ಋಷಿಕೆಯರು ರಚಿಸಿದ ಮಂತ್ರಗೀತೆಗಳು

ಈ ಋಷಿಕೆಯರಲ್ಲಿ ಬಹುತೇಕರು ಸಾಂಸಾರಿಕ ಬಯಕೆಗಳನ್ನು ಉನ್ನತ ವೇದಿಕೆಯಲ್ಲಿ ಅಭಿವ್ಯಕ್ತಗೊಳಿಸುವ ಮೂಲಕ ಲೌಕಿಕ – ಅಧ್ಯಾತ್ಮಗಳ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಋಷಿಕೆಯರ ಹಾಡುಗಳು ಸಾರ್ವಕಾಲಿಕ ಸ್ತ್ರೀಯರ ಹಾಡಾಗಿಯೂ ಕಂಡುಬರುತ್ತವೆ.

ಗ್ವೇದದ ಮಂತ್ರಗಳನ್ನು ಸಾಕ್ಷಾತ್ಕಾರಿಸಿಕೊಂಡ ಮಂತ್ರ ದ್ರಷ್ಟಾರರಲ್ಲಿ ಮೂವತ್ತಕ್ಕೂ ಹೆಚ್ಚು ಋಷಿಕೆಯರು ಸೇರಿದ್ದಾರೆ. ರೋಮಷಾ, ಲೋಪಾಮುದ್ರಾ, ಅಪಾಲಾ, ಕದ್ರು, ವಿಶ್ವಾವರಾ, ಘೋಷಾ, ಜುಹು, ವಾಗಂಭೃಣಿ, ಪೌಲೊಮಿ, ಜರಿತಾ, ಶ್ರದ್ಧಾ ಕಾಮಾಯಾನಿ, ಊರ್ವಶೀ, ಶಾರಂಗ, ಯಮಿ, ಇಂದ್ರಾಣಿ, ಸಾವಿತ್ರಿ ಮತ್ತು ದೇವಯಾನಿ – ಇವರು ಋಗ್ವೇದದ ಮುಖ್ಯ ಋಷಿಕೆಯರಾದರೆ; ನೋಧಾ (ಅಥವಾ ಪೂರ್ವಾರ್ಚಿಕಾ), ಅಕೃಷ್ಟಭಾಷಾ, ಶಿಕತಾ ನಿವಾವರೀ (ಅಥವಾ ಉತ್ತರಾರ್ಚಿಕಾ) ಮತ್ತು ಗಣಪಾಯಣಾ – ಇವರು ಸಾಮವೇದದ ಋಷಿಕೆಯರು. ಇಷ್ಟೇ ಅಲ್ಲದೆ, ನಾಲ್ಕೂ ವೇದಗಳಲ್ಲಿ ಇನ್ನೂ ಹಲವು ಋಷಿಕೆಯರು ಹಾಗೂ ಬ್ರಹ್ಮವಾದಿನಿಯರ ಹೆಸರುಗಳು ಉಲ್ಲೇಖಗೊಂಡಿವೆ. ಗಾರ್ಗಿ ವಾಚಕ್ನವಿ, ಮೈತ್ರೇಯಿ ಮೊದಲಾದ ಬ್ರಹ್ಮವಾದಿನಿಯರು, ಅನಸೂಯಾ ದೇವಿ, ಅರುಂಧತೀ ದೇವಿ, ತಾರಾ ಮೊದಲಾದ ಋಷಿ ಪತ್ನಿಯರು ನಮ್ಮ ಪುರಾಣೇತಿಹಾಸಗಳ ಪುಟಗಳಲ್ಲಿ ಸಾಕಷ್ಟು ಮನ್ನಣೆ ಪಡೆದಿದ್ದಾರೆ. ವಿಶ್ವಾವರಾ, ರೋಮಷಾ ಹಾಗೂ ವಾಗಂಭೃಣೀ ಋಷಿಕೆಯರು ಸಾಧನೆಯ ದೃಷ್ಟಿಯಿಂದ ಈ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಈ ಋಷಿಕೆಯರಲ್ಲಿ ಬಹುತೇಕರು ಸಾಂಸಾರಿಕ ಬಯಕೆಗಳನ್ನು ಉನ್ನತ ವೇದಿಕೆಯಲ್ಲಿ ಅಭಿವ್ಯಕ್ತಗೊಳಿಸುವ ಮೂಲಕ ಲೌಕಿಕ – ಅಧ್ಯಾತ್ಮಗಳ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಋಷಿಕೆಯರ ಹಾಡುಗಳು ಸಾರ್ವಕಾಲಿಕ ಸ್ತ್ರೀಯರ ಹಾಡಾಗಿಯೂ ಕಂಡುಬರುತ್ತವೆ. ಅಂತಹಾ ಕೆಲವು ಋಷಿಕೆಯ ಕಿರು ಪರಿಚಯ ಇಲ್ಲಿದೆ. 

ಘೋಷಾ ಕಕ್ಷೀವತೀ

ಮಂತ್ರ ದ್ರಷ್ಟಾರ ಋಷಿಗಳಾದ ದೀರ್ಘತಮಸನ ಮೊಮ್ಮಗಳೂ ಕಕ್ಷೀವಂತನ ಮಗಳೂ ಆದ ಘೋಷಾ ಕಕ್ಷೀವತೀ, ಋಗ್ವೆದದ ಹತ್ತನೇ ಮಂಡಲದ 39 ಹಾಗೂ 40ನೇ ಸೂಕ್ತಿಗಳ ಕರ್ತೃವಾಗಿದ್ದಾಳೆ. ಈ ಎರಡೂ ಸೂಕ್ತಿಗಳು 14 ಶ್ಲೋಕಗಳನ್ನು ಒಳಗೊಂಡಿವೆ. ಇವುಗಳಲ್ಲಿ ಮೊದಲನೆಯದು ಅಶ್ವಿನೀ ದೇವತೆಗಳನ್ನು ಸ್ತುತಿಸಲು ಮೀಸಲಾಗಿದ್ದರೆ, ಎರಡನೆಯ ಸೂಕ್ತಿಯು ವೈವಾಹಿಕ ಜೀವನದ ಉತ್ಕಟ ಆಕಾಂಕ್ಷೆಯನ್ನು ಬಿಂಬಿಸುತ್ತದೆ.

ಇತಿಹಾಸ ಹೇಳುವಂತೆ ಘೋಷಾ ಕುಷ್ಟ ರೋಗ ಪೀಡಿತೆಯಾಗಿದ್ದಳು. ತಂದೆ ಹಾಗೂ ಅಜ್ಜನ ಸಲಹೆಯ ಮೇರೆಗೆ ಅಶ್ವಿನೀ ದೇವತೆಗಳ ಉಪಾಸನೆ ನಡೆಸಿ, ರೋಗಮುಕ್ತಳಾಗುವ ಈಕೆ ಮುಂದೆ ಮದುವೆಯಾಗಿ ಸಂತೃಪ್ತ ಜೀವನ ನಡೆಸಿದಳು. ಈ ಎರಡು ಸೂಕ್ತಗಳು ಘೋಷಾಳ ವಿವಾಹಪೂರ್ವದಲ್ಲಿ ಆಕೆಯಿಂದ ರಚಿಸಲ್ಪಟ್ಟವು ಎಂದು ಹೇಳಲಾಗುತ್ತದೆ.

ಲೋಪಾಮುದ್ರಾ

ಲೋಪಾಮುದ್ರಾ ಅಗಸ್ತ್ಯನಿಂದ ಸೃಷ್ಟಿಯಾದವಳು. ಅಗಸ್ತ್ಯರು ತಮ್ಮ ತಪಶ್ಶಕ್ತಿಯನ್ನು ಧಾರೆ ಎರೆದು ಒಂದು ಪುತ್ಥಳಿಯನ್ನು ನಿರ್ಮಿಸಿ, ಮಕ್ಕಳಿಲ್ಲದೆ ಕೊರಗುತ್ತಿದ್ದ ಕವೇರ ರಾಜ ದಂಪತಿಗೆ ಆ ಮಗುವನ್ನು ನೀಡುತ್ತಾರೆ. ರಾಜ ದಂಪತಿ ಆ ಮಗುವನ್ನು ಪೋಷಿಸಿ, ಸಕಲ ವಿದ್ಯೆಗಳನ್ನೂ ಕೊಡಿಸುತ್ತಾರೆ. ಅಗಸ್ತ್ಯರು ತಮ್ಮ ಪಿತೃಗಳ ಮುಕ್ತಿಗಾಗಿ ಸಂತಾನಾಪೇಕ್ಷೆಯಿಂದ ಮದುವೆಯಾಗಲು ಬಯಸಿದಾಗ ರಾಜನ ಬಳಿ ಸಾಗಿ ಲೋಪಾಮುದ್ರೆಯನ್ನು ಕನ್ಯಾದಾನವಾಗಿ ನೀಡಲು ಕೋರುತ್ತಾರೆ. ಲೋಪಾಮುದ್ರೆ ಅಗಸ್ತ್ಯರನ್ನು ಮದುವೆಯಾಗಿ ಪರ್ಣಕುಟಿಯಲ್ಲಿ ನೆಲೆಸುತ್ತಾಳೆ. ಪತಿಯ ತಪಶ್ಚರಣೆಗೆ ಅನುಕೂಲ ಮಾಡಿಕೊಡುತ್ತಾ ಕರ್ತವ್ಯ ನೆರವೇರಿಸುತ್ತಾ ವರ್ಷಗಳು ಉರುಳುತ್ತವೆ. ಎಷ್ಟಾದರೂ ಪತಿ ತನ್ನತ್ತ ದಾಂಪತ್ಯ ಪ್ರೇಮದಿಂದ ವರ್ತಿಸದೆ ಇರುವುದನ್ನು ಕಂಡು ಬೇಸತ್ತ ಲೋಪಾಮುದ್ರಾ ತಾನೂ ತಪವನ್ನಾಚರಿಸಿ ಎರಡು ಚರಣಗಳ ರುಕ್ಕೊಂದನ್ನು ರಚಿಸುತ್ತಾಳೆ. ಇದರಿಂದ ಅಗಸ್ತ್ಯರು ಎಚ್ಚೆತ್ತು, ಪತ್ನಿಯ ಬಯಕೆಯನ್ನು ಈಡೇರಿಸುತ್ತಾರೆ ಮತ್ತು ದೃಢಸ್ಯು ಎಂಬ ಪುತ್ರನನ್ನು ಪಡೆಯುತ್ತಾರೆ. ಲೋಪಾಮುದ್ರಾ ತನ್ನ ಬೇಸರ, ಆಕಾಂಕ್ಷೆಗಳನ್ನು ಅಭಿವ್ಯಕ್ತಿಸಲು ರಚಿಸಿದ ಶ್ಲೋಕಗಳು ಋಗ್ವೇದದಲ್ಲಿ ಅಡಕಗೊಂಡಿವೆ.

ಮೈತ್ರೇಯೀ

ಋಗ್ವೇದದ ಸರಿಸುಮಾರು ಒಂದು ಸಾವಿರ ಮಂತ್ರಗಳಲ್ಲಿ ಹತ್ತಕ್ಕೂ ಹೆಚ್ಚು ಮಂತ್ರಗಳು ಮೈತ್ರೇಯಿಯ ಹೆಸರಿನಲ್ಲಿವೆ. ಮೈತ್ರೇಯಿ ಅಸಾಧಾರಣ ಜ್ಞಾನದಿಂದ ಕೂಡಿದ ಬ್ರಹ್ಮವಾದಿನಿಯಾಗಿದ್ದಳೆಂದು ಇತಿಹಾಸ ಹೇಳುತ್ತದೆ. ಯಾಜ್ಞವಲ್ಕ್ಯರ ಪತ್ನಿಯಾದ ಈಕೆ, ಪತಿಯೊಂದಿಗೆ ನಡೆಸಿದ ಸಂವಾದವು ಅಪಾರ ಜ್ಞಾನದಿಂದ ಕೂಡಿದೆ. ಯಾಜ್ಞವಲ್ಕ್ಯರು ಗೃಹಸ್ಥಾಶ್ರಮದ ಕರ್ತವ್ಯಗಳನ್ನು ಪೂರೈಸಿ ತಪಶ್ಚರಣೆಗೆಂದು ಹೊರಟು ನಿಂತಾಗ ತಮ್ಮ ಸಂಪತ್ತಿನಲ್ಲಿ ತಮಗೇನು ಬೇಕೋ ಅದನ್ನು ಆಯ್ದುಕೊಳ್ಳುವಂತೆ ಪತ್ನಿಯರಿಗೆ ಹೇಳುತ್ತಾರೆ. ಮೊದಲನೆಯ ಪತ್ನಿ ಕಾತ್ಯಾಯನಿಯು ಗುರುಕುಲದ ಜವಾಬ್ದಾರಿಯನ್ನು ಹೊರುತ್ತಾಲೆ. ಸಹಜವಾಗಿಯೇ ಆಶ್ರಮಕ್ಕೆ ಸಂಬಂಧಪಟ್ಟ ಎಲ್ಲ ಸಂಪತ್ತಿನ ಉಸ್ತುವಾರಿ ಅವಳದಾಗುತ್ತದೆ. ಮೈತ್ರೇಯಿಯು ಈ ಯಾವ ಲೌಕಿಕ ಜವಾಬ್ದಾರಿಯನ್ನಾಗಲೀ ಸಂಪತ್ತನ್ನಾಗಲೀ ಕೇಳದೆ, ಯಾವುದನ್ನು ಹೊಂದುವುದರಿಂದ ತನ್ನ ತಿಳಿವು ಹೆಚ್ಚುವುದೋ ಕ್ಲೇಷ ಕಳೆಯುವುದೋ ಬ್ರಹ್ಮಜ್ಞಾನ ಪ್ರಾಪ್ತವಾಗುವುದೋ ಅಂತಹದನ್ನು ನಿಡುವಂತೆ ಕೇಳಿಕೊ್ಳ್ಳುತ್ತಾಳೆ. ಯಾಜ್ಞವಲ್ಕ್ಯರು ಪತ್ನಿಯ ಬುದ್ಧಿವಂತಿಕೆಯನ್ನು ಮೆಚ್ಚಿ ಸೂಕ್ತ ಬೋಧನೆ ನೀಡುತ್ತಾರೆ. 

ಗಾರ್ಗಿ ವಾಚಕ್ನವಿ

ವಚಕ್ನು ಋಷಿಯ ಮಗಳಾದ ಗಾರ್ಗಿ ಬ್ರಹ್ಮವಾದಿನಿಯಾಗಿದ್ದವಳು. ಅಪಾರ ಜ್ಞಾನ ಹೊಂದಿದ್ದ ಈಕೆ ಅಷ್ಟೇ ತೀಕ್ಷ್ಣವಾದ ಪ್ರಾಶ್ನಿಕ ಬುದ್ಧಿಯನ್ನೂ ಹೊಂದಿದ್ದಳು. ಸಕಲ ಚರಾಚರಗಳ ಅಸ್ತಿತ್ವ ಮೂಲದ ಕುರಿತು ಈಕೆ ಎತ್ತಿದ ಅನೇಕ ಪ್ರಶ್ನೆಗಳು ಋಗ್ವೇದದಲ್ಲಿ ಅಡಕಗೊಂಡಿವೆ. ಈ ಮಂತ್ರಗಳಲ್ಲಿ ಸ್ತ್ರೀಯರ ವೈವಚಾರಿಕ ಮನೋಭಾವದ ಪ್ರತಿನಿಧಿಯಂತೆ ಗಾರ್ಗಿ ಕಂಡುಬರುತ್ತಾಳೆ. ಜನಕ ಮಹಾರಾಜನು ಏರ್ಪಡಿಸಿದ್ದ ಬ್ರಹ್ಮ ಯಜ್ಞದಲ್ಲಿ ಪಾಲ್ಗೊಂಡಿದ್ದ ಈಕೆ ತನ್ನ ಪ್ರಶ್ನೆಗಳ ತರ್ಕದಿಂದ ಅನೇಕಾನೇಕ ಋಷಿಗಳನ್ನು ದಂಗುಬಡಿಸಿದ್ದಳೆಂದು ಹೇಳಲಾಗುತ್ತದೆ. ಬ್ರಹ್ಮಜ್ಞನಾಗಿದ್ದ ಯಾಜ್ಞವಲ್ಕ್ಯ ಕೂಡ ಈಕೆ ಕೇಳಿದ ಪ್ರಶ್ನೆಗೆ ಉತ್ತರಿಸಲು ದೀರ್ಘಕಾಲ ತೆಗೆದುಕೊಂಡನೆಂದು ಐತಿಹ್ಯವಿದೆ.

ರೋಮಷಾ

ಈಕೆ ಒಬ್ಬ ಬ್ರಹ್ಮವಾದಿನಿ. ಋಗ್ವೇದದ ಒಂದು ಋಚೆ ಈಕೆಯ ಹೆಸರಲ್ಲಿದೆ. ಇವಳು ಬೃಹಸ್ಪತಿಯ ಮಗಳು. ಸಾಮವೇದದ ಹಲವು ಮಂತ್ರಗಳ ದ್ರಷ್ಟಾರಳೀಕೆ. ಈಕೆಯ ಪತಿ ಭಾವಯಭ್ಯ ರಾಜನೂ ಋಷಿಯಾಗಿದ್ದು, ಒಂದು ಋಚೆಯನ್ನು ರಚಿಸಿದ್ದಾನೆ. ರೋಮಷಾ ರಚಿಸಿರುವ ರುಚೆಯು ತನ್ನ ಪತಿಯ ಸ್ಪರ್ಶಕ್ಕೆ ಕಾದಿರುವ ಪತ್ನಿಯ ಭಾವತೀವ್ರತೆಯನ್ನು ಅಭಿವ್ಯಕ್ತಿಸುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.