ಶ್ರೀ ವ್ಯಾಸರಾಜ ಯತಿಗಳು ರಚಿಸಿದ ಶ್ರೀ ಶ್ರೀನಿವಾಸ ಸ್ತೋತ್ರ ಮತ್ತು ಸರಳ ಕನ್ನಡಾನುವಾದ ಇಲ್ಲಿದೆ….
ಪ್ರಾತಃ ಸ್ಮರಾಮಿ ರಮಯಾ ಸಹ ವೇಂಕಟೇಶಂ
ಮಂದಸ್ಮಿತಂ ಮುಖಸರೋರುಹ ಕಾಂತಿರಮ್ಯಮ್ |
ಮಾಣಿಕ್ಯ ಕಾಂತಿ ವಿಲಸನ್ ಮುಕುಟೋರ್ಧ್ವ ಪುಂಡ್ರಮ್
ಪದ್ಮಾಕ್ಷ ಲಕ್ಷ ಮಣಿಕುಂಡಲ ಮಂಡಿತಾಂಗಮ್ || ೧ ||
ನಗುಮೊದಿಂದ ಕಂಗೊಳಿಸುತ್ತಿರುವ, ಮಾಣಿಕ್ಯದ ಪ್ರಕಾಶದಿಂದಲೂ ಊರ್ಧ್ವ ಪುಂಡ್ರದಿಂದಲೂ ಶೋಭಿಸುತ್ತಿರುವ, ಕಮಲದಂಥ ಕಣ್ಣುಳ್ಳವನೂ ಮಣಿಕುಂಡಲಗಳನ್ನು ಧರಿಸಿದವನೂ ಆದ ರಮಾ (ಲಕ್ಷ್ಮೀ) ಸಹಿತನಾದ ವೆಂಕಟೇಶ ದೇವರಿಗೆ ಮುಂಜಾನೆಯ ನಮನಗಳನ್ನು ಸಲ್ಲಿಸುತ್ತೇನೆ.
ಪ್ರಾತರ್ಭಜಾಮಿ ಕರರಮ್ಯ ಸುಶಂಖಚಕ್ರಂ
ಭಕ್ತಾಭಯಪ್ರದ ಕಟಿಸ್ಥಲದತ್ತಪಾಣಿಮ್ |
ಶ್ರೀವತ್ಸ ಕೌಸ್ತುಭಲಸನ್ಮಣಿಕಾಂಚನಾಢ್ಯಂ
ಪೀತಾಂಬರಂ ಮದನಕೋಟಿ ಸುಮೋಹನಾಂಗಮ್ || ೨ ||
ಸುಂದರವಾದ ಕರಗಳಲ್ಲಿ ಶಂಖಚಕ್ರಗಳನ್ನು ಹಿಡಿದಿರುವ, ಭಕ್ತರನ್ನು ಅಲಹುವ ಅಭಯಮುದ್ರೆ ತೋರುತ್ತಿರುವ, ಸೊಂಟ ಮೇಲೊಂದು ಕೈಯನ್ನಿರಿಸಿ ನಿಂತಿರುವ, ಶ್ರೀವತ್ಸ ಚಿಹ್ನೆಯನ್ನೂ ಕೌಸ್ತುಭ ಮಣಿಯನ್ನೂ ಧರಿಸಿರುವ, ಪೀತಾಂಬರವನ್ನು ತೊಟ್ಟು ಮದನನನ್ನೇ ನಾಚಿಸುವಂತೆ ನಿಂತಿರುವ ಮೋಹನಾಂಗನನ್ನು ಮುಂಜಾನೆಯಲ್ಲಿ ಭಜಿಸುತ್ತೇನೆ.
ಪ್ರಾತರ್ನಮಾಮಿ ಪರಮಾತ್ಮಪದಾರವಿಂದಂ
ಆನಂದಸಾಂದ್ರನಿಲಯಂ ಮಣಿನೂಪುರಾಢ್ಯಮ್ |
ಏತತ್ಸಮಸ್ತ ಜಗತಾಮಪಿ ದರ್ಶಯಂತಂ
ವೈಕುಂಠಮತ್ರ ಭಜತಾಂ ಕರಪಲ್ಲವೇನ || ೩ ||
ಆನಂದಮಯನೂ ಸ್ವತಃ ಆನಂದನೂ ಆಗಿರುವ, ಮಣಿಗೆಜ್ಜೆಗಳನ್ನು ಧರಿಸಿ ಜಗತ್ತಿಗೆ ದರ್ಶನ ನೀಡುತ್ತಿರುವ, ವೈಕುಂಠದಲ್ಲಿ ನೆಲೆಸಿ ಪಾಲನೆ ಮಾಡುತ್ತಿರುವ ಪರಮಾತ್ಮನ ಪಾದಪದ್ಮಗಳನ್ನು ಮುಂಜಾನೆಯ ವೇಳೆ ನಮಿಸುತ್ತೇನೆ.
ವ್ಯಾಸರಾಜಯತಿಪ್ರೋಕ್ತಂ ಶ್ಲೋಕತ್ರಯಮಿದಂ ಶುಭಮ್ |
ಪ್ರಾತಃಕಾಲೇ ಪಠೇದ್ಯಸ್ತು ಪಾಪೇಭ್ಯೋ ಮುಚ್ಯತೇ ನರಃ || ೪ ||
ವ್ಯಾಸರಾಜ ಯತಿಗಳಿಂದ ರಚಿತವಾದ ಈ ಸ್ತೋತ್ರವನ್ನು ಪ್ರತಿ ಮುಂಜಾನೆ ಪಠಿಸುವುದರಿಂದ ಶುಭ ಫಲಗಳು ದೊರೆಯುತ್ತವೆ.
|| ಇತಿ ಶ್ರೀವ್ಯಾಸರಾಜಯತಿ ವಿರಚಿತ ಶ್ರೀನಿವಾಸಸ್ತೋತ್ರಮ್ ||