ಬಸವ ವಚನ ವಾಚನ : ಬಸವಣ್ಣನವರ ವಚನಗಳ ಪ್ರಸ್ತುತಿ

1105ನೇ ಇಸವಿಯ ವೈಶಾಖ ಶುದ್ಧ ತದಿಗೆ (ಅಕ್ಷಯ ತೃತೀಯ)ಯಂದು  ಬಸವಣ್ಣನವರು ಜನಿಸಿದರು. ಅದರಂತೆ ಈ ವರ್ಷ ಈ ದಿನ (ಏಪ್ರಿಲ್ 26) ಬಸವ ಜಯಂತಿ. ತನ್ನಿಮಿತ್ತ ಬಸವಣ್ಣನವರ ಕೆಲವು ವಚನಗಳ ವಾಚನವನ್ನು ಅರಳಿಬಳಗ ಪ್ರಸ್ತುತಪಡಿಸುತ್ತಿದೆ….

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು!
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ !?
~
ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡಲಿ ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯ…
ಕೂಡಲಸಂಗಮದೇವ ಕೇಳಯ್ಯ,
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!
~
ಎನ್ನ ನಡೆಯೊಂದು ಪರಿ 
ಎನ್ನ ನುಡಿಯೊಂದು ಪರಿ 
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯ 
ನುಡಿಗೆ ತಕ್ಕ ನಡೆಯ ಕಂಡರೆ
ಕೂಡಲಸಂಗಮದೇವ ತನ್ನೊಳಗಿಪ್ಪನಯ್ಯ 
~
ತಂದೆ ನೀನು, ತಾಯಿ ನೀನು;
ಬಂಧು ನೀನು ಬಳಗ ನೀನು;
ನೀನಲ್ಲದೆ ಮತ್ತಾರು ಇಲ್ಲವಯ್ಯ!
ಕೂಡಲಸಂಗಮದೇವ,
ಹಾಲಲದ್ದು ನೀರಲದ್ದು…
ಎನ್ನ ವಾಮ-ಕ್ಷೇಮ ನಿಮ್ಮದಯ್ಯ
ಎನ್ನ ಹಾನಿ-ವೃದ್ಧಿ ನಿಮ್ಮದಯ್ಯ
ಎನ್ನ ಮಾನಾಪಮಾನವು ನಿಮ್ಮದಯ್ಯ
ಬಳ್ಳಿಗೆ ಕಾಯಿ ದಿಮ್ಮಿತ್ತೆ ? ಕೂಡಲಸಂಗಮದೇವ!
~
ಲೋಕದ ಡೊಂಕ ನೀವೇಕೆ ತಿದ್ದುವಿರಿ ?
ನಿಮ್ಮ ನಿಮ್ಮ ತನವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವರ ಮೆಚ್ಚ
ನಮ್ಮ ಕೂಡಲಸಂಗಮದೇವ.
~
ಹಾವು ತಿಂದವರ ನುಡಿಸ ಬಹುದು
ಗರ ಹೊಡೆದವರ ನುಡಿಸ ಬಹುದು
ಸಿರಿಗರ ಹೊಡೆದವರ ನುಡಿಸಬಾರದು ನೋಡಯ್ಯ!
ಬಡತನವೆಂಬ ಮಂತ್ರವಾದಿ ಹೋಗಲು
ಒಡನೆ ನುಡಿವರಯ್ಯ ಕೂಡಲಸಂಗಮದೇವ.

 

1 Comment

  1. ಶರಣು ಶರಣಾರ್ಥಿ. ನಿಮಗೂ ಬಸವ ಜಯಂತಿಯ ಶುಭಾಶಯಗಳು

Leave a Reply