ಪರಶುರಾಮ : ಕ್ಷಾತ್ರ ತೇಜದ ಋಷಿಪುತ್ರನ ರೋಚಕ ಕಥೆ

ಋಷಿ ಕುಲದಲ್ಲಿ ಹುಟ್ಟಿಯೂ ಪರಶುರಾಮನಲ್ಲಿ ಕ್ಷಾತ್ರ ಗುಣವಿತ್ತು. ಇದರ ಹಿನ್ನೆಲೆಯೊಂದು ರೋಚಕ ಅಧ್ಯಾಯ. ಇಂಥಾ ಪರಶುರಾಮನ ಹುಟ್ಟು ಮತ್ತು ಸಾಹಸ ಕಥನ ಇಲ್ಲಿದೆ ಓದಿ… (ಇಂದು ಪರಶುರಾಮ ಜಯಂತಿ)

ಋಷಿ ಪರಶುರಾಮರು ಸಮುದ್ರವನ್ನು ಹಿಂದೆ ಸರಿಯವಂತೆ ಮಾಡಿ ಪಶ್ಚಿಮ ಕರಾವಳಿಯ ಸೃಷ್ಟಿಗೆ ಕಾರಣರಾದರು ಎನ್ನುತ್ತವೆ ಪುರಾಣಗಳು. ಪರಶುರಾಮ ಶೌರ್ಯವೇ ಮೊದಲಾದ ಕ್ಷಾತ್ರ ಗುಣಗಳನ್ನು ಪಡೆದಿದ್ದು, ಯುದ್ಧ ಮಾಡಿದ್ದು, ಸಮುದ್ರ ಸರಿಯುವಂತೆ ಮಾಡಿದ್ದು… ಇವೆಲ್ಲ ಕಥೆ ಒಂದಕ್ಕಿಂದ ಒಂದು ರೋಚಕ!!

ವಿಷ್ಣುವಿನ ಅವತಾರ ಎಂದೇ ಪರಿಗಣಿಸಲಾಗುವ ಪರಶುರಾಮ, ಭೃಗು ವಂಶದ ಜಮದಗ್ನಿ ಋಷಿಯ ಪುತ್ರ. ಈ ಕಾರಣದಿಂದ ಪರಶುರಾಮನಿಗೆ ‘ಭಾರ್ಗವ’ ಎಂಬ ಹೆಸರೂ ಇದೆ.  

ವಯೋವೃದ್ಧನಾಗಿದ್ದ ಋಚೀಕ, ಗಾಧಿ ರಾಜನ ಮಗಳು ಸತ್ಯವತಿಯನ್ನು ವಿವಾಹವಾಗಿದ್ದ. ಗಾಧಿ ರಾಜನಿಗೆ ಸತ್ಯವತಿಯನ್ನು ಬಿಟ್ಟು ಬೇರೆ ಮಕ್ಕಳಿರುವುದಿಲ್ಲ. ಆದ್ದರಿಂದ ಸತ್ಯವತಿ ತನ್ನ ಪತಿ ಋಚೀಕನ ಬಳಿ ತವರು ಮನೆಗೊಂದು ಸಂತಾನ ಕರುಣಿಸೆಂದು ಕೇಳಿಕೊಳ್ಳುತ್ತಾಳೆ. ಪತ್ನಿಯ ಮಾತಿಗೆ ಇಲ್ಲವೆನ್ನದ ಋಚೀಕ ವ್ರತಾಚರಣೆ ಮಾಡುವಂತೆ ಹೇಳಿ, ನಿಯಮಗಳನ್ನು ಸೂಚಿಸುತ್ತಾನೆ. ಅದೇ ವೇಳೆ ಆತನ ಪತ್ನಿ ಸತ್ಯವತಿಯೂ ಉತ್ಕೃಷ್ಟ ಸಂತಾನದ ಬೇಡಿಕೆ ಇಟ್ಟಿದ್ದರಿಂದ ನೀನೂ ನಿನ್ನ ತಾಯಿಯೊಡನೆ ವ್ರತ ನಡೆಸು ಎಂದು ಹೇಳುತ್ತಾನೆ. ಮತ್ತು ಅವಳಿಗೆ ಬೇರೊಂದು ವಿಧಾನ ಸೂಚಿಸಿ ಪ್ರತ್ಯೇಕ ಮಂತ್ರ ನೀಡುತ್ತಾನೆ. ಮತ್ತು ಇಬ್ಬರಿಗೂ ಪ್ರತ್ಯೇಕ ಚರುಗಳನ್ನು ಸಿದ್ಧಪಡಿಸಿ ಕೊಡುತ್ತಾನೆ.

ಆದರೆ ಸತ್ಯವತಿಯ ತಾಯಿಗೆ ಈತ ತನ್ನ ಹೆಂಡತಿಗೆ ನನಗಿಂತ ಉತ್ಕೃಷ್ಟವಾದ ಚರು ನೀಡಿರಬಹುದು ಎಂಬ ಅನುಮಾನ ಶುರುವಾಗುತ್ತದೆ. ಮಗಳ ಬಳಿ ಬಂದು, “ದಯವಿಟ್ಟು ನಿನ್ನ ಚರುವನ್ನು ನನಗೆ ಕೊಡು, ನನ್ನದನ್ನು ನೀನು ತೆಗೆದುಕೋ. ನಿನ್ನ ತವರಿನ ಕೀರ್ತಿ ದಶದಿಕ್ಕುಗಳಿಗೂ ಹರಡುವಂತೆ ಮಾಡು. ನೀನು ಬೇಕಿದ್ದರೆ ನಿನ್ನ ಗಂಡನಿಂದ ಪುನಃ ಸಂತಾನ ಪಡೆಯಬಹುದು” ಎಂದು ಕೇಳುತ್ತಾಳೆ. ಸತ್ಯವತಿ ಅದಕ್ಕೊಪ್ಪಿ ತನ್ನ ಚರುವನ್ನು ಅವಳಿಗೆ ಕೊಟ್ಟುಬಿಡುತ್ತಾಳೆ. ವಾಸ್ತವದಲ್ಲಿ ಋಚೀಕ ರಾಜನ ಪತ್ನಿಯಾದ ಸತ್ಯವತಿಯ ತಾಯಿಗೆ ಕ್ಷಾತ್ರಗುಣವುಳ್ಳ ಸಂತಾನ ಪಡೆಯಲು ಸೂಕ್ತವಾದ ಮಂತ್ರ ನೀಡಿರುತ್ತಾನೆ. ಹಾಗೂ ಋಷಿಪತ್ನಿಯಾದ ಸತ್ಯವತಿಗೆ ಸತ್ವಗುಣದ ಮಂತ್ರ ನೀಡಿರುತ್ತಾನೆ. ಆದರೀಗ ಅದು ಅದಲುಬದಲಾಗಿ ಋಚೀಕ – ಸತ್ಯವತಿಯರಿಗೆ ಕ್ಷಾತ್ರಗುಣದ ಜಮದಗ್ನಿಯೂ ಗಾದಿರಾಜ ಮತ್ತವನ ಪತ್ನಿಗೆ ಆರ್ಷ ಗುಣವುಳ್ಳ ವಿಶ್ವಾಮಿತ್ರನೂ ಜನಿಸುತ್ತಾರೆ.

ಮುಂದೆ ಜಮದಗ್ನಿ ರೇಣುಕೆಯನ್ನು ಮದುವೆಯಾಗುತ್ತಾನೆ. ಆತನ ಮೂರು ಮಕ್ಕಳಲ್ಲಿ ಕಿರಿಯವನು ರಾಮ. ಸದಾ ಪರಶುಧಾರಿಯಾದುದರಿಂದ ಪರಶುರಾಮನೆಂದೂ ಖ್ಯಾತ. ಈತನಿಗೆ ತಂದೆಯ ಗುಣಗಳು ಬಳುವಳಿಯಾಗಿ ಬಂದಿರುತ್ತದೆ. ಕ್ಷಾತ್ರತೇಜದ ಕಾರಣದಿಂದಾಗಿ ಪರಶುರಾಮ ಮಹಾ ಶೂರನೂ ಕೋಪಿಷ್ಠನೂ ಹಿರಿಯರಲ್ಲಿ ವಿನಮ್ರನೂ ಆಗಿರುತ್ತಾನೆ.

ಒಮ್ಮೆ ಜಮದಗ್ನಿಯ ಆಶ್ರಮದಲ್ಲಿ ಪುತ್ರರು ಯಾರೂ ಇಲ್ಲದೆ ಇದ್ದಾಗ ಕಾರ್ತವೀರ್ಯಾರ್ಜುನನೆಂಬ ರಾಜ ತನ್ನ ಅಗಾಧ ಸೈನ್ಯದೊಡನೆ ಅಲ್ಲಿಗೆ ಬರುತ್ತಾನೆ. ಜಮದಗ್ನಿ ಅವನನ್ನು ಸತ್ಕರಿಸಿ ಇಡೀ ಸೈನ್ಯಕ್ಕೆ ಮೃಷ್ಟಾನ್ನ ಭೋಜನ ಮಾಡಿಸುತ್ತಾನೆ. ಎಲೆಮನೆಯ ಒಬ್ಬ ಋಷಿ ಇಷ್ಟು ದೊಡ್ಡ ಸೈನ್ಯಕ್ಕೆ ಹೇಗೆ ವೈಭವದ ಉಪಚಾರ ಮಾಡಿದ ಎಂದು ಕಾರ್ತವೀರ್ಯಾರ್ಜುನ ಅಚ್ಚರಿಪಡುತ್ತಾನೆ. ಜಮದಗ್ನಿಯನ್ನೇ ವಿಚಾರಿಸಿದಾಗ ಆಶ್ರಮದಲ್ಲಿರುವ ಕಾಮಧೇನುವಿನ ವಿಷಯ ತಿಳಿಯುತ್ತದೆ. ಕಾಮಧೇನು ಕೇಳಿದ್ದೆಲ್ಲವನ್ನೂ ಕೊಡುವ ದೇವಲೋಕದ ಗೋವು. 

ಕಡುಲೋಭಿಯಾದ ಕಾರ್ತವೀರ್ಯಾರ್ಜುನ, “ಅಮೂಲ್ಯ ವಸ್ತುಗಳೇನಿದ್ದರೂ ರಾಜನಿಗೇ ಸೇರಬೇಕು. ಈ ಕಾಮಧೇನುವನ್ನು ನನ್ನೊಡನೆ ಕರೆದೊಯ್ಯುತ್ತೇನೆ” ಎಂದು ದುಂಬಾಲು ಬೀಳುತ್ತಾನೆ. ಅದಕ್ಕೆ ಜಮದಗ್ನಿ ಒಪ್ಪುವುದಿಲ್ಲ. ಅವನ ವಿರೋಧದ ನಡುವೆಯೂ ಹಲ್ಲೆ ನಡೆಸಿ ಕಾಮಧೇನುವನ್ನು ಕೊಂಡೊಯ್ಯಲು ಪ್ರಯತ್ನಿಸುತ್ತಾನೆ. ಅದು ನಿಂತಲ್ಲಿಂದ ಕದಲುವುದಿಲ್ಲ. ಜಮದಗ್ನಿ ಇರುವಲ್ಲಿ ಮಾತ್ರ ಕಾಮಧೇನು ಇರುತ್ತದೆ ಎಂಬ ರಹಸ್ಯ ತಿಳಿದ ಕಾರ್ತವೀರ್ಯಾರ್ಜುನ ಜಗದಗ್ನಿಯನ್ನು ಕೊಂದು, ಅವನ ತಲೆ ಕತ್ತರಿಸಿ ತೆಗೆದುಕೊಂಡು ಹೊರಡುತ್ತಾನೆ. ಕಾಮಧೇನು ಕಾರ್ತವೀರ್ಯಾರ್ಜುನನನ್ನು ಹಿಂಬಾಲಿಸುತ್ತದೆ.  

ಈ ವಿಷಯ ತಿಳಿದ ಪರಶುರಾಮ ರೌದ್ರಾವತಾರ ತಾಳುತ್ತಾನೆ. ತನ್ನ ಗಂಡುಗೊಡಲಿಯನ್ನೆತ್ತಿಕೊಂಡೇ ಕಾರ್ತವೀರ್ಯಾರ್ಜುನನ ಬಳಿ ಹೋಗಿ ಒಂದೇ ಏಟಿಗೆ ಅವನ ತಲೆ ಕತ್ತರಿಸುತ್ತಾನೆ. ಅಷ್ಟಾದರೂ ಕೋಪ ತೀರದೆ, ಇಡೀ ಭೂಮಂಡಲವನ್ನು 24 ಬಾರಿ ಪ್ರದಕ್ಷಿಣೆ ಹಾಕಿ ಸಿಕ್ಕ ಸಿಕ್ಕ ಕ್ಷತ್ರಿಯರ ವಧೆ ಮಾಡುತ್ತಾನೆ. ಈ ಎಲ್ಲ ಅರಸರ ಸೊತ್ತು ಪರಶುರಾಮನಿಗೆ ಸೇರುತ್ತದೆ.

ಆದರೆ ಪರಶುರಾಮ “ನಾನೊಬ್ಬ ಬ್ರಾಹ್ಮಣ. ನನಗೇಕೆ ಭೂಮಿಯ ಗೊಡವೆ..?” ಎಂದು ಆಲೋಚಿಸಿ ತನ್ನೆಲ್ಲ ಭೂಮಿಯನ್ನು ದಾನ ಮಾಡುತ್ತಾನೆ. ಅನಂತರ ತಪಶ್ಚರಣೆಗೆ ಹೊರಡುತ್ತಾನೆ. ಆಗ ತನ್ನೆಲ್ಲ ಭೂಮಿಯನ್ನು ತಾನು ದಾನ ಮಾಡಿಬಿಟ್ಟಿರುವುದು ನೆನಪಾಗುತ್ತದೆ. ಒಮ್ಮೆ ದಾನ ಮಾಡಿದ ಭೂಮಿಯನ್ನು ಮತ್ತೆ ಕೇಳುವುದು ಸರಿಯಲ್ಲ. ಈಗೇನು ಮಾಡುವುದು…  ಎಲ್ಲಿ ಕುಳಿತು ತಪಸ್ಸು ಮಾಡುವುದು? ಯೋಚನೆಯಾಗುತ್ತದೆ.

ಕೊನೆಗೊಂದು ಉಪಾಯ ಹೊಳೆದು, ಪಶ್ಚಿಮ ಘಟ್ಟದ ಬೆಟ್ಟದ ಮೇಲೆ ನಿಂತು ತನ್ನ ಪರಶುವನ್ನು ಸಮುದ್ರದೆಡೆಗೆ ಎಸೆಯುತ್ತಾನೆ. ಸಮುದ್ರ ಹಿಂದೆ ಸರಿದು ಒಂದಷ್ಟು ಜಾಗ ಬಿಟ್ಟುಕೊಡುತ್ತದೆ. ಹೀಗೆ ಸೃಷ್ಟಿಯಾಗುವ ಕರಾವಳಿಯಲ್ಲಿ ಪರಶುರಾಮ ತಪಶ್ಚರಣೆಗೆ ನಿಲ್ಲುತ್ತಾನೆ. ಹೀಗೆ ರಾಮ ಎಸೆದ ಪರಶುವಿನ ಕಾರಣದಿಂದ ಸಮುದ್ರ ಸರಿದು ಉಂಟಾದ ನೆಲವನ್ನೇ  ‘ಪರಶುರಾಮ ಸೃಷ್ಟಿ’ ಎಂದು ಕರೆಯುವುದು. ದಕ್ಷಿಣ ಕನ್ನಡ, ಗೋವಾ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಕರಾವಳಿ ಪ್ರದೇಶಕ್ಕೆ ಪರಶುರಾಮ ಸೃಷ್ಟಿ ಎಂಬ ಹೆಸರಿದೆ.

Leave a Reply