ಶ್ರೀರಾಮನಂಥವರು ಸಕರಾತ್ಮಕ ಹಾಗೂ ನಕಾರಾತ್ಮಕ – ಎರಡೂ ಬಗೆಯ ಪ್ರಚೋದನೆಗಳನ್ನು ಸಮಾನವಾಗಿ ಸ್ವೀಕರಿಸುತ್ತಾರೆ. ಇತರರು ನಮ್ಮ ಕೆಡುಕಿಗಾಗಿಯೇ ಪ್ರಚೋದನೆ ನೀಡಿದರೂ ಅದನ್ನು ಹೇಗೆ ಸ್ವಯಂ ಪ್ರಗತಿ ಮಾತ್ರವಲ್ಲದೆ, ಲೋಕೋದ್ಧಾರಕ್ಕೂ ಬಳಸಬಹುದು ಎನ್ನುವುದಕ್ಕೆ ರಾಮ ಉತ್ತಮ ಉದಾಹರಣೆ | ಆನಂದಪೂರ್ಣ
ಪ್ರತಿ ವ್ಯಕ್ತಿಯಲ್ಲೂ ಒಂದು ಸುಪ್ತ ಕೌಶಲ್ಯ ಇರುತ್ತದೆ. ಒಂದು ಕಾಂಕ್ಷೆ ಇರುತ್ತದೆ. ಅದು ಕೆಂಡದಂತೆ ಕಿಡಿಯಾಗಿ ನಮ್ಮ ಅಂತಃಪ್ರಜ್ಞೆಯಲ್ಲಿ ಹುದುಗಿರುತ್ತದೆ. ಕೆಲವರು ಆಗಾಗ ತಿದಿಯೂದುತ್ತಾ ಈ ಕಿಡಿಯನ್ನು ಜೀವಂತವಿಡುವ ಪ್ರಯತ್ನ ಮಾಡುತ್ತಾರೆ. ಕೆಲವರು ಈ ಗೋಜಿಗೆ ಹೋಗದೆ ಉಳಿಯುತ್ತಾರೆ. ಆದರೆ ಇನ್ನೂ ಒಂದು ಬಗೆಯ ಜನರಿದ್ದಾರೆ. ಅವರಿಗೆ ತಮ್ಮೊಳಗೊಂದು ಕಿಡಿ ಇದೆಯೆಂದೇ ಅರಿವಿರುವುದಿಲ್ಲ! ಈ ಕೊನೆಯ ಎರಡು ಬಗೆಯ ಜನರ ಕೌಶಲ್ಯ ಅಥವಾ ಸಾಮರ್ಥ್ಯವು ಬೂದಿಯ ಮುಸುಕನ್ನು ಹೊದ್ದು ತಣ್ಣಗಾಗಿಬಿಡುತ್ತದೆ. ಇಂಥವರು ಜೀವನದಲ್ಲಿ ಯಾವ ಸಾಧನೆಯನ್ನೂ ಮಾಡಲಾಗುವುದಿಲ್ಲ. ತಮ್ಮ ಸಾಮರ್ಥ್ಯದ ಬಗ್ಗೆ ತಿಳಿಯದಿರುವುದು ಬೇರೆ, ಸಾಮರ್ಥ್ಯದ ಬಗ್ಗೆಯೇ ಅಜ್ಞರಾಗಿರುವುದು ಬೇರೆ. ಈ ಮೌಢ್ಯತೆಯು ಮನುಷ್ಯರನ್ನು ಪ್ರಗತಿಯಲ್ಲಿ ನಡೆಸುವುದಿಲ್ಲ. ಯಾರು ಸ್ವಯಂ ಸಾಮರ್ಥ್ಯವನ್ನು ಅರಿಯುತ್ತಾರೋ ಅಥವಾ ಅ ನಿಟ್ಟಿನ ಪ್ರಯತ್ನವನ್ನಾದರೂ ಮಾಡುತ್ತಾರೋ ಅವರು ಯಶಸ್ಸಿನ ಪಥದಲ್ಲಿ ಮುನ್ನಡೆಯುತ್ತಾರೆ. ಜೀವನವನ್ನು ಸಾರ್ಥಕಗೊಳಿಸಿಕೊಳ್ಳುತ್ತಾರೆ.
ಹೊರಗಿನ ಪ್ರಚೋದನೆ
ಬಹಳ ಬಾರಿ ಒಳಗಿನ ಕಿಡಿಯನ್ನು ಹೊತ್ತುರಿದು ಜ್ವಲಿಸುವಂತೆ ಮಾಡಲಿಕ್ಕೆ ಹೊರಗಿನ ಸಹಾಯ ಬೇಕಾಗುತ್ತದೆ. ಎಲ್ಲರ ಪಾಲಿಗೂ ಇದು ಸಕಾರಾತ್ಮಕವಾಗಿಯೇ ಒದಗಿ ಬರುತ್ತದೆ ಎಂದೇನಿಲ್ಲ. ನಕಾರಾತ್ಮಕ ಪ್ರಚೋದನೆಗಳು ಒದಗಿಬರಬಹುದು. ತ್ರೇತಾಯುಗದ ರಾಮಚಂದ್ರನಿಗೆ ತನ್ನ ಬಿಲ್ಗಾರಿಕೆಯನ್ನು, ಶೌರ್ಯವನ್ನು ಪ್ರಕಟಪಡಿಸಿಕೊಳ್ಳಲು ಈ ಎರಡೂ ಬಗೆಯ ಪ್ರಚೋದನೆಗಳು ದೊರೆತಿದ್ದವು. ಮೊದಲ ಬಾರಿ ವಿಶ್ವಾಮಿತ್ರ ರಾಮಲಕ್ಷ್ಮಣರನ್ನು ರಾಕ್ಷಸರ ಸಂಹಾರಕ್ಕಾಗಿ ಕರೆದೊಯ್ದಿದ್ದ. ಆಗ ರಾಮನಿಗೆ ಇನ್ನೂ ಹದಿನಾಲ್ಕು ವರ್ಷ ವಯಸ್ಸು. ಈ ವಯಸ್ಸಿನಲ್ಲಿ, ತನ್ನ ಅಂತರ್ಗತ ಶಕ್ತಿಯನ್ನು ಅರಿಯದ ಹರೆಯದಲ್ಲಿ ರಾಮನನ್ನು ವಿಶ್ವಾಮಿತ್ರ ಹುರಿದುಂಬಿಸಿದ. ಆವರೆಗೆ ಶಾಸ್ತ್ರೋಕ್ತವಾಗಿ ಯುದ್ಧ ಕಲೆಯನ್ನೇನೋ ರಾಮ ಕಲಿತಿದ್ದ. ಆದರೆ ರಾಕ್ಷಸರನ್ನು ಉಚ್ಚಾಟಿಸುವ ಬಗ್ಗೆ ಅವನಲ್ಲಿ ವಿಶ್ವಾಸವಿರಲಿಲ್ಲ. ವಿಶ್ವಾಮಿತ್ರ ನೀಡಿದ ಪ್ರೋತ್ಸಾಹ ಅವನ ಶೌರ್ಯದ ಕಿಡಿಯನ್ನು ಹೊತ್ತಿಸಿ, ಸುಬಾಹುವನ್ನು ಸಂಹರಿಸುವಂತೆ ಮಾಡಿತು. ಮಾರೀಚನನ್ನು ಸಮುದ್ರಕ್ಕೆ ಎಸೆಯಿತು. ಇಲ್ಲಿ ರಾಮಲಕ್ಷ್ಮಣರಿಗೆ ದೊರೆತಿದ್ದು ಪ್ರತ್ಯಕ್ಷ ಪ್ರೇರಣೆ.
ರಾಮನಿಗೆ ಎರಡನೆ ಬಾರಿಯ ಸಾಹಸಕ್ಕೆ ದೊರೆತಿದ್ದು ಪರೋಕ್ಷ ಪ್ರಚೋದನೆ. ಮಂಥರೆಯ ದುರ್ಬೋಧನೆಯಿಂದ ಕೈಕೇಯಿ ದಶರಥನ ಬಳಿ ರಾಮನನ್ನು ಕಾಡಿಗಟ್ಟುವಂತೆ ಕೇಳುತ್ತಾಳೆ. ಅಲ್ಲಿಂದ ಮುಂದಿನದು ಇತಿಹಾಸ. ರಾಮಾಯಣ ಸಾಧ್ಯವಾದದ್ದೇ ಕೈಕೇಯಿ ರಾಮನನ್ನು ಪ್ರಚೋದಿಸಿದ್ದರಿಂದ. ಇದು ರಾಮನ ಅಂತಃಸತ್ವವನ್ನು ಬಡಿದೆಬ್ಬಿಸುತ್ತದೆ. ಆತನ ಪಿತೃಭಕ್ತಿ, ವಚನ ಪರಿಪಾಲನೆ, ಭ್ರಾತೃಪ್ರೇಮಗಳೆಲ್ಲವೂ ಪ್ರಕಟಗೊಳ್ಳುವುದು ಅನಂತರವೇ. ಅದಕ್ಕೆ ಸರಿಯಾಗಿ ರಾವಣನ ಕಾರಣದಿಂದ ಆತನ ಧರ್ಮ ಬುದ್ಧಿ ಹಾಗೂ ಶೌರ್ಯಗಳೂ ಪ್ರಕಟಗೊಳ್ಳುತ್ತವೆ. ವಾನರರ ಸಾಹಚರ್ಯ ಆತನ ಹೃದಯ ವೈಶಾಲ್ಯವನ್ನು ಪ್ರಕಟಗೊಳಿಸುತ್ತದೆ. ಕಾಲಕಾಲಕ್ಕೆ ಶ್ರೀರಾಮನಿಗೆ ಪ್ರೇರಣೆ – ಪ್ರಚೋದನೆಗಳು ದೊರಕುತ್ತ ಹೋಗಿ, `ಅವತಾರಿ ರಾಮ’ನ ಕಾರ್ಯ ಸಂಪನ್ನಗೊಳ್ಳುವಂತಾಗುತ್ತದೆ.
ಶ್ರೀರಾಮನಂಥವರು ಸಕರಾತ್ಮಕ ಹಾಗೂ ನಕಾರಾತ್ಮಕ – ಎರಡೂ ಬಗೆಯ ಪ್ರಚೋದನೆಗಳನ್ನು ಸಮಾನವಾಗಿ ಸ್ವೀಕರಿಸುತ್ತಾರೆ. ಇತರರು ನಮ್ಮ ಕೆಡುಕಿಗಾಗಿಯೇ ಪ್ರಚೋದನೆ ನೀಡಿದರೂ ಅದನ್ನು ಹೇಗೆ ಸ್ವಯಂ ಪ್ರಗತಿ ಮಾತ್ರವಲ್ಲದೆ, ಲೋಕೋದ್ಧಾರಕ್ಕೂ ಬಳಸಬಹುದು ಎನ್ನುವುದಕ್ಕೆ ರಾಮ ಉತ್ತಮ ಉದಾಹರಣೆ. ಇಂಥ ಅನೇಕಾನೇಕ ಆದರ್ಶ ಪುರುಷರು ನಮ್ಮ ಇತಿಹಾಸದಲ್ಲಿ ಆಗಿಹೋಗಿದ್ದಾರೆ.
ಒಳಿತು – ಕೆಡುಕು ನಮ್ಮೊಳಗೇ ಇವೆ
ಒಳಿತು ಕೆಡುಕುಗಳು, ಸಾಧ್ಯಾಸಾಧ್ಯತೆಗಳು ಹೊರಗೆಲ್ಲೋ ಇರುವುದಿಲ್ಲ. ಅವೆಲ್ಲವೂ ನಮ್ಮೊಳಗೇ ಇರುವಂಥವು. ಸೂಕ್ತ ಕನ್ನಡಿ ದೊರೆತಾಗ ನಮ್ಮನ್ನು ನಾವು ಪ್ರತಿಬಿಂಬಿಸಿಕೊಳ್ತೇವಷ್ಟೆ. ನಮ್ಮ ಬಂಧುಗಳು, ಸ್ನೇಹಿತರು, ಸುತ್ತಮುತ್ತಲಿನವರೇ ಆ ಕನ್ನಡಿಗಳು.
ನಾವು ಹನುಮಂತನಂತೆ ನಮ್ಮ ಸಾಮರ್ಥ್ಯವನ್ನು ಮರೆತು ಕೂತಿರುತ್ತೇವೆ. ಜಾಂಬವನಂತೆ ಯಾರಾದರೂ ಅದನ್ನು ನೆನಪಿಸಿಕೊಡಬೇಕಾಗುತ್ತದೆ. ಆದರೆ ಎಲ್ಲರೂ ಇಂತಹ ಪ್ರೇರಣೆಯಿಂದ ಜಾಗೃತರಾಗುವುದಿಲ್ಲ. ಸತ್ವ ಹಾಗೂ ರಜೋಗುಣಗಳನ್ನುಳ್ಳವರು ಎಚ್ಚರಗೊಳ್ಳುವಷ್ಟು ಸುಲಭವಾಗಿ ತಮೋಗುಣವುಳ್ಳವರು ಎಚ್ಚರಗೊಳ್ಳುವುದಿಲ್ಲ. ಏಕೆಂದರೆ ಅವರ ಸಾಮರ್ಥ್ಯದ ಮೇಲೆ ನಕಾರಾತ್ಮಕ ಚಿಂತನೆಗಳ ಪದರುಗಳು ಮುಸುಕಿ ಕುಳಿತಿರುತ್ತವೆ.
ಸಾತ್ವಿಕರ ಸಂಗತಿ ಹಾಗಲ್ಲ. ಅವರಲ್ಲಿ ನಕಾರಾತ್ಮಕ ಚಿಂತನೆ ಇರುವುದಿಲ್ಲ. ಜೊತೆಗೆ ಆತ್ಮ ಶ್ರದ್ಧೆ ಬಲವಾಗಿರುತ್ತದೆ. ಆದ್ದರಿಂದ ಅವರ ಆತ್ಮವೂ ಬಲು ಬೇಗ ಬೆಳಕಿನತ್ತ ಮುಖ ಮಾಡುತ್ತದೆ. ಬಹಳ ಬೇಗ ಸಂದರ್ಭವನ್ನೂ ಸಂಗತಿಯನ್ನೂ ಅರಿತು, ತನ್ನನ್ನು ತಾನು ಪ್ರಕಟಪಡಿಸಿಕೊಳ್ಳುತ್ತದೆ.
ಹನುಮಂತ ಪರಮ ಸಾತ್ವಿಕನಾಗಿದ್ದ. ಬಾಲ್ಯದ ತುಂಟತನಕ್ಕೆ ಪ್ರತಿಯಾಗಿ ಋಷಿಶಾಪ ಪಡೆದು ತನ್ನ ಅಸೀಮ ಬಲವನ್ನು, ಸಿದ್ಧಿಗಳನ್ನು ಮರೆತು ಕುಳಿತಿದ್ದ. ಸಾಗರೋಲ್ಲಂಘನದ ಅನಿವಾರ್ಯ ತುರ್ತಿನಲ್ಲಿ ಜಾಂಬವಂತ ಅವನಿಗೆ ಅದೆಲ್ಲವನ್ನೂ ನೆನಪಿಸಿ ಹುರಿದುಂಬಿಸಿದ. ಅದು ಮನಸ್ಸಿಗೆ ನಾಟಿ, ಕೂಡಲೇ ಹನುಮಂತ ಕಾರ್ಯ ಪ್ರವೃತ್ತನಾದ, ಸೀತಾ ದೇವಿಯ ಇರುವನ್ನು ಪತ್ತೆ ಹಚ್ಚಿ ಬಂದ.
ನಾವು ಕೂಡ ನಮ್ಮ ಪೂರ್ವ ಕರ್ಮಗಳು ಹಾಗೂ ಲೌಕಿಕ ವಾಂಛೆಗಳಿಂದಾಗಿ ನಮ್ಮತನವನ್ನು ಮರೆತಿದ್ದೇವೆ. ನಮ್ಮ ಗುರು ಹಿರಿಯರು ಅದನ್ನು ನೆನಪಿಸುತ್ತಲೇ ಇರುತ್ತಾರೆ. ಆದರೆ ನಾವು ಅತ್ತ ಕಿವಿಗೊಡುವುದಿಲ್ಲ. ನಮಗೆ ನಮ್ಮನ್ನು ದುರ್ಬಲರು ಎಂದುಕೊಂಡು ಮರುಕಪಡುವುದರಲ್ಲೆ ಖುಷಿಯಿದೆ.
ಪ್ರತಿಯೊಂದು ಜೀವಿಯೂ ಭಗವಂತನ ಅಂಗಭಾಗವೇ. ಎಲ್ಲ ಜೀವಿಯ ಅಂತಃಸತ್ವವೂ ಸಮಾನವಾಗಿ ವಿತರಿಸಲ್ಪಟ್ಟಿದೆ. ಅದನ್ನು ಕಂಡುಕೊಂಡರಷ್ಟೆ ಸಾಧನೆ ಸಾಧ್ಯ. ಸ್ವಯಂ ಪ್ರೇರಣೆಯಿಂದಲಾದರೂ ಸರಿ, ಬಾಹ್ಯ ಪ್ರಚೋದನೆಯಿಂದಲಾದರೂ ಸರಿ. ನಾವು ಅದನ್ನು ಹೇಗೆ ಸ್ವೀಕರಿಸಿ ಅನುಷ್ಠಾನಗೊಳಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಬದುಕಿನ ಸಾರ್ಥಕತೆ ನಿಂತಿರುತ್ತದೆ.
ತುಂಬಾ ಚೆನ್ನಾಗಿದೆ ಉದಾಹರಣೆ ಮತ್ತು ಪ್ರಚೋದನೆ ಬಗೆಗಿನ ಬರಹ. ಧನ್ಯವಾದಗಳು
ಧನ್ಯವಾದ