ಶ್ರೀರಾಜ ರಾಜೇಶ್ವರೀ ಸ್ತೋತ್ರ ಮತ್ತು ಸರಳ ಭಾವಾರ್ಥ ಇಲ್ಲಿದೆ…
ಕಲ್ಯಾಣಾಯತ ಪೂರ್ಣಚಂದ್ರವದನಾ ಪ್ರಾಣೇಶ್ವರಾನಂದಿನೀ
ಪೂರ್ಣಾಪೂರ್ಣತರಾ ಪರೇಶಮಹಿಷೀ ಪೂರ್ಣಾಮೃತಾಸ್ವಾದಿನೀ |
ಸಂಪೂರ್ಣಾ ಪರಮೋತ್ತಮಾಮೃತಕಲಾ ವಿದ್ಯಾವತೀ ಭಾರತೀ
ಶ್ರೀ ಚಕ್ರಪ್ರಿಯ ಬಿಂದುತರ್ಪಣಪರಾ ಶ್ರೀರಾಜರಾಜೇಶ್ವರೀ ||೧||
ಭಾವಾರ್ಥ: ಮಂಗಲಮಯವಾದ ಪೌರ್ಣಿಮೆಯ ಚಂದಿರನಂತೆ ಆಕರ್ಶಕವಾದ ಮೊಗವನ್ನು ಹೊಂದಿದವಳಾಗಿರುವ; ಪತಿಯಾಗಿರುವ ಈಶ್ವರನಿಗೆ ಸಂತಸವನ್ನು ಉಂಟುಮಾಡುವ; ಪರಿಪೂರ್ಣಾಳಾದ; ಪರಮೇಶ್ವರನ ಪಟ್ಟದ ಮಹಿಷಿಯಾಗಿ ಅಮೃತರಸವನ್ನು ಪೂರ್ಣವಾಗಿ ಸವಿಯುತ್ತಿರುವ; ಹದಿನಾರು ಕಲಾ ಶಕ್ತಿಗಳನ್ನು ಹೊಂದಿರುವ; ಶ್ರೇಷ್ಠವಾದ ಅಮೃತಾತ್ಮಕಲಾ ಸ್ವರೂಪಿಯಾಗಿರುವ ವಿದ್ಯಾವತಿಯೂ,ವಿದ್ವಾಂಸಳೂ ಆಗಿ ಶ್ರೀ ಚಕ್ರದ ಮಧ್ಯಬಿಂದುವಿನಲ್ಲಿ ತೃಪ್ತಿಯಿಂದ ತಾಯಿ ರಾಜರಾಜೇಶ್ವರಿಯು ಸಂಚರಿಸುತ್ತಿರುವಳು.
ಏಕಾರಾದಿ ಸಮಸ್ತವರ್ಣ ವಿವಿಧಾರೈಕ ಚಿದ್ರೂಪಿಣೀ
ಚೈತನ್ಯಾತ್ಮಕ ಚಕ್ರರಾಜ ನಿಲಯಾ ಚಕ್ರಾಂತ ಸಂಚಾರಿಣೀ |
ಭಾವಾ ಭಾವ ವಿಭಾವಿನೀ ಭವಪರಾ ಸದ್ಭಕ್ತಿ ಚಿಂತಾಮಣೀ
ಶ್ರೀ ಚಕ್ರಪ್ರಿಯ ಬಿಂದುತರ್ಪಣಪರಾ ಶ್ರೀರಾಜರಾಜೇಶ್ವರೀ ||೨||
ಭಾವಾರ್ಥ:-ಏ ಕಾರದಿಂದ ಆರಂಭವಾದ ಎಲ್ಲ ಅಕ್ಷರಗಳ ವಿವಿಧ ಸ್ವರೂಪವನ್ನು ಹೊದಿದ್ದರೂ ಒಂದೇ ಜ್ಞಾನ ಸ್ವರೂಪಳಾದ; ಶ್ರೀಚಕ್ರದಲ್ಲಿ ಚೈತನ್ಯವನ್ನೊಳಗೊಂಡು ನೆಲೆಯಾಗಿರುವುದಲ್ಲದೆ ಶ್ರೀಚಕ್ರದೊಳಗೆ ಅಂತರ್ಮಯಿಯಾಗಿ ವಿಹರಿಸುವ, ಸೃಷ್ಟಿ ಹಾಗೂ ಲಯ ಕರ್ತೃವಾಗಿರುವ, ಶಿವನ್ನಲ್ಲಿ ತಲ್ಲೀನಳಾಗಿರುವ ಶ್ರೇಷ್ಠತಮ ಭಕ್ತಿಗೆ ಚಿಂತಾಮಣಿಯಂತೆ ಇಷ್ಟಾರ್ಥದಾಯಕಳಾಗಿರುವ; ಶ್ರೀಚಕ್ರದಲ್ಲಿ ಇಷ್ಟವಾದ ಬಿಂದುವಿನಲ್ಲಿ ಸಂತೃಪ್ತಿಯಿಂದ ತಾಯಿ ರಾಜರಾಜೇಶ್ವರಿಯು ಸಂಚರಿಸುತ್ತಿರುತ್ತಾಳೆ.
ಈಹಾಧಿಕ್ ಪರಯೋಗಿವೃಂದ ವಿದಿತಾ ಸ್ವಾನಂದಭೂತಾಪರಾ
ಪಶ್ಯಂತೀ ತನುಮಧ್ಯಮಾ ವಿಲಸಿನೀ ಶ್ರೀ ವೈಖರೀ ರೂಪಿಣೀ |
ಆತ್ಮಾನಾತ್ಮವಿಚಾರಿಣೀ ವಿವರಗಾ ವಿದ್ಯಾ ತ್ರಿಬೀಜಾತ್ಮಿಕಾ
ಶ್ರೀ ಚಕ್ರಪ್ರಿಯ ಬಿಂದುತರ್ಪಣಪರಾ ಶ್ರೀರಾಜರಾಜೇಶ್ವರೀ ||೩||
ಭಾವಾರ್ಥ: ಸಂಸಾರದ ಆಶೆಯಿಂದ ವಿರಹಿತಳಾಗಿ ಶ್ರೇಷ್ಠ ಮುನಿವೃಂದವರಿಂದ ಅರಿತುಕೊಳ್ಳಲು ಸಾಧ್ಯವಾಗುವಂತಹಾ ಆತ್ಮಾನಂದರೂಪೆಯಾಗಿರುವ,ಯಾವುದೇ ಮಾತು ಆರಂಭವಾಗುವ ಮುನ್ನ ನಾಭಿಯಿಂದ ಆರಂಭವಾಗುವ “ಪರಾ” ಮತ್ತು ಹೃದಯದ ಸಮೀಪವರ್ತಿಯಾದಾಗ ಪಶ್ಯಂತೀ ” ಕಂಠದ ಸಮೀಪ ತಲುಪಿದಾಗ “ಮಧ್ಯಮಾ ” ಎಂಬ ಅವ್ಯಕ್ತ ವಾಕ್ಕಿನ ಮೂರು ರೀತಿಯ ರೂಪಗಳಲ್ಲಿ ಸಂಚರಿಸುವ ಅದೇ ರೀತಿ ಗಂಟಲಿನಿಂದ ಹೊರ ಹೊಮ್ಮುವ “ವೈಖರೀ” ಎಂಬ ಸ್ವಷ್ಟವಾದ ಮಾತಿನರೂಪದಲ್ಲಿ ನೆಲೆಯಾಗಿ ಆತ್ಮ ಹಾಗೂ ಆತ್ಮವಲ್ಲದ ವಸ್ತುಗಳನ್ನು ವಿಮರ್ಶಿಸುವ ಬುದ್ಧಿಮತ್ತೆಯ ವಿದ್ಯಾರೂಪಿಣಿಯಾದ ತ್ರಿಗುಣಾತ್ಮ ಬೀಜರೂಪೆಯಾಗಿರುವ ಶ್ರೀಚಕ್ರದಲ್ಲಿ ಇಷ್ಟವಾದ ಬಿಂದುವಿನಲ್ಲಿ ಸಂತೃಪ್ತಿಯಿಂದ ತಾಯಿ ರಾಜರಾಜೇಶ್ವರಿಯು ಸಂಚರಿಸುತ್ತಿರುತ್ತಾಳೆ.