ಪ್ರಚಂಡವೇಗದ ಮನಸ್ಸು ವ್ಯಕ್ತಿಯ ಬದುಕಿನ ಸ್ಥಿರತೆಯನ್ನು ಬುಡಮೇಲು ಮಾಡುವಷ್ಟು ಶಕ್ತ. ಆದ್ದರಿಂದ ಅದನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡು, ಅದರ ಸುಳಿಗೆ ಸಿಲುಕದಂತೆ ನನ್ನನ್ನು ರಕ್ಷಿಸು ಎಂಬುದು ಯಾಚಕರ ಪ್ರಾರ್ಥನೆಯ ಭಾವಾರ್ಥ
ಕದಾ ವಾ ಹೃಷೀಕಾಣಿ ಸಾಮ್ಯಂ ಭಜೇಯುಃ
ಕದಾ ವಾ ಶತ್ರುರ್ನ ಮಿತ್ರಂ ಭವಾನಿ |
ಕದಾ ವಾ ದುರಾಶಾವಿಷೂಚೀವಿಲೋಪಃ
ಕದಾ ವಾ ಮನೋ ಮೇ ಸಮೂಲಂ ವಿನಶ್ಯೇತ್ ||
~ ದೇವಿ ಭುಜಂಗ ಪ್ರಯಾತ ಸ್ತೋತ್ರ; 19
ಹೇ ಜಗಜ್ಜನನೀ, ನನ್ನ ಇಂದ್ರಿಯಗಳು ಶಾಂತವಾಗುವುದು ಯಾವಾಗ? ನನಗೆ ಶತ್ರುಗಳಾಗಲೀ ಮಿತ್ರರಾಗಲೀ ಇಲ್ಲದಿರುವಂತಾಗುವುದು ಯಾವಾಗ? ದುರಾಸೆಗಳ ಮೋಹದಿಂದ ನಾನು ಬಿಡುಗಡೆ ಹೊಂದುವುದು ಯಾವಾಗ? ನನ್ನ ಮನಸ್ಸು ಸಂಪೂರ್ಣವಾಗಿ ನಾಶ ಹೊಂದುವುದು ಯಾವಾಗ?
ಈ ಪ್ರಾರ್ಥನೆಯಲ್ಲಿ ಯಾಜಕರು ಕೇಳುತ್ತಿರುವುದು ಸಂಪೂರ್ಣ ವಿರಕ್ತಿಯನ್ನು.
ನನ್ನ ಇಂದ್ರಿಯಗಳು ಶಾಂತವಾಗುವುದು ಯಾವಾಗ? ಅನ್ನುವ ಪ್ರಶ್ನೆಯಲ್ಲಿ “ಸುಖಲೋಲುಪತೆಗಾಗಿ ಹಪಹಪಿಸುವ ನನ್ನ ಇಂದ್ರಿಯಗಳನ್ನು ಶಾಂತಗೊಳಿಸು” ಎಂಬ ಬೇಡಿಕೆ ಇದೆ.
ಇಲ್ಲಿ ಯಾಚಕರು ಶತ್ರುಗಳು ಮಾತ್ರವಲ್ಲ, ಮಿತ್ರರೂ ಇಲ್ಲದಿರುವಂತಾಗಲಿ ಎಂದು ಬಯಸುತ್ತಿದ್ದಾರೆ. ಶತ್ರುಗಳಂತೂ ಬೇಡ ಸರಿ, ಮಿತ್ರರು ಯಾಕೆ ಬೇಡ? ಇಲ್ಲಿ ಯಾಚಕರು ಬಾಂಧವ್ಯಗಳಿಗೆ ಬೆನ್ನು ಹಾಕುತ್ತಿಲ್ಲ, ಬದಲಿಗೆ ಬಂಧುತ್ವದ ಬಂಧನದಿಂದ ಬಿಡುಗಡೆ ಬಯಸುತ್ತಿದ್ದಾರಷ್ಟೆ. ಮಿತ್ರತ್ವ ಪಕ್ಷಪಾತ ಮತ್ತು ಮೋಹಕ್ಕೆ ದಾರಿ. ಆದ್ದರಿಂದ, ಶತ್ರುತ್ವ – ಮಿತ್ರತ್ವಗಳ ಗೊಡವೆಯೇ ನನಗೆ ಬೇಡ ಅನ್ನುತ್ತಿದ್ದಾರೆ ಯಾಚಕರು.
ದುರಾಸೆಗಳ ಮೋಹದಿಂದ ಬಿಡಗಡೆ ಹೊಂದದೆ ಆಧ್ಯಾತ್ಮಿಕ ಉನ್ನತಿ ಇರಲಿ, ದೈನಂದಿನ ಲೌಕಿಕ ಬದುಕಿನ ಏಳ್ಗೆಯೂ ಸಾಧ್ಯವಿಲ್ಲ. ಆದ್ದರಿಂದ, ಯಾಚಕರು ಅದರಿಂದಲೂ ನನ್ನ ಮುಕ್ತಗೊಳಿಸು ಎಂದು ದೇವಿಯಲ್ಲಿ ಮೊರೆಯಿಡುತ್ತಿದ್ದಾರೆ.
ಹಾಗೆಯೇ, ಮನಸ್ಸನ್ನು ಆಮೂಲಾಗ್ರ ನಾಶಗೊಳಿಸು ಅನ್ನುವ ಮೂಲಕ ಅದರ ಚಂಚಲತೆಯನ್ನು ಸಂಪೂರ್ಣ ತೊಡೆದು ಹಾಕುವಂತೆ ಪ್ರಾರ್ಥಿಸುತ್ತಿದ್ದಾರೆ.
ಪ್ರಚಂಡವೇಗದ ಮನಸ್ಸು ವ್ಯಕ್ತಿಯ ಬದುಕಿನ ಸ್ಥಿರತೆಯನ್ನು ಬುಡಮೇಲು ಮಾಡುವಷ್ಟು ಶಕ್ತ. ಆದ್ದರಿಂದ ಅದನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡು, ಅದರ ಸುಳಿಗೆ ಸಿಲುಕದಂತೆ ನನ್ನನ್ನು ರಕ್ಷಿಸು ಎಂಬುದು ಯಾಚಕರ ಪ್ರಾರ್ಥನೆಯ ಭಾವಾರ್ಥ.
ಈ ಪ್ರಾರ್ಥನೆಯನ್ನು ಪ್ರಶ್ನೆ ರೂಪದಲ್ಲಿ ಸಲ್ಲಿಸುತ್ತಿರುವುದು ಯಾಚಕರ ಆರ್ದ್ರತೆಯನ್ನು, ತೀವ್ರತೆಯನ್ನು ಸೂಚಿಸುತ್ತದೆ.
ಇಂತಹಾ ತೀವ್ರತೆಯಿಂದ ಪ್ರಾರ್ಥಿಸಲು ನಮಗೂ ಸಾಧ್ಯವಾಗಬೇಕು. ಈ ಪ್ರಾರ್ಥನೆ ನಮ್ಮ ಬೆಳಗನ್ನು ಸಕಾರಾತ್ಮಕ ಚಿಂತನೆಯಿಂದ ತುಂಬುತ್ತದೆ. ಮತ್ತು ನಿಷ್ಕಾಮ ಕರ್ಮಕ್ಕೆ ಪ್ರೇರೇಪಣೆ ನೀಡುತ್ತದೆ.