ಮದುವೆ : ಹೃದಯಗಳ ಗೆಳೆತನದ ಬೆಸುಗೆ…

“ಮದುವೆ ಮುರಿದು ಬೀಳೋದು ಪ್ರೇಮದ ಕೊರತೆಯಿಂದಲ್ಲ, ಗೆಳೆತನದ ಕೊರತೆಯಿಂದ” ಅನ್ನುತ್ತಾನೆ ತತ್ತ್ವಜ್ಞಾನಿ ಫ್ರೆಡ್ರಿಕ್ ನೀಷೆ. ನಮ್ಮ ಪೂರ್ವಿಕರು ಇದನ್ನು ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು. ಆದ್ದರಿಂದಲೇ ಅವರು ಮದುವೆಯನ್ನು `ಹೃದಯಗಳ ಗೆಳೆತನದ ಬೆಸುಗೆ’ಯಾಗಿ ಪರಿಗಣಿಸಿದರು. `ಮೈತ್ರಿಯಿಂದ ಬಾಳು, ಸುಖವಾಗಿ ಬಾಳು.’ ಇದು ಮದುವೆಯ ಸಂದರ್ಭದಲ್ಲಿ ಬಂಧುಮಿತ್ರರು ವಧುವಿಗೆ ಹೇಳುವ ಹಿತವಚನ…. ~ ಗಾಯತ್ರಿ

p18ದುವೆ, ಜೀವನದಲ್ಲಿ ನಡೆಯುವ ಬಹು ಮುಖ್ಯವಾದ ಘಟನೆ. ಜೀವಗಳೆರಡು ಕಲೆತು ಒಂದು ಕುಟುಂಬವಾಗಿ ಬದುಕು ನಡೆಸಲು ಸಮಾಜದ ಮುದ್ರೆ ಪಡೆಯುವ ಆಚರಣೆ. ಇದಕ್ಕೆ ವೈದಿಕ ಮಹತ್ವವೂ ಇದೆ. ಇದು ವೇದೋಕ್ತ ಸಂಸ್ಕಾರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. 
ಮಹಾಭಾರತದ ಪ್ರಕಾರ ವಿವಾಹ ಪದ್ಧತಿಯನ್ನು ಜಾರಿಗೆ ತಂದಿದ್ದು ಶ್ವೇತಕೇತು ಎಂಬ ಋಷಿ. ಬಹುಶಃ ಈತ ಮದುವೆಯನ್ನು ಅಧಿಕೃತ ಹಾಗೂ ಕಡ್ಡಾಯಗೊಳಿಸಿದವನಿರಬೇಕು. ಏಕೆಂದರೆ ವೇದಗಳಲ್ಲೇ ಪುರಾತನವೆಂದು ಹೇಳಲಾಗುವ ಋಗ್ವೇದದಲ್ಲಿ ಮದುವೆಯ ಕುರಿತಾದ ಮಂತ್ರಗಳು ಸೂಕ್ತಗಳೂ ಇವೆ. ಮತ್ತು ಈ ಸೂಕ್ತಗಳಲ್ಲಿ ಬಹುಪಾಲು ಪತಿ – ಪತ್ನಿಯರ ಸ್ನೇಹ ಸಂಬಂಧವನ್ನು ನೆಲೆಗೊಳಿಸುವ ಚಿಂತನೆಗಳಿಂದ ಕೂಡಿವೆ.

ಮೈತ್ರಿ ಇದ್ದರಷ್ಟೆ ಮದುವೆ…
`ಮದುವೆ ಮುರಿದು ಬೀಳೋದು ಪ್ರೇಮದ ಕೊರತೆಯಿಂದಲ್ಲ, ಗೆಳೆತನದ ಕೊರತೆಯಿಂದ’ ಅನ್ನುತ್ತಾನೆ ತತ್ತ್ವಜ್ಞಾನಿ ಫ್ರೆಡ್ರಿಕ್ ನೀಷೆ. ನಮ್ಮ ಪೂರ್ವಿಕರು ಇದನ್ನು ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು. ಆದ್ದರಿಂದಲೇ ಅವರು ಮದುವೆಯನ್ನು `ಹೃದಯಗಳ ಗೆಳೆತನದ ಬೆಸುಗೆ’ಯಾಗಿ ಪರಿಗಣಿಸಿದರು.
`ಮೈತ್ರಿಯಿಂದ ಬಾಳು, ಸುಖವಾಗಿ ಬಾಳು.’ ಇದು ಮದುವೆಯ ಸಂದರ್ಭದಲ್ಲಿ ಬಂಧುಮಿತ್ರರು ವಧುವಿಗೆ ಹೇಳುವ ಹಿತವಚನ. ವಿವಾಹ ಮಂಟಪದಲ್ಲಿ ಪತಿಯಾಗುವವನು ತನ್ನ ಪತ್ನಿಯಾಗುವವಳ ಜತೆಗೂಡಿ, `ವಿಶ್ವದೇವತೆಗಳು ನಮ್ಮ ಹೃದಯಗಳನ್ನು ಬೆರೆಸಲಿ. ವರುಣನು ಅವನ್ನು ಹದಗೊಳಿಸಲಿ. ಮಾತರಿಶ್ವ, ಧಾತಾರ, ದೇಷ್ಟ್ರೀ ದೇವತೆಗಳು ಅವನ್ನು ಚಿರಕಾಲ ಜೊತೆಯಿರುವಂತೆ ಮಾಡಲಿ’ ಎಂದು ಪ್ರಾರ್ಥಿಸುತ್ತಾನೆ. ಬಂಧುಗಳು ಇಂದ್ರನನ್ನು ಪ್ರಾರ್ಥಿಸುತ್ತಾ, `ಈ ವಧುವನ್ನು ಸೌಭಾಗ್ಯವತಿಯನ್ನಾಗಿ ಮಾಡು. ಹತ್ತು ಮಕ್ಕಳ ತಾಯಿಯಾಗುವಂತೆ ಅನುಗ್ರಹಿಸಿ, ಪತಿಯನ್ನು ಇವಳ ಹನ್ನೊಂದನೆ ಮಗುವಂತೆ ಮಾಡು!’ ಎಂದು ಕೇಳಿಕೊಳ್ಳುತ್ತಾರೆ. ಸಪ್ತಪದಿಯ ಏಳು ಹೆಜ್ಜೆಗಳನ್ನು ತುಳಿದ ಅನಂತರ ವರನು ವಧುವಿಗೆ, `ಯಾರು ಜೊತೆಯಾಗಿ ಏಳು ಹೆಜ್ಜೆ ನಡೆಯುತ್ತಾರೋ ಅವರು ಗೆಳೆಯರಾಗುತ್ತಾರೆ. ನೀನು ನನ್ನೊಡನೆ ಏಳು ಹೆಜ್ಜೆ ನಡೆದಿರುವುದರಿಂದ ಈಗ ನನ್ನ ಗೆಳತಿಯಾಗಿದ್ದೀಯ. ನನಗೆ ನಿನ್ನ ಸ್ನೇಹ ಲಭಿಸಲಿ. ಎಂದಿಗೂ ನಾನು ನಿನ್ನ ಸ್ನೇಹದಿಂದ ಚ್ಯುತನಾಗುವುದು ಬೇಡ. ಹಾಗೆಯೇ ನೀನು ಕೂಡಾ ನನ್ನ ಸ್ನೇಹದಿಂದ ಚ್ಯುತಳಾಗುವುದು ಬೇಡ. ನಾವು ಪ್ರೀತಿಯಿಂದ ಇರೋಣ. ಪರಸ್ಪರ ಸುಖ ಸಂತೋಷಗಳಲ್ಲಿ ಭಾಗಿಗಳಾಗಿ ನಮ್ಮ ಕಾರ್ಯಧ್ಯೇಯಗಳಲ್ಲಿ ನಾವು ಒಂದಾಗಿರೋಣ’ ಎಂದು ಕೇಳಿಕೊಳ್ಳುತ್ತಾನೆ.

ಅಥರ್ವ ವೇದದ ಒಂದು ಸೂಕ್ತದಲ್ಲಿ ವರನು ವಧುವಿಗೆ, `ನಮ್ಮ ದೃಷ್ಟಿಗಳು ಜೇನಿನಂತೆ ಸವಿಯಾಗಿರಲಿ. ನಮ್ಮ ಮುಖಗಳು ಪರಸ್ಪರ ಅಂಜನವಾಗಿರಲಿ. ನನ್ನನ್ನು ನಿನ್ನ ಹೃದಯದಲ್ಲಿ ಇರಿಸಿಕೋ. ನಮ್ಮ ಮನಸ್ಸು ದಿಟವಾಗಿ ಒಂದಾಗಿರಲಿ’ ಎಂದು ಕೇಳಿಕೊಳ್ಳುವ ಶ್ಲೋಕ ಬರುತ್ತದೆ. ಈ ಎಲ್ಲವೂ ಪತಿ ಪತ್ನಿಯರಾಗುವುದು ಕೇವಲ ದೈಹಿಕ ಕಾಮನೆಗಳಿಗಾಗಿ ಅಲ್ಲ. ಅದೊಂದು ಪವಿತ್ರ ಸಾಂಗತ್ಯ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ.

ಪರಸ್ಪರ ಪೂರಕ
ಗಂಡ ಹೆಂಡತಿ ಇಬ್ಬರ ಸ್ಥಾನಮಾನವೂ ಒಂದೇ. ಇಲ್ಲಿ ಯಾರೂ ಎತ್ತರದವರಲ್ಲ, ಯಾರೂ ಕೆಳಗಿನವರಲ್ಲ ಎಂದಿದ್ದವು ನಮ್ಮ ವೇದ- ವೇದಾಂಗಗಳು. ಸ್ಮೃತಿಗಳು ಕೂಡ ಇದೇ ಮಾತನ್ನು ಪುನರುಚ್ಛರಿಸಿದ್ದವು. ಮನುಸ್ಮೃತಿಯು, `ಗಂಡನಾದವನು ಹೆಂಡತಿಯನ್ನು ದೇವತೆಗಳ ಅನುಗ್ರಹವೆಂದು ಪಡೆಯುತ್ತಾನೆ. ದೇವತೆಗಳನ್ನು ಸಂತುಷ್ಟವಾಗಿ ಇರಿಸಬೇಕೆಂದರೆ, ಅವನು ತನ್ನ ಪತ್ನಿಯನ್ನು ಸದಾ ಪಾಲಿಸಬೇಕು. ಪತಿ ಪತ್ನಿಯರಿಬ್ಬರೂ ರಥಕ್ಕೆ ಹೂಡಿದ ಎರಡು ಕುದುರೆಗಳಂತೆ ಸಮಾನರು’ ಎನ್ನುತ್ತದೆ.
ಮಹಾಭಾರತವು `ಮನೆಯೆನ್ನುವುದು ಇಟ್ಟಿಗೆ, ಮಣ್ಣಿನ ಕಟ್ಟಡವಲ್ಲ; ಅದರೊಳಗಿರುವ ಪತ್ನಿ (ಗೃಹಿಣೀ ಗೃಹಮುಚ್ಯತೇ) ಎಂದು ಹೇಳುತ್ತದೆ. ಶತಪಥ ಬ್ರಾಹ್ಮಣವು `ಗೃಹದ ಆಧಾರ ಪತ್ನಿ’ ಎಂದು ಹೇಳುತ್ತಾ, `ಪತ್ನಿ ದಿಟವಾಗಿ ಒಬ್ಬನ ಆತ್ಮದ ಒಂದರ್ಧ. ಅವಳನ್ನು ಪಡೆಯುವವರೆಗೆ ಆತನಿಗೆ ಉದ್ಧಾರ ಇಲ್ಲ. ಅವಳಿಲ್ಲದೆ ಅವನು ಅಸಂಪೂರ್ಣ’ ಎನ್ನುತ್ತದೆ.

 

 

 

 

 

2 Comments

  1. ನಿಮಗೆ ಹೃತ್ಪೂರ್ವಕ ಧನ್ಯವಾದಗಳು 🙏
    ಯಾಂತ್ರಿಕ ಜೀವನದ ಈ ಹೊತ್ತಿನಲ್ಲಿ ನನ್ನಂತಹವರಿಗೆ ಸುಲಭವಾಗಿ ಎಷ್ಟೊಂದು ವಿಚಾರಗಳು ತಿಳಿಯುತ್ತದೆ.
    ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವ ನಿಮಗೆ ಶರಣು.

Leave a Reply