ಚಾಮ್: ಟಿಬೆಟ್ಟಿನ ನರ್ತನ ಧ್ಯಾನ

ನರ್ತನವು ಕೂಡಾ ಧ್ಯಾನ – ತಂತ್ರದ ಭಾಗವಾಗಿದೆ. ಬೌದ್ಧ ಧರ್ಮೀಯರು ಆಚರಿಸುವ ನರ್ತನ ಧ್ಯಾನ ತಂತ್ರ ‘ಚಾಮ್’ ಬಗ್ಗೆ ಕಿರಿ ಮಾಹಿತಿ ಇಲ್ಲಿದೆ….

ಮ್ಮ ತಟ್ಟೀರಾಯನನ್ನು ಮೀರಿಸುವಂಥ ಮುಖವಾಡಗಳು. ತಣ್ಣಗೆ ಸಾಗುತ್ತಲೇ ಭೀಕರ ಎನ್ನಿಸುವ ಆಂಗಿಕ ಚಲನೆ. ಹಿಮ್ಮೇಳದಲ್ಲಿ ಪುನರಾವರ್ತಿತ ಮಂತ್ರದ ಗುಂಗು. ಬೆಳ್ಳನೆ ಹಿಮ ರಾಶಿಯ ಹಿನ್ನೆಲೆಯಲ್ಲಿ ಗಾಢ ಬಣ್ಣಗಳ ದಟ್ಟಣೆ. ಈ ಎಲ್ಲವನ್ನು ಒಳಗೊಂಡಿರುತ್ತದೆ `ಚಾಮ್’ ನೃತ್ಯ. ವಾಸ್ತವದಲ್ಲಿ ಚಾಮ್ ಅಂದರೇನೇ ನೃತ್ಯ, ಟಿಬೆಟನ್ ಭಾಷೆಯಲ್ಲಿ. ಇದು ಬೌದ್ಧ ಆಚರಣೆಗಳಲ್ಲಿ ಮಹತ್ವದ ಪಾತ್ರ ಹೊಂದಿರುವಂಥದ್ದು. ಇದು ತಂತ್ರದ ಒಂದು ಭಾಗವಾಗಿ ಹುಟ್ಟಿಕೊಂಡು, ಅನಂತರದಲ್ಲಿ ಹಲವು ವಿಸ್ತಾರಗಳನ್ನು ಕಂಡಿತು. ಸದ್ಯದ ಚಾಮ್, ಮೂಲಕ್ಕಿಂತ ಹಲವು ರೀತಿಯಲ್ಲಿ ಭಿನ್ನವಾಗಿದೆ. ಆಚರಣೆಯಲ್ಲೂ, ಉದ್ದೇಶದಲ್ಲೂ.

 

cham 3

ಶುರುವಾಗಿದ್ದು ಹೀಗೆ…
ಬೌದ್ಧ ಧರ್ಮದ ಹಲವು ಆಚರಣೆಗಳಂತೆಯೇ ಚಾಮ್ ಕೂಡಾ ಭಾರತದ ಕೊಡುಗೆ. ಇದನ್ನು ಪರಿಚಯಿಸಿದ್ದು ಪದ್ಮಸಂಭವ (ಗುರು ರಿಂಪೋಷೆ) ಎಂಬ ಬೌದ್ಧ ಸನ್ಯಾಸಿ. ಈತ ಕ್ರಿ.ಶ.760-770 ರ ಅವಧಿಯಲ್ಲಿ ಟಿಬೇಟಿನ ರಾಜ ತ್ರಿಶೋಂಗ್ ಡೆಸ್ಟೆನ್‍ನ ಕೋರಿಕೆಯ ಮೇರೆಗೆ ಅಲ್ಲಿಗೆ ತೆರಳಿದ್ದಾಗ, ಆತನಿಗುಂಟಾಗಿದ್ದ ಸಮಸ್ಯೆಗೆ ಪರಿಹಾರ್ಥವಾಗಿ ಈ ನೃತ್ಯವನ್ನು ರೂಪಿಸಿದ.
ರಾಜ ತ್ರಿಶೋಂಗ್ ಸಮ್ಯೆಯಲ್ಲಿ ಒಂದು ಬೃಹತ್ ಬೌದ್ಧ ವಿಹಾರವನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದ. ಅದರಂತೆ ಎಲ್ಲ ಏರ್ಪಾಡುಗಳಾಗಿ ನಿರ್ಮಾಣ ಕಾರ್ಯವೂ ಆರಂಭವಾಯ್ತು. ಇದಕ್ಕೆ ಸ್ಥಳೀಯ ಕೆಲವು ಪಂಗಡಗಳ ವಿರೋಧವಿತ್ತು. ಅದರಲ್ಲಿಯೂ ಸ್ಥಳೀಯ ಶಮನ್‍ಗಳು ಬೌದ್ಧ ಧರ್ಮದ ವಿರೋಧಿಗಳಾಗಿದ್ದರು. ಇದರಿಂದಾಗಿ ಕಟ್ಟಡ ಕಾರ್ಯಕ್ಕೆ ವಿಘ್ನಗಳುಂಟಾಗುತ್ತಿತ್ತು. ಶಮನ್‍ಗಳು ಮಾಟ ಮಂತ್ರಗಳಲ್ಲಿ ನುರಿತಿದ್ದರು. ಇವರ ಉಪಟಳವನ್ನು ನಿವಾರಿಸಿ, ಕಟ್ಟಡ ಕಾರ್ಯವನ್ನು ಸುಗಮಗೊಳಿಸುವ ಸಲುವಾಗಿಯೇ ತ್ರಿಶೋಂಗ್ ಪದ್ಮಸಂಭವನಿಗೆ ಕೋರಿಕೆ ಸಲ್ಲಿಸಿದ್ದು.
ಅದರಂತೆ ಅಲ್ಲಿಗೆ ತೆರಳಿದ ಪದ್ಮಸಂಭವ ಪರಿಸ್ಥಿತಿಯನ್ನು ಕೂಲಂಕಷವಾಗಿ ಅವಲೋಕಿಸಿದ. ತನ್ನ ಸಾಧನೆಯನ್ನು ಧಾರೆ ಎರೆದು ಎಲ್ಲವನ್ನೂ ಹತೋಟಿಗೆ ತಂದ. ಕಟ್ಟಡ ನಿರ್ಮಾಣದ ಅಡ್ಡಿಗಳು ನಿವಾರಣೆಗೊಂಡವು. ಈ ಎಲ್ಲ ವ್ಯವಸ್ಥೆಯ ಅನಂತರ, ಮುಂದೆ ಪುನಃ ದುಷ್ಟಶಕ್ತಿಗಳ ಬಾಧೆಯಾಗದಿರುವಂತೆ ತಾಂತ್ರಿಕ ಮುದ್ರಗೆಳ ನೃತ್ಯ ‘ಚಾಮ್’ ಅನ್ನು ಸ್ವತಃ ತಾನೇ ಆಚರಿಸಿದ. ಅಲ್ಲಿಂದ ಮುಂದೆ ಇದು ಇತರ ಬೌದ್ಧ ಕೇಂದ್ರಗಳಿಗೂ ಹರಡಿ, ದುಷ್ಟ ಶಕ್ತಿಗಳನ್ನು ನಿವಾರಿಸುವ, ಪರಿವರ್ತಿಸುವ ನೃತ್ಯವಾಗಿ ಮನ್ನಣೆ ಪಡೆಯಿತು.

ಮುಖವಾಡಗಳೇ ಪ್ರಮುಖ ಆಕರ್ಷಣೆ
ಮೂಲದಲ್ಲಿ ಚಾಮ್ ಬೌದ್ಧ ಬಿಕ್ಖುಗಳು ಮುಖವಾಡಗಳನ್ನು ಧರಿಸಿ, ಹಲವು ಮುದ್ರೆಗಳ ಮೂಲಕ ದುಷ್ಟ ಶಕ್ತಿಗಳನ್ನು ಪ್ರಚೋದಿಸಿ, ಅವನ್ನು ತಮ್ಮೊಳಗೆ ಆವಾಹಿಸಿಕೊಂಡು ಪರಿವರ್ತಿಸುವ ಆಚರಣೆಯಾಗಿತ್ತು. ಇಲ್ಲಿ ಕೈಗಳ ಚಲನೆ ಮತ್ತು ಹಸ್ತಮುದ್ರೆಗಳಿಗಷ್ಟೆ ಪ್ರಾಮುಖ್ಯವಿದ್ದು, ಕಾಲುಗಳ ಬಳಕೆ ಅತಿ ಕಡಿಮೆ ಇತ್ತು. ಹೆಚ್ಚೆಂದರೆ, ನಿಂತಲ್ಲೆ ಹಿಂದು ಮುಂದಿನ ಚಲನೆಗೆ ಹೆಜ್ಜೆ ಹಾಕುವಷ್ಟು. ಅನಂತರದ ದಿನಗಳಲ್ಲಿ ಕೆಲವು ಮಾರ್ಪಾಡುಗಳಾಗಿ ಇದು ಪರಿಪೂರ್ಣ ನೃತ್ಯದ ಸ್ವರೂಪ ಪಡೆಯಿತು ಎಂದು ಹೇಳಲಾಗುತ್ತದೆ.

ಬಗೆ ಬಗೆಯ ಬೆರಗು ಹುಟ್ಟಿಸುವ ಮುಖವಾಡಗಳೇ ಚಾಮ್‍ನ ಪ್ರಮುಖ ಆಕರ್ಷಣೆ. ಚಾಮ್, ದುಷ್ಟಶಕ್ತಿಗಳನ್ನು ಪಳಗಿಸಲೆಂದೇ ದೇವತೆಗಳು ಮಾಡುವ ನೃತ್ಯ. ಹಾಗಿದ್ದೂ ಇಂಥಾ ಭೀಕರ ಮುಖವಾಡಗಳೇಕೆ? ಇದರ ತಾತ್ವಿಕತೆ ಸ್ವಾರಸ್ಯವಾಗಿದೆ. ದುಷ್ಟ ಶಕ್ತಿಗಳನ್ನು ಪಳಗಿಸಲು ದೇವತೆಗಳು ಅವುಗಳಂತೆಯೇ ಮೈದಾಳುತ್ತವೆ. ದುಷ್ಟ ಶಕ್ತಿಗಳ ಇರುವಿಕೆ ಎಷ್ಟು ಭೀಕರವಾಗಿರುತ್ತದೆ ಎಂದು ಅವಕ್ಕೆ ಮನದಟ್ಟು ಮಾಡಿಸುವ ಉದ್ದೇಶ ಇದರ ಹಿಂದಿದೆ. ಜೊತೆಗೆ ಅವುಗಳನ್ನು ಈ ಮೂಲಕ ಬೆದರಿಸುವ ಉದ್ದೇಶವನ್ನೂ ಆರೋಪಿಸಲಾಗಿದೆ.

ಈ ಮುಖವಾಡಗಳಲ್ಲಿ ಮೂಗು, ಬಾಯಿ, ಹುಬ್ಬುಗಳು, ಬಾಯಿ ಸುತ್ತಲಿನ ಕರೆಗಳು ಹಾಗೂ ಗಡ್ಡಗಳು ಎದ್ದು ತೋರುವಂತೆ ಮಾಡಲಾಗಿರುತ್ತದೆ. ಈ ಐದೂ ಭಾಗಗಳು ವಿವಿಧ ಪಾತ್ರಗಳನ್ನು, ಪ್ರಾಮುಖ್ಯತೆಯನ್ನು ಸಂಕೇತಿಸುತ್ತವೆ.
ಮೂಗು: ಭೀಕರ ಮೂಗನ್ನು ಹೊಂದಿರುವ ಮುಖವಾಡ ತಿ ಹೆಚ್ಚು ದುಷ್ಟತನ ಹೊಂದಿರುವುದನ್ನು ಬಿಂಬಿಸುತ್ತದೆ. ಯಮ ಪಾತ್ರಧಾರಿ ಇದನ್ನು ಧರಿಸುತ್ತಾನೆ.ಈ ಪಾತ್ರದ ಜೊತೆಗೆ ಕೋಣ ಅಥವಾ ಪ್ರಾಣಿ ಪಕ್ಷಿಗಳಿರುತ್ತವೆ.
ಬಾಯಿ: ಸಾಮಾನ್ಯವಾಗಿ ಎಲ್ಲ ಮುಖವಾಡಗಳೂ ಅಗಲವಾದ ಬಾಯಿ ಹೊಂದಿದ್ದು, ನಾಲ್ಕು ಕೋರೆ ಹಲ್ಲುಗಳನ್ನು ಹೊಂದಿರುತ್ತವೆ.
ಹುಬ್ಬುಗಳು: ನೇರವಾದ, ಪೊದೆಗಟ್ಟಿದಂತಹ ಹುಬ್ಬುಗಳು ಹಣೆಯ ತುಂಬ ಹರಡಿರುತ್ತವೆ. ಇವುಗಳ ನಡುವೆ ಮೂರನೆ ಕಣ್ಣು ಇರುತ್ತದೆ.
ಬಾಯಿ ಸುತ್ತಲಿನ ಕರೆ: ಇದು ದುಷ್ಟ ಶಕ್ತಿಗಳು ಪ್ರಾಣಿಗಳನ್ನು ಕೊಂದು ತಿಂದಿರುವುದರ ಸಂಕೇತ.
ಗಡ್ಡ: ಕಿವಿಯಿಂದ ಆರಂಭಿಸಿ ಕೆಳಗೆ ಹರಿದು ಹೋದಂತೆ ರಚಿಸಲಾಗಿರುತ್ತದೆ. ಇದು ಮುಖವಾಡ ತಯಾರಿಸುವವರ ಅಭಿರುಚಿಗೆ ತಕ್ಕಂತೆ ಚಿತ್ರಿತವಾಗಿರುತ್ತದೆ. ಅಂದಹಾಗೆ, ಸ್ತ್ರೀ ಪಾತ್ರದ ಮುಖವಾಡಗಳಲ್ಲಿ ಇದು ಇರುವುದಿಲ್ಲ.
ಮುಖವಾಡಗಳ ಮೇಲಿನ ಐದು ತಲೆಬುರುಡೆಗಳು: ಇವು ಮೌಢ್ಯ, ಮತ್ಸರ, ಅಹಂಕಾರ, ಮೋಹ ಹಾಗೂ ಕ್ರೋಧಗಳನ್ನು ಪ್ರತಿಬಿಂಬಿಸುತ್ತವೆ. ಆದರೆ ಇಲ್ಲಿ ಅವು ಸಕಾರಾತ್ಮಕ ಅರ್ಥವನ್ನು ಹೊಂದಿರುತ್ತವೆ. ಮೌಢ್ಯವು ಸೋತು ಜ್ಞಾನವಾಗಿ ಹೊರಹೊಮ್ಮುತ್ತದೆ; ಮತ್ಸರವು ಸೋತು ಸಹಯೋಗವಾಗಿ ಹೊರಹೊಮ್ಮುತ್ತದೆ; ಅಹಂಕಾರವು ಸೋತು ಸಾಮಾನ್ಯರೊಡನೆ ಬೆರೆಯುವ ಸಹಾನುಭೂತಿಯಾಗುತ್ತದೆ; ಮೋಹವು ಸೋತು ತ್ಯಾಗವಾಗುತ್ತದೆ; ಕೋಪವು ಸೊತು ತಿಳಿವಳಿಕೆಯಾಗುತ್ತದೆ- ಎಂಬುದು ಈ ತಲೆಬುರುಡೆಗಳ ಸಂಕೇತ.

ಪರಿಪೂರ್ಣ ಆಚರಣೆ
ಚಾಮ್ ಒಂದು ಪರಿಪೂರ್ಣ ಆಚರಣೆ. ಇದಕ್ಕಾಗಿ ಒಂದು ಪ್ರಶಸ್ತವಾದ ದಿನವನ್ನು ಆಯ್ದುಕೊಂಡು, ವಿವಿಧ ಪಾತ್ರಗಳನ್ನು ನಿರ್ವಹಿಸಲು ಬಿಕ್ಖುಗಳಿಗೆ ತರಬೇತಿ ನೀಡಲಾಗುತ್ತದೆ. ಈ ಬಿಕ್ಖುಗಳು ಆಚರಣೆಗೆ ಒಂದು ವಾರ, ಕೆಲವರು ಹದಿನೈದು ದಿನಗಳ ಮುಂಚಿನಿಂದ ನೇಮಗಳನ್ನು ಅನುಸರಿಸುತ್ತಾ ಧ್ಯಾನಮಗ್ನರಾಗುತ್ತಾರೆ. ತಾವು ಪಾತ್ರ ನಿರ್ವಹಿಸಲಿರುವ ದೇವತೆಯ ಬಗ್ಗೆ ಚಿಂತಿಸುತ್ತಾ ಆ ದೇವತೆಯನ್ನು ತಮ್ಮೊಳಗೆ ಆವಾಹಿಸಿಕೊಳ್ಳುತ್ತಾರೆ. ಪ್ರತಿ ದೇವತೆಯ ಆವಾಹನೆಗೂ ಒಂದು ನಿರ್ದಿಷ್ಟ ಮಂತ್ರವನ್ನು ನೀಡಲಾಗಿರುತ್ತದೆ.

ಚಾಮ್ ಆಚರಣೆಗಾಗಿ ತ್ರಿಕೋನಾಕಾರದಲ್ಲಿ ದಾರಗಳನ್ನು ಕಟ್ಟಿ, ಸಪಾಟು ನೆಲದ ಮೇಲೊಂದು ವೇದಿಕೆ ನಿರ್ಮಿಸಲಾಗಿರುತ್ತದೆ. ಅಲ್ಲಿ ಬಿಕ್ಖುಗಳು ನರ್ತಿಸುತ್ತಾರೆ. ದುಷ್ಟ ಶಕ್ತಿಗಳನ್ನು ಪ್ರಚೋದಿಸಿ ತಮ್ಮತ್ತ ಸೆಳೆಯುತ್ತಾರೆ. ವೇದಿಕೆ ಮಧ್ಯದ ಪವಿತ್ರ ಸ್ತಂಭದ ಬುಡದಲ್ಲಿ ಒಂದು ಹಿಟ್ಟಿನ ಮುದ್ದೆ ಇಡಲಾಗಿರುತ್ತದೆ. ದುಷ್ಟ ಶಕ್ತಿಗಳನ್ನು ಆ ಹಿಟ್ಟಿನ ಮುದ್ದೆಗೆ ರವಾನಿಸಿ ಬಂಧಿಸುತ್ತಾರೆ ಮತ್ತು ಅದನ್ನು ಕತ್ತರಿಸಲಾಗುತ್ತದೆ. ಇಲ್ಲಿಗೆ ಒಂದು ಹಂತ ಮುಗಿಯಿತು.
ಆದರೆ ಬೌದ್ಧ ಧರ್ಮ ಶಾಂತಿ ಮತ್ತು ಅಹಿಂಸೆಯ ಧರ್ಮ. ದುಷ್ಟರನ್ನಾದರೂ ಸರಿ, ಅದು ಕೊಲ್ಲುವ ಮೂಲಕ ಹಿಂಸೆಗೊಳಪಡಿಸುತ್ತದೆಯೇ? ಖಂಡಿತ ಇಲ್ಲ. ಹಾಗೆ ಹಿಟ್ಟನ್ನು ಸೀಳುವುದು ದುಷ್ಟ ಶಕ್ತಿಗಳ ದೌಷ್ಟ್ಯವನ್ನು ತೆಗೆಯುವುದರ ಸಂಕೇತವಷ್ಟೆ. ಅನಂತರ ದೇವತೆಗಳು (ನರ್ತಕ ಬಿಕ್ಖುಗಳು) ಆ ದುಷ್ಟಶಕ್ತಿಗಳನ್ನು ತಮ್ಮೊಳಗೆ ಆವಾಹಿಸಿಕೊಂಡು ತಮ್ಮೊಳಗಿನ ಶಾಂತಿಯ ಅನುಭವಕ್ಕೆ ಎಡೆಮಾಡಿಕೊಡುತ್ತಾರೆ. ಈ ಮೂಲಕ ಆ ಶಕ್ತಿಗಳು ಪರಿವರ್ತನೆಗೆ ಒಳಗಾಗುತ್ತವೆ. ಇದರೊಂದಿಗೆ ಚಾಮ್ ವಿಧಿವಿಧಾನಗಳು ಸಂಪನ್ನಗೊಳ್ಳುತ್ತವೆ.

ಚಾಮ್‍ನ ಈ ವಿಧಾನವನ್ನು `ಸಹಾನುಭೂತಿ ಹಾಗೂ ಪ್ರೇಮದ ಮೂಲಕ ದುಷ್ಟ ಶಕ್ತಿಗಳ ಉಚ್ಛಾಟನೆ ಮಾಡುವ ಕ್ರಿಯೆ’ ಎಂದು ವರ್ಣಿಸಲಾಗುತ್ತದೆ. ಈ ಇಡೀ ಪ್ರಕ್ರಿಯೆಯಲ್ಲಿ ನೋಡುಗರನ್ನು ಹಾಗೂ ಪಾತ್ರಧಾರಿಗಳನ್ನು ಆಳುವ ಮುಖವಾಡಗಳು ಹಾಗೂ ಕುಣಿತವು ನಮ್ಮ ನಮ್ಮ ಮನಸ್ಸಿನ ಚಾಂಚಲ್ಯ ಹಾಗೂ ಕುಣಿತಗಳ ಪ್ರತೀಕವೇ ಆಗಿರುತ್ತದೆ ಎಂದು ಬೌದ್ಧ ಬಿಕ್ಖುಗಳು ವಿವರಿಸುತ್ತಾರೆ.
ಚಾಮ್‍ನ ಮುಖವಾಡಗಳು ಹೊರಗಿನ ದುಷ್ಟಶಕ್ತಿಗಳ ಪ್ರತಿಬಿಂಬ ಮಾತ್ರವಲ್ಲ, ನಮ್ಮ ಮನಸ್ಸಿಗೆ ಹಿಡಿದ ಕನ್ನಡಿಯೂ ಆಗಿದೆ. ವಾಸ್ತವವಾಗಿ ನಮ್ಮ ಮನಸ್ಸು ತಿಳಿಗೊಳವೇ ಸರಿ. ಆದರೆ ಮೌಢ್ಯ, ಕೋಪ, ಆಸೆಬುರುಕತನ, ಹೊಟ್ಟೆಕಿಚ್ಚು ಹಾಗೂ ಅಹಂಕಾರಗಳ ಕೆಸರಿನಿಂದಾಗಿ ಹೂಳು ತುಂಬಿದಂತಿರುತ್ತದೆ. ಅವನ್ನು ಹೊರಹಾಕಿ, ನಮ್ಮನ್ನು ನಾವು ಕಂಡುಕೊಳ್ಳುವ ಪ್ರಕ್ರಿಯೆಯನ್ನೂ ಈ ನೃತ್ಯ ಸಂಕೇತಿಸುತ್ತದೆ. ಚಾಮ್ ಆಚರಣೆಯಿಂದ ಭೂಮಿ ಮೇಲಿನ – ನಮ್ಮೊಳಗಿನ ದುಷ್ಟ ಶಕ್ತಿಗಳ ನಿವಾರಣೆಯಾಗುವುದು ಮಾತ್ರವಲ್ಲ, ಶಾಂತಿ ಸೌಹಾರ್ದದ ವಾತವಾರಣವೂ ನಿರ್ಮಾಣಗೊಳ್ಳುತ್ತದೆ. ಈ ನೃತ್ಯವು ಅದಕ್ಕೆ ಸಾಕ್ಷಿಯಾಗುವ ಜನರ ಮನಸ್ಸಿನಲ್ಲಿ ಕರ್ಮಫಲಗಳ ಚಿಂತನೆಯನ್ನು ಅಚ್ಚೊತ್ತಿ ಮೂಡಿಸುತ್ತವೆ.

cham2

ಸಾಂಸ್ಕೃತಿಕ ಆಯಾಮ
ನಮ್ಮ ಹಿಮಾಲಯದ ಸೆರಗಿನುದ್ದಕ್ಕೂ ಭಾರತದ ಲಡಾಖ್ ಹಾಗೂ ಝನ್‍ಸ್ಕಾರ್ ಶ್ರೇಣಿ, ಭೂತಾನ್, ಟಿಬೆಟ್, ನೇಪಾಳಗಳ ಬೌದ್ಧ ಕೇಂದ್ರಗಳಲ್ಲಿ ವರ್ಷಕ್ಕೊಮ್ಮೆ ಚಾಮ್ ಆಚರಣೆ ನಡೆಯುತ್ತದೆ. ಇದು ಬೌದ್ಧ ಬಿಕ್ಖುಗಳ ಪಾಲಿಗೆ ಬಹು ದೊಡ್ಡ ಉತ್ಸವ. ಆದರೆ ಚಾಮ್ ಇಂದು ಕೇವಲ ಸಾಂಪ್ರದಾಯಿಕ ಆಚರಣೆಯಾಗಿ ಉಳಿದಿಲ್ಲ. ಆರಂಭದಲ್ಲಿ ರಾತ್ರಿಯ ವೇಳೆ, ಕೇವಲ ಬಿಕ್ಖುಗಳೇ ಸೇರಿ ನಡೆಸುತ್ತಿದ್ದ ಈ ನೃತ್ಯ ಮುಂದೆ ಸಾರ್ವಜನಿಕರ ನೋಟಕ್ಕೂ ತೆರೆದುಕೊಂಡಿತ್ತಷ್ಟೆ? ಈಗ ಇನ್ನೂ ಮುಂದುವರೆದು ಆಕರ್ಷಣೆಯ ಕೇಂದ್ರವಾಗಿ ಈ ನೃತ್ಯ ಬೆಳೆದುನಿಂತಿದೆ. ಪರಸ್ಥಳಗಳ ಯಾತ್ರಿಕರು ಇದನ್ನು ಧಾರ್ಮಿಕ ಆಚರಣೆಗಿಂತ ಹೆಚ್ಚಾಗಿ ಒಂದು ಸಾಂಸ್ಕೃತಿಕ ನೃತ್ಯದಂತೆ ನೋಡಿ ಆನಂದಿಸತೊಡಗಿದ್ದಾರೆ. ಪ್ರತಿ ಬಾರಿ ಚಾಮ್ ಪ್ರದರ್ಶನ ನಡೆಯುವಾಗಲೀ ಕಿಕ್ಕಿರಿದ ಜನಸಂದಣಿ ನೆರೆದಿರುತ್ತದೆ. ಈ ಬಗ್ಗೆ ಸ್ವತಃ ಬಿಕ್ಖುಗಳು ಹಾಗೂ ಸ್ಥಳೀಯ ಶ್ರದ್ಧಾಳುಗಳು ಬೇಸರ ವ್ಯಕ್ತಪಡಿಸುತ್ತಾರಾದರೂ ಬೌದ್ಧ ಕೇಂದ್ರಗಳಲ್ಲಿ ಚಾಮ್ ನೃತ್ಯದ ಬಗೆಗಿನ ನಂಬಿಕೆ ಹಾಗೂ ಪೂಜ್ಯ ಭಾವನೆಗಳಿಗೆ ಕುಂದುಂಟಾಗಿಲ್ಲ.

ಹಲವು ವಿಧ
ಚಾಮ್ ನೃತ್ಯದಲ್ಲಿ ಹಲವು ವಿಧಗಳಿವೆ. ಬೌದ್ಧ ಧರ್ಮದ ವಿವಿಧ ಪರಂಪರೆಗಳಿಗೆ ಅನುಸಾರವಾಗಿಯೂ ಚಾಮ್ ವೈವಿಧ್ಯತೆ ಪಡೆದಿದೆ. ಹಾಗೆಯೇ ಪ್ರಮುಖ ಪಾತ್ರ, ವಿಷಯದ ಎಳೆ, ಸಂದರ್ಭ ಹಾಗೂ ಆಯಾ ಪ್ರಾಂತದ ಮೊನಾಸ್ಟರಿಗಳಿಗನುಸಾರವಾಗಿಯೂ ಈ ನೃತ್ಯ ಹಲವು ಬಗೆಗಳಾಗಿ ವಿಂಗಡಣೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಜನಪ್ರಿಯವಾಗಿರುವ ಹಾಗೂ ಆಚರಿಸಲ್ಪಡುವ ಚಾಮ್ ಐದು ವೈವಿಧ್ಯಗಳು ಹೀಗಿವೆ:
* ಯಮ ಧರ್ಮರಾಜ ಚಾಮ್ (ಧರ್ಮಪಾಲರ ನೃತ್ಯ)
* ಹಯಗ್ರೀವ ಚಾಮ್
* ಶನಾಗ್ ಚಾಮ್ (ಬ್ಲ್ಯಾಕ್ ಹ್ಯಾಟ್ ಪರಂಪರೆಯವರದ್ದು)
* ಗು ಚಾಮ್ (ಲಬ್ರಾಂಗ್ ಮೊನಾಸ್ಟರಿಯಲ್ಲಿ ನಡೆಯುವಂಥದ್ದು)
* ಮಿಲರೇಪ ಚಾಮ್ (ಗೊನ್ಪೋ ದೋರ್ಜಿ ಚಾಮ್ ಅಥವಾ ಶಾವ ಚಾಮ್)

 

Leave a Reply