ಶ್ರವಣ ಪರಂಪರೆ : ಜ್ಞಾನ ಸಂವಹನದ ಅತ್ಯುನ್ನತ ವಿಧಾನ

ಜಗತ್ತಿನಲ್ಲಿ ಜ್ಞಾನದ ಸಂವಹನ ಆರಂಭವಾಗಿದ್ದೇ ಕೇಳುವಿಕೆಯಿಂದ. ಶ್ರವಣ, ಮನನ, ನಿಧಿಧ್ಯಾಸನ ಮೊದಲಾದ ಕಲಿಕೆಯ ವಿವಿಧ ಬಗೆಗಳಲ್ಲಿ ಶ್ರವಣಕ್ಕೆ ಮೊದಲ ಸ್ಥಾನ | ಸಾ.ಹಿರಣ್ಮಯಿ

ಅಸುರನ ಮಗನಾಗಿ ಹುಟ್ಟಿದರೂ ಪ್ರಹ್ಲಾದ ಹರಿಭಕ್ತನಾಗಿದ್ದು ಹೇಗೆ ಗೊತ್ತೇ? ಕುರುಕ್ಷೇತ್ರಯುದ್ಧದ ಸಮಯದಲ್ಲಿನ್ನೂ ಹದಿನಾರರ ಹುಡುಗನಾಗಿದ್ದ ಅಭಿಮನ್ಯು ಚಕ್ರವ್ಯೂಹ ಭೇದಿಸಿದ್ದು ಹೇಗೆ ಗೊತ್ತೆ? ಹೋಗಲಿ, ಕೃಷ್ಣನನ್ನು ನೋಡದೆಯೇ ಅವನ ಮೇಲೆ ರುಕ್ಮಿಣಿ ಪ್ರೇಮ ಬೆಳೆಸಿಕೊಂಡಿದ್ದಾದರೂ ಹೇಗೆಂದು ಗೊತ್ತೆ? ಇವೆಲ್ಲ ಸಾಧ್ಯವಾಗಿದ್ದು `ಶ್ರವಣ’ ಅಂದರೆ ಕೇಳುವಿಕೆಯಿಂದ.

ಅಸುರ ರಾಜ ಹಿರಣ್ಯಕಷಿಪುವು ತಪಸ್ಸಿಗೆ ಕುಳಿತಿದ್ದಾಗ ದೇವತೆಗಳು ಅವನ ಹೆಂಡತಿ ಕಯಾದುವನ್ನು ಅಪಹರಿಸುತ್ತಾರೆ. ನಾರದರು ಆಕೆಯನ್ನು ಬಿಡಿಸಿ, ತಮ್ಮ ಆಶ್ರಮಕ್ಕೆ ಕರೆದೊಯ್ಯುತ್ತಾರೆ. ಆಕೆಯ ಗರ್ಭದಲ್ಲಿದ್ದ ಶಿಶುವು ಅಲ್ಲಿ ನಿತ್ಯವೂ ನಡೆಯುವ ಹರಿಕಥೆ, ಕೀರ್ತನೆಗಳನ್ನು ಕೇಳುತ್ತ ಬೆಳೆಯುತ್ತದೆ. ಜನ್ಮದಿಂದ ಅಸುರ ದಂಪತಿಗಳ ಮಗನಾಗಿದ್ದರೂ ಕೇಳಿ ಪಡೆದ ಸಂಸ್ಕಾರದಿಂದ ಮಹಾಭಕ್ತನಾಗಿ ಪ್ರಹ್ಲಾದನೆಂಬ ಹೆಸರನಿಂದ ಖ್ಯಾತಿ ಪಡೆಯುತ್ತದೆ.

ಅಭಿಮನ್ಯುವಿನ ಕಥೆಯೂ ಹೀಗೆಯೇ. ಗರ್ಭಸ್ಥ ಅಭಿಮನ್ಯುವು ತನ್ನ ಸಹೋದರ ಮಾವ ಕೃಷ್ಣನು ತನ್ನ ತಾಯಿಗೆ ಹೇಳುವ `ಚಕ್ರವ್ಯೂಹ ಭೇದನೆ’ಯ ರಹಸ್ಯವನ್ನು ಕೇಳಿಸಿಕೊಳ್ಳುತ್ತಾನೆ. ಮುಂದೆ ಅದನ್ನೇ ಆಧಾರವಾಗಿಟ್ಟುಕೊಂಡು ಅಭಿಮನ್ಯು ರಣರಂಗದಲ್ಲಿ ಅಪ್ರತಿಮ ಸಾಹಸ ತೋರುತ್ತಾನೆ.
ಕೃಷ್ಣನ ಬಗ್ಗೆ ಜನರು ಹೇಳುವ ಮಾತುಗಳನ್ನು, ಅವರ ಹೊಗಳಿಕೆ, ವರ್ಣನೆಗಳನ್ನು ಕೇಳಿ ಕೇಳಿಯೇ ರುಕ್ಮಿಣಿ ಆತನೆಡೆಗೆ ಅನನ್ಯ ಪ್ರೇಮ ಬೆಳೆಸಿಕೊಳ್ಳುತ್ತಾಳೆ. ಕೃಷ್ಣನಿಗೆ ಕಳುಹಿಸುವ ಪ್ರೇಮ ನಿವೇದನೆಯ ಪತ್ರದಲ್ಲಿಯೂ ಅದನ್ನು ನಮೂದಿಸುತ್ತಾಳೆ. ಈ ನಿದರ್ಶನಗಳು ಶ್ರವಣದ ಮಹತ್ವವನ್ನು ಮನೋಜ್ಞವಾಗಿ ಕಟ್ಟಿಕೊಡುತ್ತವೆಯಲ್ಲವೆ?

ಮೌಖಿಕ ಪರಂಪರೆ
ವೇದಕಾಲದಲ್ಲಿ ಬೋಧನೆ ಮತ್ತು ಕಲಿಕೆಗಳೆರಡೂ ಮೌಖಿಕವಾಗಿಯೇ ನಡೆಯುತ್ತಿತ್ತು. ಮಾತೇ ಪ್ರಮಾಣವಾಗಿದ್ದ ಕಾಲವದು. ಗುರು ತನ್ನ ತಿಳಿವನ್ನು ಶಿಷ್ಯನಿಗೆ ಚ್ಯುತಿಯಿಲ್ಲದೆ ಬೋಧಿಸುತ್ತಿದ್ದ. ಶಿಷ್ಯನೂ ತನ್ಮಯತೆಯಿಂದ ಕುಳಿತು ಅದನ್ನು ಆಲಿಸುತ್ತಿದ್ದ. ಈ ಸಂದರ್ಭದಲ್ಲಿ ಬೇರೆ ಯಾವ ಚಟುವಟಿಕೆಗಳಿಗೂ ಅವಕಾಶ ಇರುತ್ತಿರಲಿಲ್ಲ. ಗಂಟೆಗಟ್ಟಲೆ, ದಿನಗಟ್ಟಲೆ, ವಾರಗಟ್ಟಲೆ ಶಿಷ್ಯರು ಕುಳಿತು ಆಲಿಸುವ `ಧ್ಯಾನ’ದಲ್ಲಿ ನಿರತರಾಗಿರುತ್ತಿದ್ದರು.
ಪರೀಕ್ಷಿತ ರಾಜನು ತನ್ನ ಜೀವಿತದ ಕೊನೆಯ ದಿನಗಳನ್ನು ಭಾಗವತದ ಶ್ರವಣದಲ್ಲಿ ಕಳೆದನು. ಆ ಮೂಲಕವೇ ಸದ್ಗತಿಯನ್ನು ಹೊಂದಿದನೆಂದು ಪುರಾಣಗಳು ಹೇಳುತ್ತವೆ. ಇನ್ನು, ಆತನಿಗೆ ಅದನ್ನು ಬೋಧಿಸಿದ ಶುಕಮುನಿಯು ತನ್ನ ತಂದೆ ವೇದವ್ಯಾಸರಿಂದ ಅದನ್ನು `ಕೇಳಿ’ ಮನನ ಮಾಡಿಕೊಂಡಿದ್ದರು. ಪರೀಕ್ಷಿತ ರಾಜನ ಪರಿವಾರದೊಂದಿಗೆ ಕುಳಿತು ಸೂತ ಪುರಾಣಿಕರು ತಾವೂ ಅದನ್ನು ಕೇಳುತ್ತಾರೆ, ಮುಂದೆ ತಮ್ಮ ಶಿಷ್ಯೋತ್ತಮರ ಮೂಲಕ ಮುಂದಿನ ಪೀಳಿಗೆಗೆ ದಾಟಿಸುತ್ತಾರೆ.

ಅದು ಭಗವದ್ಗೀತೆಯಿರಲಿ, ಅಷ್ಟಾವಕ್ರ ಗೀತೆ. ಉದ್ಧವ ಗೀತೆ, ಅವಧೂತಗೀತೆಗಳು ಕೂಡಾ; ಇವೆಲ್ಲವೂ ಮೌಖಿಕವಾಗಿ – ನೇರವಾಗಿಯೇ ಬೋಧಿಸಲ್ಪಟ್ಟಂಥವು. ಶ್ರವಣದ ಮೂಲಕ ಜ್ಞಾನ ಪಡೆದವರು ಅದನ್ನು ಪ್ರಸಾರ ಮಾಡುವ ಮೂಲಕ ಜಗತ್ತಿಗೆ ತಲುಪಿಸಿದ ಜ್ಞಾನ ಸಂಪತ್ತು.

ಇಂಥಾ ಬೋಧನೆಗಳು ಮಾತ್ರವಲ್ಲ, ನಮ್ಮ ಪ್ರಾಚೀನ ಗುರುಕುಲಗಳು ಕೂಡ ಕಲಿಕೆಯು ಶ್ರವಣ ಮಾಧ್ಯಮವನ್ನೇ ಅವಲಂಬಿಸಿದ್ದವು. ‘ಯಾವುದನ್ನು ಕೇಳಿ ತಿಳಿದುಕೊಳ್ಳಲಾಗುತ್ತದೆಯೋ ಅದು ಅಧಿಕೃತ ಜ್ಞಾನ. ಅಕ್ಷರದಲ್ಲಿ ಬರೆದಿಟ್ಟದ್ದು ಅವಲಂಬಿತ ಜ್ಞಾನ’ ಎಂಬುದು ನಮ್ಮ ಪೂರ್ವಜರ ನಂಬಿಕೆಯಾಗಿತ್ತು. ಏಕೆಂದರೆ ನಮ್ಮ ಇಂದ್ರಿಯದ ಮೂಲಕ ನಾವು ಕೇಳಿ ಗ್ರಹಿಸುವುದಕ್ಕೂ, ಇತರರ ಗ್ರಹಿಕೆಯನ್ನು ಅವರ ವ್ಯಾಖ್ಯಾನದೊಂದಿಗೆ ಓದಿ ಗ್ರಹಿಸುವುದಕ್ಕೂ ವ್ಯತ್ಯಾಸವಿದೆ. ಈ ಎರಡನೆ ಪ್ರಕ್ರಿಯೆಯಲ್ಲಿ ಅಪಾರ್ಥಕ್ಕೆ ಅವಕಾಶಗಳುಂಟು.

ಕೇಳಿಸಿಕೊಳ್ಳಲು ಪೂರ್ವಸಿದ್ಧತೆ

ಕೇಳುವಾಗಲೇ ನಮ್ಮ ಮನಸ್ಸಿಗೆ ತಕ್ಕಂತೆ ಅರ್ಥಗ್ರಹಣ ಮಾಡುತ್ತೇವೆ. ನಮ್ಮ ಕೇಳುವಿಕೆ ಪರಿಪೂರ್ಣವಾಗಿಲ್ಲ. ಮೊದಮೊದಲು ನಾವೇನು ಬಯಸುತ್ತೇವೋ ಅದನ್ನೆ ಕೇಲಲು ಬಯಸುತ್ತೇವೆ. ನಾವು ವ್ಯಾಮೋಹಿಗಳಾಗಿದ್ದರೆ, ಅದರ ಬಗ್ಗೆಯೇ ಮತ್ತೆ ಮತ್ತೆ ಕೇಳಲು ಇಷ್ಟಪಡುತ್ತೇವೆ. ಈ ಮೊದಲೇ ನಮ್ಮೊಳಗೆ ಇರುವುದನ್ನು ಮತ್ತೆ ಕೇಳುವುದರಿಂದೇನು ಪ್ರಯೋಜನ? ಅದೆ ಅದೇ ವಿಚಾರಗಳು ತುಂಬಿಹೋಗಿ, ನಮ್ಮೊಳಗೆ ಬದಲಾವಣೆಗೆ ಅವಕಾಶವಾದರೂ ಎಲ್ಲಿ ಉಳಿಯುತ್ತದೆ? ಆದ್ದರಿಂದ, ಕೇಳಲು ಕುಳಿತುಕೊಳ್ಳುವ ಮೊದಲು ನಾವು ಖಾಲಿಯಾಗಿರಬೇಕು. ಆಗ ಮಾತ್ರ ಕಲಿಕೆ ಸಾಧ್ಯವಾಗುತ್ತದೆ.

ಜಗತ್ತಿನಲ್ಲಿ ಜ್ಞಾನದ ಸಂವಹನ ಆರಂಭವಾಗಿದ್ದೇ ಕೇಳುವಿಕೆಯಿಂದ. ಶ್ರವಣ, ಮನನ, ನಿಧಿಧ್ಯಾಸನ ಮೊದಲಾದ ಕಲಿಕೆಯ ವಿವಿಧ ಬಗೆಗಳಲ್ಲಿ ಶ್ರವಣಕ್ಕೆ ಮೊದಲ ಸ್ಥಾನ. ನವವಿಧ ಭಕ್ತಿಯಲ್ಲಿಯೂ ಶ್ರವಣ ಭಕ್ತಿ – ಅಂದರೆ ಭಗವಂತನ ಲೀಲಾ ಕಥೆಗಳನ್ನು ಕೇಳುವ ಮೂಲಕ ವ್ಯಕ್ತಪಡಿಸುವ ಭಕ್ತಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಏಕೆಂದರೆ ಕೇಳುವಿಕೆ ಒಂದು ಅತ್ಯಂತ ಸಾಮಾನ್ಯವಾದ, ಆದರೆ ಅಷ್ಟೇ ಪರಿಣಾಮಕಾರಿಯಾದ ಕ್ರಿಯೆ. ಇದು ಎಲ್ಲರ ಕೈಯೆಟುಕಿನ ಪ್ರಕ್ರಿಯೆ. ಆದರೆ ಕೇಳುವಿಕೆ ಪರಿಪೂರ್ಣವಾಗಿರಬೇಕು. ಈ ಪರಿಪೂರ್ಣತೆಯನ್ನು ಸಿದ್ಧಿಸಿಕೊಳ್ಳುವವರೆಗಷ್ಟೆ ಕಷ್ಟ.

ಕೇಳುವಾಗ ಅಲ್ಲಿ ಕಿವಿಯಷ್ಟೆ ತೆರೆದಿರಬೇಕು. ಮನಸ್ಸಿನಲ್ಲಿ ಬೇರೆ ಯಾವ ಚಟುವಟಿಕೆಯೂ ನಡೆಯುತ್ತಿರಬಾರದು. ಸತ್ಸಂಗಕ್ಕೆ ಕುಲಿತಾಗಲೂ ಕೆಲವರ ಮನಸ್ಸಿನಲ್ಲಿ ಏನಾದರೊಂದು ಸಂಭಾಷಣೆ ನಡೆದೇ ಇರುತ್ತದೆ. ಏನಿಲ್ಲವೆಂದರೂ ಮಾತುಗಳನ್ನು ಕೇಳಿಸಕೊಳ್ಳುತ್ತಾ ಅದರೊಂದಿಗೆ ಸಹಮತವನ್ನೋ ನಿರಾಕರಣೆಯನ್ನೋ ಹೊಂದುತ್ತ ಯೋಚಿಸುತ್ತಿರುತ್ತಾರೆ. ಹೀಗೆ ಮಾಡುವುದರಿಂದ ಪೂರ್ಣ ಪ್ರಮಾಣದಲ್ಲಿ ಜ್ಞಾನವನ್ನು ಹೊಂದಲು ಸಾಧ್ಯವಾಗುವುದಿಲ್ಲ. ಕೇಳಲು ಕುಳಿತಾಗ ಅಲ್ಲಿ ಸಂಪೂರ್ಣ ಮೌನವಿರಬೇಕು. ಒಳಹೊರಗುಗಳೆರಡೂ ಕಡೆ ಕೇವಲ ಮೌನವಷ್ಟೆ ಇರಬೇಕು. 
ಈ ಮೌನ ಬಹಿರಂಗದ ಮಾತುಗಳಿಗೆ ಯಥಾರ್ಥ ಕಟ್ಟಿಕೊಡಲಷ್ಟೇ ಅಲ್ಲ, ಅಂತರಂಗದ ಮಾತುಗಳೂ ನಮಗೆ ಕೇಳಿಸುವಂತೆ ಮಾಡುತ್ತದೆ. ಪ್ರತಿಯೊಂದು ಆತ್ಮದಲ್ಲೂ ಅಡಗಿರುವ ಪರಮಾತ್ಮನೇ ಈ ಮಾತುಗಳನ್ನು ಆಡುವವನು. ನಾವು ಯಾವಾಗ ಈ ಮಾತುಗಳನ್ನು ಕೇಳಿಸಿಕೊಳ್ಳಲು ಸಮರ್ಥರಾಗುತ್ತೇವೆಯೋ ಆಗ ನಮಗೆ ಜೀವನದ ಅರ್ಥವೂ ಸಿದ್ಧಿಯಾಗುತ್ತದೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.