ಕಣ್ಣಿಗೆ ಕಾಣುವ, ಅನುಭವಕ್ಕೆ ನಿಲುಕುವ ದಿವ್ಯತೆಯೇ ದೇವರು!

ಯಾವುದೇ ವಸ್ತುವಿನ / ವ್ಯಕ್ತಿಯ ಬಗ್ಗೆ ನಮ್ಮಲ್ಲಿ ಗೌರವ, ಮೆಚ್ಚುಗೆ, ಕೃತಜ್ಞತಾ ಭಾವನೆಗಳಿದ್ದರೆ, ನಾವು ಅದಕ್ಕೆ / ಅವರಿಗೆ ನಮಸ್ಕರಿಸುವ ಮೂಲಕ ನಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತೇವೆ. ಹೀಗೆ ಅವರಲ್ಲಿ / ಅದರಲ್ಲಿ ಪ್ರತಿಫಲಿಸುವ ದಿವ್ಯತೆಯೇ ದೇವರು. ಆ ದೇವರಿಗೆ ನಮ್ಮ ನಮಸ್ಕಾರ ಸಲ್ಲುವುದು ~ ಗಾಯತ್ರಿ

ನಾವು ಏನನ್ನೋ ಯೋಚಿಸುತ್ತ ನಡೆಯುತ್ತಿರುತ್ತೇವೆ. ಅಕಸ್ಮಾತ್ ಎದುರಿಂದ ಬರುತ್ತಿರುವ ವ್ಯಕ್ತಿಗೆ ಢಿಕ್ಕಿ ಹೊಡೆಯುತ್ತೇವೆ. ನಮ್ಮಲ್ಲಿ ಬಹುತೇಕರಿಂದ ಹೊರಡುವ ಮೊದಲ ಪ್ರತಿಕ್ರಿಯೆ ಗಲ್ಲಕ್ಕೆ ಬೆರಳು ಸೋಕಿಸಿ ನಮಸ್ಕರಿಸುವುದು. ಇದನ್ನು `ಗಡಿಬಿಡಿಯ ನಮಸ್ಕಾರ’ವೆಂದು ಬೇಕಾದರೂ ಕರೆಯಬಹುದು. ಅತ್ತ ಢಿಕ್ಕಿ ಹೊಡೆಸಿಕೊಂಡವರೂ ಇಂತಹದೇ ಪ್ರತಿಕ್ರಿಯೆ ತೋರುತ್ತಾರೆ. ಬಹಳ ಬಾರಿ ಬಹಳ ಜನರೊಂದಿಗೆ ಹೀಗಾಗುತ್ತದೆ. ಎಲ್ಲರೂ ಮಾಡುತ್ತಾರೆಂದಲ್ಲ. ಭಾರತದ ಸಂದರ್ಭದಲ್ಲಿ ಇದು ಸಾಮಾನ್ಯವಷ್ಟೆ. ಆಮೇಲೆ ಬೇಕಿದ್ದರೆ `ನೋಡಿಕೊಂಡು ನಡೆಯಲು ಬರುವುದಿಲ್ಲವೆ?’ ಎಂದು ಜಗಳಾಡಿಕೊಳ್ಳಬಹುದು. ತತ್‍ಕ್ಷಣದ ಪ್ರತಿಕ್ರಿಯೆ ಮಾತ್ರ ಬಹುತೇಕವಾಗಿ ಇದೇ ಆಗಿರುತ್ತದೆ.

ಗಮನಿಸಿ ನೋಡಿ. ನಮ್ಮಲ್ಲಿ ಬಹಳಷ್ಟು ಜನ ಅಕಸ್ಮಾತ್ ಒಂದು ಕಾಗದದ ಹಾಳೆಯ ಮೇಲೆ ಕಾಲಿಟ್ಟರೆ ತತ್‍ಕ್ಷಣ ಹಿಂತೆಗೆದು ಕಣ್ಣಿಗೊತ್ತಿಕೊಳ್ತೇವೆ. ಅಕಸ್ಮಾತ್ ಬಾಗಲು ಸಮಯವಿಲ್ಲದಷ್ಟು ಧಾವಂತದಲ್ಲಿದ್ದರೆ, ಕೊನೆಪಕ್ಷ ನಿಂತಲ್ಲೆ ಕಣ್ಣಿಗೆ ಬೆರಳು ಸೋಕಿಸಿ ನಮಸ್ಕರಿಸುತ್ತೇವೆ. ಕುಳಿತಾಗಲೋ ನಿಂತಾಗಲೋ ನಮ್ಮ ಕಾಲು ಯಾರಿಗಾದರೂ ತಾಕಿದರೆ, ತತ್‍ಕ್ಷಣ ನಮಸ್ಕರಿಸುತ್ತೇವೆ. ಕಂಡಲ್ಲೆಲ್ಲ ಭಗವಂತನನ್ನು ಭಾವಿಸುವ ನಮ್ಮ ಪರಂಪರಾನುಗತ ಗುಣ, ಅಪ್ರಜ್ಞಾಪೂರ್ವಕವಾಗಿ ಇವೆಲ್ಲವನ್ನೂ ಮಾಡಿಸುತ್ತದೆ. ಹಾಗಂತ ಕಾಗದಕ್ಕೆ ನಮಸ್ಕರಿಸಲು ಅದು ಸರಸ್ವತಿಯ ಪ್ರತಿರೂಪವೆಂಬ ನಂಬಿಕೆಯೇ ಇರಬೇಕಿಲ್ಲ; ವಿದ್ಯೆಯನ್ನು ತಲುಪಿಸುವ ಮಾಧ್ಯಮವಾದ ಕಾಗದದ ಮೇಲಿನ ಗೌರವ ಮತ್ತು ಪ್ರೀತಿಗಳೂ ನಮ್ಮಿಂದ ಅಂಥದೊಂದು ಪ್ರತಿಕ್ರಿಯೆ ಹೊರಡಲು ಕಾರಣವಾಗುತ್ತವೆ.

ಒಂದು ಕತೆಯಿದೆ. ಒಮ್ಮೆ ಬ್ರಹ್ಮ ಸಮಾಜಿಯಾದ ಕೇಶವ ಚಂದ್ರ ಸೇನ ರಸ್ತೆಯಲ್ಲಿ ನಡೆದು ಹೋಗುತ್ತಿರುತ್ತಾನೆ. ಬ್ರಹ್ಮಸಮಾಜಿಗಳು ಮೂರ್ತಿ ಪೂಜೆಯ ವಿರೋಧಿಗಳು. ಕೇಶವ ಚಂದ್ರನಿಗೆ ಸುಂದರವಾದ ಒಂದು ಕಾಳಿಯ ವಿಗ್ರಹ ಕಾಣಿಸುತ್ತದೆ. ಅತ್ಯಂತ ಮನಮೋಹಕವಾದ ವಿಗ್ರಹ. ಅದನ್ನು ಕಂಡೊಡನೆ ಕ್ಷಣಕಾಲ ನಿಂತು, ಕೈಮುಗಿದು ಮುಂದೆ ಸಾಗುತ್ತಾನೆ. ಇದನ್ನು ಗಮನಿಸಿದ ಮಿತ್ರನೊಬ್ಬ ಅವನನ್ನು ತಡೆದು, `ಇದೇನು ಕೇಶವ ಚಂದ್ರ ಸೇನರೇ, ನೀವು ಕಾಳಿ ವಿಗ್ರಹಕ್ಕೆ ನಮಸ್ಕರಿಸುವುದೇ? ಎಂಥಾ ಅಪಚಾರ? ಊರೆಲ್ಲ ಮೂರ್ತಿ ಪೂಜೆ ವಿರೋಧಿಸಿಕೊಂಡು ತಿರುಗುವ ನೀವೇ ಹೀಗೆ ಮಾಡಿದರೆ….’ ಎಂದು ದನಿ ಎಳೆಯುತ್ತಾನೆ. ಆಗ ಕೇಶವ ಚಂದ್ರ ನಕ್ಕು, `ಅಯ್ಯೋ ಹುಚ್ಚ! ನಾನು ದೇವರುಗೀವರಿಗಲ್ಲ ನಮಸ್ಕರಿಸಿದ್ದು. ನಾನು ಆ ಗೊಂಬೆಯ ಕಲಾನೈಪುಣ್ಯಕ್ಕೆ ವಂದಿಸಿದೆ. ಅದನ್ನು ನಿರ್ಮಿಸಿದ ಶಿಲ್ಪಿಯ ನೈಪುಣ್ಯತೆಯನ್ನು ಮೆಚ್ಚಿ ನಮಸ್ಕರಿಸಿದೆನಷ್ಟೆ. ಅದು ಕಾಳಿಯೋ ಮತ್ತೊಂದೋ. ಅದೊಂದು ನವಿಲಿನ ಮೂರ್ತಿಯಾಗಿದ್ದರೂ ನಾನು ಹೀಗೆಯೇ ಮಾಡುತ್ತಿದ್ದೆ. ಆ ವಿಗ್ರಹ ಮನಸ್ಸಿನಲ್ಲಿ ಸಂತೋಷವನ್ನು ಹುಟ್ಟಿಸುತ್ತದೆ. ಅಷ್ಟು ಸಾಕಲ್ಲವೆ?’ ಎನ್ನುತ್ತಾನೆ. ಹೆಚ್ಚೂಕಡಿಮೆ ನಾಸ್ತಿಕನಂತಿರುವ ಬ್ರಹ್ಮ ಸಮಾಜಿಯೊಬ್ಬ ಕಲಾನೈಪುಣ್ಯವನ್ನು ಮೆಚ್ಚಿ, ಅದಕ್ಕೆ ನಮಸ್ಕರಿಸುವ ಮೂಲಕ ಗೌರವ ತೋರುವುದು, ದಿವ್ಯತೆಯೇ ಭಗವಂತ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ಅಲ್ಲವೆ? 

ಹೀಗೆ ಪ್ರತಿಯೊಂದು ಜಡ ಚೇತನದಲ್ಲೂ ದಿವ್ಯತೆಯನ್ನು ಕಾಣುವುದು ನಮಗೆ ಸಾಧ್ಯವಾಗಬೇಕು. ಪ್ರತಿಂದು ಜೀವಿಯೂ, ಪ್ರತಿಯೊಬ್ಬ ಮಾನವರೂ ದಿವ್ಯತೆಯ ಕಿರಣಗಳೇ ಅನ್ನುವುದನ್ನು ಅರಿಯಬೇಕು. ಆಗಷ್ಟೇ ಮೇಲುಕೀಳುಗಳ ಕ್ರೌರ್ಯದಿಂದ ಮನುಜ ಕುಲ ಪಾರಾಗಲು ಸಾಧ್ಯ. ಒಂದು ಕಾಗದದಲ್ಲಿ, ಒಂದು ಕಲಾಕೃತಿಯಲ್ಲಿ ದಿವ್ಯತೆಯನ್ನು ಕಾಣಬಲ್ಲ ನಮಗೆ, ಒಂದು ಸಹಜೀವಿಯಲ್ಲಿ ಅದನ್ನು ಕಾಣಲು ಸಾಧ್ಯವಿಲ್ಲವೆ? ಪ್ರಜ್ಞಾಪೂರ್ವಕವಾಗಿ ಇದನ್ನು ಯೋಚಿಸೋಣ. ಆಗದೇ? 

Leave a Reply