ನರಸಿಂಹಾವತಾರ ಕಲಿಸುವ ಪಾಠಗಳು….

ವಾಸ್ತವದಲ್ಲಿ ಭೂಮಿಯಲ್ಲಿ ಜನಿಸುವುದು ಶಿಕ್ಷೆಯಲ್ಲ, ಈ ಜನನದ ಕಾರಣದಿಂದ ಆವರಿಸಿಕೊಳ್ಳುವ ಆತ್ಮವಿಸ್ಮೃತಿಯೇ ನಿಜವಾದ ಶಿಕ್ಷೆ. ಅದೇ ನಿಜವಾದ ಶಾಪ. ಹಿರಣ್ಯಕಷಿಪುವನ್ನು ಮುಸುಕಿದ್ದ ಈ ವಿಸ್ಮೃತಿಯಿಂದ ಮುಕ್ತಗೊಳಿಸಲು ಭಗವಂತ ಅವತರಿಸಿ ಬರುತ್ತಾನೆ. ತನ್ನನ್ನು ತಾನು ಭೂಮಿಯಲ್ಲಿ ಉಳಿಸಿಕೊಳ್ಳಲು ಹಿರಣ್ಯಕಷಿಪು ಎಷ್ಟೆಲ್ಲ ಜಾಣತನದ ಸುರಕ್ಷೆಗಳನ್ನು ಏರ್ಪಡಿಸಿಕೊಳ್ಳುತ್ತಾನೋ ಭಗವಂತ ಆ ಎಲ್ಲವನ್ನೂ ನಿವಾರಿಸಿ, ಆತನ ಮುಕ್ತಿಗಾಗಿ ಧಾವಿಸುತ್ತಾನೆ ~ ಚೇತನಾ ತೀರ್ಥಹಳ್ಳಿ

ಭಗವಾನ್ ಮಹಾವಿಷ್ಣುವಿನ ನಾಲ್ಕನೇ ಅವತಾರ ಮಾನವಾಕೃತಿಯ ಸಿಂಹ – ನರಸಿಂಹಾವತಾರ. ಮನೆಯ ಒಳಗೂ, ಹೊರಗೂ, ಭೂಮಿಯ ಮೇಲೂ ಅಂತರಿಕ್ಷದಲ್ಲೂ ಸ್ತ್ರೀ – ಪುರುಷ- ಬಾಲಕರ್ಯಾರಿಂದಲೂ, ಪ್ರಾಣಿಗಳಿಂದಲೂ ಮರಣ ಬಾರದಂತೆ ವರ ಪಡೆದಿದ್ದ ಹಿರಣ್ಯಕಷಿಪುವಿನ ವಧೆಗೆಂದು ಭಗವಂತ ಅತ್ಯಂತ ಚಾಣಾಕ್ಷತನದಿಂದ ನರಸಿಂಹನ ರೂಪದಲ್ಲಿ ಅವತರಿಸಿ ಬಂದ. ಹಿರಣ್ಯಕಷಿಪುವಿನ ಕರಾರಿನಂತೆಯೇ ಒಳ – ಹೊರಗಲ್ಲದ, ಮೇಲು – ಕೆಳಗಲ್ಲದ ಹೊಸ್ತಿಲ ಮೇಲೆ, ಯಾವ ಆಯುಧಗಳೂ ಇಲ್ಲದೆ ಕೇವಲ ತನ್ನ ಉಗುರುಗಳಿಂದಲೇ ಅವನ ಕರುಳು ಬಗೆದು ಸಂಹಾರ ಮಾಡಿದ. ಬುದ್ಧಿವಂತನೂ ಆಗಿದ್ದ ಪರಾಕ್ರಮಿ ಅಸುರನೊಬ್ಬನ ಸಂಹಾರಕ್ಕೆ ಭಗವಂತ ತಾನು ಮತ್ತಷ್ಟು ಬುದ್ಧಿವಂತಿಕೆಯಿಂದ – ಭಗವಂತನೆಂದರೇನೇ ಎಲ್ಲ ಗುಣಗಳ ಪರಿಪೂರ್ಣ ಹಂತ ಅಲ್ಲವೆ?  ಅವನೆಲ್ಲ ಕರಾರುಗಳಿಗೂ ಹೊಂದುವಂತೆ ನರಸಿಂಹನಾಗಿ ಬಂದು ಸಂಹರಿಸಿ, ಸದ್ಗತಿ ಒದಗಿಸಿದ.

ಭಗವಂತನ ನರಸಿಂಹಾವತಾರವನ್ನೂ ಹಿರಣ್ಯಕಷಿಪುವಿನ ಆಸುರೀಗುಣವನ್ನೂ ನಮಗೆ ಸಮೀಕರಿಸಿಕೊಂಡರೆ, ಈ ಸಂಪೂರ್ಣ ನಾಟಕವನ್ನು ಮತ್ತೊಂದು ಬಗೆಯಲ್ಲಿ ವ್ಯಾಖ್ಯಾನಿಸಬಹುದು.
ಹಿರಣ್ಯಕಷಿಪು ನಮ್ಮೊಳಗಿನ ಅಹಂಕಾರ…. ಮಿಥ್ಯಾಹಂಕಾರ. ಈ ಅಹಂಕಾರ ಕೆಟ್ಟದ್ದೆಂದು ಗೊತ್ತಿದ್ದರೂ ನಾವು ಅದರಿಂದ ಹೊರಬರದೆ ಒದ್ದಾಡುತ್ತೇವೆ. ನಮ್ಮನ್ನು ಸಾಧ್ಯವಾದಷ್ಟೂ ಅದರ ಸುಪರ್ದಿಯಲ್ಲೆ ಉಳಿಸಿಕೊಳ್ಳಲು ಹೆಣಗುತ್ತೇವೆ. ಅಹಂಕಾರದಿಂದ ಈಚೆ ಬಂದರೆ ನಮ್ಮ ಗುರುತನ್ನೇ, ಅಸ್ತಿತ್ವವನ್ನೇ ಕಳೆದುಕೊಂಡುಬಿಡುತ್ತೇವೆ ಎನ್ನುವ ಭಯ ನಮ್ಮಲ್ಲಿರುತ್ತದೆ. ಆದರೆ ಈ ಗುರುತಾಗಲೀ ಅಸ್ತಿತ್ವವಾಗಲೀ ನಿಜವಲ್ಲ ಎನ್ನುವ ಅರಿವು ನಮ್ಮಲ್ಲಿರುವುದಿಲ್ಲ. ನಮ್ಮನ್ನು ನಾವು ದೇಹದೊಂದಿಗೆ ಗುರುತಿಸಿಕೊಳ್ಳಲು ಹೆಣಗುವುದರಿಂದಲೇ ಈ ಎಲ್ಲ ತೊಳಲಾಟಗಳು ಹುಟ್ಟಿಕೊಳ್ಳುತ್ತವೆ.

ಹಿರಣ್ಯಕಷಿಪು ತನ್ನ ಆಸುರೀ ಗುಣವನ್ನು ಬಿಟ್ಟುಕೊಡಲು ಕರಾರುಗಳನ್ನು ಹಾಕಿದ. ವಾಸ್ತವದಲ್ಲಿ ಅವನೊಬ್ಬ ದೇವದೂತ. ವೈಕುಂಠದಲ್ಲಿ ಅವನು ತನ್ನ ಸಹೋದರನೊಂದಿಗೆ ದ್ವಾರಪಾಲಕನಾಗಿದ್ದವನು. ಜಯ – ವಿಜಯ ಎಂಬ ಹೆಸರಿನ ಆ ಇಬ್ಬರು ದ್ವಾರಪಾಲಕರು ಸನತ್ಕುಮಾರರ ಶಾಪಕ್ಕೆ ಗುರಿಯಾಗುತ್ತಾರೆ. ಭೂಮಿಯಲ್ಲಿ ಹುಟ್ಟಿ ಅನ್ನೋದೇ ಆ ಶಾಪ.
ಇಲ್ಲಿನ ಸೂಕ್ಷ್ಮವನ್ನು ಗಮನಿಸಿ. ಭೂಮಿಯಲ್ಲಿ ಹುಟ್ಟುವಂತೆ ಶಾಪ ನೀಡಲಾಗುತ್ತಿದೆ! ಅವರು ತತ್‍ಕ್ಷಣ ಪಶ್ಚಾತ್ತಾಪ ಪಟ್ಟು ಪರಿಹಾರ ಕೋರುತ್ತಾರೆ. ಆಗ ಸನತ್ಕುಮಾರರು `ನೀವು ಭಗವಂತನ ಭಕ್ತರಾಗಿ ನೂರು ಜನ್ಮ ಎತ್ತಲು ಬಯಸುವಿರೋ ಶತ್ರುಗಳಾಗಿ ಮೂರು ಜನ್ಮ ಎತ್ತಲು ಬಯಸುವಿರೋ’ ಎಂದು ಕೇಳುತ್ತಾರೆ. ಭಗವಂತನ ಸಾನ್ನಿಧ್ಯವನ್ನು ಬಹಳ ಕಾಲ ಬಿಟ್ಟಿರಲಾಗದ ಮನಸ್ಥಿತಿಯ ಜಯ ವಿಜಯರು ಬೇಗ ಮರಳಿ ಬರುವ ಆಸೆಯಿಂದ ಶತ್ರುಗಳಾಗಿ ಮೂರು ಜನ್ಮ ಎತ್ತುವ ಆಯ್ಕೆ ಮಾಡಿಕೊಳ್ಳುತ್ತಾರೆ.

ಭೂಮಿಯಲ್ಲಿ ಹುಟ್ಟುವುದು ಅಂದರೆ ಅದೊಂದು ಘೋರ ಶಿಕ್ಷೆ. ಭಗವದ್ಧಾಮದ ನಿಜದ ನೆಲೆಯಿಂದ, ನಿತ್ಯಾನಂದದ ಒಡಲಿಂದ ಭೂಮಿಯ ಬೆಂಕಿಗೆ ಬೀಳುವುದು ಸುಮ್ಮನೆ ಮಾತಲ್ಲ. ಭಾರತೀಯ ಪುರಾಣಗಳಲ್ಲಷ್ಟೆ ಅಲ್ಲ, ಸೆಮೆಟಿಕ್ ಧರ್ಮಗಳಲ್ಲೂ ಆ್ಯಡಮ್ ಮತ್ತು ಈವ್ (ಅಥವಾ ಆದಮ್ – ಹೌವ್ವಾ) ಪಾಪ ಫಲ ತಿಂದುದಕ್ಕಾಗಿ ಭಗವಂತನಿಂದ ಶಿಕ್ಷೆ ಪಡೆದು ಭೂಮಿಗೆ ಬಂದು ಬೀಳುತ್ತಾರೆ. ಒಟ್ಟಾರೆ ಅದೊಂದು ಭಯಾನಕ ಎನ್‍ಕೌಂಟರ್. 

ಜಯ ವಿಜಯರು ಹಿರಣ್ಯಕಷಿಪು ಮತ್ತು ಹಿರಣ್ಯಾಕ್ಷರಾಗಿ ಜನಿಸುತ್ತಾರೆ. ಹಿರಣ್ಯಾಕ್ಷ ಭೂದೇವಿಯನ್ನೇ ಅಪಹರಿಸಲು ಹೋಗಿ ಹತನಾಗುತ್ತಾನೆ. ಭಗವಂತ ವರಾಹಾವತಾರವೆತ್ತಿ ಬಂದು ಅವನನ್ನು ಸಂಹರಿಸುತ್ತಾನೆ. ಹಿರಣ್ಯಕಷಿಪು ಈ ಕಾರಣದಿಂದಲೇ ತನಗೆ ಪ್ರಾಣಿಗಳಿಂದಲೂ ಸಾವು ಬರಬಾರದೆಂದು ಕರಾರು ಹಾಕುವುದು. ಮೂಲತಃ ಆತ ಅಸುರ ಜನ್ಮ ಪಡೆದು ಬರುವುದೇ ಆದಷ್ಟು ಬೇಗ ಸಂಹಾರಗೊಂಡು ಮುಕ್ತನಾಗಿ ಭಗವದ್ಧಾಮಕ್ಕೆ ಮರಳಬೇಕೆಂಬ ಬಯಕೆಯಿಂದ. ಆದರಿಲ್ಲಿ, ಈಗ ಅವನು ತನ್ನನ್ನು ತಾನು ಆಸುರೀ ದೇಹದೊಂದಿಗೆ ಗುರುತಿಸಿಕೊಳ್ಳುತ್ತಿದ್ದಾನೆ ಮತ್ತು ಅದರಿಂದ ಹೊರಬರಲು ಆತನಿಗೆ ಸ್ವಲ್ಪವೂ ಮನಸಿಲ್ಲ! ಆದ್ದರಿಂದಲೇ ಅವನು ವಿಚಿತ್ರ ಬಗೆಯ ವರಗಳನ್ನು ಪಡೆದಿದ್ದಾನೆ. ಆತನಿಗೀಗ ಸಾಯುವುದು ಬೇಕಿಲ್ಲ. ಭಗವಂತನ ಸನ್ನಿಧಾನಕ್ಕೆ ಮರಳುವುದು ಬೇಕಿಲ್ಲ. ಭೂಮಿಯಲ್ಲಿ ಜನ್ಮ ತಳೆದ ಕೂಡಲೆ ಆವರಿಸುವ ವಿಸ್ಮೃತಿ ಅವನನ್ನೂ ಆವರಿಸಿದೆ.

ವಾಸ್ತವದಲ್ಲಿ ಭೂಮಿಯಲ್ಲಿ ಜನಿಸುವುದು ಶಿಕ್ಷೆಯಲ್ಲ, ಈ ಜನನದ ಕಾರಣದಿಂದ ಆವರಿಸಿಕೊಳ್ಳುವ ಆತ್ಮವಿಸ್ಮೃತಿಯೇ ನಿಜವಾದ ಶಿಕ್ಷೆ. ಅದೇ ನಿಜವಾದ ಶಾಪ. ಹಿರಣ್ಯಕಷಿಪುವನ್ನು ಮುಸುಕಿದ್ದ ಈ ವಿಸ್ಮೃತಿಯಿಂದ ಮುಕ್ತಗೊಳಿಸಲು ಭಗವಂತ ಅವತರಿಸಿ ಬರುತ್ತಾನೆ. ತನ್ನನ್ನು ತಾನು ಭೂಮಿಯಲ್ಲಿ ಉಳಿಸಿಕೊಳ್ಳಲು ಹಿರಣ್ಯಕಷಿಪು ಎಷ್ಟೆಲ್ಲ ಜಾಣತನದ ಸುರಕ್ಷೆಗಳನ್ನು ಏರ್ಪಡಿಸಿಕೊಳ್ಳುತ್ತಾನೋ ಭಗವಂತ ಆ ಎಲ್ಲವನ್ನೂ ನಿವಾರಿಸಿ, ಆತನ ಮುಕ್ತಿಗಾಗಿ ಧಾವಿಸುತ್ತಾನೆ.

ನಾವು ನಮ್ಮ ಅಹಂಕಾರವನ್ನು ಉಳಿಸಿಕೊಳ್ಳಲು ಏನೆಲ್ಲ ಸಬೂಬು ಹೇಳುತ್ತೇವೆ. ವ್ಯವಹಾರದ ನೆವ ಒಡ್ಡುತ್ತೇವೆ. ಸಂಸಾರದ ತುರ್ತು ಎನ್ನುತ್ತೇವೆ. ನಮ್ಮ ಅಹಮ್ಮಿನ ತೃಪ್ತಿಗಾಗಿಯೇ ನಾವು ಗುರುತು ಬಯಸುತ್ತಿರುತ್ತೇವೆ. ಆದರೆ ಅದನ್ನು ತೋರಿಸಿಕೊಳ್ಳದೆ ಬೇರೆಲ್ಲ ಕಾರಣಗಳನ್ನು ಮುಂದೊಡ್ಡುತ್ತೇವೆ. ನಮ್ಮನ್ನು ನಾವು ನಮ್ಮ ಹೆಸರಿನೊಂದಿಗೆ, ಕೆಲಸದೊಂದಿಗೆ, ಕೌಶಲ್ಯದೊಂದಿಗೆ ಗುರುತಿಸಿಕೊಳ್ಳುತ್ತೇವೆ! ಆದರೆ ಸೃಷ್ಟಿ ನಿಯಮದ ಎದುರು ನಮ್ಮ ಯಾವ ಆಟವೂ ನಡೆಯುವುದಿಲ್ಲ. 

ನಾವು ಶಾಪ ಪಡೆದು ಭೂಮಿಗೆ ಬಂದವರಲ್ಲ. ಆದರೆ ಭೂಮಿಯಲ್ಲಿ ಜನ್ಮ ತಳೆದಿರುವುದನ್ನೆ ಒಂದು ಶಾಪವಾಗಿಸಿಕೊಂಡವರು. ಹಾಗೆಂದೇ ವಿಸ್ಮೃತಿಗೆ ಒಳಗಾದವರು. ನಾವು ಪರಮ ಶಕ್ತಿಯ ತುಣುಕುಗಳು ಎನ್ನುವುದು ನಮ್ಮ ಸ್ಮೃತಿ ಪಟಲದಿಂದ ಜಾರಿದೆ. ಅದನ್ನು ನೆನಪಿಸಿಕೊಡಲು ನಮ್ಮೊಳಗೆ ಜಾಗೃತಿಯ ನರಸಿಂಹಾವತಾರ ಆಗಬೇಕು. ನಾವು ಏನೆಲ್ಲ ನುಣುಚುವಿಕೆ ತಂತ್ರಗಳನ್ನು ಹೂಡುತ್ತೇವೋ ಆ ಎಲ್ಲ ತಂತ್ರಗಳನ್ನು ಭೇದಿಸಬಲ್ಲ ನರಸಿಂಹ ನಮ್ಮೊಳಗೇ ಉದ್ಭವಿಸಬೇಕು. ಈ ನಿಟ್ಟಿನಲ್ಲಿ ನಾವೇ ಸ್ವತಃ ಪ್ರಹ್ಲಾದನಾಗಿ ಭಗವಂತನ ಸಹಾಯ ಯಾಚಿಸಬೇಕು. ಜನನ – ಮರಣ ಚಕ್ರದಲ್ಲಿ ನಿರಂತರ ಸಿಲುಕಿಕೊಳ್ಳುವ ಶಾಪದಿಂದ ಮುಕ್ತವಾಗುವ ಬಯಕೆ ನಮ್ಮೊಳಗಿದ್ದರೆ, ನಮ್ಮೊಳಗಿನ ನರಸಿಂಹ ಜಾಗೃತನಾಗಬೇಕು.

 

Leave a Reply