ರಾಗಚರಿತ, ದ್ವೇಷಚರಿತ, ಮೋಹಚರಿತ – ಇವರನ್ನು ಕಂಡುಹಿಡಿಯುವುದು ಹೇಗೆ?

ಭಂಗಿಯಿಂದ, ಚಟುವಟಿಕೆಯಿಂದ, ಆಹಾರ ಸೇವನೆ ವಿಧಾನದಿಂದ, ನೋಡುವಿಕೆಯಿಂದ, ಇತ್ಯಾದಿ ಮನಸ್ಥಿತಿಗಳಿಂದ ವ್ಯಕ್ತಿಯ ಸ್ವಭಾವವನ್ನು ಕಂಡುಹಿಡಿಯಬಹುದಾಗಿದೆ. ಮತ್ತು ಇದರ ಆಧಾರದ ಮೇಲೆ ವ್ಯಕ್ತಿಯನ್ನು ರಾಗಚರಿತ, ದ್ವೇಷಚರಿತ ಮತ್ತು ಮೋಹಚರಿತ ಎಂದು ವಿಂಗಡಿಸಬಹುದಾಗಿದೆ | ಅನೀಶ್ ಬೋಧ್

ಶಾರೀರಿಕ ಭಂಗಿಗಳ ಮೂಲಕ ಸ್ವಭಾವ ಗಮನಿಸುವಿಕೆ

ನಡಿಗೆ : ರಾಗ (ಲೋಭ) ಚರಿತನು ಸಾಮಾನ್ಯವಾಗಿ ನಡೆಯುತ್ತಾನೆ, ಎಚ್ಚರಿಕೆಯಿಂದ ನಡೆಯುತ್ತಾನೆ, ತನ್ನ ಕಾಲನ್ನು ನಿಧಾನವಾಗಿ ಇಡುತ್ತಾನೆ, ಸಮನಾಗಿ ಇಡುತ್ತಾನೆ, ಸಮವಾಗಿ ಎತ್ತುತ್ತಾನೆ ಹಾಗು ಆತನ ಹೆಜ್ಜೆಗಳು ಪುಟಿಯುವಂತಿರುತ್ತದೆ.

ದ್ವೇಷಚರಿತನು ತನ್ನ ಪಾದಗಳ ಕೊನೆಯಿಂದ ಭೂಮಿಯನ್ನು ಅಗೆಯುತ್ತಿರುವವನಂತೆ ನಡೆಯುತ್ತಾನೆ. ತನ್ನ ಪಾದವನ್ನು ಬೇಗ ಕೆಳಗಿಡುತ್ತಾನೆ. ಹಾಗೆಯೇ ವೇಗವಾಗಿ ಎತ್ತಿಕೊಳ್ಳುತ್ತಾನೆ ಮತ್ತು ಆತನ ಹೆಜ್ಜೆಗಳು ದಾರಿಯುದ್ದಕ್ಕೂ ಎಳೆದಾಡುವಂತಿರುತ್ತವೆ.

ಮೋಹಚರಿತನು ಗೊಂದಲದಿಂದ ನಡೆಯುತ್ತಾನೆ. ಆತನು ಹಿಂದು-ಮುಂದು ನೋಡುತ್ತಾ (ಅನುಮಾನಿಸುತ್ತ) ಹೆಜ್ಜೆ ಕೆಳಗಿಡುತ್ತಾನೆ ಹಾಗೆಯೇ ಹೊಯ್ದಾಟದಿಂದ ಹೆಜ್ಜೆ ಎತ್ತುತ್ತಾನೆ ಹಾಗು ತಕ್ಷಣ ಹೆಜ್ಜೆಯನ್ನು ಇಟ್ಟು ಅಮುಕುತ್ತಾನೆ.

ಮಾಗಂಡಿಯ ಸುತ್ತದಲ್ಲಿ ಮಾಗಂಡಿಯಾಳು ಲಕ್ಷಣಶಾಸ್ತ್ರ ಬಲ್ಲವಳಾಗಿದ್ದು ಹೀಗೆ ಹೇಳುತ್ತಾಳೆ:
ರಾಗಚರಿತರ ಹೆಜ್ಜೆಯು ಜಿಗಿಯುವಂತಹದ್ದಾಗಿರುತ್ತದೆ,
ದ್ವೇಷಚರಿತರ ಹೆಜ್ಜೆಯು ಉದ್ದಕ್ಕೂ ಎಳೆಯುವಂತಿರುತ್ತದೆ,
ಮೋಹಚರಿತರ ಹೆಜ್ಜೆಯು ತಕ್ಷಣ ಅಮುಕಿದಂತಿರುತ್ತದೆ.
ಆದರೆ ಯಾರು ಕಶ್ಮಲಾತೀತರೊ ಅಂತಹ ಪರಿಶುದ್ಧರ ಹೆಜ್ಜೆ ಮಾತ್ರ ಹೀಗಿರುತ್ತದೆ. (ಸಂ.ನಿ.ಅಟ್ಠಕಥಾ544)

ನಿಲುಗೆ: ರಾಗಚರಿತನ ನಿಲುಗೆಯು ಶ್ರದ್ಧೆಯಿಂದ ಹಾಗು ಶೋಭಾಯಮಾನವಾಗಿರುತ್ತದೆ. ದ್ವೇಷಚರಿತನ ನಿಲುಗೆ ನಿಷ್ಠೂರವಾಗಿರುತ್ತದೆ. ಮೋಹಚರಿತನ ನಿಲುಗೆಯು ತಬ್ಬಿಬ್ಬಾಗಿರುತ್ತದೆ.

ಕೂಡುವಿಕೆ: ಎಲ್ಲವೂ ಮೇಲಿನಂತೆಯೇ ಆಗಿರುತ್ತದೆ.

ಮಲಗುವಿಕೆ: ರಾಗಚರಿತನು ಆತುರವಿಲ್ಲದೆ ಹಾಸಿಗೆಯನ್ನು ಹರಡುತ್ತಾನೆ, ನಿಧಾನವಾಗಿ ಮಲಗಿಕೊಳ್ಳುತ್ತಾನೆ. ತನ್ನ ಅಂಗಗಳನ್ನು ಜೋಡಿಸುತ್ತಾ ಶ್ರದ್ಧೆಯಿಂದ ನಿದ್ರಿಸುತ್ತಾನೆ. ಮತ್ತೆ ಜಾಗ್ರತನಾದಾಗ ನಿಧಾನವಾಗಿ ಏಳುತ್ತಾನೆ.

ದ್ವೇಷಚರಿತನು ತನ್ನ ಹಾಸಿಗೆಯನ್ನು ಹೇಗೆಂದರೆ ಹಾಗೆ ಹರಡುತ್ತಾನೆ. ಅಸಹನೀಯವಾಗಿ ಬಿದ್ದುಕೊಂಡು, ಸಿಡುಕಿನಿಂದ ನಿದ್ರಿಸುತ್ತಾನೆ. ಮತ್ತೆ ಜಾಗ್ರತನಾದಾಗ ತಕ್ಷಣ ಎದ್ದು ಕೂಡುತ್ತಾನೆ ಮತ್ತು ಕೆರಳಿಸುವಂತೆ ಉತ್ತರಿಸುತ್ತಾನೆ.

ಮೋಹಚರಿತನು ತನ್ನ ಹಾಸಿಗೆಯನ್ನು ಅಂಕುಡೊಂಕಾಗಿ ಹರಡಿಕೊಳ್ಳುತ್ತಾನೆ ಹಾಗು ಮುಖ ಕೆಳಕಾಗಿ ಮಲಗಿಕೊಂಡು ಅಸ್ತವ್ಯಸ್ತವಾಗಿ ಬಿದ್ದುಕೊಂಡಿರುತ್ತಾನೆ. ಮತ್ತೆ ಏಳುವಾಗ ಹಮ್… ಎಂದು ಶಬ್ದ ಮಾಡುತ್ತಾ ಅತಿ ನಿಧಾನವಾಗಿ ಏಳುತ್ತಾನೆ.

ಇಲ್ಲಿ ಶ್ರದ್ಧಾಚರಿತನ ನಡಿಗೆ, ನಿಲುಗೆ, ಕೂಡುವಿಕೆ ಹಾಗು ಮಲಗುವಿಕೆ ಲೋಭಚರಿತನಂತೆಯೇ ಇರುತ್ತವೆ. ಹಾಗೆಯೇ ದ್ವೇಷಚರಿತನ ಹಾಗು ಬುದ್ಧಿಚರಿತನ ಶಾರೀರಿಕ ಭಂಗಿಗಳು ಒಂದೇರೀತಿ ಇರುತ್ತವೆ ಮತ್ತು ಮೋಹಚರಿತನ ಹಾಗು ವಿತರ್ಕಚರಿತನ ಶಾರೀರಿಕ ಭಂಗಿಗಳು ಒಂದೇರೀತಿ ಇರುತ್ತವೆ.

ಚಟುವಟಿಕೆಗಳಿಂದ ಸ್ವಭಾವ ಅಳತೆ ಮಾಡುವಿಕೆ

ಇಲ್ಲಿ ವ್ಯಕ್ತಿ ಮಾಡುವ ಚಟುವಟಿಕೆಯಿಂದ ಆತನ ಸ್ವಭಾವ ಗ್ರಹಿಸುತ್ತಾರೆ. ಇಲ್ಲಿ ಉದಾಹರಣೆಗೆ ಗುಡಿಸುವಿಕೆಯನ್ನು ತೆಗೆದುಕೊಳ್ಳಲಾಗಿದೆ.

ಇಲ್ಲಿ ರಾಗವಂತನು ಪೊರಕೆಯನ್ನು ಚೆನ್ನಾಗಿ ಹಿಡಿಯುತ್ತಾನೆ, ಆತನು ಸ್ವಚ್ಛಾಗಿ ಹಾಗು ಸಮವಾಗಿ ಯಾವುದೇ ಆತುರವಿಲ್ಲದೆ ಮಣ್ಣನ್ನು ಚದುರಿಸದೆ ಸಿಂಧೂರ ಪುಷ್ಪಗಳನ್ನು ಚೆಲ್ಲುವಂತೆ ಗುಡಿಸುತ್ತಾನೆ.

ದ್ವೇಷರಹಿತನು ಪೊರಕೆಯನ್ನು ಗಟ್ಟಿಯಾಗಿ ಹಿಡಿಯುತ್ತಾನೆ ಮತ್ತು ಅಸ್ವಚ್ಛವಾಗಿ, ಅಸಮವಾಗಿ ಕೆಟ್ಟ ಶಬ್ದ ಬರುವಂತೆ, ಆತುರವಾಗಿ, ಮಣ್ಣು ಪ್ರತಿ ಪಕ್ಕಕ್ಕೆ ಬೀಳುವಂತೆ ಗುಡಿಸುತ್ತಾನೆ.

ಮೋಹಚರಿತನು ಪೊರಕೆಯನ್ನು ಅತಿ ಸಡಿಲವಾಗಿ ಹಿಡಿದಿರುತ್ತಾನೆ ಮತ್ತು ಆತನು ಸ್ವಚ್ಛವಾಗಿಯೇ ಆಗಲಿ ಅಥವಾ ಸಮನಾಗಿ ಆಗಲಿ ಗುಡಿಸುವುದಿಲ್ಲ. ಮಣ್ಣು ಮೇಲೇಳುವಂತೆ ಪುನಃ ಪುನಃ ಗುಡಿಸುತ್ತಾನೆ.

ಇದೇರೀತಿಯ ಕಾರ್ಯ ಚಟುವಟಿಕೆಗಳನ್ನು ಅವರ ತೊಳೆಯುವಿಕೆಯಲ್ಲಿ, ಬಣ್ಣ ಹಚ್ಚುವುದರಲ್ಲಿ ಇತ್ಯಾದಿಗಳಲ್ಲಿ ನಾವು ಕಾಣಬಹುದು.

ರಾಗಚರಿತನು ಕೌಶಲ್ಯಯುತವಾಗಿ, ಸ್ವಚ್ಛವಾಗಿ, ಸಮವಾಗಿ, ಎಚ್ಚರಿಕೆಯಿಂದ ಕಾರ್ಯ ಮಾಡುತ್ತಾನೆ. ಆದರೆ ದ್ವೇಷಚರಿತನು ಒತ್ತಡದಿಂದ, ಪೆಡುಸಾಗಿ, ಅಸಮವಾಗಿ ಕಾರ್ಯ ಮಾಡುತ್ತಾನೆ. ಮೋಹಚರಿತನು ಕೌಶಲ್ಯರಹಿತವಾಗಿ, ಗೊಂದಲಮಯವಾಗಿ ಮತ್ತು ಅನಿಶ್ಚಿತವಾಗಿ ಕಾರ್ಯ ಮಾಡುತ್ತಾನೆ.

ವಸ್ತ್ರಧಾರಣೆ ಮೂಲಕ

ರಾಗಚರಿತನು ವಸ್ತ್ರ ಧರಿಸಿದರೆ ಅದು ಅಷ್ಟು ಬಿಗಿಯಾಗಿಯೂ ಅಥವಾ ಅಷ್ಟು ಸಡಿಲವಾಗಿಯೂ ಇರುವುದಿಲ್ಲ, ಶ್ರದ್ಧೆಯಿಂದ ಕೂಡಿರುತ್ತಾನೆ. ಸುತ್ತಲು ಸಮವಾಗಿ ಹರಡಿರುವಂತೆ ಧರಿಸುತ್ತಾನೆ. ಆದರೆ ದ್ವೇಷಚರಿತನು ಅತಿ ಬಿಗಿಯಾಗಿರುವಂತೆ ವಸ್ತ್ರ ಧರಿಸುತ್ತಾನೆ ಹಾಗು ಅಸಮವಾಗಿ ಹರಡಿರುವಂತೆ ವಸ್ತ್ರ ಧರಿಸುತ್ತಾನೆ ಮತ್ತು ಮೋಹಚರಿತನು ಅತಿ ಸಡಿಲವಾಗಿ, ಗೊಂದಲದ ರೀತಿಯಲ್ಲಿ ಧರಿಸಿರುತ್ತಾನೆ.

ಇಲ್ಲಿ ರಾಗಚರಿತನು ಹಾಗು ಶ್ರದ್ಧಾವಂತರ ಚಟುವಟಿಕೆ ಒಂದೇರೀತಿ ಇರುತ್ತವೆ. ಹಾಗೆಯೇ ದ್ವೇಷಚರಿತನ ಹಾಗು ಬುದ್ಧಿಚರಿತನ ಚಟುವಟಿಕೆಯೂ ಸಹಾ ಒಂದೇರೀತಿ ಇರುವುದು ಮತ್ತು ಮೋಹಚರಿತನ ಹಾಗು ವಿತಕ್ಕಚರಿತನ ಚಟುವಟಿಕೆಗಳು ಒಂದೇರೀತಿ ಇರುತ್ತದೆ. ಏಕೆಂದರೆ ಅವರೀರ್ವರ ವ್ಯಕ್ತಿತ್ವ ಸಹಾ ಸಮಾನಂತರವಾಗಿರುತ್ತದೆ. ಹೀಗೆ ಚಟುವಟಿಕೆಗಳ ಮೂಲಕ ಅವರ ಸ್ವಭಾವ ಅಳತೆ ಮಾಡಬಹುದಾಗಿದೆ.

ಆಹಾರ ಸೇವನೆ

ರಾಗಚರಿತರು ಸ್ವಾದಿಷ್ಟವಾದ ಸಿಹಿತಿಂಡಿಗಳನ್ನು ಅಪೇಕ್ಷಿಸುತ್ತಾರೆ ಹಾಗು ತಿನ್ನುವಾಗ ಅವರ ತುತ್ತು ಗುಂಡಗೆ ಅತಿ ಚಿಕ್ಕದಾಗಿರದೆ, ಅತಿ ದೊಡ್ಡದಾಗಿರದೆ ಇರುತ್ತದೆ. ಅವರು ನಿಧಾನವಾಗಿ ವಿವಿಧ ರುಚಿಗಳನ್ನು ಸವಿಯುತ್ತ ಆನಂದದಿಂದ ತಿನ್ನುತ್ತಾರೆ. ದ್ವೇಷಚರಿತರು ಒರಟಾದ ಹುಳಿ ಇರುವ ಆಹಾರವನ್ನು ಇಷ್ಟಪಡುತ್ತಾರೆ. ಅವರ ತುತ್ತು ಬಾಯಿ ತುಂಬುವಷ್ಟು ಇರುತ್ತದೆ. ಅವರು ರುಚಿಯತ್ತ ಗಮನಹರಿಸದೆ ಗಬಗಬನೆ ಆತುರವಾಗಿ ತಿನ್ನುತ್ತಾರೆ. ತಮಗೆ ಉತ್ತಮವಾದುದು ಸಿಗದಿದ್ದರೆ ದುಃಖಿಸುತ್ತಾರೆ, ಕೋಪಗೊಳ್ಳುತ್ತಾರೆ.

ಮೋಹಚರಿತರಿಗೆ ಯಾವುದೇ ನಿರ್ಧರಿತ ಆಯ್ಕೆಗಳಿರುವುದಿಲ್ಲ. ಆದರೆ ತಿನ್ನುವಾಗ ಚಿಕ್ಕ ಚಿಕ್ಕ ತುತ್ತುಗಳಿರುತ್ತವೆ. ತಿನ್ನುವಾಗ ಪಾತ್ರೆಯಲ್ಲಿ ತುಣಕುಗಳು ಬೀಳುತ್ತಿರುತ್ತವೆ, ಮುಖಕ್ಕೆ ಆಹಾರ ಹಚ್ಚಿರುವ ರೀತಿ ತಿನ್ನುತ್ತಾರೆ. ಅವರು ತಿನ್ನುವಾಗ ಅವರ ಮನಸ್ಸು ಹಾದಿ ತಪ್ಪಿರುತ್ತದೆ. ಇದನ್ನು, ಅದನ್ನು ಯೋಚಿಸುತ್ತಾ ತಿನ್ನುತ್ತಿರುತ್ತಾರೆ.

ಇಲ್ಲಿಯೂ ಸಹ ಲೋಭಚರಿತನಂತೆಯೇ ಶ್ರದ್ಧಾಚರಿತನ ವರ್ತನೆಗಳು ಇರುತ್ತವೆ. ಹಾಗೆಯೇ ದ್ವೇಷಚರಿತನಂತೆಯೇ ಬುದ್ಧಿಚರಿತನ ವರ್ತನೆಗಳು ಇರುತ್ತವೆ. ಮತ್ತು ಮೋಹಚರಿತನಂತೆಯೇ ವಿತಕ್ಕಚರಿತನ ವರ್ತನೆಗಳು ಇರುತ್ತವೆ. ಏಕೆಂದರೆ ಅವರೀರ್ವರ ವ್ಯಕ್ತಿತ್ವ ಸಹ ಸಮಾನಂತರವಾಗಿರುತ್ತದೆ.

Leave a Reply