ಎಲ್ಲಾ ಧರ್ಮಗಳು ಸತ್ತಿವೆ! : ಓಶೋ

ಇಟಲಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಓಶೋ ನೀಡಿದ ಉತ್ತರಗಳು ಇಲ್ಲಿದೆ…| ಭಾವಾನುವಾದ : ಧ್ಯಾನ್ ಉನ್ಮುಖ್

ಪ್ರಶ್ನೆ: ಭಗವಾನ್, ಇದೇ ಮೊದಲ ಬಾರಿ ನೀವು ಇಟಲಿಯ ವಾಹಿನಿಗೆ ಸಂದರ್ಶನ ನೀಡುತ್ತಿರುವುದು. ಕಳೆದ ತಿಂಗಳು ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನದಲ್ಲಿ ಪೋಪ್ ಮೇಲೆ ವಿಜಯ ಸಾಧಿಸಿದ್ದೀರಿ. ಆ ಲೇಖನದಲ್ಲಿ ನೀವು ಹೇಳಿದ್ದೀರಿ, ನೀವು ಪ್ರವಾದಿಯಲ್ಲ. ಯಾವುದೇ ಸಮುದಾಯದ ನಾಯಕನಲ್ಲ, ಗುರುವಲ್ಲ ಎಂದು.!! ಹಾಗಾದರೆ ನಿಮ್ಮನ್ನು ತತ್ವಜ್ಞಾನಿ ಎಂದು ಕರೆಯಬಹುದೇ.. ಹಾಗಾದರೆ ನಿಜವಾಗಿಯು ನೀವು ಯಾರು?

ಓಶೋ: ಜನರನ್ನು ವರ್ಗೀಕರಿಸುವ ಕಲ್ಪನೆಯೇ ಮೂಲತಃ ತಪ್ಪು. ನಾನು ಕೇವಲ ನಾನಾಗಿದ್ದೇನೆ. ಯಾವುದೋ ಒಂದು ವರ್ಗಕ್ಕೆ ನಾನೇಕೆ ಸೇರಲಿ ? ನಾನು ನನ್ನದೇ ವರ್ಗಕ್ಕೆ ಸೇರಿದ್ದೇನೆ.
ನಾನೊಬ್ಬ ಸಾಮಾನ್ಯ ಮನುಷ್ಯ. ಅಷ್ಟೇ. ನಿಮ್ಮ ಈ ಎಲ್ಲ ರಕ್ಷಕರು, ಪ್ರವಾದಿಗಳು, ದೇವದೂತರು ಮೂರ್ಖರಾಗಿದ್ದಾರೆ. ಈ ಜನರು ಭ್ರಮೆಗೆ ಒಳಗಾಗಿದ್ದಾರೆ. ಅವರು ಸಂವೇದನಾಶೀಲತೆಯನ್ನು ಕಳೆದುಕೊಂಡಿದ್ದಾರೆ. ಅವರ ಕುರಿತು ಏನು ಹೇಳಲಿ ? ಅವರು ಸಾಮಾನ್ಯ ಮನುಷ್ಯರು ಸಹಾ ಆಗಿಲ್ಲ. ಅವರು ರೋಗಗ್ರಸ್ತರಾಗಿದ್ದಾರೆ ಮತ್ತು ಅವರು ರೋಗಿಗಳನ್ನು ಪ್ರತಿನಿಧಿಸುತ್ತಾರೆ. ರೋಗಗ್ರಸ್ತರ ಪ್ರತಿನಿಧಿಗಳು ರೋಗಗ್ರಸ್ತರೇ ಆಗಿರುತ್ತಾರೆ.
ಎಲ್ಲಾ ಧರ್ಮಗಳು ಸತ್ತಿವೆ. ಅದರ ಎಲ್ಲಾ ಧರ್ಮಗುರುಗಳು ಸತ್ತಿದ್ದಾರೆ. ಅವರು ಮನುಕುಲವನ್ನು ಆರೋಗ್ಯಗೊಳಿಸುವಲ್ಲಿ, ಸೃಜನಶೀಲಗೊಳಿಸುವಲ್ಲಿ, ಸುಂದರಗೊಳಿಸುವಲ್ಲಿ ಎಂದಿಗೂ ಸಹಕರಿಸಲಿಲ್ಲ. ಇದಕ್ಕೆ ವಿರುದ್ಧವಾಗಿ, ಅವರು ಮಾನವೀಯತೆಯನ್ನು ದ್ವೇಷಿಸುವಂತೆ ಮಾಡಿದ್ದಾರೆ – ಕ್ರಿಶ್ಚಿಯನ್ನರು ಯಹೂದಿಗಳನ್ನು ದ್ವೇಷಿಸುತ್ತಿದ್ದಾರೆ, ಯಹೂದಿಗಳು ಮಹಮ್ಮದೀಯರನ್ನು ದ್ವೇಷಿಸುತ್ತಾರೆ, ಮಹಮ್ಮದೀಯರು ಹಿಂದೂಗಳನ್ನು ದ್ವೇಷಿಸುತ್ತಾರೆ, ಹಿಂದೂಗಳು ಬೌದ್ಧರನ್ನು ದ್ವೇಷಿಸುತ್ತಿದ್ದಾರೆ. ಎಲ್ಲಾ ಧರ್ಮಗಳು ದ್ವೇಷವನ್ನು ಹಂಚಲಿಕ್ಕೆಂದೇ ನಿಂತಂತಿದೆ: ಎಷ್ಟು ಸಾಧ್ಯವೋ ಅಷ್ಟು ದ್ವೇಷವನ್ನು ಹಂಚಿ ಇಡೀ ಮನುಕುಲವನ್ನು ಕದನಕುತೂಹಲಿಗಳ ಸಣ್ಣ ಸಣ್ಣ ಗುಂಪುಗಳಾಗಿ ವಿಭಜಿಸಲು ಈ ಎಲ್ಲಾ ಧರ್ಮಗಳು ಬದ್ಧವಾಗಿ ನಿಂತಿರುವಂತಿದೆ.

ಇಲ್ಲಿ ನಾನೊಬ್ಬ ಸಾಮಾನ್ಯ ಸ್ವಸ್ಥ ಮನುಷ್ಯನಷ್ಟೇ.

🔻
ಪ್ರಶ್ನೆ: ಇದನ್ನು ನೀವು ಬುದ್ಧತ್ವ (enlightenment) ಎನ್ನುವಿರಾ?

ಓಶೋ: ಸ್ವಯಂನಲ್ಲಿ ಸ್ಥಿತನಾಗುವುದೇ ಸ್ವಾಸ್ಥ್ಯ. ಸಮಗ್ರತೆಯಲ್ಲಿ ಒಂದಾಗುವುದೇ ಬುದ್ಧತ್ವ. ಬುದ್ದತ್ವ ನಿಮ್ಮನ್ನು ಇತರರಿಗಿಂತ ಶ್ರೇಷ್ಠರನ್ನಾಗಿಸುವುದಿಲ್ಲ ಮತ್ತು ನೀವಿಲ್ಲಿ ಯಾವುದೇ ವರ್ಗಕ್ಕೆ ಸೇರದೇ ಅನನ್ಯರಾಗಿರುತ್ತೀರಿ. ಪ್ರತಿಯೊಬ್ಬ ಬುದ್ಧಪುರುಷರು ಸಹಾ ಅನನ್ಯರಾಗಿದ್ದಾರೆ. ನಾನು ಏನನ್ನೆಲ್ಲಾ ಅನುಭವಿಸಿದ್ದೇನೋ ಅದೊಂದು ಆಶೀರ್ವಾದವೇ ಆಗಿದೆ ಮತ್ತು ಅದೇ ಸಾವಿರಾರು ಜನರನ್ನು ಆಶೀರ್ವದಿಸುತ್ತಿದೆ. ಅದೇ ನನ್ನ ಸಂತೋಷ. ಮನುಕುಲವನ್ನು ನಾನು ಎಂದಿಗೂ ವಿಭಜಿಸಲಿಲ್ಲ ಹಾಗೂ ನಾನು ಯಾವುದೇ ದ್ವೇಷವನ್ನು ಸೃಷ್ಟಿಸಲಿಲ್ಲ. ನಾನು ಯಾವುದೇ ರೀತಿಯ ಹಿಂಸೆಯನ್ನಾಗಲೀ, ದೊಂಬಿಯನ್ನಾಗಲೀ ಅಥವಾ ಯುದ್ಧವನ್ನಾಗಲೀ ಸೃಷ್ಟಿಸಿಲ್ಲ.

ನಾನು ಯಾವುದೇ ಧರ್ಮವನ್ನು ಪ್ರತಿನಿಧಿಸುವುದಿಲ್ಲ. ನನಗೆ ನನ್ನದೇ ಆದ ಧಾರ್ಮಿಕತೆಯಿದೆ. ಬೈಬಲ್, ಕುರಾನ್ ಆಥವಾ ಗೀತೆಯ ಮೇಲೆ ನಾನು ಅವಲಂಬಿತನಾಗಬೇಕಿಲ್ಲ. ಯಾರೆಲ್ಲಾ ಅದರ ಮೇಲೆ ಅವಲಂಬಿತರಾಗಿದ್ದಾರೋ ಅವರಿಗೆ ಯಾವುದೇ ಸ್ವಂತ ಅನುಭವವಿಲ್ಲ. ನಿಮ್ಮ ಪೋಪ್ ರಿಗೂ ಸಹಾ ಬುದ್ಧತ್ವದ ಯಾವುದೇ ಅನುಭವಿಲ್ಲ. ಅವರು ಕ್ರಿಸ್ತರ ಮೇಲೆ ಅವಲಂಬಿತರಾಗಿದ್ದಾರೆ. ಕ್ರಿಸ್ತರಿಗೂ ಸಹ ಯಾವುದೇ ಸ್ವಂತ ಅನುಭವವಿಲ್ಲ. ಅವರು ಅಸ್ತಿತ್ವವೇ ಇಲ್ಲದಿರುವ ದೇವರ ಮೇಲೆ ಅವಲಂಬಿತರಾಗಿದ್ದಾರೆ!

ಈ ಜನರು ಮಾನವೀಯತೆಯನ್ನು ಶೋಷಿಸಿದ್ದಾರೆ ಮತ್ತು ಅದನ್ನು ನಿಲ್ಲಿಸುವ ಕಾಲ ಈಗ ಬಂದಿದೆ. ಅದರ ಮೊದಲ ಹೆಜ್ಜೆ ಇಟಲಿಯಿಂದಲೇ ಆರಂಭವಾಗಬೇಕು. ಕ್ರಿಶ್ಚಿಯನ್ನರ ಧರ್ಮ ಭೂಮಿಯನ್ನು ಸ್ವಚ್ಛಗೊಳಿಸುವುದು ಇಟಾಲಿಯನ್ನರ ಜವಾಬ್ದಾರಿಯಾಗಿದೆ. ಇದು ರೋಮನ್ನರ ಅಪರಾಧವಾದ್ದರಿಂದ ಇದರ ಜವಾಬ್ದಾರಿಯನ್ನು ಅವರೇ ತೆಗೆದುಕೊಳ್ಳಬೇಕು. ಈಗಲೂ ವ್ಯಾಟಿಕನ್ ಸಿಟಿಯನ್ನು ಅದರ ಎಲ್ಲ ಅವಿವೇಕಗಳ ಸಮೇತ ರಕ್ಷಿಸುವುದು ಮೂರ್ಖತನವಾಗಿದೆ. ವಿಶ್ವದ ಜನಸಂಖ್ಯೆ ಒಂದು ಸಮಸ್ಯೆಯಾಗಿರುವ ಈ ಸಂದರ್ಭದಲ್ಲಿ, ಜನಸಂಖ್ಯೆ ಅತ್ಯಧಿಕವಾಗಿ ರುವ ಈ ಜಗತ್ತಿನಲ್ಲಿ, ಜನನ ನಿಯಂತ್ರಣವು ದೇವರ ವಿರುದ್ಧವಾಗಿದೆ, ಗರ್ಭಪಾತವು ದೇವರ ವಿರುದ್ಧವಾಗಿದೆ, ಮಾತ್ರೆ ದೆವ್ವದ ಆವಿಷ್ಕಾರವಾಗಿದೆ ಎಂದು ಪೋಪ್ ಜನರಿಗೆ ಹೇಳುತ್ತಾ ಹೋಗುತ್ತಾನೆ. ಇಟಾಲಿಯನ್ನರು ಈ ಪೋಲಾಕ್ ನ ಬಾಯಿ ಮುಚ್ಚಿಸಬೇಕು. ಒಂದೋ ಅವನು ಸುಮ್ಮನಿರಬೇಕು ಅಥವಾ ಪೋಲೆಂಡಿಗೆ ಮರಳಬೇಕು.

Leave a Reply