ಭೂತಬಾಧೆಯಿಂದ ಮುಕ್ತಿ ಪಡೆಯುವುದು ಹೇಗೆ? ಉಪಾಯ ಇಲ್ಲಿದೆ…

ಭದ್ರಾವತಿಯಲ್ಲಿ ನೆಲೆಸಿರುವ ಮಹಿಳೆಯೊಬ್ಬರು “ಭೂತಪ್ರೇತಗಳ ಕಾಟದಿಂದ ಮುಕ್ತಿ ದೊರಕಿಸಿಕೊಳ್ಳುವ ಉಪಾಯ ತಿಳಿಸಿ” ಎಂದು ಕೇಳಿದ್ದಾರೆ. ಈ ಪ್ರಶ್ನೆ ಹಲವರದೂ ಆಗಿರಬಹುದಾದ್ದರಿಂದ, ಉತ್ತರರೂಪವಾಗಿ ಈ ಲೇಖನ ಬರೆಯಲಾಗಿದೆ ~ ಚಿತ್ಕಲಾ

ಈ ಹಿಂದೆ ಹಲವು ಸಂದರ್ಭಗಳಲ್ಲಿ ಹೇಳಿರುವಂತೆ ಅರಳಿಮರ ಅಧ್ಯಾತ್ಮದ ಅರಿವನ್ನು ಸಂಗ್ರಹಿಸಿ ಹಂಚುವ ಕೆಲಸ ಮಾಡಲೆಂದೇ ಉದ್ದೇಶಿತವಾಗಿದೆ. ಭೂತಪ್ರೇತ ಇತ್ಯಾದಿಗಳು ಬಹಳ ಮುಖ್ಯವಾಗಿ ಮಾನಸಿಕ ಸಮಸ್ಯೆಗೆ ಸಂಬಂಧಿಸಿದ್ದು. ಆದ್ದರಿಂದ ಈ ಪ್ರಶ್ನೆಗೆ ಉತ್ತರಿಸಬೇಕೇ ಬೇಡವೇ ಅನ್ನುವ ಪ್ರಶ್ನೆ ನಮ್ಮಲ್ಲಿ ಮೂಡಿತ್ತು. ಆದರೂ ದೆವ್ವ ಭೂತಗಳ ನಂಬಿಕೆಯೊಡನೆ ಧರ್ಮವನ್ನು ತಳಕುಹಾಕಲಾಗಿರುವುದರಿಂದ ಉತ್ತರಿಸುವ ಪ್ರಯತ್ನ ಮಾಡಿದ್ದೇವೆ. 

ಕೆಲವೊಮ್ಮೆ ಮಾನಸಿಕ ಸಮಸ್ಯೆಯನ್ನೂ ಮೀರಿ ಸೃಷ್ಟಿಯಲ್ಲಿನ ನಕಾರಾತ್ಮಕ ಶಕ್ತಿಗಳು ಒಂದೆಡೆ ಮೋಡಗಟ್ಟಿ ಕೆಡುಕುಂಟು ಮಾಡುವ ಸಾಧ್ಯತೆಗಳಿವೆ. ಅದರ ಹೊರತಾಗಿ ಇರುವ ಇನ್ನೂ ಒಂದು ಸಾಧ್ಯತೆ, ಗರುಡ ಪುರಾಣ ಮತ್ತು ಶ್ರಾದ್ಧ ಸಂಬಂಧಿ ಶಾಸ್ತ್ರಗಳು ಹೇಳುವಂತೆ ದೇಹ ತೊರೆದುಹೋಗುವ ಆತ್ಮ ಪ್ರಾಪಂಚಿಕ ವಾಸನೆ ಕಳೆದು ತನ್ನ ಶುದ್ಧ ರೂಪ ಮರಳಿ ಪಡೆಯಲು ಹನ್ನೊಂದು ದಿನಗಳ ಕಾಲಾವಧಿ ಇರುತ್ತದೆ (ಪಾಠಾಂತರಗಳಲ್ಲಿ ದಿನಗಳ ಸಂಖ್ಯೆ ವ್ಯತ್ಯಾಸವಿದೆ). ಈ ಅವಧಿಯಲ್ಲಿ ಆತ್ಮವು ‘ಪ್ರೇತ’ ಅಥವಾ ‘ಪ್ರೇತಾತ್ಮ’ ಎಂದು ಕರೆಸಿಕೊಳ್ಳುತ್ತದೆ. ಈ ಪ್ರೇತಾತ್ಮವೇನಾದರೂ ತನ್ನ ದೇಹವನ್ನೂ, ಜನ್ಮಕ್ಕಂಟಿದ ಸಂಬಂಧಗಳನ್ನೂ, ರಾಗದ್ವೇಷಗಳನ್ನೂ ಬಿಟ್ಟುಕೊಡಲಾಗದೆ, ಬಿಟ್ಟುಕೊಡುವ ಮನಸ್ಸಿಲ್ಲದೆ ಊರ್ಧ್ವಲೋಕದ ಪ್ರಯಾಣ ಮೊಟಕುಗೊಳಿಸಿ ಭೂಮಿಗೆ ಹಿಂದಿರುಗಿ ಗಾಳಿಯಾಗಿ ಅಲೆಯಬಹುದು.

ಅಪಘಾತ, ಆತ್ಮಹತ್ಯೆ, ಕೊಲೆ ಮೊದಲಾದ ಕಾರಣಗಳಿಂದ ಸತ್ತವರು ತಮ್ಮ ಕಾಮನೆಗಳನ್ನು ನಡುವಲ್ಲೆ ಬಿಟ್ಟುಕೊಡಲಾಗದೆ ಪ್ರೇತಾತ್ಮವಾಗಬಹುದು. ಅಥವಾ ತಮ್ಮನ್ನು ಕೊಂದವರ, ಸಾವಿಗೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿ ಶುದ್ಧರೂಪಕ್ಕೆ ಹಿಂದಿರುಗಬಯಸದೆ ಭೂಮಿಗೆ ಮರಳಬಹುದು.

ಇವೆಲ್ಲಾ ಕೇವಲ ಊಹೆಯಷ್ಟೆ. ಈ ಸಾಧ್ಯತೆಗಳು ಅತ್ಯಂತ ಕಡಿಮೆಯಲ್ಲಿ ಕಡಿಮೆ. ಒಂದು ಸುಖನಿದ್ರೆ ಮಾಡಿದರೇ ನಮ್ಮೆಲ್ಲ ರಾಗದ್ವೇಷಗಳನ್ನೂ ಮರೆಯುವಂಥ ನಾವು, ಚಿರನಿದ್ರೆಯ ನಂತರವೂ ಅವನ್ನು ಕಟ್ಟಿಕೊಂಡು ಹೆಣಗುತ್ತೇವೆಯೇ? ದ್ವೇಷದಷ್ಟೇ ಪ್ರೇಮ ಕೂಡಾ ನಮ್ಮನ್ನು ಹೈರಾಣುಮಾಡಿರುತ್ತದೆ. ಈ ಎಲ್ಲದರ ಸಹವಾಸ ಸಾಕು ಅನ್ನುವ ನಿರಾಳಭಾವ ತಂದುಕೊಡುವುದು ಸಾವು ಮಾತ್ರ! ಯಾವ ಮೂರ್ಖರು ಸತ್ತಮೇಲೂ ಸಾವನ್ನು ಒಪ್ಪಿಕೊಳ್ಳದೆ ಮತ್ತೆ ಬಂದು ಪ್ರೇಮ – ಸೇಡುಗಳಲ್ಲಿ ತೊಡಗುತ್ತಾರೆ? ಅಂಥವರ ಸಂಖ್ಯೆ ನೂರು ಕೋಟಿಯಲ್ಲಿ ಅಥವಾ ಸಾವಿರ ಕೋಟಿಯಲ್ಲಿ ಒಂದೋ ಎರಡೋ ಇರಬಹುದಷ್ಟೆ!

ಇರಲಿ; ಈಗ ಭೂತಪ್ರೇತಗಳ ವಿಷಯಕ್ಕೆ ಬರೋಣ. ಇವುಗಳ ಕುರಿತಾದ ಭಯ ಶುರುವಾದುದು ಯಾವಾಗ? ಭಾರತೀಯ / ಹಿಂದೂ ಧಾರ್ಮಿಕ ಸಾಹಿತ್ಯಕೃತಿಗಳಾಗಲೀ, ಬೈಬಲ್, ಕುರಾನ್, ಯಹೂದಿ ಇತ್ಯಾದಿ ಧರ್ಮಗಳಾಗಲೀ ದೆವ್ವಗಳ ಕುರಿತು ಹೇಳುವುದಿಲ್ಲ. ಹಿಂದೂ ಧಾರ್ಮಿಕ ಸಾಹಿತ್ಯ ಸತ್ತಮೇಲೂ ಒಂದಂಶದಿಂದ ಭೂಮಿಯಲ್ಲಿ ನೆಲೆಸಿ ‘ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ’ ಮಾಡುವ ‘ಭೂತ’ಗಳ ಕುರಿತು ಹೇಳುತ್ತದೆ. ಮತ್ತು ಈ ‘ಭೂತ’ಗಳನ್ನು ‘ದೈವ’ವೆಂದು ಕರೆದು ಮನ್ನಣೆ ನೀಡುತ್ತವೆ. ಇನ್ನು ನಮ್ಮ  ಪ್ರಾಚೀನ ಸಾಹಿತ್ಯದಲ್ಲಿ ಬರುವ ಬೇತಾಳ ಪ್ರೇತಾತ್ಮ ಹೌದೇ ಅಲ್ಲವೇ ಅನ್ನುವ ಬಗ್ಗೆ ಚರ್ಚೆ ಇದೆ. ಬೇತಾಳ ಕೂಡಾ ಒಂದು ಜನಾಂಗ, ಕಾವಲಿನ ಕಾಯಕದ ಜನ ಸಮೂಹ ಎಂದೂ ಹೇಳಲಾಗುತ್ತದೆ. 

ನಮ್ಮಲ್ಲಿ ಪ್ರಚಲಿತವಿರುವ ದೆವ್ವದ ಕಥೆಗಳೆಲ್ಲವೂ ಮಧ್ಯಯುಗದ ನಂತರ ಶುರುವಾದ ಜನಪದ ಸೃಷ್ಟಿ. ಅದರಲ್ಲೂ ತೀರಾ ಇತ್ತೀಚಿನವರೆಗೂ ಜನಪದ ಕಥೆಗಳ ದೆವ್ವಗಳು ತುಂಟತನ, ಚೇಷ್ಠೆ, ಪರೋಪಕಾರ ಇತ್ಯಾದಿ ಮಾಡಿಕೊಂಡು ಕ್ಯೂಟ್ ಆಗಿರುತ್ತಿದ್ದುದೇ ಹೆಚ್ಚು. ಇನ್ನು ವೇದಗಳಲ್ಲಿ ಅಥರ್ವವೇದವೊಂದು ಪ್ರೇತಭಾದೆ ನಿವಾರಣೋಪಾಯಗಳನ್ನು ಕುರಿತು ಹೇಳುತ್ತದೆ. ಆದರೆ ಇದು ಕೂಡಾ ಇವತ್ತಿನ ಸಿನೆಮಾಗಳು ಮತ್ತು ಈ ಕಾಲದ ‘ಜನಪ್ರಿಯ ಧಾರ್ಮಿಕ ಸಾಹಿತ್ಯ’ಗಳು ಹೇಳುವಂತೆ ‘ದೆವ್ವದ ಕಾಟ’ ಕುರಿತು ಚಕಾರವೆತ್ತಿಲ್ಲ. ಪ್ರೇತ ಜನಪ್ರಿಯ ನಂಬಿಕೆಯ ಭೂತ ಅಥವಾ ದೆವ್ವಕ್ಕಿಂತ ಸಂಪೂರ್ಣ ಭಿನ್ನ. 

ಸೆಮೆಟಿಕ್ ಧರ್ಮಗಳು ಹೇಳುವ ಸೈತಾನ ಮತ್ತು ಡೆವಿಲ್ ಎರಡೂ ದೆವ್ವಗಳಲ್ಲ. ಇಸ್ಲಾಮಿನ ಇಬ್ಲಿಸ್ ಕೂಡಾ ದೆವ್ವವಲ್ಲ. ಅವೆಲ್ಲ ನಕಾರಾತ್ಮಕತೆಯನ್ನು ಪ್ರಚೋದಿಸುವ ದುಷ್ಟಶಕ್ತಿಗಳು ಮತ್ತು ತುಂಟತನದಿಂದ ಜನರ ದಾರಿತಪ್ಪಿಸುವ ಅಸ್ತಿತ್ವಗಳು. ಆದರೆ, ಕಾಲಾನಂತರದಲ್ಲಿ ಸತ್ತ ಮನುಷ್ಯರು ದೆವ್ವಗಳಾಗಿ ಕಾಟ ನೀಡುತ್ತಾರೆಂಬ ಕಲ್ಪನೆ ಬೆಳೆದು, ಮುಂದಿನ ದಿನಗಳಲ್ಲಿ ಈ ದೆವ್ವಗಳನ್ನು ಉಚ್ಚಾಟಿಸುವ ತಾಂತ್ರಿಕರು ಎಲ್ಲ ಧರ್ಮಗಳಲ್ಲೂ ಹುಟ್ಟಿಕೊಂಡಿದ್ದು ದುರಂತ. ಮಧ್ಯಕಾಲೀನ ಸಮಾಜದಲ್ಲಿ ಕ್ರಾಂತಿಕಾರಿ ಸಂತರ ಜೊತೆಗೇ ಸೋಗಿನ ಸಂತವೇಷಧಾರಿಗಳೂ ಹುಟ್ಟಿಕೊಂಡರು. ಎಲ್ಲ ಧರ್ಮಗಳಲ್ಲೂ ಇದು ಘಟಿಸಿತು. ಅವರ ಜನಪ್ರಿಯತೆಗೆ ಹೆಚ್ಚು ಹೆಚ್ಚು ಪವಾಡಗಳ ಸೃಷ್ಟಿ ಅಗತ್ಯವಿತ್ತು. ಭೂತೋಚ್ಚಾಟನೆ ಅವರ ಮುಖ್ಯ ದಂಧೆಯಾಯಿತು. ಭೂತಗಳನ್ನು ಹೆಚ್ಚು ಕ್ರೂರ – ವಿಕೃತ – ಭಯಾನಕವಾಗಿ ಚಿತ್ರಿಸಿದಷ್ಟೂ ಅವರ ಮಾರುಕಟ್ಟೆ ಹೆಚ್ಚುತ್ತಿತ್ತು! ನಾವಿಂದು ಸಿನೆಮಾ – ಸೀರಿಯಲ್ಲುಗಳಲ್ಲಿ ನೋಡುವ ಅಕರಾಳ ವಿಕರಾಳ ಭೂತಗಳು ಹುಟ್ಟಿಕೊಂಡಿದ್ದು ಹೀಗೆ. 

ನಮ್ಮಲ್ಲಿ ಕೆಲವರು ‘ನಾನು ಭೂತ ನೋಡಿದೆ’. ‘ಭೂತ ನನ್ನನ್ನು ಕಾಡುತ್ತಿದೆ’ ಎಂದು ಹೇಳುತ್ತಾರೆ. ಅಥವಾ ತಮಗೇ ಅರಿವಿಲ್ಲದಂತೆ ‘ದೆವ್ವ ಹಿಡಿದಂತೆ’ ಆಡುತ್ತಾರೆ. ನಕಾರಾತ್ಮಕ ಚಿಂತನೆ ಅಧಿಕವಾದಾಗ, ಮನಸ್ಸು ದುರ್ಬಲವಾದಾಗ, ನಾವು ಪಲಾಯನವಾದಿಗಳಾದಾಗ, ನಮ್ಮ ಮೇಲೆ ನಾವೇ ನಿಯಂತ್ರಣ ಕಳೆದುಕೊಂಡಾಗ, ಖಿನ್ನತೆಯಿಂದ, ಭ್ರಮಾಧೀನತೆಯಿಂದ, ಪಾಪಪ್ರಜ್ಞೆಯಿಂದ – ಇಂಥಾ ಹಲವು ಕಾರಣಗಳಿಂದ ನಾವು ದೆವ್ವಗಳನ್ನು ಕಲ್ಪಿಸಿಕೊಂಡು ನಮ್ಮ ಮೇಲೆ ಆವಾಹಿಸಿಕೊಳ್ಳುತ್ತೇವೆ. ಇದು ನಮ್ಮ ಮೇಲೆ ನಾವೇ ಹೇರಿಕೊಳ್ಳುವ ನಕಾರಾತ್ಮಕತೆ ಹೊರತು ಮತ್ತೇನಲ್ಲ. 99% ಭೂತಬಾಧೆ ಕಥನಗಳ ಹಿಂದೆ ಇಂಥಾ ಮಾನಸಿಕ ಸಮಸ್ಯೆಯ ಕಾರಣಗಳೇ ಪತ್ತೆಯಾಗಿವೆ. ಇದನ್ನು ಗಂಭಿರವಾಗಿ ಪರಿಗಣಿಸಿ ಮನಶ್ಶಾಸ್ತ್ರಜ್ಞರಿಂದ ಮದ್ದು ಕೊಡಿಸುವ ಅಗತ್ಯವಿರುತ್ತದೆ,

ನಮ್ಮ ಅನುಭವಕ್ಕೆ ಬರದೆಹೋದುದನ್ನು ಹೇಗೆ ಸಂಪೂರ್ಣ ಒಪ್ಪಲಾಗದೋ ಹಾಗೇ ಸಂಪೂರ್ಣ ನಿರಾಕರಿಸಲೂ ಆಗದು. ಆದ್ದರಿಂದ, 1% ದೆವ್ವದ ಸಮಸ್ಯೆ ಇತ್ತೆಂದೇ ಭಾವಿಸಿದರೂ ಅವು ಸಿನೆಮಾ ದೆವ್ವಗಳಂತೆ ಇರುವುದಿಲ್ಲ ಮತ್ತು ಅವಕ್ಕೆ ಸಿನೆಮಾದಲ್ಲಿ ತೋರಿಸುವಂಥ ವಿಪರೀತ ಶಕ್ತಿ ಖಂಡಿತಾ ಇರುವುದಿಲ್ಲ ಅನ್ನುವುದನ್ನು ಅರಿಯಬೇಕು. ಅದು ಕೇವಲ ಅಸ್ತಿತ್ವ. ದೇಹವಿಲ್ಲದ ಕೇವಲ ಆಲೋಚನೆಯ ರೂಪದಲ್ಲಿರುವ ಚೈತನ್ಯ. ಇದನ್ನು ನೆನಪಿಟ್ಟುಕೊಂಡಿರಬೇಕು. 

ಹಾಗೊಮ್ಮೆ ಒಂದು ದೆವ್ವ ಇದ್ದರೂ ಅದು ಹೆಚ್ಚೆಂದರೆ ನಮ್ಮ ಚಿಂತನೆಯ ಮೇಲೆ ಪ್ರಭಾವ ಬೀರಬಹುದು. ಅದು ಚೈತನ್ಯರೂಪದಲ್ಲಿರುತ್ತದೆಯಾದ್ದರಿಂದ, ನಮ್ಮ ಚೇತನದ ಮೇಲೆ ತನ್ನನ್ನು ಹೇರಿಕೊಳ್ಳಬಹುದು. ಇದರಿಂದ ಮನುಷ್ಯರ ನಡೆನುಡಿಯಲ್ಲಿ ವ್ಯತ್ಯಾಸವಾಗಬಹುದು. ತನ್ನ ನೈಜ ವರ್ತನೆ ಇದಲ್ಲವೆಂದು ಅಂತಃಪ್ರಜ್ಞೆಗೆ ಅರಿವಿದ್ದೇ ಇರುತ್ತದೆ. ಆದ್ದರಿಂದ ಮನಸ್ಸು ಒತ್ತಡಕ್ಕೆ ಒಳಗಾಗಿ, ಅದರ ಪರಿಣಾಮ ದೇಹದ ಮೇಲಾಗಬಹುದು. ಇದರಿಂದಾಗಿ ಕಾಯಿಲೆಗಳು ಉಲ್ಬಣಿಸಬಹುದು. ಮೆದುಳು ಘಾಸಿಗೊಳ್ಳಬಹುದು. “ಭೂತ ಮೆಟ್ಟಿ ರಕ್ತ ಕಾರಿಕೊಂಡು ಸತ್ತರು” ಅಂತ ಯಾರಾದರೂ ಅಂದರೆ, ಅದಕ್ಕೆ ಆ ಸತ್ತ ಮನುಷ್ಯರ ಮನೋದೌರ್ಬಲ್ಯ ಮತ್ತು ಧಾರಣ ಸಾಮರ್ಥ್ಯದ ಕೊರತೆ ಕಾರಣವೇ ಹೊರತು ಮೆಟ್ಟಿಕೊಂಡ ಭೂತವಲ್ಲ! ಈ ಕಾರಣದಿಂದಲೇ ಅದೇ ಭೂತ ಮತ್ತೊಬ್ಬರು ಸ್ಥೈರ್ಯವಂತರ ಮೇಲೆ ಆವಾಹನೆಗೊಂಡರೆ ಅವರಿಗೆ ಯಾವ ಸಮಸ್ಯೆಯೂ ಆಗುವುದಿಲ್ಲ. ಹಾಗೆಯೇ ದೇವರ ತಾಯಿತ ಇತ್ಯಾದಿ ಕಟ್ಟಿಕೊಳ್ಳುವ ಶ್ರದ್ಧಾವಂತರಿಗೆ ಶ್ರದ್ಧೆ ನೀಡುವ ಮನೋಬಲವೇ ಭೂತದ ಮನಸ್ಥಿತಿಯನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ. ಈ ಎಲ್ಲ ಸಂದರ್ಭದಲ್ಲೂ ಮುಖ್ಯವಾಗುವುದು ನಮ್ಮ ಮನಸ್ಸೇ. ಹೀಗಾಗಿ, ಭೂತ ಎಲ್ಲಿದೆ? ಎಂದು ಯಾರಾದರೂ ಕೇಳಿದರೆ ‘ನಮ್ಮ ನಮ್ಮ ಮನಸ್ಸಿನಲ್ಲಿ’ ಎಂದು ಧಾರಾಳವಾಗಿ ಹೇಳಬಹುದು.

ಇಷ್ಟಕ್ಕೂ ನಾವು ಮಾಡಬೇಕಾದ ಸಕಾರಾತ್ಮಕ ಚಿಂತನೆಗಳು ಸಾಕಷ್ಟಿವೆ. ದಿನಕ್ಕೆ ಅರ್ಧ ಗಂಟೆ ದೆವ್ವದ ಕುರಿತು ಯೋಚಿಸುವ ಬದಲು ಹತ್ತು ನಿಮಿಷ ಪರಮ ಅಸ್ತಿತ್ವವನ್ನು ಕೃತಜ್ಞತೆಯಿಂದ ನೆನೆದರೂ ಸಾಕು. ಯಾವ ದುಷ್ಟ ಶಕ್ತಿ ಅಥವಾ ಚಿಂತನೆಯೂ ನಮ್ಮ ಸುತ್ತ ಸುಳಿಯದು.

ಆದ್ದರಿಂದ, ಭೂತಪ್ರೇತಗಳ ಕಾಟದಿಂದ ನಿಮಗೆ ನಿಜವಾಗಿಯೂ ಮುಕ್ತಿ ಬೇಕಿದ್ದರೆ; ಮೊದಲು ಅವುಗಳ ಕುರಿತು ಆಲೋಚಿಸುವುದನ್ನು ಬಿಟ್ಟುಬಿಡಿ. ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಿ. ಭ್ರಮಾರೋಗವಿದೆಯೇ, ಯಾವುದಾದರೂ ಮಾನಸಿಕ ಸಮಸ್ಯೆ ಕಾಡುತ್ತಿದೆಯೇ ಎಂದು ಪರೀಕ್ಷೆ ಮಾಡಿಸಿಕೊಳ್ಳಿ. ಮಾನಸಿಕ ಆರೋಗ್ಯ ದೇಹಾರೋಗ್ಯದಷ್ಟೇ ಮುಖ್ಯ. ಮತ್ತು, ಮನಶ್ಶಾಸ್ತ್ರಜ್ಞರ ಬಳಿ ಹೋಗುವುದು ಅವಮಾನವಲ್ಲ. ದೇಹಕ್ಕೆ ಫಿಸಿಶಿಯನ್ ಇದ್ದಂತೆ ಮನಸಿಗೆ ಸೈಕಿಯಾಟ್ರಿಸ್ಟ್. ಆತ್ಮಚಿಕಿತ್ಸೆಗೆ ಆಧ್ಯಾತ್ಮಿಕ ಗುರುಗಳ ಬಳಿ ಹೋಗುವುದಿಲ್ಲವೆ? ಹಾಗೆಯೇ ಇದೂ.

ನೀವು ಎಷ್ಟು ಹೆಚ್ಚು ಭಗವಂತನೆಡೆ ಮುಖಮಾಡುತ್ತೀರೋ ಅಷ್ಟು ಭೂತಪ್ರೇತಗಳ ಚಿಂತೆ ನಿಮ್ಮಿಂದ ದೂರ ಓಡುತ್ತದೆ. ಪ್ರಯತ್ನಿಸಿ ನೋಡಿ. ಜೊತೆಗೆ, ಹಾರರ್ ಸಿನೆಮಾ, ಭೂತದ ಸೀರಿಯಲ್ಲುಗಳನ್ನು ನೋಡುವುದು ಬಿಟ್ಟುಬಿಡಿ!

3 Comments

  1. ಸರ್ ವೈಜ್ಞಾನಿಕವಾಗಿ ಮಾತಾಡಬೇಡಿ, ದೇವರೇ ಎಲ್ಲಿಯ ದೆವ್ವ ಹೇಗೆ ಮೈ ಮೇಲೆ ಬಂದಿದೆ ಅಂತ ಬಾಯಿ ಬಿಟ್ಟು ಹೇಳುತ್ತವೆ, ನಿಮಗೆ ಯಾವುದು ನೆರೆವಾಗಿ ಅನುಭವಕ್ಕೆ ಅಥವಾ ನೋಡಿಲ್ಲ ಅಂದರೆ ಯಾಕ್ರೀ ಈ ತರ ಬರೆಯುತ್ತೀರಾ

  2. ಮದುವೆ ಸಂದರ್ಭಲ್ಲಿ ದೇವರು ತರುವಾಗ . ದೇವರೂ ಬಂದಂತೆ. ಇರುತ್ತಾರೆ ಇದಾಕೆ ಕಾರಣ ವೆನು

Leave a Reply