ಶ್ರದ್ಧೆ ನಮ್ಮ ಅಂತಃಚಕ್ಷುವಿಗೆ ದಾರಿ ತೋರುವ ಬೆಳಕು. ಅದು ನಮ್ಮನ್ನು ಸದಾ ಎಚ್ಚರದ ಸ್ಥಿತಿಯಲ್ಲಿ ಇಡುತ್ತದೆ. ಅದು ನಮಗೆ ಒಳಿತನ್ನೇ ತೋರಿಸುತ್ತದೆ ಮತ್ತು ಒಳಿತಿನ ಹಾದಿಯಲ್ಲೇ ನಡೆಯುವಂತೆ ಪ್ರೇರೇಪಣೆ ನೀಡುತ್ತದೆ. ಇದರಿಂದ ನಮ್ಮನ್ನು ವಿಮುಖಗೊಳಿಸುವುದು ಅಂಧಶ್ರದ್ಧೆ ~ ಆನಂದಪೂರ್ಣ
“ಶ್ರದ್ಧೆ…. ಮುಖ್ಯವಾಗಿ ಬದುಕಿನಲ್ಲಿ ಶ್ರದ್ಧೆ ಇರಲಿ. ಶ್ರದ್ಧೆ ಇಲ್ಲದೆ ಮಾಡುವ ಯಾವ ಕೆಲಸವೂ ಫಲಿಸುವುದಿಲ್ಲ.” ಇದು ಸ್ವಾಮಿ ವಿವೇಕಾನಂದರು ಮತ್ತೆ ಮತ್ತೆ ಹೇಳುತ್ತಿದ್ದ ಮಾತು. `ನಿಮ್ಮಲ್ಲಿ ನೀವು ಶ್ರದ್ಧೆಯನ್ನು ಬೆಳೆಸಿಕೊಳ್ಳಿ. ನಿಮ್ಮ ಪ್ರತಿ ನಡೆಯೂ ಶ್ರದ್ಧೆಯಿಂದ ಕೂಡಿರಲಿ. ನೀವು ಅನುಸರಿಸುತ್ತಿರುವ ಮಾರ್ಗದ ಮೇಲೆ ಶ್ರದ್ಧೆ ಇಟ್ಟುಕೊಳ್ಳಿ’ ಎನ್ನುವುದು ಅವರ ಪ್ರಮುಖ ಬೋಧನೆಗಳಲ್ಲಿ ಒಂದಾಗಿತ್ತು. ಶ್ರದ್ಧೆ ಮನುಷ್ಯನ ಬದುಕಿನ ಚಾಲಕ ಶಕ್ತಿ. ಏಕೆಂದರೆ ನಮಗೆ ಆತುಕೊಳ್ಳಲು ಏನಾದರೊಂದು ಬೇಕಾಗಿರುತ್ತದೆ. ಯಾವುದರ ಊರುಗೋಲಿಲ್ಲದೆ ನಾವು ಮುಂದೆ ಹೆಜ್ಜೆ ಇಡಲಾರೆವು. ಅಂಥದೊಂದು ಬದ್ಧತೆಗೆ ಒಳಗಾಗಿಬಿಟ್ಟಿರುತ್ತೇವೆ. ನಮ್ಮನ್ನು ನಾವು ಅರಿಯಲು, ನಮ್ಮ ಮೇಲೆ ನಾವು ನಂಬಿಕೆ ಇಟ್ಟುಕೊಳ್ಳಲು ಕೂಡ ಒಂದು ಆಸರೆ ಬೇಕು. ಈ ಆಸರೆಯೇ ಶ್ರದ್ಧೆ.
ಶ್ರದ್ಧೆ ಒಂದು ಆಚರಣೆಯಲ್ಲ. ಅದು ಸುಪ್ತವಾಗಿ ನಮ್ಮೊಳಗೆ ಘಟಿಸುವಂಥ ಪ್ರಕ್ರಿಯೆ. ನಂಬಿಕೆಯನ್ನಾದರೂ ವ್ಯಕ್ತಪಡಿಸಬಹುದು, ಶ್ರದ್ಧೆಯನ್ನು ವ್ಯಕ್ತಪಡಿಸಲು ಬರುವುದಿಲ್ಲ. ಅದು ಹೂವಿನ ಒಳಗಿನ ಘಮಲಿನಂತೆ. ಅದು ಶ್ರದ್ಧಾವಂತನ ನಡೆನುಡಿಯ ಮೂಲಕ ವ್ಯಕ್ತವಾಗುತ್ತದೆಯೇ ಹೊರತು, `ನನಗೆ ಶ್ರದ್ಧೆ ಇದೆ’ ಎಂದು ಹೇಳಿಕೊಂಡು ತಿರುಗಲು ಬರುವುದಿಲ್ಲ. ಶ್ರದ್ಧೆ ಇರುವಂಥದ್ದು. ಅದು ಹೊಮ್ಮುವಂಥದ್ದೇ ಹೊರತು ತೋರಿಸುವಂಥದ್ದಲ್ಲ. ಘಮವು ಸೂಸುತ್ತದೆ. ಅದು ರಂಗಿನ ಹಾಗೆ ಕಾಣಿಸಿಕೊಳ್ಳುವುದಿಲ್ಲ. ಹೂವು ಬಣ್ಣಗೆಟ್ಟಿದ್ದರೂ ಅದಕ್ಕೊಂದು ಚೆಂದದ ಘಮವಿದ್ದರೆ ಸಾಕು, ಜನ ಅದನ್ನು ಮೆಚ್ಚುತ್ತಾರೆ. ಹಾಗೆಯೇ ಶ್ರದ್ಧಾವಂತನನ್ನೂ ಕೂಡಾ.
ಶ್ರದ್ಧೆಯ ಒಳಗಣ್ಣು
ಶ್ರದ್ಧೆಯ ಹೆಜ್ಜೆ ನಿಶ್ಶಬ್ದವಾದದ್ದು. ಸೂರ್ಯೋದಯ ಚಂದ್ರೋದಯಗಳಷ್ಟೆ ಸದ್ದಿಲ್ಲದೆ ಬೆಳಕಾಗುತ್ತದೆ ಶ್ರದ್ಧೆ. ಶ್ರದ್ಧೆ ಅರಳುವ ಹೂವಿನಂತೆ ಮೌನವಾದದ್ದು. ಮುಗ್ಧವಾದದ್ದು ಶ್ರದ್ಧೆ; ಅದಕ್ಕೆ ನಿರಾಡಂಬರವೇ ಇಷ್ಟ. ಶ್ರದ್ಧೆಗೆ ಅಮಂಗಳವಾಗುತ್ತದೆನ್ನುವ ಭೀತಿಯಿಲ್ಲ. ಅದು ಯಾವತ್ತೂ ಯಾವುದರಲ್ಲೂ ನಂಬಿಕೆಯನ್ನು ಕಳೆದುಕೊಳ್ಳುವುದಿಲ್ಲ. ಶ್ರದ್ಧೆಯ ಪಾಲಿಗೆ ಜಗತ್ತೆಲ್ಲಾ ಒಂದು ರಣರಂಗವೆಂಬ ಭ್ರಮೆಯಿಲ್ಲ. ಅದಕ್ಕೆ ಜಗತ್ತೆಲ್ಲಾ ಸ್ನೇಹರಂಗವೆಂಬ ವಿಶ್ವಾಸವಿದೆ. ಎಲ್ಲರೊಂದಿಗೆ ಸಹಯಾತ್ರಿಯಾಗುವುದರಲ್ಲೇ ಅದಕ್ಕೆ ಆಸಕ್ತಿ.
ಹಾಗೆಂದರೆ ಶ್ರದ್ಧೆ ಎಂಬುದು ಜಡವೆಂದಾಗಲೀ, ತಟಸ್ಥವೆಂದಾಗಲೀ ಅರ್ಥವಲ್ಲ. ಅದಕ್ಕೆ ಗೆಲ್ಲಲೇಬೇಕೆಂಬ ಹಠವಿಲ್ಲದಿದ್ದರೂ ತಾನು ನಿಲ್ಲಬಾರದೆಂಬ ವಿವೇಕವಿದೆ. ಓಡುವುದೇ ಪ್ರಗತಿಯ ಲಕ್ಷಣವೆಂಬ ತಪ್ಪು ತಿಳವಳಿಕೆ ಅದಕ್ಕಿಲ್ಲ. ನಿಲ್ಲದೆ, ನಿಂತ ನೀರಾಗಿ ಕೊಳೆಯದೆ, ನಿರಂತರವಾಗಿ, ನಿರಾತಂಕವಾಗಿ ಪ್ರವಹಿಸುವುದೆ ಪ್ರಗತಿಯ ಲಕ್ಷಣವೆಂಬ ಅರಿವಿದೆ. ಶ್ರದ್ಧೆಗೆ ಮಾಡುವ ಕೆಲಸವನ್ನು ಸರಿಯಾಗಿ ಮಾಡಬೇಕೆಂಬ ಕಡೆ ಗಮನವೇ ಹೊರತು, ಅದು ತಕ್ಷಣದಲ್ಲಿ ಫಲವಾಗಿ ದಕ್ಕಬೇಕೆಂಬ ಕಡೆಗೆ ಆಸಕ್ತಿಯಿಲ್ಲ. ಸದ್ದಿರದ ಸಮಸ್ತ ಸಾಧನೆಗಳಲ್ಲಿ ಶ್ರದ್ಧೆ ಪ್ರತಿಬಿಂಬಿತವಾಗುತ್ತದೆ. ಆಗಾಗ ಕೆಲವೊಮ್ಮೆ ಶ್ರದ್ಧೆ ಮೇಲುನೋಟಕ್ಕೆ ಸೋತಂತೆ ಅಥವಾ ಸೋಲುವಂತೆ ತೋರುತ್ತದೆ. ಆದರೆ ಕಡೆಗೂ ಗೆಲ್ಲುವುದು ಶ್ರದ್ಧೆ. ಯಾಕೆಂದರೆ ಅದಕ್ಕೆ ಅಪಾರವಾದ ಆತ್ಮವಿಶ್ವಾಸವಿದೆ. ಕಾಯುವ ತಾಳ್ಮೆ ಇದೆ, ಶ್ರೇಯಸ್ಸಿನಲ್ಲಿ ನಂಬಿಕೆ ಇದೆ. ಈ ಎಲ್ಲ ಗುಣಗಳಿಗೆ ವಿರುದ್ಧವಾದುದೇ ಅಂಧಶ್ರದ್ಧೆ. ಶ್ರದ್ಧೆಯ ವಿರುದ್ಧ ಪದ ಅಶ್ರದ್ಧೆಯೇ ಆದರೂ ಅಂಧಶ್ರದ್ಧೆ ಅದಕ್ಕಿಂತ ಹೆಚ್ಚು ವಿರೋಧ ಗುಣಗಳುಳ್ಳ ಸಂಗತಿಯಾಗಿದೆ.
ಶ್ರದ್ಧೆ ನಮ್ಮ ಅಂತಃಚಕ್ಷುವಿಗೆ ದಾರಿ ತೋರುವ ಬೆಳಕು. ಅದು ನಮ್ಮನ್ನು ಸದಾ ಎಚ್ಚರದ ಸ್ಥಿತಿಯಲ್ಲಿ ಇಡುತ್ತದೆ. ಅದು ನಮಗೆ ಒಳಿತನ್ನೇ ತೋರಿಸುತ್ತದೆ ಮತ್ತು ಒಳಿತಿನ ಹಾದಿಯಲ್ಲೇ ನಡೆಯುವಂತೆ ಪ್ರೇರೇಪಣೆ ನೀಡುತ್ತದೆ. ಇದರಿಂದ ನಮ್ಮನ್ನು ವಿಮುಖಗೊಳಿಸುವುದು ಅಂಧಶ್ರದ್ಧೆ.
ಕುರುಡಾಗುವ ಅಪಾಯವೂ ಇದೆ
ಯಾವಾಗ ಶ್ರದ್ಧೆಯ ಕಣ್ಣಿಗೆ ಅವೈಚಾರಿಕ ಅನುಸರಣೆಯ ಪೊರೆ ಆವರಿಸತೊಡಗುತ್ತದೆಯೋ ಆಗ ಶ್ರದ್ಧೆ ಕುರುಡಾಗುತ್ತದೆ. ಆಗ ಅದು ಅಂಧಶ್ರದ್ಧೆಯಾಗುತ್ತದೆ. ದೇಹದ ಕಣ್ಣು ಕುರುಡಾದರೆ ಬದುಕು ಹಳಿ ತಪ್ಪುವುದಿಲ್ಲ. ಎಷ್ಟೋ ಸಾಧಕರು ತಮ್ಮ ಅಂಧತ್ವವನ್ನು ಬದಿಗೊತ್ತಿ ಜಗಮನ್ನಿಸುವಂಥ ಸಾಧನೆ ಮಾಡಿ ತೋರಿಸಿದ್ದಾರೆ. ನಮ್ಮ ದೈನಂದಿನ ಜೀವನದಲ್ಲೇ ಅದೆಷ್ಟೋ ಮಂದಿ ಕುರುಡರು ನಮ್ಮಂತೆಯೇ, ಕೆಲಬಾರಿ ನಮಗಿಂತ ಚೆನ್ನಾಗಿ ಜೀವನ ನಿರ್ವಹಿಸುವುದನ್ನು ನೋಡಿರುತ್ತೇವೆ. ಆದರೆ ಒಳಗಣ್ಣು ಕುರುಡಾದರೆ ಮನುಷ್ಯ ಹತ್ತು ಹೆಜ್ಜೆ ಕೂಡ ಸರಿಯಾಗಿ ನಡೆಯಲಾರ. ಆತನ ಜೀವನ ನಡಿಗೆ ಹದತಪ್ಪಿ ಆತನನ್ನು ಪ್ರಪಾತಕ್ಕೆ ತಳ್ಳಿಬಿಡುತ್ತದೆ.
ಆದರೆ ಶ್ರದ್ಧೆ ಇರುವಲ್ಲಿ ಬೇರೆ ಯಾವುದಕ್ಕೂ ಅವಕಾಶ ಇರುವುದಿಲ್ಲ. ವಿಚಾರ ಮಾಡಲೂ, ಚಿಂತನೆ ನಡೆಸಲೂ ಅವಕಾಶ ಇರುವುದಿಲ್ಲ. ಆದ್ದರಿಂದಲೇ ಕೂದಲೆಳೆಯ ಅಂತರದಲ್ಲಿ ಶ್ರದ್ಧೆಯು ಅಂಧಶ್ರದ್ಧೆಯಾಗಿ ಬಿಡುವ ಅಪಾಯ ಇರುತ್ತದೆ. ಆದ್ದರಿಂದ ನಮ್ಮ ಶ್ರದ್ಧೆ ಪ್ರಜ್ಞಾಪೂರ್ಣವಾಗಿರಬೇಕು. ಸಂಪೂರ್ಣಪ್ರಜ್ಞೆಯಿಂದ ನಾವು ಇರಿಸಿಕೊಳ್ಳುವ ಶ್ರದ್ಧೆ ನಮ್ಮನ್ನು ಕಾಯುತ್ತದೆ, ಕೈಹಿಡಿದು ನಡೆಸುತ್ತದೆ.