ಭಗವಂತ ಸೃಷ್ಟಿಸುವ ಫಜೀತಿಗಳಿಗೂ ತಯಾರಾಗಿ! ~ ಸೂಫಿ ನಜತ್ ಒಝ್ಕಾಯ

ಮೂಲ:  ಸೂಫಿ ನಜತ್ ಒಝ್ಕಾಯ | ಕನ್ನಡಕ್ಕೆ: ಚಿದಂಬರ ನರೇಂದ್ರ

ಇವತ್ತು
ಒಬ್ಬ ಮನುಷ್ಯ ಸಿಕ್ಕಿದ್ದ
ಭಗವಂತನ ಪರಿಪೂರ್ಣತೆಯ ಬಗ್ಗೆ
ಮಾತನಾಡುತ್ತಲೇ ಹೋದ.

ಹೇಗೆ ಆತ
ಅಪಾರ, ನಿರ್ವಿಕಾರ, ನಿರಾಕಾರ, ನಿರ್ಗುಣ
ಮುಂತಾಗಿ.
ಅವನ ಮಾತುಗಳಿಗೆ ಕಾವ್ಯದ ಸ್ಪರ್ಶವಿತ್ತು,
ಕೈಗೆ ನಿಲುಕಲಾರದ, ಕಲ್ಪನಾತೀತ ಭಾವವೊಂದನ್ನು
ವಿವರಿಸುವ ಉನ್ಮಾದವಿತ್ತು.

ನನಗೆ ಗೊತ್ತಿಲ್ಲ ಈ ಮನುಷ್ಯ
ಯಾರ ಪ್ರೇಮದಲ್ಲಿ ಹೀಗೆ ಮಗ್ನನಾಗಿದ್ದಾನೆಂದು,
ಆದರೆ ಒಂದಂತೂ ನಿಜ
ಅದು ಖಂಡಿತ ಭಗವಂತನಂತೂ ಆಗಿರಲಾರ.

ನನಗೆ ಗೊತ್ತಿರುವ ಭಗವಂತ
ನೆಲದಿಂದ ಒಂದು ಹೆಜ್ಜೆಯನ್ನೂ ಮೇಲಿಟ್ಟವನಲ್ಲ,
ಪ್ರತಿದಿನ ನಾನು ರಸ್ತೆಯಲ್ಲಿ ಒದೆಯುತ್ತ ಓಡಾಡುವ
ಮಣ್ಣಿನ ಗುಪ್ಪೆಗಳ ನಡುವೆ ಹಾಸು ಹೊಕ್ಕಾದವನು.
ನನ್ನ ಭಗವಂತ ಪರಿಪೂರ್ಣನಲ್ಲ
ಜಗ ಮೊಂಡ, ಅಸಾಧ್ಯ ಹುಂಬ,
ಒಂದು ಮಾತಿಗೆ ಹತ್ತು ಮಾತನಾಡುವವ,
ಮಗ್ಗಲ ಮುಳ್ಳು.

ಪ್ರಾರ್ಥನೆಗಾಗಿ ಬಾಗಿದಾಗ
ನನ್ನ ಕತ್ತಿಗೆ ಮುತ್ತಿಡುವ ಭಗವಂತ
ನಿಲುಕಲಾರದವನೆನಲ್ಲ,
ತೋಳಿಗೆ ಸಿಕ್ಕರೆ ಮುರಿದು ಮುದ್ದೆ ಮಾಡುವುದಾಗಿ
ಹೆದರಿಸುವ ಭಯಂಕರ ಪೋಲಿ ಆಸಾಮಿ.

ನಿರ್ವಿಕಾರ? ಹಾಗೆಂದರೇನು ?
ಬಹುಶಃ ಭಾವನೆಗಳಿಲ್ಲದವನು.

ಆದರೆ ನಮ್ಮ ಪ್ರೇಮ ಎಂಥದೆಂದರೆ
ನಾನು ಪಶ್ಚಿಮಕ್ಕೆ ಮುಖ ಮಾಡಿ
ತಲೆ ಬಾಗಿಸುವುದಷ್ಟೇ ತಡ
ಎಲ್ಲಿ ಈ ಭಗವಂತ ತನ್ನ ತುಟಿಗಳಿಂದ
ಕಚಗುಳಿ ಇಡಲು ಶುರು ಮಾಡುತ್ತಾನೋ
ಎಂದು ಹೆದರಿ
ಅವನನ್ನು ದೂರ ತಳ್ಳುತ್ತೇನೆ.

ನನ್ನ ಮಾತು ಕೇಳಿ.

ಇನ್ನೆಂದೂ ನನ್ನ ಮುಂದೆ
ಭಗವಂತನ ಪರಿಪೂರ್ಣತೆಯ ಬಗ್ಗೆ ಮಾತಾಡಬೇಡಿ,
ಭಗವಂತನ ಬಗ್ಗೆ ತಿಳಿದುಕೊಳ್ಳಲೇ ಬೇಕು ಎನಿಸಿದರೆ
ಎಚ್ಚರವಿದ್ದಾಗ ಅವನು ಸೃಷ್ಟಿಮಾಡುವ
ಫಜೀತಿಗಳಿಗೂ ತಯಾರಾಗಿ.

 

Leave a Reply