ವೇದ ಸಾಹಿತ್ಯದಲ್ಲಿದೆ ಕೂಡಿ ಬಾಳುವ ಪಾಠ…

Pandurang_Sadashiv_Saneನಮಗೆ ಉಂಟಾಗುವ ಸುಖದುಃಖಗಳನ್ನು ಅನುಭವಿಸುವಂತೆಯೇ ಎಲ್ಲರ ಸುಖದುಃಖಗಳನ್ನೂ ಅರಿಯುವುದೇ ಅದ್ವೈತದ ಅನುಭವ. ಇನ್ನೊಬ್ಬರಿಗೆ ನೋವಾಗುವಂತೆ ನಾವು ವರ್ತಿಸಬಾರದು ಎಂಬುದು ಇದರಿಂದ ನಾವು ಕಲಿಯಬೇಕಾದ ಪಾಠ. ಎರಡನೆಯವರಿಗೆ ನೋವಾಗದಂತೆ, ಅವರಿಗೆ ಆನಂದ ಉಂಟಾಗುವಂತೆ ನನ್ನ ನಡತೆ ಇರಬೇಕು ಎಂದು ಅದ್ವೈತವು ಹೇಳುತ್ತದೆ  ~ ಸಾನೆ ಗುರೂಜಿ

ಭಾರತೀಯ ಸಂಸ್ಕೃತಿಯಲ್ಲಿ ಅದ್ವೈತದ ನಾದವೇ ತುಂಬಿದೆ. ಈ ಸಂಸ್ಕೃತಿಗೆ ಅದ್ವೈತದ ಮಂಗಲ ಪರಿಮಳವಿದೆ. ಭಾರತದ ಉತ್ತರದಲ್ಲಿ ಎತ್ತರವಾದ, ಭವ್ಯವಾದ ಗೌರಿಶಿಖರವು ನಿಂತಂತೆ ಭವ್ಯವೂ ಉಜ್ವಲವೂ ಆದ ಅದ್ವೈತದ ದರ್ಶನವು ಭಾರತೀಯ ಸಂಸ್ಕೃತಿಯ ಬೆಂಗಾವಲಾಗಿ ನಿಂತಿದೆ. ಶಿವನಿದ್ದಲ್ಲಿ ಶಕ್ತಿಯು, ಸತ್ಯವಿದ್ದಲ್ಲಿ ಸಾಮರ್ಥ್ಯವು, ಪ್ರೇಮವಿದ್ದಲ್ಲಿ ಪರಾಕ್ರಮವು ಇರುತ್ತದೆ. ಅಂತೆಯೇ ಅದ್ವೈತವೆಂದರೆ ಶಿವತ್ವ.

ಆದ್ದರಿಂದಲೇ ಭಾರತದ ಋಷಿಗಳು  ಅದ್ವೈತವನ್ನು ಎತ್ತಿ ಹಿಡಿದರು.
ಸಹನಾವವತು, ಸಹನೌಭುನಕ್ತು ಸಹವೀರ್ಯಂಕರವಾವಹೈ|
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ||
ಓಂ ಶಾಂತಿಃ ಶಾಂತಿಃ ಶಾಂತಿಃಎಂಬ ಪವಿತ್ರ ಮಂತ್ರವನ್ನು ನಮಗೆ ನೀಡಿದರು. ಜಗತ್ತಿನಲ್ಲಿ ಒಡಕಿನಿಂದ ದುಃಖ, ಸಂಘಟನೆಯಿಂದ ಸುಖವಿದೆ. ಸುಖಕ್ಕಾಗಿ ಸಾಹಸಪಡುವುದಿದ್ದರೆ, ಅದಕ್ಕೆ ಅದ್ವೈತವೊಂದೇ ಮಾರ್ಗ ಎಂದು ಸಾರಿದರು.

ಆದ್ದರಿಂದ, ಈ ಮಂತ್ರವನ್ನು ಎಲ್ಲೆಡೆ ಹರಡಬೇಕು. ಅದರಂತೆ ನಡೆಯಬೇಕು. ಈ ಮಂತ್ರವು ಗುರು – ಶಿಷ್ಯರಿಗಷ್ಟೇ ಅಲ್ಲ, ಪ್ರತಿಯೊಂದು ಜೀವಜೀವಗಳ ನಡುವೆಯೂ ಮೊಳಗಲಿ. ಎಲ್ಲಿ ಬ್ರಾಹ್ಮಣ – ಬ್ರಾಹ್ಮಣೇತರರ ನಡುವೆ ಭೇದ ತೋರಲಾಗುತ್ತಿದೆಯೋ ಅಲ್ಲಿ ಈ ಮಂತ್ರವನ್ನು ಹೇಳಲಿ. ಸ್ಪೃಶ್ಯ – ಅಸ್ಪೃಶ್ಯವೆಂದು ಜನರನ್ನು ದೂರವಿಡಲಾಗುತ್ತಿದೆಯೇ? ಅಲ್ಲಿ ಎಲ್ಲರೂ ಈ ಮಂತ್ರವನ್ನು ಹೇಳಿ ಅರ್ಥ ತಿಳಿಸಲಿ. ಹಿಂದೂ – ಮುಸಲ್ಮಾನರು ಪರಸ್ಪರ ದ್ವೇಷ ಮಾಡುತ್ತಿದ್ದಾರೆಯೇ? ಅವರು ಒಂದೇ ಸ್ಥಳದಲ್ಲಿ ಕುಳಿತು ಈ ಮಂತ್ರವನ್ನು ಉಚ್ಚರಿಸಲಿ. ಗುಜರಾತಿಗಳು – ಮಹಾರಾಷ್ಟ್ರೀಯರು, ಮಹಾರಾಷ್ಟ್ರೀಯರು – ಕನ್ನಡಿಗರು ಪರಸ್ಪರ ದ್ವೇಷಿಸುವರೆ? ಹಾಗಿದ್ದರೆ ಅವರೂ ಒಂದೆಡೆ ಸೇರಿ ಈ ಮಂತ್ರವನ್ನು ಪಠಿಸಲಿ. ಒಗ್ಗಟ್ಟಿನಿಂದ ಬಾಳುವವರಿಗಾಗಿ ಈ ಮಂತ್ರವಲ್ಲ. ಭಿನ್ನಭಾವವನ್ನು ಅಳಿಸುವುದಕ್ಕಾಗಿಯೇ ಈ ಮಂತ್ರವಿದೆ. ಜಗತ್ತಿನ ಎಲ್ಲೆಡೆ ಕಂಡುಬರುವ ಭೇದಭಾವದ ಕತ್ತಲನ್ನು ಓಡಿಸುವುದಕ್ಕೆಂದೇ ಈ ಮಂತ್ರವೆಂಬ ತೇಜಸ್ವೀದೀಪವಿದೆ.

ಅದ್ವೈತವೆಂದರೆ, “ತನ್ನಂತೆ ಪರರು” ಎಂಬ ಭಾವನೆ. ಸಮರ್ಥ ರಾಮದಾಸರು ಎಲ್ಲ ಅದ್ವೈತದ ತತ್ತ್ವಜ್ಞಾನವನ್ನು ಒಂದು ಶ್ಲೋಕದಲ್ಲಿ ಹೇಳಿರುವರೆಂದು ನನ್ನ ಅಭಿಮತ. ಅದ್ವೈತದ ಪ್ರತ್ಯಕ್ಷ ವ್ಯಾವಹಾರಿಕ ಸ್ವರೂಪವನ್ನು ಅವರು ಅದರಲ್ಲಿ ತಿಳಿಸಿಕೊಟ್ಟಿದ್ದಾರೆ. “ನಮ್ಮನ್ನು ಜಿಗುಟಿಕೊಂಡರೆ ನಮಗೆ ನೋವಾಗುತ್ತದೆ, ಅಂತೆಯೇ ಪರರಿಗೂ” ಎಂದು ಅವರು ಹೇಳಿದ್ದಾರೆ.

ನನಗೆ ಹೊಡೆದರೆ ನೋವು, ಉಣ್ಣಲು ಇಲ್ಲದಿದ್ದರೆ ಹೊಟ್ಟೆಸಂಕಟ, ಅಪಮಾನವಾದರೆ ಸಾವು, ಶಿಕ್ಷಣ ದೊರೆಯದೆ ಇದ್ದರೆ ನಾಚಿಕೆ – ಇವೆಲ್ಲವೂ ನನಗೆ ಹೇಗೆ ಆಗುತ್ತದೆಯೋ ಅಂತೆಯೇ ಇತರರಿಗೂ ಆಗುತ್ತದೆ. ನನ್ನಂತೆಯೇ ಎಲ್ಲರಿಗೂ ಮನಸ್ಸು, ಹೃದಯಗಳಿವೆ. ನನಗೆ ವಿಕಾಸಗೊಳ್ಳುವ, ಸಮ್ಮಾನ ಪಡೆಯುವ ಇಚ್ಛೆಗಳಿರುವಂತೆಯೇ ಇತರರಿಗೂ ಇರುತ್ತದೆ. ನಮಗೆ ಉಂಟಾಗುವ ಸುಖದುಃಖಗಳನ್ನು ಅನುಭವಿಸುವಂತೆಯೇ ಎಲ್ಲರ ಸುಖದುಃಖಗಳನ್ನೂ ಅರಿಯುವುದೇ ಅದ್ವೈತದ ಅನುಭವ. ಇನ್ನೊಬ್ಬರಿಗೆ ನೋವಾಗುವಂತೆ ನಾವು ವರ್ತಿಸಬಾರದು ಎಂಬುದು ಇದರಿಂದ ನಾವು ಕಲಿಯಬೇಕಾದ ಪಾಠ. ಎರಡನೆಯವರಿಗೆ ನೋವಾಗದಂತೆ, ಅವರಿಗೆ ಆನಂದ ಉಂಟಾಗುವಂತೆ ನನ್ನ ನಡತೆ ಇರಬೇಕು ಎಂದು ಅದ್ವೈತವು ಹೇಳುತ್ತದೆ.

ಅದ್ವೈತವೆಂದರೆ ಅಮೂರ್ತವಾದ ಕಲ್ಪನೆಯಲ್ಲ. ಅದು ಪ್ರತ್ಯಕ್ಷ ವ್ಯವಹಾರ. ಅದು ಬಾಯಿಮಾತಿಗೆ ಸೀಮಿತವಾದುದಲ್ಲ, ಅದ್ವೈತವೆಂದರೆ ಅನುಭೂತಿ, ಸಹಾನುಭೂತಿ.

ಹಾಗೆಂದು ಋಷಿಗಳು ಕೇವಲ ಅದ್ವೈತದ ಕಲ್ಪನೆಯಲ್ಲೇ ತಲ್ಲೀನರಾಗಿಲ್ಲ. ಅವರು ಜಡ – ಚೇತನ ಜಗತ್ತಿನೊಡನೆ ಒಂದಾದರು. ರುದ್ರಸೂಕ್ತವನ್ನು ಬರೆದ ಋಷಿಯು ಮನುಷ್ಯರ ಬೇಡಿಕೆಗಳ ಕಾಳಜಿ ವಹಿಸಿದ್ದಾನೆ. ಮಾನವ ಜನಾಂಗದ ಎಲ್ಲ ಕುಂದುಕೊರತೆಗಳನ್ನು ತನ್ನವೇ ಎಂದು ತಿಳಿದಿದ್ದಾನೆ. ದೇಹ, ಮನಸ್ಸು ಮತ್ತು ಬುದ್ಧಿ – ಇವುಗಳ ಹಸಿವನ್ನು ಅನುಭವಿಸಿದ್ದಾನೆ, ಅರಿತುಕೊಂಡಿದ್ದಾನೆ.

ಆದ್ದರಿಂದಲೇ ಅವನು ಕೇಳುತ್ತಿದ್ದಾನೆ;
ಘೃತಂ ಚ ಮೆ, ಮಧುಂ ಚ ಮೆ, ಗೋಧೂಮಾಶ್ಚ ಮೆ, ಸುಖಂ ಚ ಮೆ
ಶಯನಂ ಚ ಮೇ, ಹ್ರೀಶ್ಚ ಮೆ, ಧೀಶ್ಚ ಮೆ, ಧಿಷಣಾ ಚ ಮೆ ||
ಅರ್ಥಾತ್; ತುಪ್ಪ, ಜೇನುತುಪ್ಪ, ಗೋಧಿ, ಹಾಸಿಗೆ, ನಮ್ರತೆ, ಸಿರಿ, ಬುದ್ಧಿ – ಇವೆಲ್ಲವೂ ನನಗೆ ಬೇಕು ಎಂದು. 

ಇವನ್ನೆಲ್ಲ ಆ ಋಷಿಯು ತನಗಾಗಿ ಬೇಡುತ್ತಿಲ್ಲ. ಆ ಋಷಿಯು ಜಗತ್ತಿನ ಹಿತಚಿಂತಕನಾಗಿದ್ದಾನೆ. ಅವನಿಗೆ ತನ್ನ ಸಹಜೀವಿಗಳ ಕುರಿತು ಕಾಳಜಿ ಇದೆ. ಅವನ್ನೆಲ್ಲ ಅವನು ಕೇಳುತ್ತಿರುವುದು ಇಡೀ ಪ್ರಪಂಚಕ್ಕಾಗಿ. ಇವೆಲ್ಲವೂ ಎಲ್ಲ ಮಾನವರಿಗೂ ಹೇಗೆ ಮತ್ತು ಯಾವಾಗ ದೊರಕೀತೋ ಎಂಬ ಕಳಕಳಿ ಅವನ ಮನಸಿನಲ್ಲಿದೆ. ನನ್ನ ಅಣ್ಣ – ತಂಗಿಯರಿಗೆ, ಅಕ್ಕ – ತಮ್ಮಂದಿರಿಗೆ ಹೊಟ್ಟೆ ತುಂಬ ಆಹಾರ ಯಾವಾಗ ದೊರೆಯುತ್ತದೆ? ಈ ಪ್ರಪಂಚದಲ್ಲಿ ಜ್ಞಾನದೀಪವು ಎಲ್ಲರಿಗೂ ಸಿಕ್ಕುವುದು ಯಾವಾಗ? ಎಲ್ಲರೂ ಸುಖ ಸಮಾಧಾನದಿಂದ ಹೇಗೆ ಬಾಳುವರು? – ಇತ್ಯಾದಿ ಚಿಂತೆಗಳು ಆ ರುದ್ರ ಸೂಕ್ತಕಾರ ಋಷಿಗೆ ಇದೆ. ಅವನು ವಿಶ್ವ ಕುಟುಂಬಿ. ಅವನು ಅದ್ವೈತಿ.

ಪಾಂಡುರಂಗ ಸದಾಶಿವ ಸಾನೆ, ಮಹಾರಾಷ್ಟ್ರದಲ್ಲಿ ಆಗಿಹೋದ (1899 – 1950) ಚಿಂತಕ, ಲೇಖಕ, ಶಿಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತ. ಇವರು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು.  ಮರಾಠಿ ಭಾಷೆಯಲ್ಲಿ ಇವರು ಹಲವು ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ ಶ್ಯಾಮಾ ಚಿ ಆಯಿ ಮತ್ತು ಭಾರತೀಯ ಸಂಸ್ಕೃತಿ ಮುಖ್ಯವಾದವು. ಈ ಲೇಖನವನ್ನು ‘ಭಾರತೀಯ ಸಂಸ್ಕೃತಿ’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. 

1 Comment

Leave a Reply