ಸಾವನ್ನು ಕಲಿಯುವುದು ಎಂದರೆ….

ಸಾವಿಗೆ ಭಯ ಪಡದಿರಲು ಕಲಿತ ಕ್ಷಣದಿಂದ ನಿಜವಾದ ಬದುಕು ಆರಂಭವಾಗುತ್ತದೆ. ಇಲ್ಲವಾದರೆ, ನಮ್ಮ ಜೀವನ ಯಾನವೆಲ್ಲ ಕೇವಲ ಸಾವಿನೆಡೆಗಿನ ಪಯಣವಾಗಿ ಮುಗಿಯುತ್ತದೆ. ~ ಗಾಯತ್ರಿ

ಬೆಳಗನ್ನು ಯಾರೂ ಸಾವಿನ ಉಲ್ಲೇಖದೊಡನೆ ಮಾಡಲು ಇಷ್ಟ ಪಡುವುದಿಲ್ಲ. ಏಕೆಂದರೆ ಬೆಳಗು ಒಂದು ಆರಂಭ; ಮತ್ತು ಸಾವು, ಒಂದು ಅಂತ್ಯ.

ಇಲ್ಲಿ ‘ಒಂದು’ ಆರಂಭ, ‘ಒಂದು’ ಅಂತ್ಯ ಎಂದಿರುವುದು ಉದ್ದೇಶಪೂರ್ವಕ. ಏಕೆಂದರೆ ಇಂದಿನ ಬೆಳಗು, ಲಕ್ಷ – ಕೋಟಿ ಬೆಳಗುಗಳಲ್ಲಿ ಒಂದು ಮಾತ್ರ. ಹಾಗೆಯೇ ಸಾವು ಕೂಡಾ. ಜನನ ಮರಣ ನಿರಂತರ ಚಕ್ರದಲ್ಲಿ ಒಂದು ದೇಹದಿಂದ ಜೀವದ ನಿರ್ಗಮನ, ಕೇವಲ ಒಂದು ಸಾವು ಮಾತ್ರ.

ಬೆಳಗು ಕಳೆದು ರಾತ್ರಿಯಾಗಲೇಬೇಕಿರುವಂತೆ, ಸಾವಿನ ನಂತರ ಹುಟ್ಟು ಖಚಿತ. ಮೋಕ್ಷ ಪಡೆದವರಷ್ಟೆ ಶಾಶ್ವತವಾಗಿ ಈ ಚಕ್ರದಿಂದ ಮುಕ್ತರು. ಆ ಸಂಖ್ಯೆ ಅತ್ಯಂತ ಕಡಿಮೆ ಇರುವುದರಿಂದ, ಜನಸಾಮಾನ್ಯರ ವಿಷಯದಲ್ಲಿ ಹುಟ್ಟಿದವರು ಸಾಯಲೇಬೇಕಿರುವಂತೆ, ಸತ್ತವರು ಮತ್ತೆ ಹುಟ್ಟುತ್ತಾರೆ ಎನ್ನುವುದೂ ಒಂದು ಪ್ರತೀತಿ.

ಇಷ್ಟಕ್ಕೂ ಸಾವಿನ ಶೋಕ ಸಾಪೇಕ್ಷ. ನಮ್ಮದೇ ಸನಿಹದಲ್ಲಿ ಸಾವು ಸುಳಿದಾಗ ನಾವು ಪ್ರತಿಕ್ರಿಯಿಸುವುದಕ್ಕೂ, ಯಾರದೋ ಸಾವಿಗೆ ಪ್ರತಿಕ್ರಿಯಿಸುವುದಕ್ಕೂ ವ್ಯತ್ಯಾಸವಿದೆ. ಹಾಗೆಯೇ ನಮ್ಮ ಆಪ್ತರ, ಆರಾಧ್ಯರ ಸಾವಿಗೂ ಅಪರಿಚಿತರ ಸಾವಿಗೂ. ಹಾಗೆಯೇ ಕಾರಣಗಳಿಗೆ ತಕ್ಕಂತೆ ಸಾವಿಗೆ ನಮ್ಮ ಸ್ಪಂದನೆ ಇರುತ್ತದೆ. ವೈರಸ್ ಸೋಂಕಿನಿಂದ ಯಾರಾದರೂ ಸತ್ತ ಸುದ್ದಿ ಕೇಳಿದಾಗ ನಮಗೆ ದುಃಖ / ನೋವಿಗಿಂತ ಮೊದಲು ಉದಿಸುವ ಭಾವ ಭಯ. ಹಾಗೇ ಹಸಿವೆಯಿಂದ ಯಾರಾದರೂ ಸತ್ತ ಸುದ್ದಿ ಕೇಳಿದಾಗ ಸಂಕಟ. ಹೀಗೇ ಒಂದೊಂದು ಬಗೆಯ ಸಾವಿಗೆ ಒಂದೊಂದು ಬಗೆಯ ಸ್ಪಂದನೆ ನಮ್ಮದು. 

ಸಾವು ನಮ್ಮೊಳಗಿನ ಭಯವನ್ನು, ಭಾವುಕತೆಯನ್ನು ಪ್ರತಿಬಿಂಬಿಸುವ ಕನ್ನಡಿ. ಪ್ರತಿ ಬಾರಿ ಸಾವಿನ ಸುದ್ದಿ ಕೇಳಿದಾಗಲೂ ಈ ಕನ್ನಡಿಯಲ್ಲೊಮ್ಮೆ ನಮ್ಮ ಮುಖ ನೋಡಿಕೊಳ್ಳುತ್ತೇವೆ. ಮತ್ತು, ಆ ಹೊತ್ತಿನ ಕಂಪನಕ್ಕೆ ತಕ್ಕಂತೆ ಇರುತ್ತದೆ ನಮ್ಮ ಶೋಕ.

ಅದು ದುರಂತ ಸಾವಿರಲಿ, ಸಹಜ ಸಾವು…. ಶೋಕದಲ್ಲಿ ಮಿಡಿಯುವುದು ಮಾನವ ಸಹಜ ಗುಣ. ಅದು ಮಾನವೀಯತೆಯ ಗುಣ. ಅದರ ಕಾರಣಗಳನ್ನು ಚರ್ಚಿಸುವುದು ಸಾಮಾಜಿಕ ಜವಾಬ್ದಾರಿ ಕೂಡಾ. ಈ ಗುಣವನ್ನು ಒಳಗೊಳಿಸಿಕೊಂಡೇ, ಈ ಜವಾಬ್ದಾರಿಯನ್ನು ಪಾಲಿಸುತ್ತಲೇ, ನಾವು ಸಾವನ್ನು ಕಲಿಯಬೇಕಿದೆ. ಇಲ್ಲವಾದರೆ ಈ ಮಿಡಿತಕ್ಕೆ, ಶೋಕಕ್ಕೆ ಯಾವ ಅರ್ಥವೂ ಇರುವುದಿಲ್ಲ.

ಸಾವನ್ನು ಕಲಿಯುವುದು ಎಂದರೆ, ಸಾಯುವುದನ್ನು ಕಲಿಯುವುದಲ್ಲ. ಸಾವನ್ನು ಕಲಿಯುವುದು ಎಂದರೆ, ಅದನ್ನು ಅರ್ಥ ಮಾಡಿಕೊಳ್ಳುವುದು. ಅದರ ಹೆಗಲ ಮೇಲೆ ಕೈಹಾಕಿ ಗೆಳೆತನ ಬೆಳೆಸುವುದು. ಅದನ್ನು ಪ್ರೀತಿಸಲು ಕಲಿಯುವುದು. ಸಾವನ್ನು ಪ್ರೀತಿಸುವುದು ಎಂದರೆ ಆತ್ಮಹತ್ಯೆಯ ಸಿಂಡ್ರೋಮ್ ಬೆಳೆಸಿಕೊಳ್ಳಬೇಕೆಂದಲ್ಲ. ಸಾವನ್ನು ಪ್ರೀತಿಸುವುದು ಎಂದರೆ, ಅದಕ್ಕೆ ಭಯಪಡದೆ ಇರಲು ಕಲಿಯುವುದು.

ಸಾವಿಗೆ ಭಯ ಪಡದಿರಲು ಕಲಿತ ಕ್ಷಣದಿಂದ ನಿಜವಾದ ಬದುಕು ಆರಂಭವಾಗುತ್ತದೆ. ಇಲ್ಲವಾದರೆ, ನಮ್ಮ ಜೀವನ ಯಾನವೆಲ್ಲ ಕೇವಲ ಸಾವಿನೆಡೆಗಿನ ಪಯಣವಾಗಿ ಮುಗಿಯುತ್ತದೆ.

‘ವಾಸಾಂಸಿ ಜೀರ್ಣಾನಿ….’ ಭಗವದ್ಗೀತೆ ಹೇಳುತ್ತದೆ; ಹಳೆಯ ಬಟ್ಟೆ ಕಳಚಿ ಹೊಸತನ್ನು ತೊಟ್ಟಂತೆ ಹುಟ್ಟು – ಸಾವು ಎಂದು. ಹೊಸತನ್ನು ಹೊಂದುವ ಸಂಭ್ರಮವೇ ಸಾವು. ಈ ಹೊಸತನ್ನು ನಮ್ಮದಾಗಿಸಿಕೊಳ್ಳಬೇಕೆಂದರೆ, ಶೋಕದ ಕೊಳವನ್ನು ಈಜಲೇಬೇಕು. ಈಜುವಾಗ ಮೈ – ಮನಸುಗಳು ತಾವರೆ ಎಲೆಯಂತೆ ನೀರನ್ನು ಅಂಟಿಸಿಕೊಳ್ಳದೆ ಇರುವಂತೆ ಜಾಗ್ರತೆ ವಹಿಸಬೇಕು.

ಈಗಂತೂ ಮೇಲಿಂದ ಮೇಲೆ ಸಾವುಗಳ ಸುದ್ದಿ…. ಸಾವಿಗೆ ಕಾಯುತ್ತ ಸಾಲುಗಟ್ಟಿದವರ ಸುದ್ದಿ…. ನಾವೀಗ ಶೋಕದ ಕೊಳ ಈಜುತ್ತಿದ್ದೇವೆ. ಖಿನ್ನತೆ ಬೇಡ. ಆತಂಕ ಬೇಡ. ಖಿನ್ನತೆ ಮತ್ತು ಆತಂಕ ನಮ್ಮನ್ನು ಉಸಿರಿದ್ದರೂ ಹೆಣವಾಗಿಸುತ್ತವೆ. ಆದ್ದರಿಂದ, ನಿರಾಳವಾಗಿರೋಣ. ನಮ್ಮ ಕರ್ತವ್ಯ ನಡೆಸೋಣ. ಎಚ್ಚರಿಕೆ ವಹಿಸೋಣ. ಮತ್ತು ಇರುವವರೆಗೂ ಪ್ರಜ್ಞಾವಂತಿಕೆಯಿಂದ ಬಾಳೋಣ. 

Leave a Reply