“ನಿಮ್ಮನ್ನೇ ನೀವು ತಿಳಿಯದೆ, ದೇವರನ್ನು ತಿಳಿಯಲು ಹೇಗೆ ಸಾಧ್ಯ? ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ, ನೀವು ಯಾರು, ದೇವರನ್ನು ತಿಳಿಯಬಯಸುವವರು ಯಾರು ಎಂಬುದನ್ನು ಸ್ಪಷ್ಟವಾಗಿ ತಿಳಿದಿರಬೇಕಲ್ಲವೇ?” ಇದು ರಮಣರ ಪ್ರಶ್ನೆ…
‘ನಿನ್ನನ್ನು ನೀನು ತಿಳಿದುಕೋ’ – ಇದು ರಮಣ ಮಹರ್ಷಿಗಳ ಬೋಧನೆಯ ಸಾರ. ಮನುಷ್ಯನ ಎಲ್ಲ ಕ್ರಿಯೆಗಳಲ್ಲೂ, ಮಾತುಗಳಲ್ಲೂ ‘ನಾನು’ವಿನ ಉಲ್ಲೇಖ ಇರುತ್ತದೆಯಷ್ಟೆ? ಈ ‘ನಾನು ಎಂದರೇನು?’ ಎಂಬುದನ್ನು ತಿಳಿಯಲು ಪ್ರಯತ್ನಿಸಿ ಎಂದು ರಮಣರು ಸೂಚಿಸುತ್ತಾರೆ.
ನನ್ನ ಕೈ, ನನ್ನ ಕಣ್ಣು, ನನ್ನ ಮನಸ್ಸು ಇತ್ಯಾದಿ ಮಾತನಾಡುವಾಗ ನಾವು ನಮಗೇ ಅರಿವಿಲ್ಲದೆ ನಮ್ಮ ದೇಹ-ಮನಸುಗಳಿಂದ ಪ್ರತ್ಯೇಕಿಸಿಕೊಂಡಿರುತ್ತೇವೆ. ಇವೆಲ್ಲದರ ಆಚೆ, ಇದ್ಯಾವುದೂ ಅಲ್ಲದ ‘ನಾನು’ ಎಂಬುದಿದೆ, ಅದನ್ನು ಅರಿಯುವುದೇ ನಮ್ಮ ಆದ್ಯತೆಯಾಗಬೇಕು ಎನ್ನುತ್ತಾರೆ ರಮಣ ಮಹರ್ಷಿಗಳು.
‘ಆಧ್ಯಾತ್ಮಿಕ ಬದುಕಿನಲ್ಲಿ ಅತ್ಯಂತ ಅಗತ್ಯವಾದುದೆಂದರೆ ನಮ್ಮನ್ನು ನಾವು ತಿಳಿಯುವುದು’ ಎಂದು ಅವರು ಮತ್ತೆ ಮತ್ತೆ ಹೇಳಿದ್ದಾರೆ. ಅವರ ಪ್ರಕಾರ ಅಧ್ಯಾತ್ಮ ಸಾಧನೆಯ ಆರಂಭ ಆಗುವುದು ಇಲ್ಲಿಂದಲೇ. ಇದನ್ನು ಅವರು ‘ಆತ್ಮವಿಚಾರದ ನೇರಮಾರ್ಗ’ವೆಂದು ಕರೆಯುತ್ತಾರೆ.
ಇದನ್ನು ಮತ್ತಷ್ಟು ಸ್ಪಷ್ಟವಾಗಿ ಸಾರುವ ರಮಣರು ಮತ್ತು ಶಿಷ್ಯರೊಬ್ಬರ ಸಂಭಾಷಣೆ ಹೀಗಿದೆ:
ಶಿಷ್ಯ: ದೇವರನ್ನು ತಾವು ನೋಡಿದ್ದೀರಾ?
ರಮಣರು: ದೇವರನ್ನು ನೋಡಲು ಏಕೆ ಬಯಸುತ್ತೀರಿ?
ಶಿಷ್ಯ: ನಾನೂ ಅವನನ್ನು ಕಾಣಲುಬಯಸುತ್ತೇನೆ. ತಾವು ದೇವರನ್ನು ಕಂಡಿದ್ದರೆ, ಅದಕ್ಕಾಗಿ ಸಹಾಯ ಮಾಡಿ ಎಂದು ಕೇಳಲು ಬಯಸುತ್ತೇನೆ.
ರಮಣರು: ‘ನಾನು ದೇವರನ್ನು ಕಾಣಬಯಸುತ್ತೇನೆ’ ಎನ್ನುತ್ತೀರಿ. ನೀವು ಯಾರು ಎಂಬುದನ್ನು ಮೊದಲು ಹೇಳಿ.
ಶಿಷ್ಯ : ನನ್ನ ಹೆಸರು ದೇವದತ್ತ ಶರ್ಮ.
ರಮಣರು: ಅದು ನಿಮ್ಮ ಹೆಸರು. ನೀವು ಯಾರು?
ಶಿಷ್ಯ: ನಾನು ಶರ್ಮ ಎಂದು ಮೊದಲೇ ಹೇಳಿದ್ದೇನೆ. ನಾನು ಬ್ರಾಹ್ಮಣ.
ರಮಣರು: ಅದು ನಿಮ್ಮ ಜಾತಿ ಅಷ್ಟೇ. ಆದರೆ ನೀವು ಯಾರು?
ಶಿಷ್ಯ: ನಾನು ಕಾಲೇಜಿನಲ್ಲಿ ಉಪನ್ಯಾಸಕ.
ರಮಣರು: ಅದು ನಿಮ್ಮ ಉದ್ಯೋಗ, ಆದರೆ ನೀವು ಯಾರು?
ಶಿಷ್ಯ: ನಾನೊಬ್ಬ ಮನುಷ್ಯ.
ರಮಣರು: ಅದು ನಿಮ್ಮ ಜನ್ಮವಾಯಿತು. ಆದರೆ ನೀವು ಯಾರು?
ಶಿಷ್ಯ: ನಾನು ಗಂಡಸು.
ರಮಣರು: ಅದು ನಿಮ್ಮ ಲಿಂಗವಾಯಿತಷ್ಟೆ. ದೇವರನ್ನು ನೋಡಲು ಬಯಸುತ್ತಿರುವುದು ಯಾರು ಎಂದು ತಿಳಿಯಬಯಸುತ್ತೇನೆ.
ಶಿಷ್ಯ: ನನ್ನನ್ನೇ ನಾನು ತಿಳಿದಿಲ್ಲ ಎಂಬಂತೆ ತೋರುತ್ತಿದೆ.
ರಮಣರು: ನಿಮ್ಮನ್ನೇ ನೀವು ತಿಳಿಯದೆ, ದೇವರನ್ನು ತಿಳಿಯಲು ಹೇಗೆ ಸಾಧ್ಯ? ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ, ನೀವು ಯಾರು, ದೇವರನ್ನು ತಿಳಿಯಬಯಸುವವರು ಯಾರು ಎಂಬುದನ್ನು ಸ್ಪಷ್ಟವಾಗಿ ತಿಳಿದಿರಬೇಕಲ್ಲವೇ?