ಸಂಪತ್ತು – ಶ್ರೇಯಸ್ಸಿಗಾಗಿ ಶ್ರೀ ಲಲಿತಾ ಪಂಚರತ್ನ ಸ್ತೋತ್ರ ~ ನಿತ್ಯಪಾಠಗಳು

ಶ್ರೀ ಶಂಕರಾಚಾರ್ಯರು ರಚಿಸಿದ ಶ್ರೀಲಲಿತಾ ಪಂಚರತ್ನ ಸ್ತೋತ್ರದ ಮೂಲಪಾಠ ಮತ್ತು ಸರಳ ಕನ್ನಡಾನುವಾದ ಇಲ್ಲಿದೆ….

ಪ್ರಾತಃ ಸ್ಮರಾಮಿ ಲಲಿತಾ ವದನಾರವಿಂದಂ
ಬಿಂಬಾಧರಂ ಪೃಥುಲ ಮೌಕ್ತಿಕ ಶೋಭಿನಾಸಮ್ |
ಆಕರ್ಣ ಧೀರ್ಘ ನಯನಂ ಮಣಿಕುಂಡಲಾಢ್ಯಂ
ಮಂದಸ್ಮಿತಮ್ ಮೃಗಮದೋಜ್ವಲ ಭಾಲದೇಶಮ್  ||1||

ಭಾವಾರ್ಥ : ತೊಂಡೆಯ ಹಣ್ಣನ್ನು ಹೋಲುವ  ತುಟಿ; ದೊಡ್ಡ ಮುತ್ತಿನ ಮೂಗುತಿಯಿಂದ ಕಂಗೊಳಿಸುತ್ತಿರುವ ನಾಸಿಕ; ಕಿವಿಯತನಕ ವಿಸ್ತರಿಸಿರುವ ವಿಶಾಲವಾಗಿರುವ ನಯನಗಳು; ಮಣಿಯ ಕರ್ಣಕುಂಡಲಗಳು;  ಮಂದಹಾಸವನ್ನು ಬೀರುತ್ತಿರುವ  ತುಟಿಗಳು; ಹಾಗೂ ಹಣೆಯಲ್ಲಿ ಉಜ್ವಲವಾಗಿ ಬೆಳಗುತ್ತಿರುವ ಕಸ್ತೂರಿಯ ತಿಲಕ; ಇವುಗಳಿಂದ ಶೋಭಿಸುತ್ತಿರುವ ತಾಯಿ ಲಲಿತೆಯ ಮುಖಕಮಲವನ್ನು ನಾನು ಉಷಃ ಕಾಲದಲ್ಲಿ ಸ್ಮರಿಸುತ್ತೇನೆ.

ಪ್ರಾತರ್ಭಜಾಮಿ ಲಲಿತಾ ಭುಜಕಲ್ಪವಲ್ಲೀಂ
ರಕ್ತಾಂಗುಲೀಯ ಲಸದಂಗುಲಿ ಪಲ್ಲವಾಢ್ಯಾಮ್ |
ಮಾಣಿಕ್ಯ ಹೇಮ ವಲಯಾಂಗದ ಶೋಭಮಾನಾಂ
ಪುಂಡ್ರೇಕ್ಷುಚಾಪ ಕುಸುಮೇಷು ಸೃಣೀರ್ದಧಾನಮ್  ||2||

ಭಾವಾರ್ಥ : ಹೊಳೆಯುವ ಕೆಂಪು ಹರಳಿನ ಉಂಗುರ ಧರಿಸಿದ ಚಿಗುರಿನಂತೆ ಕಾಣುವ ಬೆರಳುಗಳಿಂದ ಕೂಡಿದವಳೂ; ಮಾಣಿಕ್ಯದ ಬಳೆಗಳು ಹಾಗೂ ತೋಳ್ಬಂದಿಗಳಿಂದ ಶೋಭಾಯಮಾನಳಾಗಿರುವವಳೂ; ಕಬ್ಬನ್ನು ಬಿಲ್ಲನ್ನಾಗಿಸಿ ಹೂಬಾಣಗಳಿಂದ ತುಂಬಿದ ಬತ್ತಳಿಕೆಯನ್ನು ಹಿಡಿದಿರುವವಳು ಆದ ತಾಯಿ ಲಲಿತೆಯ ತೋಳುಗಳೆಂಬ ಕಲ್ಪಲತೆಯನ್ನು ನಾನು ಬೆಳಗಿನಲ್ಲಿ ಭಕ್ತಿಯಿಂದ ಭಜಿಸುತ್ತೇನೆ.

ಪ್ರಾತರ್ನಮಾಮಿ ಲಲಿತಾ ಚರಣಾರವಿಂದಂ
ಭಕ್ತೇಷ್ಟ ದಾನ ನಿರತಂ ಭವ ಸಿಂಧು ಪೋತಮ್ |
ಪದ್ಮಾಸನಾದಿ ಸುರನಾಯಕ ಪೂಜನೀಯಂ
ಪದ್ಮಾಂಕುಶ ಧ್ವಜ ಸುದರ್ಶನ ಲಾಂಛನಾಢ್ಯಮ್  ||3||

ಭಾವಾರ್ಥ: ಸದಾ ಭಕ್ತರು ಇಷ್ಟಾರ್ಥಗಳನ್ನು ಕರುಣಿಸುವಲ್ಲಿ ವ್ಯಸ್ತಳೂ; ಸಂಸಾರ ಸಾಗರವನ್ನು ದಾಟಲು ಹರಿಗೋಲಾಗಿರುವವಳೂ; ಬ್ರಹ್ಮಾದಿ ದೇವತೆಗಳಿಗೂ ಪೂಜನೀಯವಾಗಿರುವವಳೂ; ಕಮಲ, ಅಂಕುಶ, ಧ್ವಜ, ಸುದರ್ಶನ ಚಕ್ರ ಮೊದಲಾದ ಲಾಂಛನಗಳನ್ನು ಹೊಂದಿರುವವಳೂ ಆದ ತಾಯಿ ಲಲಿತೆಯ ಪಾದ ಕಮಲಗಳಿಗೆ ನಾನು ಬೆಳಗಿನಲ್ಲಿ ಭಕ್ತಿಯಿಂದ ನಮಸ್ಕರಿಸುತ್ತೇನೆ.

ಪ್ರಾತಃ ಸ್ತುವೇ ಪರಶಿವಾಂ ಲಲಿತಾಂ ಭವಾನೀಂ
ತ್ರಯಂತ ವೇದ್ಯ ವಿಭವಾಂ ಕರುಣಾನವದ್ಯಾಮ್ |
ವಿಶ್ವಸ್ಯ ಸೃಷ್ಟಿ ವಿಲಯ ಸ್ಥಿತಿ ಹೇತುಭೂತಾಂ
ವಿದ್ಯೇಶ್ವರೀಂ ನಿಗಮಮ ವಾಙ್ಮನಸಾತಿ ದೂರಾಮ್  ||4||

ಭಾವಾರ್ಥ: ವೇದ ವೇದಾಂಗಗಳಿಂದ ಸ್ತುತಿಸಲ್ಪಟ್ಟವಳೂ; ದಯಾನಿಧಿಯಾಗಿ ಶ್ಲಾಘನೀಯಳಾದವಳೂ; ಜಗದ ಸೃಷ್ಟಿ – ಸ್ಥಿತಿ – ಲಯಗಳಿಗೆ ಕಾರಣೀಭೂತವಾಗಿರುವ ಶ್ರೀವಿದ್ಯಾ ಮಂತ್ರಕ್ಕೆ ದೇವತಾ ಸ್ವರೂಪಿಯೂ, ವೇದಗಳಿಗೆ ನಿಲುಕದವಳೂ, ಮನಸು – ಮಾತಿಗೂ ಅತೀತಳಾದವಳೂ; ಪರಮೇಶ್ವರನ ಒಡತಿಯೂ; ಜಗನ್ಮಾತೆಯೂ ಆಗಿರುವ ತಾಯಿ ಲಲಿತೆಯನ್ನು ನಾನು ಬೆಳಗಿನಲ್ಲಿ ಭಕ್ತಿಯಿಂದ ಸ್ತುತಿಸುತ್ತೇನೆ.

ಪ್ರಾತರ್ವದಾಮಿ ಲಲಿತೇ ತವ ಪುಣ್ಯ ನಾಮ
ಕಾಮೇಶ್ವರೀತಿ ಕಮಲೇತಿ ಮಹೇಶ್ವರೀತಿ |
ಶ್ರೀ ಶಾಂಭವೀತಿ ಜಗತಾಂ ಜನನೀ ಪರೇತಿ
ವಾಗ್ದೇವತೇತಿ ವಚಸಾ ತ್ರಿಪುರೇಶ್ವರೀತಿ  ||5||

ಭಾವಾರ್ಥ: ಕಾಮೇಶ್ವರಿ, ಕಮಲೆ, ಮಹೇಶ್ವರಿ, ಶಾಂಭವಿ, ಶ್ರೇಷ್ಠಳಾಗಿರುವ ಜಗಜ್ಜನನಿ, ವಾಗ್ದೇವಿ, ತ್ರಿಪುರೇಶ್ವರಿ ಎಂಬಿತ್ಯಾದಿ ತಾಯಿ ಲಲಿತೆಯ ಪುಣ್ಯ ನಾಮಗಳನ್ನು ನಾನು ಬೆಳಗಿನಲ್ಲಿ ಭಕ್ತಿಯಿಂದ ಜಪಿಸುತ್ತೇನೆ.

ಯಃ ಶ್ಲೋಕ ಪಂಚಕಮಿದಂ ಲಲಿತಾಂಬಿಕಾಯಾಃ
ಸೌಭಾಗ್ಯದಂ ಸುಲಲಿತಂ ಪಠತಿ ಪ್ರಭಾತೇ |
ತಸ್ಮೈ ದದಾತಿ ಲಲಿತಾ ಝಟಿತಿ ಪ್ರಸನ್ನಾ
ವಿದ್ಯಾಂ ಶ್ರಿಯಂ ವಿಮಲ ಸೌಖ್ಯಮನಂತ ಕೀರ್ತಿಮ್ ||6 ||

ಭಾವಾರ್ಥ: ಸೌಭಾಗ್ಯದಾಯಿಯಾದ, ಸುಂದರವೂ ಸುಲಭವೂ ಆದ ತಾಯಿ ಲಲಿತಾಂಬಿಕೆಯ ಈ ಐದು ಶ್ಲೋಕಗಳನ್ನು ಉಷಃಕಾಲದಲ್ಲಿ ಯಾರು ಪಠಿಸುತ್ತಾರೋ ಅಂಥವರಿಗೆ ದೇವಿಯು ಪ್ರಸನ್ನಳಾಗಿ ವಿದ್ಯೆ, ಸಂಪತ್ತು, ಶೋಭೆ, ಸೌಖ್ಯ, ಹಾಗೂ ಅಸೀಮ ಕೀರ್ತಿಯನ್ನು ದಯಪಾಲಿಸುತ್ತಾಳೆ.

Leave a Reply