ಮಹಾನಿರ್ವಾಣತಂತ್ರ : ಬ್ರಹ್ಮಸ್ತೋತ್ರದಿಂದ ಬೆಳಗಿನ ಮೂರು ಪ್ರಾರ್ಥನೆಗಳು

ಆತ್ಯಂತಿಕ ಸತ್ಯವೂ ಸದ್ವಸ್ತುವೂ ವಿಶ್ವರೂಪಿಯೂ ಪರಮಗತಿಯೂ ಆಗಿರುವ ನಿರ್ಗುಣ ಪರಬ್ರಹ್ಮವನ್ನು ಸ್ತುತಿಸುವ ಮೂರು ಪ್ರಾರ್ಥನೆಗಳು ಇಲ್ಲಿವೆ.

ಓಂ ನಮಸ್ತೇ ಸತೇ ಸರ್ವಲೋಕಾಶ್ರಯಾಯ
ನಮಸ್ತೇ ಚಿತೇ ವಿಶ್ವರೂಪಾತ್ಮಕಾಯ |
ನಮೋSದ್ವೈತತತ್ತ್ವಾಯ ಮುಕ್ತಿಪ್ರದಾಯ
ನಮೋ ಬ್ರಹ್ಮಣೇ ವ್ಯಾಪಿನೇ ನಿರ್ಗುಣಾಯ ||

ಸರ್ವಲೋಕಗಳಿಗೆ ಆಶ್ರಯವಾದ ಸದ್ವಸ್ತುವಿಗೆ ನಮಸ್ಕಾರ; ವಿಶ್ವರೂಪಾತ್ಮಕವಾದ ಚಿದ್ವಸ್ತುವಿಗೆ ನಮಸ್ಕಾರ; ಮುಕ್ತಿ ನೀಡುವ ಅದ್ವೈತ ತತ್ತ್ವಕ್ಕೆ ನಮಸ್ಕಾರ; ಸರ್ವವ್ಯಾಪಿಯಾದ ನಿರ್ಗುಣ ಬ್ರಹ್ಮನೇ, ನಿನಗೆ ನಮಸ್ಕಾರ.

ತ್ವಮೇಕಂ ಶರಣ್ಯಂ ತ್ವಮೇಕಂ ವರೇಣ್ಯಂ
ತ್ವಮೇಕಂ ಜಗತ್ಕಾರಣಂ ವಿಶ್ವರೂಪಮ್ |
ತ್ವಮೇಕಂ ಜಗತ್ಕರ್ತೃಪಾತೃಪ್ರಹರ್ತೃ
ತ್ವಮೇಕಂ ಪರಂ ನಿಷ್ಕಲಂ ನಿರ್ವಿಕಲ್ಪಮ್ ||

ಶರಣು ಬಂದವರಿಗೆ ನೀನೇ ಅಂತಿಮ ಆಶ್ರಯ; ಸರ್ವಶ್ರೇಷ್ಠನೂ ವಿಶ್ವರೂಪನೂ ಆದ ನೀನು ಜಗತ್ತಿನ ಸೃಷ್ಟಿಗೆ ಕಾರಣನಾಗಿರುವೆ. ಸ್ಥಿತಿಲಯಗಳೂ ನಿನ್ನಿಂದಲೇ. ನೀನು ಎಲ್ಲಕ್ಕಿಂತ ಮಿಗಿಲಾದವನು. ನೀನು ತಿಳಿಯಲ್ಪಡಬೇಕಾದವನು, ತಿಳಿಯಬೇಕಾದವನು – ಎಂದೆಲ್ಲ ಪ್ರತ್ಯೇಕಿಸಿ ನೋಡಲಾಗದವನು.
ನಿನಗೆ ನಮಸ್ಕಾರ.

ಭಯಾನಾಂ ಭಯಂ ಭೀಷಣಂ ಭೀಷಣಾನಾಂ
ಗತಿಃ ಪ್ರಾಣಿನಾಂ ಪಾವನಂ ಪಾವನಾನಾಮ್ |
ಮಹೋಚ್ಚೈಃ ಪದಾನಾಂ ನಿಯಂತೃ ತ್ವಮೇಕಂ
ಪರೇಷಾಂ ಪರಂ ರಕ್ಷಣಂ ರಕ್ಷಣಾನಾಮ್ ||

ಭಯಕ್ಕೆ ಭಯಂಕರನು ನೀನು. ಭೀಷಣಕ್ಕೆ ಭೀಷಣಕಾರಿಯು. ಪ್ರಾಣಿಗಳ ಪರಮಗತಿ ನೀನೇ, ಪಾವನಗೊಳಿಸುವವನೂ ನೀನೇ. ಎಲ್ಲವನ್ನೂ ಆಳುವ ಪರಮೋಚ್ಚ ಒಡೆಯ ನೀನೇ. ಉತ್ತಮೋತ್ತಮನಾದ ರಕ್ಷಕನೂ ನೀನೇ.
ನಿನಗೆ ನಮಸ್ಕಾರ.

Leave a Reply