ಅಲಕ್ಷ್ಮಿಯನ್ನು ದೂರವಿಡುವ ಪ್ರಾರ್ಥನಾ ಶ್ಲೋಕ; ಶ್ರೀಸೂಕ್ತದಿಂದ…

ಮೌಢ್ಯ, ಅಜ್ಞಾನ, ಅಹಂಕಾರಾದಿ ವಿಕೃತಿಗಳೇ ಅಂತರಂಗದ ದಾರಿದ್ರ್ಯ. ತೃಪ್ತಿಯ ಕೊರತೆಯೇ ಬಹಿರಂಗದ ದಾರಿದ್ರ್ಯ. ಇವುಗಳ ನಿವಾರಣೆಗೆ ಲಕ್ಷ್ಮೀ ದೇವಿಯನ್ನು ಪ್ರಾರ್ಥಿಸುವ ಶ್ಲೋಕ ಮತ್ತು ಅರ್ಥ ಇಲ್ಲಿದೆ…

ಋಗ್ವೇದದ ಐದನೇ ಮಂಡಲದ ಕಡೆಯಲ್ಲಿ ಹಾಗೂ ಆರನೇ ಮಂಡಲದ ಆದಿಭಾಗದಲ್ಲಿ ಶ್ರೀಸೂಕ್ತವನ್ನು ಕಾಣಬಹುದು. ಈ ಮಂಡಲವನ್ನು ಆತ್ರೇಯ ಮಂಡಲವೆಂದೂ ಕರೆಯಲಾಗುವುದು. ಈ ಸೂಕ್ತದಲ್ಲಿ ಇಪ್ಪತ್ತೊಂಭತ್ತು ಮಂತ್ರಗಳಿರುವುದು. ಶ್ರೀಸೂಕ್ತದಲ್ಲಿ ಹದಿನೈದು ಋಗ್ ಮಂತ್ರಗಳಿರುವುದರಿಂದ ಇದನ್ನು “ಪಂಚಾದಶಾರ್ಚ” ಎಂದೂ ಕರೆಯಲಾಗುವುದು. 

ಶ್ರೀ ಎಂಬ ಪದವು ” ಶ್ರ್” ಧಾತುವಿನಿಂದ ಉಗಮವಾಗಿದೆ. ಇದರ ಅರ್ಥವೆಂದರೆ “ಆಶ್ರಯವನ್ನು ಪಡೆಯುವುದು” ಅಥವಾ “ಸೇವಿಸುವುದು”. ಈ ಧಾತು ಅಕ್ಷರಕ್ಕೆ ” ಇಙ್” ಉಪಸರ್ಗವನ್ನು ಸೇರಿಸಿದಾಗ ನಮಗೆ ಸಿಗುವುದೇ “ಶ್ರೀ” ಪದವು. 

“ಶ್ರೀಯತೆ ಸರ್ವೈಃ ಇತಿ ಶ್ರೀಃ” – ಅಂದರೆ ಏಲ್ಲ ಜೀವಿಗಳಿಗೂ ಆಶ್ರಯ ನೀಡುವ ವಿಶ್ವಶಕ್ತಿಯೇ ಶ್ರೀ. ಪ್ರತಿಯೊಂದು ಜೀವಿಯಲ್ಲೂ ಶ್ರೀ ಯು ಉಸಿರಾಗಿ ಮತ್ತು ಭೌದ್ಧಿಕವಾಗಿ ಮಹತ್ತರವಾದ ಸಂಪತ್ತಾಗಿ ನೆಲೆಸಿರುವಳು. 

ಮಾರ್ಕಂಡೇಯ ಪುರಾಣದಲ್ಲಿ – “ಯಾ ದೇವೀ ಸರ್ವ ಭೂತೇಷು ಲಕ್ಷ್ಮಿ ರೂಪೇಣ ಸಂಸ್ಥಿತಾ ” ಎಂಬುದಾಗಿ ವರ್ಣಿಸಲಾಗಿದೆ. 

ದಕ್ಷಿಣಾಮೂರ್ತಿ ಸಂಹಿತೆಯಲ್ಲಿ ವಿವರಿಸಿರುವಂತೆ – “ಯೋಶಿತ್ ಪುರುಷ ರೂಪೇಣ ಸ್ಫುರಂತೀ ವಿಶ್ವಮಾತೃಕಾ”. ವಿಶ್ವದ ಮೂಲ ಕಾರಣವಾದ ಈ ಮಹಾನ್ ತತ್ವವು ಸ್ತ್ರೀ-ಪುರುಷವೆರಡೂ ರೂಪದಲ್ಲೂ ಪ್ರಕಾಶಿಸುತ್ತದೆ. ಹಾಗಾಗಿ ಶ್ರೀ ತತ್ವವು ಪುರುಷ-ಪ್ರಕೃತಿಯೆರಡನ್ನೂ ಪ್ರತಿನಿಧಿಸುತ್ತದೆ. 

ಇಂಥಾ ಶ್ರೀ ಅಥವಾ ಲಕ್ಷ್ಮಿಯು ಅಂತರಂಗ – ಬಹಿರಂಗಗಳೆರಡರ ದಾರಿದ್ರ್ಯವನ್ನೂ ನಿವಾರಿಸುತ್ತಾಳೆ. ಮೌಢ್ಯ, ಅಜ್ಞಾನ, ಅಹಂಕಾರಾದಿ ವಿಕೃತಿಗಳೇ ಅಂತರಂಗದ ದಾರಿದ್ರ್ಯ. ತೃಪ್ತಿಯ ಕೊರತೆಯೇ ಬಹಿರಂಗದ ದಾರಿದ್ರ್ಯ. ಇವುಗಳ ನಿವಾರಣೆಗೆ ಲಕ್ಷ್ಮೀ ದೇವಿಯನ್ನು ಪ್ರಾರ್ಥಿಸುವ ಶ್ಲೋಕ ಮತ್ತು ಅರ್ಥ ಹೀಗಿದೆ:

ಆದಿತ್ಯವರ್ಣೇ ತಪಸೋ‌sಧಿಜಾತೋ ವನಸ್ಪತಿಸ್ತವ ವೃಕ್ಷೋ‌ಥ ಬಿಲ್ವಃ | ತಸ್ಯ ಫಲಾನಿ ತಪಸಾನುದಂತು ಮಾಯಾಂತರಾಯಾಶ್ಚ ಬಾಹ್ಯಾ ಅಲಕ್ಷ್ಮೀಃ || ಶ್ರೀಸೂಕ್ತ. 6||

ತಾತ್ಪರ್ಯ : ಸೂರ್ಯನಕಾಂತಿಯಂತೆ ಕಾಂತಿಯುಳ್ಳವಳೇ ! ನಿನ್ನ ನಿಯಮದ ಕಾರಣದಿಂದ ಬಿಲ್ವವೃಕ್ಷವೆಂಬ ವನಸ್ಪತಿಯು ಪ್ರಾದುರ್ಭೂತವಾಯಿತು. ನಿನ್ನ ಹಸ್ತದಿಂದಲೇ ಬಿಲ್ವ ವೃಕ್ಷವು ಉಂಟಾಯಿತು (ವಾಮನ ಪುರಾಣದಲ್ಲಿ ಈ ಕಥನವಿದೆ). ಆ ಬಿಲ್ವವೃಕ್ಷದ ಫಲಗಳು ನಿನ್ನ ಅನುಗ್ರಹದಿಂದ ಅಂತರಂಗದ ಅಲಕ್ಷ್ಮಿಯನ್ನು (ಅಹಂಕಾರ , ವಿಷಯಾಸಕ್ತಿ , ಅಜ್ಞಾನ , ದುರಾಸೆ ಹಾಗೂ ಇತರ ದುಶ್ಚಟಗಳು ಅಂತರಂಗದ ಅಲಕ್ಷ್ಮಿಯರು) ಮತ್ತು ಬಾಹ್ಯ ಅಲಕ್ಷ್ಮಿಯನ್ನು (ಇಂದ್ರಿಯ ತೃಪ್ತಿಗಾಗಿ ನಡೆಸುವ ಪಾಪ ಕಾರ್ಯಗಳು , ಕೊಳಕುತನ , ಸೋಮಾರಿತನ , ವಿಲಾಸ ಭೋಗಾಸಕ್ತಿ, ಮೌಢ್ಯ, ಅಜ್ಞಾನಗಳು ಬಾಹ್ಯ ಅಲಕ್ಷ್ಮಿಯರು) ನನ್ನಿಂದ ದೂರವಿಡಲಿ.

ಕೇವಲ ಧನ ಸಂಪತ್ತು ಮನುಷ್ಯರಿಗೆ ಮರ್ಯಾದೆ ತಂದುಕೊಡುವುದಿಲ್ಲ. ಮನುಷ್ಯನ ಘನತೆ ಮತ್ತು ಜ್ಞಾನವೆಂಬ ಅಕ್ಷಯ ಸಂಪತ್ತುಗಳ ಇರುವಿಕೆ ಮನುಷ್ಯನಿಗೆ ಗೌರವ ನೀಡುತ್ತದೆ. ಆದ್ದರಿಂದ, ಲಕ್ಷ್ಮಿಯನ್ನು ಈ ಮೇಲಿನ ಶ್ಲೋಕದ ಮೂಲಕ, ಶ್ಲೋಕವನ್ನು ಭಾವಿಸಿ – ಪ್ರಾರ್ಥಿಸಿ. ಶ್ರದ್ಧೆ ಮತ್ತು ಸಮಾನ ಪ್ರಯತ್ನಗಳು ನಿಮ್ಮಿಂದ ಅಲಕ್ಷ್ಮಿಯನ್ನು ದೂರವಿಡುವುದು.

 

Leave a Reply