ನರಸಿಂಹ ಜಯಂತಿ ಪ್ರಯುಕ್ತ ನರಸಿಂಹದೇವರ 108 ಹೆಸರುಗಳನ್ನು ಸೂಚಿಸುವ ಸ್ತೋತ್ರವನ್ನು ಇಲ್ಲಿ ನೀಡಲಾಗಿದೆ. ಹಾಗೂ ಕನ್ನಡದಲ್ಲಿ ಅದರ ಸರಳ ಅರ್ಥವನ್ನು ಕೂಡಾ ನೀಡಲಾಗಿದೆ…
ನಾರಸಿಂಹೋ ಮಹಾಸಿಂಹೋ ದಿವ್ಯಸಿಂಹೋ ಮಹಾಬಲಃ
ಉಗ್ರಸಿಂಹೋ ಮಹಾದೇವಃ ಸ್ಥಂಭಜಚೋSಗ್ರಲೋಚನಃ || 1 ||
ಭಾವಾರ್ಥ: ಮಹಾಬಲಶಾಲಿಯೂ ಉಗ್ರರೂಪಿಯೂ ದೇವರ ದೇವನೂ ಕಂಬದಲ್ಲಿ ಮೂಡಿಬಂದವನೂ ಕೆರಳಿದ ಕಣ್ಣುಳ್ಳವನೂ ಆದ ನರಸಿಂಹದೇವನಿಗೆ ನಮಸ್ಕಾರ
ರೌದ್ರ ಸರ್ವಾದ್ಭುತಃ ಶ್ರೀಮಾನ್ ಯೋಗಾನಂದ ತ್ರಿವಿಕ್ರಮಃ
ಹರಿಃ ಕೋಲಾಹಲಃ ಚಕ್ರೀ ವಿಜಯೋ ಜಯವರ್ಧನಃ || 2 ||
ಭಾವಾರ್ಥ: ರುದ್ರರೂಪಿಯೂ ಎಲ್ಲ ಬಗೆಯಿಂದಲೂ ಅದ್ಭುತವಾಗಿ ತೋರುವವನೂ ಯೋಗದಲ್ಲಿ ಆನಂದ ಹೊಂದುವವನೂ ಮೂರುಲೋಕಗಳನ್ನು ಗೆದ್ದವನೂ; ಸಾಕ್ಷಾತ್ ಹರಿಯೂ, ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುವವನೂ ವಿಜಯಿಯೂ ಜಯವನ್ನು ತಂದುಕೊಡುವವನೂ ಆದ ನರಸಿಂಹದೇವನಿಗೆ ನಮಸ್ಕಾರ
ಪಂಚಾನನಃ ಪರಂಬ್ರಹ್ಮಾ ಚಾಘೋರೋ ಘೋರವಿಕ್ರಮಃ
ಜ್ವಲನ್ಮುಖೋ ಜ್ವಾಲಮಾಲೀ ಮಹಾಜ್ವಾಲೋ ಮಹಾಪ್ರಭುಃ || 3 ||
ಭಾವಾರ್ಥ: ಐದು ಮುಖಗಳನ್ನು ಉಳ್ಳವನೂ ಪರಬ್ರಹ್ಮನೂ ಘೋರರೂಪಿಯೂ ವೀರನೂ; ಉರಿಯುವ ಮುಖ ಉಳ್ಳವನೂ ಜ್ವಾಲೆಗಳನ್ನು ಧರಿಸಿದವನೂ, ಸ್ವತಃ ಭುಗಿಲೆದ್ದ ಜ್ವಾಲೆಯೂ ಆದ ಮಹಾಪ್ರಭುವಿಗೆ ನಮಸ್ಕಾರ.
ನಿಟಿಲಾಕ್ಷಃ ಸಹಸ್ರಾಕ್ಷೋ ದುರ್ನಿರೀಕ್ಷ್ಯಃ ಪ್ರತಾಪನಃ
ಮಹಾದಂಷ್ಟ್ರಾಯುಧಃ ಪ್ರಾಜ್ಞೋ ಚಂಡಕೋಪೀ ಸದಾಶಿವಃ || 4 ||
ಭಾವಾರ್ಥ: ನಿಟಿಲಾಕ್ಷನೂ ಸಾವಿರ ಕಣ್ಣುಳ್ಳವನೂ ಊಹಾತೀತನೂ ಪ್ರತಾಪಿಯೂ ಕೋರೆಹಲ್ಲುಗಳನ್ನೇ ಆಯುಧವಾಗಿ ಉಳ್ಳವನೂ ಮಹಾ ಪ್ರಜ್ಞಾವಂತನೂ ತೀವ್ರಕೋಪಿಷ್ಠನೂ ಸದಾ ಮಂಗಳವನ್ನುಂಟು ಮಾಡುವವನೂ ಆದ ನರಸಿಂಹ ದೇವನಿಗೆ ನಮಸ್ಕಾರ.
ಹಿರಣ್ಯಕಶಿಪುಧ್ವಂಸೀ ದೈತ್ಯದಾನವ ಭಂಜನಃ
ಗುಣಭಧ್ರೋ ಮಹಾಭದ್ರೊ ಬಲಭದ್ರಹ್ ಸುಭದ್ರಕಃ || 5 ||
ಭಾವಾರ್ಥ: ದೈತ್ಯ ದಾಣವ ಹಿರಣ್ಯಕಶಿಪುವನ್ನು ಸಂಹರಿಸಿದ, ಸದ್ಗುಣಿಗಳನ್ನು ರಕ್ಷಿಸಿ ಅಭಯ ನೀಡುವ ಮಹಾಭದ್ರ ನರಸಿಂಹದೇವನಿಗೆ ನಮಸ್ಕಾರ.
ಕರಾಳೋ ವಿಕರಾಳಸ್ಚ ವಿಕರ್ತಾ ಸರ್ವಕರ್ತೃಕಃ
ಶಿಂಶುಮಾರಸ್ ತ್ರಿಲೋಕಾತ್ಮ ಈಶಃ ಸರ್ವೇಶ್ವರೊ ವಿಭು || 6 ||
ಭಾವಾರ್ಥ: ಭಕ್ತನನ್ನು ರಕ್ಷಿಸಲು ಕರಾಳ ರೂಪ ಧರಿಸಿ ಬಂದ, ಸಕಲಕ್ಕೂ ಕಾರಣಕರ್ತೃವಾದ, ಮೂರು ಲೋಕಗಳನ್ನೂ ಪೊರೆಯುವ, ಸಮಸ್ತ ಸೃಷ್ಟಿಯ ಒಡೆಯನಾದ ನರಸಿಂಹ ದೇವನಿಗೆ ನಮಸ್ಕಾರ.
ಭೈರವಾಡಂಬರೋ ದಿವ್ಯಶ್ಚಾಚ್ಯುತಃ ಕವಿ ಮಾಧವಃ
ಅಧೋಕ್ಷಜೋ ಅಕ್ಷರಸ್ ಸರ್ವೋ ವನಮಾಲೀ ವರಪ್ರದಃ || 7 ||
ಭಾವಾರ್ಥ: ಭೈರವನೂ ವೈಭವದಿಂದ ಕೂಡಿದವನೂ ದಿವ್ಯರೂಪಿಯೂ ಚಿಕಿತ್ಸಕ ಗುಣವುಳ್ಳವನೂ ಮಧುವಿನಂತೆ ಸಿಹಿಯಾದವನೂ, ಕರುಣಾಪೂರ್ಣ ನೋಟವುಳ್ಳವನೂ ಅಕ್ಷರನೂ ಸಕಲನೂ ಕೇಳದ ವರ ನೀಡುವವನೂ ಆದ ನರಸಿಂಹ ದೇವನಿಗೆ ನಮಸ್ಕಾರ.
ವಿಶ್ವಂಬರೋದ್ಭುತೋ ಭವ್ಯಃ ಶ್ರೀವಿಷ್ಣುಃ ಪುರುಷೋತ್ತಮಃ
ಅನಘಾಸ್ತ್ರ ನಖಸ್ತ್ರಾಶ್ಚ ಸೂರ್ಯ ಜ್ಯೋತಿಃ ಸುರೇಶ್ವರಃ || 8 ||
ಭಾವಾರ್ಥ: ವಿಶ್ವವನ್ನೇ ಹೊದ್ದವನೂ ಅದ್ಭುತ ಗಾತ್ರನೂ ಭವ್ಯ ರೂಪಿಯೂ ಸ್ವತಃ ಶ್ರೀ ವಿಷ್ಣುವೂ ಪುರುಷೋತ್ತಮನೂ ಪಾಪರಹಿತನಾಗಿ ಉಗುರನ್ನೇ ಆಯುಧ ಮಾಡಿಕೊಮಡವನೂ ಸ್ವಯಂ ಜ್ಯೋತಿಯೂ ದೇವತೆಗಳ ಒಡೆಯನೂ ಆದ ನರಸಿಂಹ ದೇವನಿಗೆ ನಮಸ್ಕಾರ.
ಸಹಸ್ರಬಾಹು ಸರ್ವಜ್ಞಃ ಸರ್ವಸಿದ್ಧಿಃ ಪ್ರದಾಯಕಃ
ವಜ್ರದಂಷ್ಟ್ರೊ ವಜ್ರನಖೋ ಮಹಾನಂದಃ ಪರಂತಪಃ || 9 ||
ಭಾವಾರ್ಥ: ಸಾವಿರ ಬಾಹುಗಳನ್ನು ಹೊಂದಿದವನೂ ಸಕಲವನ್ನು ತಿಳಿದವನೂ ಎಲ್ಲ ಬಗೆಯ ಸಿದ್ಧಿಗಳನ್ನುದಯಪಾಲಿಸುವವನೂ ವಜ್ರದಂಥ ಹಲ್ಲುಗಳನ್ನು ಹೊಂದಿದವನೂ ವಜ್ರದಷ್ಟು ಹರಿತವಾದ ಉಗುರುಳ್ಳವನೂ ಸದಾ ಮಹಾನಂದಲೀನನೂ ಪರಂತಪನೂ ಆದ ನರಸಿಂಹಸ್ವಾಮಿಗೆ ನನ್ನ ನಮಸ್ಕಾರ.
ಸರ್ವಮಂತ್ರೈಕ ರೂಪಶ್ಚ ಸರ್ವಯಂತ್ರ ವಿಧಾರಣಃ
ಸರ್ವತಂತ್ರಾತ್ಮಕೋ ವ್ಯಕ್ತಃ ಸುವ್ಯಕ್ತೋ ಭಕ್ತವತ್ಸಲಃ || 10 ||
ಭಾವಾರ್ಥ: ಎಲ್ಲ ಮಂತ್ರಗಳ ಸಾರ ನೀನು, ಎಲ್ಲ ಯಂತ್ರಗಳೂ ನೀನು ಧರಿಸಿರುವೆ; ಎಲ್ಲ ತಂತ್ರಗಳೂ ನಿನ್ನಲ್ಲಿ ವ್ಯಕ್ತಗೊಳ್ಳುತ್ತವೆ; ಭಕ್ತರಿಗಾಗಿ ನೀನು ಪ್ರೀತಿಯಿಂದ ಪ್ರಕಟಗೊಳ್ಳುವೆ.
ವೈಶಾಖಶುಕ್ಲ ಭೂತೋತ್ಥಃ ಶರಣಾಗತವತ್ಸಲಃ
ಉದಾರಕೀರ್ತಿಃ ಪುಣ್ಯಾತ್ಮ ಮಹಾತ್ಮಾ ಚಂಡ ವಿಕ್ರಮಃ || 11 ||
ಭಾವಾರ್ಥ: ವೈಶಾಖ ಮಾಸದ ಶುಕ್ಲ ತ್ರಯೋದಶಿಯಂದು ಅವತರಿಸಿದ ನೀನು ಶರಣಾಗತನಾದ ಪ್ರಹ್ಲಾದನನ್ನು ಕಾಪಾಡಿದೆ. ನಿನ್ನ ಔದಾರ್ಯ ಮತ್ತು ಪರಾಕ್ರಮದ ಕೀರ್ತಿ ಎಲ್ಲೆಡೆ ಹರಡಲಿ.
ವೇದತ್ರಯೋ ಪ್ರಪೂಜ್ಯಶ್ಚ ಭಗವಾನ್ ಪರಮೇಶ್ವರಃ
ಶ್ರೀವತ್ಸಾಂಕಃ ಶ್ರೀನಿವಾಸೋ ಜಗದ್ವ್ಯಾಪೀ ಜಗನ್ಮಯಃ || 12 ||
ಭಾವಾರ್ಥ: ಮೂರು ವೇದಗಳಿಂದಲೂ (ಋಗ್, ಯಜುರ್, ಸಾಮ) ಪೂಜಿಸಲ್ಪಡುವ ನೀನು ಶ್ರೀವತ್ಸ ಚಿಹ್ನೆಯನ್ನು ಧರಿಸಿ ಜಗತ್ತನ್ನು ವ್ಯಾಪಿಸಿರುವೆ.
ಜಗತ್ಪಾಲೋ ಜಗನ್ನಾಥೋ ಮಹಕಾಯೋ ದ್ವಿರೂಪಭೃತ್
ಪರಮಾತ್ಮ ಪರಂಜ್ಯೋತಿಃ ನಿರ್ಗುಣಶ್ಚ ನೃಕೇಸರಿ || 13 ||
ಭಾವಾರ್ಥ: ಜಗತ್ತನ್ನು ಪಾಲಿಸುವ ಜಗನ್ನಾಥ ನೀನು. ನಿನ್ನ ದಿವ್ಯರೂಪದಿಂದ ನಮ್ಮನ್ನು ಪೊರೆಯುತ್ತಿರುವೆ. ಪರಮಾತ್ಮನೂ ಪರಂಜ್ಯೋತಿಯೂ ನಿರ್ಗುಣನೂ ನರಕೇಸರಿಯೂ ಆದ ನಿನಗೆ ನಮಸ್ಕಾರ.
ಪರತತ್ತ್ವಮ್ ಪರಂಧಾಮ ಸಚ್ಚಿದಾನಂದವಿಗ್ರಹಃ
ಲಕ್ಸ್ಮೀನೃಸಿಂಹ ಸರ್ವಾತ್ಮಾ ಧೀರಃ ಪ್ರಹ್ಲಾದಪಾಲಕಃ || 14 ||
ಭಾವಾರ್ಥ: ಪರತತ್ತ್ವ ಹೊಂದಲು ದಾರಿ ತೋರುವ, ಸಚ್ಚಿದಾನಂದ ವಿಗ್ರಹನೇ; ಎಲ್ಲರಲ್ಲೂ ಧೀರರೂಪಿಯಾಗಿ ನೆಲೆಸಿರುವ ಲಕ್ಷ್ಮೀಸಮೇತ ನರಸಿಂಹನೇ, ಪ್ರಹ್ಲಾದನನ್ನು ರಕ್ಷಿಸಿದಂತೆ ನಮ್ಮನ್ನು ರಕ್ಷಿಸು.