ನಾವೇಕೆ ಮೈಮೇಲೆ ಇರುವೆ ಬಿಟ್ಟುಕೊಳ್ಳಬೇಕು!? : ಅಧ್ಯಾತ್ಮ ಡೈರಿ

ಇಷ್ಟಕ್ಕೂ ಕ್ರಿಯೆ ಅವರವರ ಕರ್ಮ. ಪ್ರತಿಕ್ರಿಯೆ, ಅವರ ಕರ್ಮಕ್ಕೆ ನಾವು ಬಾಧ್ಯಸ್ಥರಾಗುವ ಮೈಮೇಲೆ ಇರುವೆ ಬಿಟ್ಟುಕೊಳ್ಳುವಂಥ ಕ್ರಿಯೆ. ನಾವೇಕೆ ಮತ್ಯಾರದೋ ಕರ್ಮದ ಫಲವುಣ್ಣಬೇಕು!? ~ ಅಲಾವಿಕಾ

ಪ್ರತಿಕ್ರಿಯೆ ನಮ್ಮ ಸಮಯವನ್ನು ಮಾತ್ರವಲ್ಲ, ಜೀವನವನ್ನೇ ಹಾಳು ಮಾಡುತ್ತದೆ. ಪ್ರತಿಕ್ರಿಯೆ ನಮಗೆ ರೂಢಿಯಾಗಿಬಿಟ್ಟರೆ, ಪ್ರತಿಯೊಂದಕ್ಕೂ ನಮ್ಮದೊಂದು ಪ್ರತಿಕ್ರಿಯೆ ಹೆಣೆದು ತೂರಿಬಿಡುವುದು ಒಂದು ಗೀಳಾಗಿಬಿಡುತ್ತದೆ. ಒಂದು ಹಂತದಲ್ಲಿ, ನಮ್ಮಲ್ಲಿ ಪ್ರತಿಕ್ರಿಯೆ ಮೂಡಲಿ, ಮೂಡದಿರಲಿ, ಹೇಗಾದರೊಂದು ಹುಟ್ಟಿಸಿಕೊಂಡಾದರೂ ಅದನ್ನು ದಾಖಲಿಸುವ ಚಾಳಿ ಅಂಟಿಕೊಳ್ಳುತ್ತದೆ. ಸಾಮಾಜಿಕ ಜಾಲತಾಣಗಳ ಈ ಕಾಲದಲ್ಲಿ, ನಾವು ಇದನ್ನು ಢಾಳಾಗಿ ನೋಡಬಹುದು. 

ಪ್ರತಿಕ್ರಿಯೆಗಳು ನಮ್ಮ ಸಮಯ ಹಾಳುಮಾಡುತ್ತವೆ ಹೊರತು ಅದರಿಂದೇನೂ ಪ್ರಯೋಜನವಿಲ್ಲ. ಹಾಗಾದರೆ, ನಾವು ನಮ್ಮತ್ತ ತೂರಿ ಬರುವ ಪ್ರಶ್ನೆಗಳಿಗೆ / ಆಕ್ಷೇಪಗಳಿಗೆ / ಮೆಚ್ಚುಗೆಗೆ ಪ್ರತಿಕ್ರಿಯಿಸೋದು ಬೇಡವೆ ಅಂದು ನೀವು ಕೇಳಬಹುದು. ಸಮಾಜದ ಆಗುಹೋಗುಗಳಿಗೆ ಸ್ಪಂದೀಸುವುದೂ ಬೇಡವೆ? ಅನ್ನಬಹುದು. 

ಖಂಡಿತಾ ಆ ಎಲ್ಲದರ ಜೊತೆ ವ್ಯವಹರಿಸುವುದು ನಮ್ಮ ಜವಾಬ್ದಾರಿ. ಆದರೆ, ಪ್ರತಿಕ್ರಿಯೆಯ ಮೂಲಕ ಅಲ್ಲ, ಪ್ರತಿಸ್ಪಂದನೆಯ ಮೂಲಕ. ಪ್ರತಿಕ್ರಿಯೆ ಕ್ರಿಯೆಗೆ ಕ್ರಿಯೆ ಹುಟ್ಟಿಸುವ ಸರಪಳಿಯಷ್ಟೆ. ನಿಮ್ಮ ಪ್ರತಿಕ್ರಿಯೆಗೆ ಮತ್ತೆ ಅತ್ತಲಿಂದ ಇನ್ನೊಂದು ಪ್ರತಿಕ್ರಿಯೆ ಮೂಡುತ್ತದೆ. ಅದರ ಬದಲು ನೀವು ಸ್ಪಂದಿಸಿದರೆ, ಅವುಗಳಿಗೆ ಪ್ರತಿಯಾಗಿ ಸ್ಪಂದಿಸಿದರೆ, ಅಲ್ಲೊಂದು ಕಾರ್ಯ ನಡೆಯುತ್ತದೆ. ಅಲ್ಲೊಂದು ಕೊನೆಪಕ್ಷ ನಿಮ್ಮ ಮಟ್ಟಿಗಿನ ಪರಿಹಾರ ಸಿಗುತ್ತದೆ. 

ಇಷ್ಟಕ್ಕೂ ಕ್ರಿಯೆ ಅವರವರ ಕರ್ಮ. ಪ್ರತಿಕ್ರಿಯೆ, ಅವರ ಕರ್ಮಕ್ಕೆ ನಾವು ಬಾಧ್ಯಸ್ಥರಾಗುವ ಮೈಮೇಲೆ ಇರುವೆ ಬಿಟ್ಟುಕೊಳ್ಳುವಂಥ ಕ್ರಿಯೆ. ನಾವೇಕೆ ಮತ್ಯಾರದೋ ಕರ್ಮದ ಫಲವುಣ್ಣಬೇಕು!? ನಾವೇಕೆ ನಮ್ಮ ಸಮಯ ವ್ಯರ್ಥ ಮಾಡಿಕೊಳ್ಳಬೇಕು? ಯಾರೋ ಎಷ್ಟೋ ದುಡಿಮೆ ಮಾಡಿದರೆಂದರೆ, ನಾವೇಕೆ ಅವರಿಗೆ ಸ್ಪರ್ಧಿಯಾಗಬೇಕು? ಯಾರೋ ಹೆಸರು ಮಾಡಿದರೆಂದರೆ ನಾವೇಕೆ ಪೈಪೋಟಿಗೆ ನಿಲ್ಲಬೇಕು? ಯಾರೋ ಒಂದು ತಪ್ಪು ಮಾಡಿದರೆಂದರೆ, “ಪಾಠ ಕಲಿಸುವ” ನೆಪದಲ್ಲಿ ನಾವೂ ತಪ್ಪು ಮಾಡಬೇಕು?

ಆದ್ದರಿಂದ, ಪ್ರತಿಕ್ರಿಯೆ ಬೇಡ, ಸಾಧ್ಯವಾದಷ್ಟೂ ಸ್ಪಂದಿಸಲು ಕಲಿಯಿರಿ. ಇದರಿಂದ ನಿಮ್ಮ ಜವಾಬ್ದಾರಿಯನ್ನೂ ನಡೆಸಿದಂತಾಗುತ್ತದೆ, ನಿಮ್ಮ ಬೆಳವಣಿಗೆಯ ದಾರಿಯೂ ತಪ್ಪಿದಂತಾಗುವುದಿಲ್ಲ. 

Leave a Reply