಲ್ಲಿ, ಒಬ್ಬರೂ ಸಾಯದೆ ಇಡೀ ಸೈನ್ಯವೆ ನದಿ ದಾಟುತ್ತದೆ ಎಂದರೆ ಅವರು ಎಂತಹ ವೀರರು ಇರಬಹುದು, ನಾವು ಅವರೊಡನೆ ಹೋರಾಡುವುದು ಸಾಧ್ಯವೆ ಇಲ್ಲ ಎಂದುಕೊಂಡು ಯುಧ್ದಭೂಮಿಯಿಂದ ಪಲಾಯನವಾಗುತ್ತಾರೆ. ಕಡೆಗೆ ಶತ್ರು ರಾಜ ಹಾಗು ಉಳಿದ ಮುನ್ನೂರು ಸೈನಿಕರನ್ನು ರಾಜ ರಣಜಿತ್ ಸಿಂಹ ಹಾಗು ಅವನ ಸೈನಿಕರು ವಶಪಡಿಸಿಕೊಳ್ಳುತ್ತಾರೆ. ಹೀಗೆ ಯುದ್ಧವನ್ನೇ ಮಾಡದೆ ರಾಜ ರಣಜಿತ್ ಸಿಂಹನು ಒಂದು ರಾತ್ರಿಯಲ್ಲಿ ತನ್ನ ರಾಜ್ಯವನ್ನು ಉಳಿಸಿಕೊಳ್ಳುತ್ತಾನೆ; ಮತ್ತು ಹೇಳುತ್ತಾನೆ, “ಯಾರ ಮನದಲ್ಲಿ ಅಟಕ್ ನದಿಯನ್ನು ದಾಟಬಲ್ಲೆನೇ ಎಂಬ ಸಂದೇಹವಿರುತ್ತದೋ ಅವರು ನದಿಯಲ್ಲಿ ಮುಳುಗುತ್ತಾರೆ. ಯಾರಲ್ಲಿ ಆ ಸಂದೇಹ ಇರುವುದಿಲ್ಲವೋ, ಅಂಥವರಿಗೆ ಅಡ್ಡಿ ಮಾಡಬಲ್ಲ ಅಟಕ್ ನದಿ ಎಲ್ಲಿದೆ!?”
ಇದನ್ನು ಕೇಳಿದ ಸೈನಿಕರಲ್ಲಿ ಉತ್ಸಾಹ ಹೆಚ್ಚಾಗಿ ಜೋರಾಗಿ ವಿಜಯ ಘೋಶಣೆಯನ್ನು ಕೂಗುತ್ತಾರೆ, ರಾಜ ರಣಜಿತ್ ಸಿಂಹನಿಗೆ ತನ್ನ ಸೈನ್ಯದಲ್ಲಿ ಒಬ್ಬರು ಕೂಡ ಸತ್ತಿಲ್ಲ ಎಂದು ತಿಳಿದು ಸಂತೋಷವಾಗುತ್ತದೆ.
“ನಾವೆಲ್ಲರೂ ಜೀವನವೆಂಬ ಅಟಕ್ ನದಿಯನ್ನು ದಾಟಲೇಬೇಕಾದ ಅನಿವಾರ್ಯತೆಯಲ್ಲಿ ಇರುವವರು. ಅನುಮಾನಿಸುತ್ತಾ ನಿಂತರೆ ಮುಳುಗಿಹೋಗುತ್ತೇವೆ, ರಣಜೀತ ಸಿಂಹ ಮತ್ತವನ ಸೇನೆಯಂತೆ ಮುನ್ನುಗ್ಗಿದ್ದರೆ, ನಮ್ಮನ್ನು ಮುಳುಗಿಸಬಲ್ಲ ನದಿಯೇ ಉಳಿಯುವುದಿಲ್ಲ!” ಇದು ಸ್ವಾಮಿ ರಾಮತೀರ್ಥರು ನೀಡಿದ ದೃಷ್ಟಾಂತದ ಅಂತರಾರ್ಥ.
ನಾವು ನೋಡಲು ಇಷ್ಟು ಮಾತ್ರ ಗಾತ್ರದವರಾಗಿರಬಹುದು. ನಮ್ಮೊಳಗಿನ ಅನಂತ ಆತ್ಮಶಕ್ತಿ ನಮ್ಮನ್ನು ಎಲ್ಲ ಅಡ್ಡಿಗಳನ್ನೂ ದಾಟಿ ದಡ ಮುಟ್ಟಿಸುತ್ತದೆ. ಆ ಆತ್ಮಶಕ್ತಿಯನ್ನು, ಕೊಳವೆಗೆ ಬೆಸೆದ ಆ ಸಮುದ್ರವನ್ನು ಕಂಡುಕೊಳ್ಳುವುದಷ್ಟೆ ನಾವು ಮಾಡಬೇಕಿರುವ ಮುಖ್ಯ ಕೆಲಸ.