ಬುದ್ಧಿಶಕ್ತಿಯನ್ನು ಉದ್ದೀಪಿಸಲು ಯಜುರ್ವೇದದ ಒಂದು ಪ್ರಾರ್ಥನೆ

‘ಮಾಂ ಮೇಧಾವಿನಂ ಕುರು’ ನನ್ನನ್ನು ಮೇಧಾವಿಯನ್ನಾಗಿ ಮಾಡು…. ಇಷ್ಟೇ. ಇದೇ ನಿಮ್ಮ ಪ್ರಾರ್ಥನೆಯ ಮೂಲಬೀಜ. ಪ್ರಾರ್ಥನೆಗೆ ಮೊದಲು ಇದನ್ನು ಸ್ಪಷ್ಟ ಮಾಡಿಕೊಳ್ಳಿ ~ ಸಾ.ಹಿರಣ್ಮಯೀ


ಅರ್ಥಪೂರ್ಣ ಬದುಕಿಗೆ ಬುದ್ಧಿವಂತಿಕೆಯ ಅಗತ್ಯವಿದೆ. ಮಂದಬುದ್ಧಿ ಅಥವಾ ಕಡಿಮೆ ಬುದ್ಧಿಯುಳ್ಳವರೂ ಬದುಕು ಸಾಗಿಸುತ್ತಾರೆ. ಅವರವರ ಮಟ್ಟಿಗೆ ಮತ್ತು ಸಾಮಾಜಿಕ ಮಾನದಂಡದ ಪ್ರಕಾರ ಸುಖವಾಗಿಯೇ ಇರುತ್ತಾರೆ. ಆದರೆ ಸತ್ವದಲ್ಲಿ ಅವರ ಬದುಕು ಸೋತಿರುತ್ತದೆ.

ಸತ್ವಹೀನ ಬದುಕು ಅರ್ಥಪೂರ್ಣವಾಗಲಾರದು. ಬದುಕಿನ ಆನಂದ ನೀಡಲಾರದು. ಇಷ್ಟಕ್ಕೂ ಮನುಷ್ಯ ಉಳಿದ ಪ್ರಾಣಿಗಳಿಗಿಂತ ಭಿನ್ನವಾಗಿರುವುದೇ ಬುದ್ಧಿ ಇರುವ ಕಾರಣಕ್ಕೆ. ಆದ್ದರಿಂದ ಬುದ್ಧಿವಂತಿಕೆ ನಮಗೆ ಬಹಳ ಮುಖ್ಯ.

ಇಂಥಾ ಬುದ್ಧಿವಂತಿಕೆಯನ್ನು ಉದ್ದೀಪಿಸುವ ಯಜುರ್ವೇದದ ಒಂದು ಪ್ರಾರ್ಥನೆಯನ್ನು ಇಲ್ಲಿ ನೀಡಲಾಗಿದೆ.

ಯಾಂ ಮೇಧಾಂ ದೇವಗಣಾಃ ಪಿತರಶ್ಚೋಪಾಸತೇ
ತಯಾ ಮಾಮದ್ಯ ಮೇಧಯಾಗ್ನೇ ಮೇಧಾವಿನಂ ಕುರು ಸ್ವಾಹಾ || ಯಜುರ್ವೇದ 32.14 ||
ಯಾವ ಮೇಧಾಶಕ್ತಿಯನ್ನು ದೇವತೆಗಳೂ ಪಿತೃಗಳೂ ಅನುಭವಿಸುತ್ತಿರುವರೋ, ಇಂದು ಆ ಮೇಧಾಗ್ನಿಯಿಂದ ನನ್ನನ್ನು ಮೇಧಾವಿಯನ್ನಾಗಿ (ಪ್ರಕಾಶಮಾನವಾದ ಬುದ್ಧಿಯುಳ್ಳವನಾಗಿ) ಮಾಡು.

ಮೇಧಾಶಕ್ತಿ ಎಂದರೆ ಆಲೋಚನಾ ಸಾಮರ್ಥ್ಯವನ್ನು, ಪ್ರಜ್ಞೆಯನ್ನು, ಬುದ್ಧಿಯ ಬಳಕೆಯನ್ನು ಪ್ರಚೋದಿಸುವ ಶಕ್ತಿ. ಇಲ್ಲಿ ಯಾಚಕ ತನ್ನ ಪೂರ್ವಜರನ್ನು ನೆನೆಯುತ್ತಾ, “ಅವರಲ್ಲಿ ಇದ್ದಂಥಹ ಬುದ್ಧಿ ಪ್ರಚೋದಕ ಶಕ್ತಿಯನ್ನು (ಮೇಧಾಶಕ್ತಿಯನ್ನು) ನನಗೂ ದಯಪಾಲಿಸು” ಎಂದು ಅಗ್ನಿಯಲ್ಲಿ ಕೇಳಿಕೊಳ್ಳುತ್ತಿದ್ದಾನೆ.

ಇಲ್ಲಿ ಮೇಧಾಶಕ್ತಿಯನ್ನು ‘ಮೇಧಾಗ್ನಯೇ’ – ಮೇಧಾಗ್ನಿ ಎಂದು ಕರೆಯಲಾಗಿದೆ. ಬುದ್ಧಿಯನ್ನು ಉದ್ದೀಪಿಸುವ ಮೇಧಾಶಕ್ತಿಯು ಅಗ್ನಿಯಂತೆ ತೀಕ್ಷ್ಣವೂ ಪ್ರಕಾಶಮಾನವೂ ಆಗಿರುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.
ಈ ಪ್ರಾರ್ಥನಾ ಶ್ಲೋಕದಲ್ಲಿ ಯಾಚಕನು ಯಜ್ಞಕ್ಕೆ ಹವಿಸ್ಸನ್ನು ಅರ್ಪಿಸುತ್ತಾ ಮೇಲಿನಂತೆ ಕೇಳಿಕೊಳ್ಳುತ್ತಿದ್ದಾನೆ. (ಆದ್ದರಿಂದಲೇ ಇಲ್ಲಿ ಸ್ವಾಹಾ ಎಂದಿದೆ).

ಯುಗಧರ್ಮಕ್ಕೆ ತಕ್ಕಂತೆ ಆಚಾರಗಳಲ್ಲಿ ಬದಲಾವಣೆಯಾಗುತ್ತದೆ. ಕಲಿಯುಗದಲ್ಲಿ ಸಂಕೀರ್ತನೆಯೇ ತಪಸ್ಸು ಎಂದು ಹೇಳಲಾಗಿದೆ. ಸಂಕೀರ್ತನೆ ಎಂದರೆ ಭಜನೆ, ಸ್ಮರಣೆ ಅಥವಾ ಪ್ರಾರ್ಥನೆ – ಈ ಯಾವುದಾದರೂ ಆಗಬಹುದು. ನೀವು ಎಷ್ಟು ಶ್ರದ್ಧೆಯಿಂದ ಪ್ರಾರ್ಥಿಸುತ್ತೀರೋ ಅಷ್ಟು ಪರಿಣಾಮಕಾರಿ ಫಲಗಳನ್ನು ಪಡೆಯುತ್ತೀರಿ.
ಆದ್ದರಿಂದ, ನಿಮ್ಮ ಚಾಂಚಲ್ಯವನ್ನು, ಸೋಮಾರಿತನವನ್ನು, ಧೋರಣೆಗಳನ್ನು ಬಿಟ್ಟುಕೊಟ್ಟು (ಅಗ್ನಿಗೆ ಅರ್ಪಿಸಿ ಅವು ಬೂದಿಯಾಗುತ್ತಿರುವಂತೆ ಕಲ್ಪಿಸಿಕೊಂಡು) ಪ್ರಾರ್ಥನೆ ಮಾಡಿ. ಇದು ಬಹಳ ಮುಖ್ಯ.

‘ಮಾಂ ಮೇಧಾವಿನಂ ಕುರು’ ನನ್ನನ್ನು ಮೇಧಾವಿಯನ್ನಾಗಿ ಮಾಡು…. ಇಷ್ಟೇ. ಇದೇ ನಿಮ್ಮ ಪ್ರಾರ್ಥನೆಯ ಮೂಲಬೀಜ. ಹೀಗೆ ಈ ಪ್ರಾರ್ಥನೆ ಏನು ಹೇಳುತ್ತಿವೆ ಎಂಬುದನ್ನು ಅರ್ಥ ಮಾಡಿಕೊಂಡು, ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನವನ್ನು ಹಾಕುತ್ತಾ ಅದರ ಸಫಲತೆಗಾಗಿ ಈ ಮೇಲಿನಂತೆ ಪರಮಶಕ್ತಿಯನ್ನು ಬೇಡಿಕೊಂಡರೆ ಖಂಡಿತವಾಗಿಯೂ ಅದು ನೆರವೇರುವುದು. ಜೊತೆಗೆ ಅಧ್ಯಯನ, ಸ್ವಾಧ್ಯಾಯ, ಅಭ್ಯಾಸ ಇತ್ಯಾದಿಗಳು ಬಹಳ ಮುಖ್ಯ… ಅವಿಲ್ಲದೆ ಕೇವಲ ಮಂತ್ರಪಠಣ, ನಾವು ಮಂತ್ರಕ್ಕೆ ಮಾಡುವ ಅವಮಾನವಾಗುತ್ತದೆ; ಅದನ್ನು ಮರೆಯಬಾರದು.

2 Comments

 1. ಜೀವನ ಶೃಲಿ,ವ್ಯಕ್ತ್ಯುತ್ವ ವಿಕಾಸಕ್ಕೂ ಹಾಗೂ ಆಧ್ಯಾತ್ಮಕ್ಕೂ ಒಂದುಕೊಂದು ಅವಿನಾಭಾವ ಸಂಭವಿದೆ.ಸಂಸಾರವೆಂಬ ಸಾಗರದಲ್ಲಿ ಈಮೂರನ್ನು ನಾವು ಅನುಬವುಸಲೇ ಬೇಕು. ಆಧ್ಯಾತ್ಮಕತೇ ತಿಳಿದವರಿಗೆ ವ್ಯಕ್ತ್ಯುತ್ವ ವಿಕಾಸ ಮರ್ಗವು ಸುಲಭವಾಗುತ್ತದೆ.ಜೀವನಶೃಲಿ ನಮ್ಮ ಪರಂಪರೇ,ನಮ್ಮನಡವಳಿಕೆ,ನಂಬಿಕೆಯಮೇಲೆ ಹಾಗೂ
  ನಡೆ,ನುಡಿಯಮೇಲೆ ಆಧಾರವಾಗಿ ಇರುತ್ತದೆ.
  ಮರಕ್ಕೂ ,ಹೂವಿಗೂ,ಫಲಕ್ಕೂ,ಏನು ಸಂಬಂದವಿದಿಯೋ ತಾವು ಸೂಚಿಸಿದ ಮೂರುವಿಷಯಗಳಗೂ ಇಂತಹಾ ಸಂಬಂದವಿರುತ್ತದೆ.

  ನನಗೆ ತೋಚಿದ್ದನ್ನು ನಾನು ತಿಳಿಸಿದ್ದೀನಿ ತಪ್ಪುಗಳನ್ನು ಮನ್ನಿಸಬೇಕು.

  ಇಂತಿ
  ತಮ್ಮವಿಶ್ವಾಸಿ.
  ಗಂಗಾಧರ ರಾವ್ ಕೆ.ಎಸ್.
  ಅರ್ಚಕರು.
  ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ.
  ಮೃಸೂರು.

Leave a Reply