ನಿಮಗೆ ಸಿದ್ಧಾಂತಗಳಲ್ಲಿ ನಂಬಿಕೆ ಇದೆಯೆ? ಇಲ್ಲವೆ? : ಒಂದು ಬುದ್ಧ ಸಂವಾದ

“ನಾನು ನೋಡುತ್ತಿರುವುದು ಚಂದ್ರನನ್ನೇ ಎಂದು ನನಗೆ ನಂಬಿಕೆಯಿದ್ದರೆ ಮಾತ್ರ ನಾನು ಅದನ್ನು ಮತ್ತೊಬ್ಬರಿಗೆ ತೋರಿಸಬಲ್ಲೆ” ಅನ್ನುತ್ತಾನೆ ಬುದ್ಧ !

ಕೆಲವರು ಹೀಗೆ ಹೇಳುತ್ತಾರೆ. “ನಾನು ಯಾವ ಸಿದ್ಧಾಂತದಲ್ಲೂ ನಂಬಿಕೆ ಇಡುವುದಿಲ್ಲ” ಎಂದು. ವಾಸ್ತವದಲ್ಲಿ ಅವರು ಅದಕ್ಕೆ ಬದ್ಧರಾಗಿರುತ್ತಾರೆಯೇ? ಕೆಲವರು ಹೇಳುತ್ತಾರೆ, “ಯಾವಾಗ ಏನಾಗಬೇಕು ಎಂದಿರುತ್ತದೆಯೋ ಅದು ಆಗಿಯೇ ತೀರುವುದು” ಎಂದು. ಇಂಥವರನ್ನು ಉಲ್ಲೇಖಿಸುತ್ತ “ಹಾಗೆ ಹೇಳುವವರು ಕೂಡಾ ರಸ್ತೆ ದಾಟುವಾಗ ಆಚೆ ಈಚೆ ಒಮ್ಮೆ ನೋಡಿಯೇ ರಸ್ತೆ ದಾಟುವುದು” ಎನ್ನುತ್ತಿದ್ದರು ಜಗತ್ತು ಕಂಡ ಅಪ್ರತಿಮ ವಿಜ್ಞಾನಿ ಸ್ಟೀಫನ್ ಹಾಕಿಂಗ್.

ಆದ್ದರಿಂದ, ನಾವು ಏನನ್ನಾದರೂ ಹೇಳಿಕೆ ನೀಡುವ ಮೊದಲು ನಾವು ಅದಕ್ಕೆ ಬದ್ಧರಾಗಿದ್ದೇವೆಯೇ, ನಿಜಕ್ಕೂ ನಾವು ಅದನ್ನು ನಂಬಿಕೊಂಡಿದ್ದೇವೆಯೇ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು.

ಈ ಕುರಿತು ಬುದ್ಧಗಾಥೆಯೊಂದಿದೆ.
ಒಮ್ಮೆ ದೀಘನಖ ಎನ್ನುವವನು ಬುದ್ಧನ ಬಳಿ ಬಂದು, “ನಿಮ್ಮ ತತ್ತ್ವ ಸಿದ್ಧಾಂತಗಳೇನು? ನಾನಂತೂ ಯಾವ ಸಿದ್ಧಾಂತವನ್ನೂ ನಂಬುವವನಲ್ಲ” ಅನ್ನುತ್ತಾನೆ.

ಎಂದಿನಂತೆ ಮುಗುಳ್ನಕ್ಕ ಬುದ್ಧ, “ಯಾವುದೇ ಸಿದ್ಧಾಂತವನ್ನು ನಂಬುವುದಿಲ್ಲ ಅನ್ನುವ ಸಿದ್ಧಾಂತದಲ್ಲಿ ನಿಮಗೆ ನಂಬಿಕೆ ಇದೆಯೇ?” ಎಂದು ಕೇಳುತ್ತಾನೆ.

ಈ ಪ್ರಶ್ನೆ ನೀರಿಕ್ಷಿಸಿಯೇ ಇರದ ದೀಘನಖ ಅವಾಕ್ಕಾಗಿ ನಿಲ್ಲುತ್ತಾನೆ.
“ನಾನು ಬೋಧನೆ ಮಾಡುವುದು ಒಂದು ಸಿದ್ಧಾಂತವನ್ನಲ್ಲ” ಅನ್ನುವ ಬುದ್ಧ, “ನಾನು ಏನನ್ನು ಹೇಳುತ್ತೇನೆಯೋ ಅದು ಒಂದು ಮಾನಸಿಕ ಸ್ಥಿತಿಯಿಂದ ಬಂದ ಆಲೋಚನೆಯಲ್ಲ. ಅದು ನನ್ನ ಅನುಭವ. ನನ್ನ ಅನುಭವವನ್ನು ನಿಮ್ಮದಾಗಿ ಮಾಡಿಕೊಳ್ಳಬೇಕೆಂದರೆ, ಮೊದಲು ನೀವು ಅದನ್ನು ಅನುಭವಿಸಿ, ನಂತರ ನಂಬಬೇಕು. ಅನಂತರವಷ್ಟೆ ಮತ್ತೊಬ್ಬರಿಗೆ ನೀವದನ್ನು ಹೇಳಬಹುದು. ಏಕೆಂದರೆ ನೇರ ಅನುಭವ ಮಾತ್ರ ಸತ್ಯದರ್ಶನ ಮಾಡಿಸುತ್ತದೆ. ನಾನು ಚಂದ್ರನನ್ನು ನೋಡುತ್ತೇನೆ ಮತ್ತು ಅಗೋ ಚಂದ್ರನನ್ನು ನೋಡು ಎಂದು ಬೆರಳು ಮಾಡಿ ತೋರಿಸುತ್ತೇನೆ. ನಾನು ನೋಡುತ್ತಿರುವುದು ಚಂದ್ರನನ್ನೇ ಎಂದು ನನಗೆ ನಂಬಿಕೆಯಿದ್ದರೆ ಮಾತ್ರ ನಾನು ಅದನ್ನು ಮತ್ತೊಬ್ಬರಿಗೆ ತೋರಿಸಬಲ್ಲೆ” ಎಂದು ವಿವರಿಸುತ್ತಾನೆ ಬುದ್ಧ.

Leave a Reply