ನಮಗೆ ಸಾಯಲಿಕ್ಕೂ ಅಹಂತೃಪ್ತಿಯಾಗಬೇಕು! : ಅಧ್ಯಾತ್ಮ ಡೈರಿ

ನಮಗಿರೋದು ಸಾವಿನ ಭಯವಲ್ಲ. ಸಾವಿನ ಕಾರಣದ ಭಯ. ನಮಗಿರುವ ‘ಅನ್ಯ’ದ ಭಯವೇ ಕರೋನಾ ಅಥವಾ ಅಂತಹ ರೋಗಗಳ ಕುರಿತ ಭಯಕ್ಕೆ ಕಾರಣ. ಅದು ಹೊರಗಿನದ್ದು. ಸಾಯುವುದೇ ಆದರೆ ನನ್ನ ಮೂರ್ಖತನಗಳಿಂದಲೇ ಸಾಯುವೆ, ಎಲ್ಲಿಂದಲೋ ಬಂದ ಪರದೇಶಿ ರೋಗವೇನು ಕೊಲ್ಲೋದು ಅನ್ನುವ ಹುಂಬತನವೂ ನಮ್ಮ ಇಷ್ಟೆಲ್ಲ ಕಾಳಜಿಗೆ ಕಾರಣವಿರಬಹುದು….! | ಅಲಾವಿಕಾ

ಅಹಂಕಾರ ಕೇವಲ ಒಂದು ವ್ಯಕ್ತಿಗೆ ಸೀಮಿತವಲ್ಲ. ಸಾಮುದಾಯಿಕ ಅಹಂಕಾರವೂ ಇರುತ್ತದೆ. ಸಾಮಾಜಿಕವೂ ಇರುತ್ತದೆ. ಸಾವಿನ ವಿಷಯ ಬಂದಾಗ ವ್ಯಕ್ತಿ ಸೇರಿದಂತೆ, ಸಮುದಾಯ – ಸಮಾಜಗಳು ಕೂಡಾ ಅಲ್ಲೊಂದು ಅಹಮಿಕೆಯನ್ನು ಹುಡುಕಿಕೊಳ್ಳುತ್ತವೆ.

ಕರೋನಾ ವೈರಸ್ ಕುರಿತ ಭಯ, ಮುಂಜಾಗ್ರತಾ ಕ್ರಮ, ಕಟ್ಟುನಿಟ್ಟಿನ ಆದೇಶಗಳು ಇತ್ಯಾದಿ ಎಲ್ಲ ನೋಡುವಾಗ ಮೇಲಿನ ಅನ್ನಿಸಿಕೆ ಮತ್ತಷ್ಟು ಬಲವಾಗುತ್ತಿದೆ. ಅಂಕಿಅಂಶಗಳ ಪ್ರಕಾರ ಈವರೆಗೆ ಕರೋನಾ ದೆಸೆಯಲ್ಲಿ ಸತ್ತವರ ಸಂಖ್ಯೆ ಪರಿಸರ ಮಾಲಿನ್ಯದಿಂದ ಸತ್ತವರ / ಸಾಯುತ್ತಿರುವವರ ಸಂಖ್ಯೆಯ ಕಾಲು ಭಾಗದಷ್ಟೂ ಇಲ್ಲ. ಹಸಿವಿನಿಂದ ಸತ್ತವರ/ ಸಾಯುತ್ತಿರುವವರ ಸಂಖ್ಯೆಗೆ ಹೋಲಿಸಿದರೆ ನಗಣ್ಯ. ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ತಿರುವವರ, ಸಾಲಸೋಲಗಳಿಂದ ನೊಂದು ಸಾಯುತ್ತಿರುವವರ, ನಿರುದ್ಯೋಗಕ್ಕೆ ಬೇಸತ್ತು ನೆಗೆದುಬೀಳುತ್ತಿರುವವರ ಸಂಖ್ಯೆಗಳಿಗೆ ಹೋಲಿಸಿದರೆ ಈ ಸಂಖ್ಯೆ ಏನೂ ಅಲ್ಲ. ಕೊನೆಗೆ ಜಾತಿ – ಮತೀಯ ಗಲಭೆಗಳಲ್ಲಿ ಹೊಡೆದಾಡಿಕೊಂಡು ಸತ್ತವರ ಸಂಖ್ಯೆಗೆ ಹೋಲಿಸಿದರೂ ಕರೋನಾ ಸಾವಿನ ಸಂಖ್ಯೆ ಅತ್ಯಂತ ನಿರುಪದ್ರವಿ.

ಆದರೆ ನಾವು ಕರೋನಾ vs ಮೇಲಿನ ಕಾರಣಗಳನ್ನು ಎದುರಿಟ್ಟು ನೋಡುವಾಗ ಯಾವುದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ತಿದ್ದೇವೆ? ಒಂದು ಸೀಸನ್ ಮುಗಿಸಿ ಹೋಗುವ ಕರೋನಾಕ್ಕೆ ಹೊರತು ಸದಾ ಕಾಲ ಪಿಡುಗಾಗಿ ಅಂಟಿಕೊಂಡಿರುವ ಉಳಿದ ಕಾರಣಗಳಿಗೆ ಅಲ್ಲವೇ ಅಲ್ಲ!

ಕರೋನಾಕ್ಕೆ ಹೆದರಿ ನಾವು ಕೈತೊಳೆದುಕೊಳ್ಳುವಷ್ಟು ಸಲ ದ್ವೇಷ – ಅಸಹಿಷ್ಣುತೆ – ದಬ್ಬಾಳಿಕೆಯ ಮನಸ್ಥಿತಿಗಳನ್ನು ತೊಳೆದುಕೊಳ್ಳುತ್ತಿದ್ದೇವೆಯೇ? ಈ ಕಾರಣಗಳಿಂದ ಸಂಭವಿಸುವ ಸಾವುಗಳ ಸಂಖ್ಯೆ ಹೆಚ್ಚು, ನೆನಪಿರಲಿ. ನಾಳೆ ನಾವು ರಸ್ತೆಯಲ್ಲಿ ನಡೆದುಹೋಗುವಾಗ ಯಾರಯಾರದೋ ನಡುವಿನ ದೊಂಬಿಯಲ್ಲಿ ನಮಗೂ ಏಟು ಬಿದ್ದು ಸಾಯಬಹುದು. ಮುಂಜಾಗ್ರತಾ ಕ್ರಮವಾಗಿ ಕರ್ಫ್ಯೂ ವಿಧಿಸಿದರೂ ಅದು ತಾತ್ಕಾಲಿಕವೇ ಹೊರತು, ಶಾಶ್ವತ ಪರಿಹಾರ ನೀಡುವ ವ್ಯಾಕ್ಸಿನೇಶನ್ ಬಳಸುವಲ್ಲಿ ನಾವು ಆಸಕ್ತಿ ತೋರಿದ್ದೇವೆಯೇ? ನಾವು ಗಲಭೆಕೋರರಲ್ಲದೆ ಇದ್ದರೂ ಕೊನೆಪಕ್ಷ ನಮ್ಮ ಆದ್ಯತೆಯನ್ನು ಬಾಯಿಬಿಟ್ಟು ಹೇಳುತ್ತೇವೆಯೇ? ಸುತ್ತಲಿನ ಜನರಲ್ಲಿ ಪ್ರೀತಿಯನ್ನು ಬಿತ್ತಿ ಸಮಾಜವನ್ನು ಸುಂದರವಾಗಿಟ್ಟುಕೊಳ್ಳುವ ಮತ್ತು ಗಲಭೆಗಳು ನುಸುಳದಂತೆ ಒಗ್ಗಟ್ಟಿನ ಬೇಲಿ ಹಾಕುವ ಜವಾಬ್ದಾರಿ ತೋರಿದ್ದೇವೆಯೇ?

ಕರೋನಾಕ್ಕೆ ಹೆದರಿ ಮಾಸ್ಕ್ ಹಾಕಿಕೊಂಡು ಓಡಾಡುವ ನಾವು ಮಕ್ಕಳು ಹದಿಹರೆಯಕ್ಕೆ ಕಾಲಿಟ್ಟ ಕೂಡಲೇ ಟೂವೀಲರ್ ಬೆಲೆ ಮತ್ತು ಇಎಮ್ಐ ಗೂಗಲ್ ಮಾಡತೊಡಗುತ್ತೇವಲ್ಲ? ಮನೆ ಕಟ್ಟಲು ಅಡ್ಡಿ ಎಂದೋ, ರಸ್ತೆಗೆ ಬೇಕಂತಲೋ, ಇನ್ಯಾವ ಕಾರಣಗಳಿಗೋ ಮರಗಳನ್ನು ಕಡಿಕಡಿದು ಉರುಳಿಸುತ್ತೇವಲ್ಲ… ಕಡಿಯುವವರಿಗೆ ಕುಮ್ಮಕ್ಕು ಕೊಡುತ್ತೇವಲ್ಲ… ಪರಿಸರ ಮಾಲಿನ್ಯ ನಮ್ಮ ಜೀವಿತದ ಸರಾಸರಿಯನ್ನೆ ಕಡಿತ ಮಾಡುತ್ತಿದೆ, ಮತ್ತು ಮುಂದಿನ ಪೀಳಿಗೆಯನ್ನು ಜನ್ಮತಃ ಅಸ್ವಸ್ಥಗೊಳಿಸುತ್ತಿದೆ ಅನ್ನುವುದನ್ನು ನಾವೇಕೆ ಯೋಚಿಸುತ್ತಿಲ್ಲ? ಇನ್ನು ನಮ್ಮ ಸ್ವಚ್ಛತೆ, ನಾವು ರಾಶಿ ಹಾಕುತ್ತಿರುವ ಗಾರ್ಬೇಜುಗಳ ವಿಷಯ ಮಾತಾಡುವುದೇ ಬೇಡ!

ಮಹಾನಗರಗಳಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರು ಮತ್ತು ಸಾಯುತ್ತಿರುವವರ ಸಂಖ್ಯೆಯನ್ನೊಮ್ಮೆ ಹುಡುಕಿ ನೋಡಿ… ಅದರ ಮುಂದೆ ಕರೋನಾ – ಮಹಾಮಾರಿಯಿರಲಿ, ಪಾಪ ಈಗಿನ್ನೂ ಕಸಾಯಿಕಾನೆಯಲ್ಲಿ ಕೆಲಸಕ್ಕೆ ಸೇರಿರುವ ಮುಗ್ಧೆ ಅನ್ನಿಸದೆ ಇದ್ದರೆ ಹೇಳಿ.

ನಮಗಿರೋದು ಸಾವಿನ ಭಯವಲ್ಲ. ಸಾವಿನ ಕಾರಣದ ಭಯ. ನಮಗಿರುವ ‘ಅನ್ಯ’ದ ಭಯವೇ ಕರೋನಾ ಅಥವಾ ಅಂತಹ ರೋಗಗಳ ಕುರಿತ ಭಯಕ್ಕೆ ಕಾರಣ. ಅದು ಹೊರಗಿನದ್ದು. ಎಲ್ಲಿಂದಲೋ ಬಂದ ರೋಗ. ನಮ್ಮನ್ನು ಹೇಗೆಲ್ಲ ಕೊಲ್ಲುತ್ತದೆಯೋ ಅನ್ನುವ ಭಯ. ಸಾಯುವುದೇ ಆದರೆ ನನ್ನ ಮೂರ್ಖತನಗಳಿಂದಲೇ ಸಾಯುವೆ, ಎಲ್ಲಿಂದಲೋ ಬಂದ ಪರದೇಶಿ ರೋಗವೇನು ಕೊಲ್ಲೋದು ಅನ್ನುವ ಹುಂಬತನವೂ ನಮ್ಮ ಇಷ್ಟೆಲ್ಲ ಕಾಳಜಿಗೆ ಕಾರಣವಿರಬಹುದು.

ಹಾಗಂತ ಈಗ ಸಾಂಕ್ರಾಮಿಕವಾಗಿ ಹಬ್ಬುತ್ತಿರುವ ರೋಗವನ್ನು ನಿರಾಕರಿಸುತ್ತಿಲ್ಲ, ಅದರ ಕಾಳಜಿಯೂ ಬೇಡವೆನ್ನುತ್ತಿಲ್ಲ. ರೋಗ ಮತ್ತು ಸಾವಿನ ಕುರಿತು ಇಂಥ ಭಯ ಮತ್ತು ನಿರೋಧಕ ಕ್ರಮಗಳ ಜವಾಬ್ದಾರಿ ಉಳಿದೆಲ್ಲ ವಿಷಯಗಳಲ್ಲೂ ಇರಲಿ, ತುಸು ಹೆಚ್ಚೇ ಇರಲಿ ಅನ್ನುವ ಆಲೋಚನೆಯಷ್ಟೆ. ನಮ್ಮ ರೋಷ – ದ್ವೇಷದ ಮನೋರೋಗಗಳು, ಜಾತೀಯತೆಯ ಸಾಂಕ್ರಾಮಿಕ ಪಿಡುಗು, ಶ್ರೇಷ್ಠತೆಯ ಅಹಂಕಾರಗಳು ಇವೆಲ್ಲ ನಮ್ಮನ್ನು ನಿತ್ಯವೂ ಕೊಲ್ಲುವ ಸುಪ್ತ ರೋಗಗಳು. ಉದಾತ್ತ ಮೌಲ್ಯಗಳನ್ನು ರೂಢಿಸಿಕೊಂಡು ವಿಶಾಲ ಮನೋಭಾವ ಬೆಳೆಸಿಕೊಳ್ಳುವುದೇ  ಇದಕ್ಕಿರುವ ವ್ಯಾಕ್ಸಿನೇಶನ್. ಹಾಗೆಯೇ ಪರಿಸರ ಮಾಲಿನ್ಯ, ವಾಯು – ಜಲ ಮಾಲಿನ್ಯಗಳಿಂದ ಬರುವ ರೋಗಗಳನ್ನು ತಡೆಗಟ್ಟಲು ಏನು ಮಾಡಬೇಕು ಅನ್ನೋದು ನಮಗೆ ಗೊತ್ತೇ ಇದೆ. ನೈಸರ್ಗಿಕ ಸಂಪನ್ಮೂಲಗಳನ್ನು ಕಾಯ್ದಿಟ್ಟುಕೊಂಡು ಕಾಪಾಡುವುದೇ ಈ ನಿಟ್ಟಿನಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಮೊದಲ ಹೆಜ್ಜೆ.

ಹಾಗೇ ಆಡಳಿತದಲ್ಲಿರುವ ಜನರು ಕರೋನಾದಂಥ ರೋಗ ಬಂದಾಗ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಮಾಜದಲ್ಲಿ ಶಾಂತಿ ನೆಲೆಸಲು ಅಗತ್ಯವಿರುವ ನೈತಿಕ ಪ್ರಜ್ಞೆ ಹರಡಲಿಕ್ಕೂ ಕ್ರಮ ತೆಗೆದುಕೊಳ್ಳಬೇಕು. ಸ್ಥಳೀಯ ಜನರ ಆರೋಗ್ಯ ಕಸಿಯುವ ಆದರೆ ಅತ್ಯಗತ್ಯವೂ ಆಗಿರುವ ರಿಯಾಕ್ಟರುಗಳನ್ನೋ ಗಣಿಗಾರಿಕೆಯನ್ನೋ ಸ್ಥಾಪಿಸುವಾಗ ಸೂಕ್ತ ಕಾಳಜಿ ವಹಿಸಿ ಜನರಿಗೆ ಸೌಕರ್ಯಗಳನ್ನು ನೀಡಬೇಕು. ನದಿ – ಕೆರೆಗಳ ಶುದ್ಧೀಕರಣಕ್ಕೆ ಅನುಗಾಲವೂ ಆದ್ಯತೆ ನೀಡಬೇಕು. ಈ ವಿಷಯಗಳಲ್ಲಿ ನಿಯಮ ಮೀರುವವರಿಗೆ ಅಧಿಕಾರಿಗಳು ಲಾಲಸೆಗಳನ್ನು ಅದುಮಿಟ್ಟುಕೊಂಡು ಕಠಿಣ ಶಿಕ್ಷೆ ನೀಡಬೇಕು… ಅವ್ಯಾವುದನ್ನೂ ಮಾಡದೆ ಏಕಾಏಕಿ ಯಾವುದೋ ಪರದೇಶಿ ವೈರಸ್ ಬಂದಾಗ ಗುರಾಣಿ ಹಿಡಿದರೆ ಅದೊಂದು ತೋರುಗಾಣಿಕೆ ಕಾಳಜಿಯಾಗಿ ಮಾತ್ರ ಕಾಣುತ್ತದೆ, ಅಷ್ಟೇ.

ಇಷ್ಟಕ್ಕೂ ಕಾರಣಗಳೇನೇ ಇರಲಿ, ಯಾವುದೇ ಅಸಹಜ ಸಾವೂ ಅಂತಿಮವಾಗಿ ಸಾವೇ. ಆದ್ದರಿಂದ ಅದರ ಕಾರಣಗಳನ್ನು ಅಡ್ರೆಸ್ ಮಾಡುವಲ್ಲಿ ತಾರತಮ್ಯ ತೋರದೆ ಎಚ್ಚರವಹಿಸುವ ಜವಾಬ್ದಾರಿ ನಮ್ಮೆಲ್ಲರದೂ ಆಗಿದೆ. ಆಂತರಿಕವಾಗಿ ಸತ್ವಶಾಲಿಗಳಾಗುವುದು ನಮ್ಮ ಸಾಮಾಜಿಕ ಕಾಯಿಲೆಗಳಿಗೆ ಪ್ರತಿರೋಧ ಒಡ್ಡಿದರೆ, ರೋಗನಿರೋಧಕ ಆಹಾರ ಪದ್ಧತಿ ರೂಢಿಸಿಕೊಳ್ಳುವುದು ಮತ್ತು ಪರಿಸರ ಸಂರಕ್ಷಣೆ ನಮ್ಮ ಅದೆಷ್ಟೋ ಬಾಹ್ಯ ಕಾಯಿಲೆಗಳಿಗೆ ಪ್ರತಿರೋಧ ಒಟ್ಟುತ್ತವೆ. ಈ ಸಂಗತಿಗಳು ಸಾರ್ವಕಾಲಿಕ ಗಮನ ಬೇಡುವಂಥವು. ಕರೋನಾ ಗದ್ದಲ ಮುಗಿದ ಮೇಲಾದರೂ ಈ ನಿಟ್ಟಿನಲ್ಲಿ ನಮ್ಮ ನಮ್ಮ ಕ್ಷಮತೆ ನೋಡಿಕೊಂಡು ಜಾಗ್ರತರಾಗುವುದು ಸೂಕ್ತ. 

Leave a Reply