ಬಡತನ ನಿವಾರಿಸುವ ದಾರಿದ್ರ್ಯದಹನ ಶಿವಸ್ತೋತ್ರ : ನಿತ್ಯಪಾಠಗಳು

ದಾರಿದ್ರ್ಯವು ಭೌತಿಕ ಅಥವಾ ಸಂಪತ್ತಿಗೆ ಹಾಗೂ ಆಧ್ಯಾತ್ಮಿಕ ಬಡತನಕ್ಕೂ ಅನ್ವಯಿಸುತ್ತದೆ. ಮಹರ್ಷಿ ವಸಿಷ್ಠರ ‘ದಾರಿದ್ರ್ಯ ದಹನ ಶಿವ ಸ್ತೋತ್ರ’ವು ಈ  ಎಲ್ಲ ವಿಧದ ಬಡತನದ ದುಃಖಗಳನ್ನು ನಾಶಮಾಡೆಂದು ಮಹಾದೇವನಲ್ಲಿ ಬೇಡುವ ಪ್ರಾರ್ಥನೆಯಾಗಿದೆ.

ವಿಶ್ವೇಶ್ವರಾಯ ನರಕಾರ್ಣವ ತಾರಣಾಯ
ಕರ್ಣಾಮೃತಾಯ ಶಶಿಶೇಖರ ಧಾರಣಾಯ
ಕರ್ಪೂರಕಾಂತಿಧವಲಾಯ ಜಟಾಧರಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 1 ||
ತಾತ್ಪರ್ಯ :
ಯಾರು ಸಮಸ್ತ ವಿಶ್ವದ ಅಧಿಪತಿಯೋ, ಯಾರು ನಮ್ಮನ್ನು ನರಕ ಸದೃಶವಾದ ಸಂಸಾರ ಸಾಗರವನ್ನು ದಾಟಲು ಸಹಕರಿಸುತ್ತಾರೋ, ಯಾರ ಪರಮ ಪವಿತ್ರವಾದ ನಾಮವು ಕಿವಿಗೆ ಅಮೃತದಂತೆ ಆಪ್ಯಾಯಮಾನವನ್ನುಂಟು ಮಾಡುತ್ತದೋ,  ಯಾರು ಅರ್ಧ ಚಂದ್ರನನ್ನು ಒಡವೆಯಂತೆ ಧರಿಸಿರುವರೋ, ಯಾರ ದೇದೀಪ್ಯಮಾನವಾದ ಕರ್ಪೂರದ ದೀಪವು ಶುಭ್ರವಾದ ಬೆಳಕಿನಂತೆ ಬೆಳಗುತ್ತಿದೆಯೋ,  ಯಾರು ಬಾಚಿರದ ಹಾಗೂ ಕತ್ತರಿಸದೇ ಇರುವ ಕೂದಲನ್ನು ಧರಿಸಿರುವರೋ,  ಬಡತನದ ದುಃಖವನ್ನು ದಹಿಸುವ ಆ ಶಿವನಿಗೆ ನಾನು ವಂದಿಸುವೆ.

ಗೌರೀಪ್ರಿಯಾಯ ರಜನೀಶಕಲಾಧರಾಯ
ಕಾಲಾಂತಕಾಯ ಭುಜಗಾಧಿಪಕಂಕಣಾಯ
ಗಂಗಾಧರಾಯ ಗಜರಾಜವಿಮರ್ದನಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 2 ||
ತಾತ್ಪರ್ಯ :
ಯಾರನ್ನು ದೇವಿ ಪಾರ್ವತಿಯು ಆರಾಧಿಸುತ್ತಾಳೋ, ಯಾರು ರಾತ್ರೆಯ ಅಧಿದೇವತೆಯಾದ ಅರ್ಧಚಂದ್ರನನ್ನು ತನ್ನ ಶಿರದಲ್ಲಿ ಧರಿಸಿರುವನೋ, ಕಾಲ ಯಮನನ್ನೇ ನಾಶಪಡಿಸುವವನೋ, ಯಾರು ಸರ್ಪಗಳ ರಾಜನನ್ನೇ ತನ್ನ ತೋಳ್ಬಂದಿಯನ್ನಾಗಿ ಧರಿಸಿರುವನೋ, ಯಾರು ತನ್ನ ಶಿರದಲ್ಲಿ ಗಂಗೆಯನ್ನು ಇಟ್ಟುಕೊಂಡಿರುವನೋ,  ಯಾರು ಗಜರಾಜನನ್ನು ಸಂಹಾರಮಾಡಿದವನೋ, ಬಡತನದ ದುಃಖಗಳನ್ನು ಸುಟ್ಟುಬೂದಿಮಾಡುವ ಓ ಶಿವನೆ ! ನಿನಗೆ ನನ್ನ ಭಕ್ತಿಪೂರ್ವಕ ನಮನಗಳು.

ಭಕ್ತಿಪ್ರಿಯಾಯ ಭವರೋಗಭಯಾಪಹಾಯ
ಉಗ್ರಾಯ ದುರ್ಗಭವಸಾಗರತಾರಣಾಯ
ಜ್ಯೋತಿರ್ಮಯಾಯ ಪುನರುದ್ಭವವಾರಣಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 3 ||
ತಾತ್ಪರ್ಯ :
ಯಾರನ್ನು ಅವನ ಭಕ್ತರು ತೀವ್ರವಾಗಿ ಪ್ರೀತಿಸಲ್ಪಡುತ್ತಾನೋ,  ಮಾನವನ ಜೀವನದಲ್ಲಿನ ರೋಗ,  ರುಜಿನಗಳ ಭೀತಿಯನ್ನು ನಾಶಪಡಿಸುವನೋ, ಯಾರ ಇರುವಿಕೆಯೇ ದುರ್ಜನರ ಮನದಲ್ಲಿ ಭೀತಿ ಹುಟ್ಟಿಸುವುದೋ,  ದುರ್ಭರವಾದ ಸಂಸಾರ ಸಾಗರವನ್ನು ದಾಟಲು ಮಾರ್ಗದರ್ಶನವನ್ನು ನೀಡುವನೋ, ಯಾರು ಬೆಳಕಿನ ಮೂರ್ತಸ್ವರೂಪನೋ, ಯಾರು ತನ್ನ ದಿವ್ಯ ನಾಮಗಳನ್ನು ಪಠಿಸುವಾಗ ನಾಟ್ಯಗೈಯುತ್ತಾರೋ, ಬಡತನದ ಬೇಗೆಯ ದುಃಖಗಳನ್ನು ಸುಟ್ಟುಬೂದಿ ಮಾಡುವ, ಮಹೇಶ್ವರನಿಗೆ ನನ್ನ ಭಕ್ತಿಪೂರ್ವಕ ನಮನಗಳು.

ಚರ್ಮಾಂಬರಾಯ ಶವಭಸ್ಮವಿಲೇಪನಾಯ
ಭಾಲೇಕ್ಷಣಾಯ ಮಣಿಕುಂಡಲಮಂಡಿತಾಯ
ಮಂಜೀರಪಾದಯುಗಲಾಯ ಜಟಾಧರಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 4 ||
ತಾತ್ಪರ್ಯ :
ಯಾರ ವಸ್ತ್ರವು ಪ್ರಾಣಿಯ ಚರ್ಮದಿಂದಾಗಿರುವುದೋ, ಯಾರು ತನ್ನ ಶರೀರವನ್ನೆಲ್ಲಾ ಚಿತೆಯಲ್ಲಿ ಉರಿದು ಬೂದಿಯಾದ ಭಸ್ಮವನ್ನೇ ಲೇಪಿಸಿಕೊಳ್ಳುವನೋ, ಯಾರು ತನ್ನ ಕಾಲುಗಳಿಗೆ ಸುಮಧುರ ನಾದವನ್ನು ಉಂಟುಮಾಡುವ ಗೆಜ್ಜೆಯನ್ನು ಧರಿಸಿರುವನೋ, ಯಾರು ತನ್ನ ತಲೆಗೂದಲನ್ನು ಬಾಚದೇ ಕತ್ತರಿಸದೇ ಇಟ್ಟುಕೊಂಡಿರುವನೋ, ಬಡತನದ ದುಃಖಗಳನ್ನು ಕ್ಷಣಮಾತ್ರದಲ್ಲಿ ಸುಟ್ಟುಬೂದಿಮಾಡುವ ಹೇ ಶಂಕರನೇ ನಿನಗೆ ನನ್ನ ಪ್ರಣಾಮಗಳು.

ಪಂಚಾನನಾಯ ಫಣಿರಾಜವಿಭೂಷಣಾಯ
ಹೇಮಾಂಶುಕಾಯ ಭುವನತ್ರಯಮಂಡನಾಯ
ಆನಂದಭೂಮಿವರದಾಯ ತಮೋಹರಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 5 ||
ತಾತ್ಪರ್ಯ :
ಯಾರಿಗೆ ಐದು ಮುಖಗಳಿರುವುದೋ ಹಾಗೂ ಸರ್ಪರಾಜನನ್ನೇ ಆಭರಣವಾಗಿ ಧರಿಸಿರುವನೋ, ಯಾರು ದಿವ್ಯವಾದ ಬಂಗಾರದ ವಸ್ತ್ರವನ್ನು ಧರಿಸಿರುವನೋ, ಮೂರು ಲೋಕಗಳಲ್ಲೂ ಶೋಭಿಸಲ್ಪಟ್ಟವನೋ, ಭಕ್ತರಿಗೆ ಬೇಡಿದ ವರವನ್ನು ಕರುಣಿಸುವವನೋ, ಆನಂದಸಾಗರನೋ, ತಾಮಸ ಶಕ್ತಿಯನ್ನೇ ಮೂರ್ತೀಭವಿಸಿರುವ, ಬಡತನದ ಬೇಗೆಯನ್ನು ಸುಟ್ಟು ಬೂದಿಮಾಡುವ ಶಿವನಿಗೆ ನನ್ನ ನಮನಗಳು.

ಭಾನುಪ್ರಿಯಾಯ ದುರಿತಾರ್ಣವತಾರಣಾಯ
ಕಾಲಾಂತಕಾಯ ಕಮಲಾಸನ ಪೂಜಿತಾಯ
ನೇತ್ರತ್ರಯಾಯ ಶುಭಲಕ್ಷಣ ಲಕ್ಷಿತಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 6 ||
ತಾತ್ಪರ್ಯ :
ಯಾರು ಸೂರ್ಯದೇವನಿಗೆ ಅತ್ಯಂತ ಪ್ರೀತಿಪಾತ್ರನೋ, ಯಾರು ನಮಗೆ ಸಂಸಾರ ಸಾಗರವನ್ನು ಕ್ಷೇಮವಾಗಿ ದಾಟಲು ಸಹಾಯ ಮಾಡುತ್ತಾರೋ, ಯಾರು ಯಮಧರ್ಮ ರಾಜನನ್ನು ನಾಶಮಾಡಿದವನೋ, ಕಮಲ ಪುಷ್ಪದ ಸಿಂಹಾಸನದಲ್ಲಿ ವಿರಾಜಮಾನನಾಗಿರುವ ಬ್ರಹ್ಮನಿಂದ ಆರಾಧಿಸಲ್ಪಡುವವನನ್ನು, ಮತ್ತು ಯಾರಿಗೆ ಮೂರು ಕಣ್ಣುಗಳಿದ್ದು, ಸಮಸ್ತ ಶುಭಲಕ್ಷಣಗಳನ್ನು ತೋರುವ, ಬಡತನದ ದುಃಖಗಳನ್ನು ಕ್ಷಣಾರ್ಧದಲ್ಲಿ ಸುಟ್ಟುಬೂದಿ ಮಾಡುವ ಆ ಶಿವನಿಗೆ ನನ್ನ ಭಕ್ತಿಪೂರ್ವಕ ನಮನಗಳು.

ರಾಮಪ್ರಿಯಾಯ ರಘುನಾಥವರಪ್ರದಾಯ
ನಾಗಪ್ರಿಯಾಯ ನರಕಾರ್ಣವತಾರಣಾಯ
ಪುಣ್ಯಾಯ ಪುಣ್ಯಚರಿತಾಯ ಸುರಾರ್ಚಿತಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 7 ||
ತಾತ್ಪರ್ಯ :
ಯಾರು ವಿಷ್ಣುವಿನ ಅವತಾರವಾದ ಶ್ರೀ ರಾಮನಿಗೆ ಅತ್ಯಂತ ಪ್ರೀತಿಪಾತ್ರನೋ,  ಹಾಗೂ ರಘುವಂಶದ ಶ್ರೇಷ್ಟ ಚಕ್ರವರ್ತಿಯಾದ ಶ್ರೀ ರಾಮಚಂದ್ರನಿಗೆ ಅನೇಕ ವರಗಳನ್ನು ದಯಪಾಲಿಸಿರುವನೋ, ಸರ್ಪಗಳಿಗೆ ಅತ್ಯಂತ ಪ್ರೀತಿಪಾತ್ರನಾದವನೋ, ನರಕವನ್ನೇ ನಾಶಪಡಿಸಿದವನೋ, ಪವಿತ್ರರಲ್ಲಿ ಪರಮ ಪವಿತ್ರನಾದವನೋ, ದೇವಾನುದೇವತೆಗಳಿಂದ ಪೂಜಿಸಲ್ಪಡುವವನೋ, ಭಕ್ತರ ಬಡತನದ ದುಃಖಗಳನ್ನು ಸುಟ್ಟು ಬೂದಿಮಾಡುವ ಆ ಶಂಕರ ಮಹಾದೇವನಿಗೆ ನನ್ನ ಭಕ್ತಿಪೂರ್ವಕ ನಮನಗಳು.

ಮುಕ್ತೀಶ್ವರಾಯ ಫಲದಾಯ ಗಣೇಶ್ವರಾಯ
ಗೀತಪ್ರಿಯಾಯ ವೃಷಭೇಶ್ವರವಾಹನಾಯ
ಮಾತಂಗಚರ್ಮವಸನಾಯ ಮಹೇಶ್ವರಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 8 ||
ತಾತ್ಪರ್ಯ :
ಸಂಪೂರ್ಣ ಭಕ್ತಿಯಿಂದ ಭಜಿಸಿದರೆ ಮುಕ್ತಿಯನ್ನು ದಯಪಾಲಿಸುವ ದೇವ ದೇವನೇ ಅವನು. ಗಣಗಳ ರಾಜ ಹಾಗೂ ಸಂಗೀತಪ್ರಿಯ ಮತ್ತು ಅವನ ವಾಹನವು ನಂದಿ, ಗಜಚರ್ಮವನ್ನೇ ಧರಿಸಿರುವವನು ನೀನು,  ಓ ಮಹೇಶ್ವರ ! ನೀನು ಕ್ಷಣ ಮಾತ್ರದಲ್ಲೇ ಬಡತನದ ದುಃಖಗಳನ್ನು ಸುಟ್ಟು ಬೂದಿಮಾಡುವೆ. ನಿನ್ನ ಪಾದಗಳಲ್ಲಿ ಶರಣಾಗಿ ಭಕ್ತಿಯಿಂದ ನಮಸ್ಕರಿಸುವೆ.

ಗೌರೀವಿಲಾಸ ಭುವನಾಯ ಮಹೋದಯಾಯ
ಪಂಚಾನನಾಯ ಶರಣಾಗತರಕ್ಷಕಾಯ
ಶರ್ವಾಯ ಸರ್ವಜಗತಾಮಧಿಪಾಯ ತಸ್ಮೈ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 9 ||
ತಾತ್ಪರ್ಯ :
ಭಕ್ತರ ದಾರಿದ್ರ್ಯವನ್ನು ದಹಿಸುವ, ಗೌರೀದೇವಿಯ ಅನುಗ್ರಹ ಪ್ರಪಂಚವಾದ, ದೇವ ದೇವನಾದ, ಸಿಂಹದಂತಿರುವ, ಸಮಸ್ತ ಕೋರಿಕೆಗ ಈಡೇರಿಸುವ ಕಲ್ಪವೃಕ್ಷವೇ ಆಗಿರುವ, ರಕ್ಷಣೆಯನ್ನು ಬೇಡುವವರಿಗೆ ಸರ್ವಸ್ವವೂ ಆಗಿರುವ, ಹಾಗೂ ಸಮಸ್ತ ವಿಶ್ವದ ಅಧಿಪತಿಯಾದ ಮಹಾದೇವನೆ ನಿನಗೆ ಭಕ್ತಿಪೂರ್ವಕ ನಮನಗಳು.

Leave a Reply