ಟ್ರೋಜನ್ ಯುದ್ಧ ನಡೆಯಲು ಕಾರಣವೇನು ಗೊತ್ತಾ?

‘ಟ್ರೋಜನ್ ಯುದ್ಧ’ದ ಬಗ್ಗೆ ಕೇಳಿಯೇ ಇರುತ್ತೀರಿ. ಈ ಯುದ್ಧಕ್ಕೊಂದು ಪೌರಾಣಿಕ ಹಿನ್ನೆಲೆಯಿದೆ. ಅದು ಗ್ರೀಕ್ ದೇಶಕ್ಕೆ ಸಂಬಂಧಪಟ್ಟ ಕಥೆ…

ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ

paris2

ಮೌಂಟ್ ಒಲಿಂಪಸ್’ನಲ್ಲಿ ಪೆಲಿಯುಸ್ ಮತ್ತು ಥೆಟಿಸ್ ಮದುವೆ ಸಮಾರಂಭ ಆಯೋಜನೆಗೊಂಡಿತ್ತು. ಸ್ವತಃ ಸ್ಯೂಸ್ ದೇವ ಸಂತೋಷ ಕೂಟದ ನೇತೃತ್ವ ವಹಿಸಿಕೊಂಡಿದ್ದ. ಈರಿಸಳ ಹೊರತಾಗಿ ಪ್ರತಿಯೊಬ್ಬ ದೇವತೆಗಳನ್ನೂ ಉಪ ದೇವತೆಗಳನ್ನೂ ಈ ಕೂಟಕ್ಕೆ ಆಹ್ವಾನಿಸಲಾಗಿತ್ತು. ಈರಿಸ್ ಕಲಹ ದೇವತೆ. ಮದುವೆ ಸಮಾರಂಭದಲ್ಲಿ ಯಾವುದೇ ಜಗಳ ರಗಳೆ ಬೇಡವೆಂದೇ ಈರಿಸ್’ಳನ್ನು ಅದರಿಂದ ಹೊರತಾಗಿಡಲಾಗಿತ್ತು.

ಇದರಿಂದ ಈರಿಸ್ ಸಹಜವಾಗಿಯೇ ಕೋಪಗೊಂಡಳು. ತನಗಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ತೀರ್ಮಾನಿಸಿದಳು. ಒಂದು ಚಿನ್ನದ ಸೇಬನ್ನು ತಂದು ಅದರ ಮೇಲೆ ಟಿ ಕ್ಯಾಲ್ಲಿಸ್ಟಿ (Ti kallisti) – ಪರಮ ಸುಂದರಿಗೆ – ಎಂದು ಬರೆದಳು. ಹಾಗೆ ಬರೆದ ಕೂಡಲೇ ಆ ಚಿನ್ನದ ಸೇಬು ಜಗಳವನ್ನು ಹುಟ್ಟುಹಾಕುವ (Apple of dischord) ಸೇಬಾಗಿ ಬದಲಾಯಿತು ಈರಿಸ್ ಅದನ್ನು ಸಂತೋಷಕೂಟ ನಡೆಯುತ್ತಿದ್ದ ಸಭಾಂಗಣದೊಳಕ್ಕೆ ಎಸೆದಳು.

ದೇವತೆಗಳು ಹೊರಗಿನಿಂದ ಬಂದುಬಿದ್ದ ಚಿನ್ನದ ಸೇಬನ್ನು ನೋಡಿದರು. ಅದರ ಮೇಲೆ ‘ಪರಮ ಸುಂದರಿಗೆ’ ಎಂದು ಬರೆದುದನ್ನು ನೋಡಿ ಹೆಣ್ಣು ದೇವತೆಗಳ ನಡುವೆ ಕೋಲಾಹಲ ಶುರುವಾಯ್ತು. ತಮ್ಮತಮ್ಮಲ್ಲೆ ಗುಂಪುಕಟ್ಟಿಕೊಂಡು ಪರಮಸುಂದರಿ ಯಾರು ಅನ್ನುವ ಚರ್ಚೆ ಶುರುವಿಟ್ಟರು. ಕೊನೆಗೆ ಅಲ್ಲಿದ್ದವರೆಲ್ಲರೂ ಸೇರಿ, ಹೀರಾ ದೇವಿ, ಅಫ್ರೋದಿತೆ ಮತ್ತು ಅಥೆನಾರನ್ನು ಮೀರಿಸುವ ಸೌಂದರ್ಯ ಈ ಸೃಷ್ಟಿಯಲ್ಲೇ ಇಲ್ಲವೆಂದು ತೀರ್ಮಾನಿಸಿದರು. ಆದರೆ ಆ ಹಣ್ಣಿನ ಬಹುಮಾನ ಯಾರಾದರೂ ಒಬ್ಬರಿಗೆ ಸಲ್ಲಬಹುದಾಗಿತ್ತು. ಆದ್ದರಿಂದ ಆ ಮೂವರಲ್ಲಿ ಒಬ್ಬರನ್ನು ಮಾತ್ರ ಪರಮ ಸುಂದರಿ ಎಂದು ಘೋಷಿಸಲು ಅವಕಾಶವಿತ್ತು.

ಗೊಂದಲಗೊಂಡ ದೇವತೆಗಳು ತ್ರಿದೇವಿಯರ ಮುಂದಾಳತ್ವದಲ್ಲಿ ಸ್ಯೂಸ್ ದೇವನ ಬಳಿ ಬಂದರು. “ಮಹಾದೇವ, ನಾವು ಮೂವರಲ್ಲಿ ಪರಮ ಸುಂದರಿ ಯಾರೆಂದು ನೀನೇ ತೀರ್ಪು ನೀಡು” ಎಂದು ವಿನಂತಿ ಮಾಡಿದರು.

 ಆದರೆ ಸ್ಯೂಸ್ ಜಾಣ. ಯಾರೊಬ್ಬರನ್ನು ಸುಂದರಿ ಎಂದು ಘೋಷಿಸಿದರೂ ಉಳಿದಿಬ್ಬರು ಕೋಪಗೊಳ್ಳುತ್ತಾರೆಂದು ಅವನು ಊಹಿಸಿದ. ಅವರಿಂದ ತಪ್ಪಿಸಿಕೊಳ್ಳಲು ಒಂದು ಆಟ ಹೂಡಿದ. “ಟ್ರಾಯ್ ನಗರದ ರಾಜಕುಮಾರ ಪ್ಯಾರಿಸ್ ಬಹಳ ಧರ್ಮಾತ್ಮನೂ ನ್ಯಾಯ ನಿಷ್ಠನೂ ಆಗಿದ್ದಾನೆ. ನೀವು ಅಲ್ಲಿಗೆ ಹೋಗಿ, ಅವನಲ್ಲಿ ತೀರ್ಪು ಕೇಳಿ. ನಾನೂ ಕೂಡಾ ಸಂದೇಶ ಕಳುಹಿಸುತ್ತೇನೆ” ಅಂದ.

paris

ಹೀರಾ, ಅಫ್ರೋದಿತೆ ಮತ್ತು ಅಥೆನಾ ದನಗಳನ್ನು ಮೇಯಲು ಬಿಟ್ಟು ವಿರಮಿಸಿದ್ದ ಪ್ಯಾರಿಸನ ಬಳಿ ಹೋದರು. “ನಾವು ಮೂವರಲ್ಲಿ ಅಪ್ರತಿಮ ಸುಂದರಿ ಯಾರು ಹೇಳು?” ಎಂದು ಕೆಳಿದರು. ಮೂವರು ದೇವಿಯರೂ ತಮ್ಮದೇ ಬಗೆಗಳಲ್ಲಿ ಸುಂದರಿಯರಾಗಿದ್ದರು. ಅವರ ಸೌಂದರ್ಯಕ್ಕೆ ಸಾಟಿಯೇ ಇರಲಿಲ್ಲ. ಆದರೆ ಅವರಲ್ಲಿ ಹೆಚ್ಚಿನ ಸುಂದರಿಯನ್ನು ಆರಿಸುವುದು ಹೇಗೆ? ಪ್ಯಾರಿಸ್ ಚಿಂತೆಗೀಡಾದ. ಬಟ್ಟೆಯಿಂದ ಮುಚ್ಚಲ್ಪಟ್ಟಿರುವ ದೇಹದಲ್ಲೇನಾದರೂ ಕೊರತೆ ಇದ್ದರೆ ಅದರ ಮೇಲೆ ಅಂತಿಮ ತೀರ್ಪು ನಿಡಬಹುದೆಂದು ಯೋಚಿಸಿದ. ಅವನ ಮನದಿಂಗಿತ ಅರಿತ ದೇವಿಯರು ಒಬ್ಬಿಬ್ಬರಾಗಿಯೇ ಅವನ ಮುಂದೆ ಬೆತ್ತಲಾಗಿ ನಿಂತರು. ಜೊತೆಗೆ ಆತನಿಗೆ ಲಂಚ ನೀಡಲಿಕ್ಕೂ ಮುಂದಾದರು. ಹೀರಾಳು ಪ್ಯಾರಿಸನಿಗೆ ಯುರೋಪ್ ಮತ್ತು ಏಷ್ಯಾಗಳ ಒಡೆತನವನ್ನು ಘೋಷಿಸಿದಳು. ಅಥೆನಾಳು ಬುದ್ಧಿವಂತಿಕೆಯನ್ನೂ, ಯುದ್ಧ ಕಲೆಗಳನ್ನೂ, ರಣಕಲಿಗಳ ಶೌರ್ಯವನ್ನೂ ಉಡುಗೊರೆ ನೀಡಿದಳು. ಅಫ್ರೋದಿತೆಯು ಆತನಿಗೆ ಭೂಮಂಡಲದಲ್ಲೇ ಅತ್ಯಂತ ಸುಂದರಿಯಾದ ಸ್ಪಾರ್ಟಾದ ರಾಣಿ ಹೆಲೆನ್’ಳ ಪ್ರೇಮ ನಿನಗೆ ದೊರೆಯುವುದೆಂದು ಹೇಳಿದಳು. ಪ್ಯಾರಿಸ್’ನಿಗೆ ಇದು ಆಕರ್ಷಕವಾಗಿ ಕಂಡಿತು. ಬೆತ್ತಲೆ ದೇಹದಲ್ಲೂ ಸೌಂದರ್ಯದ ಹೆಚ್ಚು – ಕಡಿಮೆಗಳನ್ನು ಅಳೆಯಲು ಸಾಧ್ಯವಾಗದೆ ಚಡಪಡಿಸುತ್ತಿದ್ದ ಪ್ಯಾರಿಸ್, ಈಗ ಉಡುಗೊರೆಗಳ ಮೇಲೆ ತನ್ನ ತೀರ್ಪನ್ನು ನಿರ್ಧರಿಸಿದ. ಅಫ್ರೋದಿತೆಯೇ ಸುಂದರಿಯರಲ್ಲಿ ಸುಂದರಿ ಎಂದು ತೀರ್ಪನ್ನು ಘೋಷಿಸಿದ. ಇದರಿಂದ ಕೋಗೊಂಡ ಹೀರಾ ಮತ್ತು ಅಥೆನಾ ದೇವಿಯರು “ಈ ತೀರ್ಪಿಗೆ ನೀನು ಭಾರೀ ಬೆಲೆಯನ್ನೇ ತೆರುವಂತಾಗಲಿ. ನಿನ್ನ ತೀರ್ಪಿನ ಪರಿಣಾಮ ಭಾರೀ ನಷ್ಟವನ್ನೇ ಉಂಟುಮಾಡಲಿ” ಎಂದು ಶಪಿಸಿದರು.

 ಅಫ್ರೋದಿತೆಯ ಉಡುಗೊರೆಯ ಫಲವಾಗಿ ಹೆಲೆನ್ ಕೂಡಾ ಪ್ಯಾರಿಸ್’ನ ಪ್ರೇಮದಲ್ಲಿ ಬಿದ್ದಳು. ಅವಳಿಗೆ ಅದಾಗಲೇ ಮೆನೆಲೌಸನೊಡನೆ ಮದುವೆಯಾಗಿತ್ತು. ಅವಳು ಅವನನ್ನು ತೊರೆದು ಪ್ಯಾರಿಸ್ ಜೊತೆ ಹೊರಡಲು ಸಿದ್ಧವಾದಳು. ಪ್ಯಾರಿಸ್ ಹೆಲೆನ್’ಳನ್ನು ಟ್ರಾಯ್’ಗೆ ಕರೆದೊಯ್ದ. ಇದರಿಂದ ಅವಳ ಗಂಡ ಮೆನೆಲೌಸ್ ಮಾತ್ರವಲ್ಲ, ಅವಳನ್ನು ಗುಪ್ತವಾಗಿ ಪ್ರೇಮಿಸುತ್ತಿದ್ದ, ಅವಳಿಗಾಗಿ ಹಂಬಲಿಸುತ್ತಿದ್ದೆ ರಾಜರೆಲ್ಲರೂ ಕುಪಿತರಾದರು. ಟ್ರಾಯ್’ನಿಂದ ಹೆಲೆನ್”ಳನ್ನು ಮರಳಿ ತರಬೇಕೆಂದೇ ಅವರೆಲ್ಲರೂ ಒಗ್ಗೂಡಿ ಪ್ಯಾರಿಸ್’ನ ಮೇಲೆ ಯುದ್ಧ ಸಾರಿದರು. ಈ ಯುದ್ಧದ ಸಲಹೆ ನೀಡಿದ್ದು ಇಥಾಕಾದ ಅರಸ ಒಡಿಸ್ಸಿಯಸ್. ಇತಿಹಾಸದಲ್ಲಿ ದಾಖಲಾಗಿರುವ ‘ಟ್ರೋಜನ್ ಯುದ್ಧ’ದ ಪೌರಾಣಿಕ ಹಿನ್ನೆಲೆ ಇದು.

 ಪಾಶ್ಚಾತ್ಯ ಸಾಹಿತ್ಯದಲ್ಲಿ ಹಾಗೂ ಜನಸಾಮಾನ್ಯರ ನಡುವೆ ‘ಜಡ್ಜ್ಮೆಂಟ್ ಆಫ್ ಪ್ಯಾರಿಸ್’ (ಪ್ಯಾರಿಸನ ತೀರ್ಪು) ಒಂದು ನುಡಿಗಟ್ಟಾಗಿ ಪ್ರಚಲಿತದಲ್ಲಿದೆ. ತೆಗೆದುಕೊಂಡ ತೀರ್ಮಾನದ ಪ್ರತಿಫಲ ವಿನಾಶಕಾರಿಯಾಗಿ ತೋರುವ ಸಂದರ್ಭದಲ್ಲಿ ಈ ನುಡಿಗಟ್ಟು ಬಳಕೆಯಾಗುತ್ತದೆ.

Leave a Reply