ನಾರದರಿಗೆ ಮಾಯೆಯ ಪಾಠ ಮಾಡಿದ ನಾರಾಯಣ! : ಪುರಾಣ ಕಥೆ

ನಾರದನ ಸಂಸಾರ ಸುಖವಾಗಿ ಸಾಗತೊಡಗಿತು. ಆತನಿಗೆ ಹಿಂದಿನ ಯಾವುದರ ನೆನಪೂ ಇಲ್ಲವಾಗಿಹೋಗಿತ್ತು.  ಕ್ರಮೇಣ ನಾರದ ದಂಪತಿಗೆ ಮಕ್ಕಳೂ ಆದವು. ನಾರದ ತಾನು ಭಾವಿಸಿದಂತೆ ಸುಖವಾಗಿಯೇ ಇದ್ದ. ಆದರೆ…

ನಾರದ ಒಮ್ಮೆ ನಾರಾಯಣನನ್ನು ಕುರಿತು, ” ಭಗವಂತ, ನನಗೆ ಮಾಯೆಯನ್ನು ತೋರು ” ಎಂದು ಕೇಳಿದ. ನಾರಾಯಣ ಮುಗುಳ್ನಕ್ಕು, “ಕಾಲ ಬರಲಿ ನಾರದಾ, ಅಗತ್ಯವಾಗಿ ತೋರಿಸುತ್ತೇನೆ” ಎಂದ. 

ಕೆಲವು ದಿನ ಕಳೆದವು. ಲೋಕಸಂಚಾರ ಹೊರಟಿದ್ದ ನಾರಾಯಣ ನಾರದನಿಗೆ ತನ್ನ ಜೊತೆ ಬರುವಂತೆ ಹೇಳಿದ. ಒಂದಷ್ಟು ದೂರ  ಹೋದಮೇಲೆ ನಾರಾಯಣ, “ನಾರದಾ, ನನಗೆ ಬಾಯಾರಿಕೆಯಾಗಿದೆ… ಸ್ವಲ್ಪ ನೀರು ತರುವೆಯಾ ?” ಎಂದ .  “ಈ ಕೂಡಲೇ ಹೋಗಿ ತರುತ್ತೇನೆ ಭಗವಂತ ” ಎಂದು ನಾರದ ಹೊರಟ .

ಸ್ವಲ್ಪ ದೂರದಲ್ಲಿ ಒಂದು ಹಳ್ಳಿ ಇತ್ತು. ನೀರನ್ನು ಹುಡುಕಿಕೊಂಡು ಹಳ್ಳಿಯನ್ನು ಪ್ರವೇಶಿಸಿದ . ಒಂದು ಮನೆಯ ಬಾಗಿಲನ್ನು ತಟ್ಟಿದಾಗ ಒಬ್ಬಳು ಅತಿ ಸುಂದರಿಯಾದ ಯುವತಿ ಬಾಗಿಲು ತೆರೆದಳು. ಅವಳನ್ನು ನೋಡಿದೊಡನೆಯೆ, ತನ್ನ ಸ್ವಾಮಿ ನೀರಿಗಾಗಿ ಕಾಯುತ್ತಿರುವನು, ಅದಕ್ಕಾಗಿ ಪ್ರಾಣಬಿಡುವನು ಎಂಬುದನ್ನು ಆತ ಸಂಪೂರ್ಣವಾಗಿ ಮರೆತು ಆ ಹುಡುಗಿಯೊಡನೆ ಮಾತನಾಡಲು ಆರಂಭಿಸಿದ. ಆಕೆಯೊಡನೆ ಮಾತಾಡುತ್ತಾ ತಾನ್ಯಾರು, ಇಲ್ಲಿಗೇಕೆ ಬಂದಿದ್ದೇನೆ, ತನಗಾಗಿ ನಾರಾಯಣ ಕಾದಿದ್ದಾನೆ ಎನ್ನುವ ಎಲ್ಲ ವಿವರವನ್ನೂ ಮರೆತುಬಿಟ್ಟ. ಮಾತಾಡುತ್ತಾ ಆಡುತ್ತಾ ಆ ಸುಂದರಿಯ ಪ್ರೇಮದಲ್ಲಿ ಬಿದ್ದ ನಾರದ. ಅನಂತರ ಹುಡುಗಿಯ ತಂದೆಯ ಬಳಿ ತನಗೆ ಅವಳನ್ನು ಮದುವೆ ಮಾಡಿಕೊಡಿರೆಂದು  ಕೇಳಿಕೊಂಡ. ತಂದೆ ಅದಕ್ಕೊಪ್ಪಿ ಮದುವೆಯನ್ನೂ ಮಾಡಿಸಿದ.

ಹೀಗೆ ಶುರುವಾದ ನಾರದನ ಸಂಸಾರ ಸುಖವಾಗಿ ಸಾಗತೊಡಗಿತು. ಆತನಿಗೆ ಹಿಂದಿನ ಯಾವುದರ ನೆನಪೂ ಇಲ್ಲವಾಗಿಹೋಗಿತ್ತು.  ಕ್ರಮೇಣ ನಾರದ ದಂಪತಿಗೆ ಮಕ್ಕಳೂ ಆದವು. ಹೀಗೆ ಹನ್ನೆರಡು ವರುಷಗಳು ಕಳೆದುವು. ಮಾವ ಸತ್ತುಹೋದ. ಅವನ ಆಸ್ತಿ ಇವನಿಗೆ ಬಂದಿತು. ಹೆಂಡತಿ, ಮಕ್ಕಳು ,ಹೊಲ, ದನ ಇವುಗಳೊಂದಿಗೆ ತಾನು ಭಾವಿಸಿದಂತೆ ಸುಖವಾಗಿಯೇ ಇದ್ದ…

ಹೀಗಿರುತ್ತ, ಒಮ್ಮೆ ಭಾರೀ  ಪ್ರವಾಹ ಬಂತು. ನದಿ ಪ್ರವಾಹದಿಂದ ಉಕ್ಕಿ ದಡಮೀರಿ ಹರಿದು ಹಳ್ಳಿಯನ್ನು ಮುಳುಗಿಸಿತು. ಮನೆಗಳು ಬಿದ್ದವು; ಮನುಷ್ಯರು, ಪ್ರಾಣಿಗಳು ಕೊಚ್ಚಿಕೊಂಡು ಹೋದವು. ಎಲ್ಲಾ ಪ್ರವಾಹದಲ್ಲಿ ತೇಲಿ ಹೋಗುತ್ತಿತ್ತು. ನಾರದ ತನ್ನ ಸಂಸಾರ ನದಿಯಲ್ಲಿ ಕೊಚ್ಚಿಹೋಗದಂತೆ ಕಾಪಾಡಲು ಹೆಣಗಿದ. ಒಂದು ಕೈಯಲ್ಲಿ ಹೆಂಡತಿ, ಮತ್ತೊಂದು ಕೈಯಲ್ಲಿ ಇಬ್ಬರು ಮಕ್ಕಳು, ಮತ್ತೊಂದು ಮಗು ಭುಜದ ಮೇಲೆ ಹೀಗೆ ಇವರನ್ನು ಕರೆದುಕೊಂಡು ಆ ಮಹಾ ಪ್ರವಾಹವನ್ನು ದಾಟಲು ಯತ್ನಿಸುತ್ತಿದ್ದ.

ಕೆಲವು ಅಡಿ  ಸಾಗುವುದರೊಳಗಾಗಿ ಪ್ರವಾಹ ಬಲವಾಯಿತು. ಹೆಗಲ ಮೇಲಿದ್ದ ಮಗು ಬಿದ್ದು ಕೊಚ್ಚಿಕೊಂಡು ಹೋಯಿತು. ನಾರದ  ಆ ಮಗುವನ್ನು ರಕ್ಷಿಸುವುದಕ್ಕೆ ಪ್ರಯತ್ನಿಸಿದಾಗ ಮತ್ತೊಂದು ಮಗುವಿನ ಮೇಲೆ ಇದ್ದ ಹಿಡಿತ ಸಡಿಲವಾಯಿತು. ಅದೂ ಮುಳುಗಿ ಹೋಯಿತು. ತನ್ನ ಶಕ್ತಿಯನ್ನೆಲ್ಲಾ ಪ್ರಯೋಗಿಸಿ ಅಪ್ಪಿಕೊಂಡಿದ್ದ ಹೆಂಡತಿಯೂ ಕೊನೆಗೆ ಕೊಚ್ಚಿಕೊಂಡುಹೋದಳು. ಅಳುತ್ತಾ ಗೋಳಾಡುತ್ತಾ ನಾರದ ಪ್ರವಾಹದ ರಭಸಕ್ಕೆ ಸಿಕ್ಕಿ ದಡದ ಮೇಲೆ ಬಂದು ಬಿದ್ದ. ಅವನ ಹಿಂದೆ ಒಂದು ಮೆಲುದನಿ, “ನಾರದಾ, ಬಾಯಾರುತ್ತಿದೆ…. ನೀರೆಲ್ಲಿ !? ನೀನು ಹೋಗಿ ಆಗಲೇ ಅರ್ಧಗಂಟೆಯ ಮೇಲಾಯಿತು ” ಎಂದಿತು. 

“ಅರ್ಧಗಂಟೆ ಮಾತ್ರವೆ !? ಹನ್ನೆರಡು ವರ್ಷಗಳೇ ಕಳೆದುಹೋದವಲ್ಲವೆ! ” ನಾರದನಿಗೆ ಆಶ್ಚರ್ಯ. “ನನ್ನ ಹೆಂಡತಿ…. ನನ್ನ ಮಕ್ಕಳು…. ಅವರೆಲ್ಲ ಎಲ್ಲಿ ಹೋದರು?” ಎಂದು ಆತಂಕದಿಂದ ನಾರದ ತಿರುಗಿ ನೋಡಿದ. ಅಲ್ಲಿ ನಾರಾಯಣ ಮತ್ತದೇ ಮಂದಹಾಸ ಬೀರುತ್ತ ಕೇಳಿದ, “ಮಾಯೆಯನ್ನು ತೋರು ಎಂದಿದ್ದೆಯಲ್ಲವೆ ನಾರದ? ಈಗಲಾದರೂ ಮಾಯೆಯ ಲೀಲೆ ಕಂಡೆಯಾ?” 

ನಾರದ ನಮ್ರನಾಗಿ ತಲೆಯಾಡಿಸಿ ಕೈಮುಗಿದ.

Leave a Reply