ಮೂರು ಮಹಾ ಬೆಳದಿಂಗಳುಗಳ ಮೊತ್ತ : ಬುದ್ಧ ಹುಣ್ಣಿಮೆ

ಬೆಳಕಿನ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ!? ಸಾಗರದಂತೆ ಜನ ಬುದ್ಧನ ಸುತ್ತ ನೆರೆದರು. `ಸಂಘ’ವಾಯ್ತು. ತಮ್ಮನ್ನು ಬುದ್ಧಾನುಯಾಯಿಗಳೆಂದು ಗುರುತಿಸಿಕೊಳ್ಳುವ ಕಾವಿ ಉಡುಗೆಗಳು ಅರಳಿಕೊಂಡವು, ಬಿಕ್ಖುಗಳು ನಡೆದಾಡುವ ಸೂರ್ಯರಂತೆ ಕಂಗೊಳಿಸತೊಡಗಿದರು. ಬುದ್ಧ ತನ್ನ ಬೋಧನೆಗಳ ಮೂಲಕ ಬೆಳಕನ್ನು ಬಿತ್ತಿದ. ಈ ಬೆಳಕು ಹಬ್ಬಿ ಶತಶತಮಾನಗಳನ್ನು ದಾಟುತ್ತ ಪೂರ್ವ – ಪಶ್ಚಿಮ – ಉತ್ತರ – ದಕ್ಷಿಣಗಳನ್ನೆಲ್ಲ ತಬ್ಬಿಕೊಂಡವು… ~ ಚೇತನಾ ತೀರ್ಥಹಳ್ಳಿ

ನನ್ನ ಧರ್ಮವೊಂದೇ ಶ್ರೇಷ್ಠ ಎಂದು ನಾನು ಹೇಳುವುದಿಲ್ಲ
ನೀನು ಹೋಗಿ ಇತರ ಧರ್ಮಗಳವರ ಮಾತನ್ನು ಕೇಳಿ ಬಾ,
ಆಮೇಲೆ ನನ್ನ ಮಾತುಗಳನ್ನು ಕೇಳು.
ಯಾವ ಧರ್ಮ ಅತ್ಯುತ್ತಮ ಎಂದು ನಿನಗೆ ತೋರುತ್ತದೋ
ಅದನ್ನು ಅನುಸರಿಸು.
– ಇದು ಬುದ್ಧನ ಮಾತು. ಬುದ್ಧನ ಚಿಂತನೆ ಎಂಥದ್ದೆಂದು ಅರಿಯಲು ಈ ಕೆಲವು ಸಾಲುಗಳೆ ಸಾಕು. ನಾನೇ ಶ್ರೇಷ್ಠ, ನನ್ನದೇ ಶ್ರೇಷ್ಟವೆಂದು ಬೊಬ್ಬಿರಿಯುವ ಧರ್ಮಸ್ಥಾಪಕರ ನಡುವೆ ಬುದ್ಧ ವಿಶಿಷ್ಟವಾಗಿ ನಿಲ್ಲುವುದು ಇದೇ ಕಾರಣಕ್ಕೆ.

ಬುದ್ಧ ಚಿಂತನೆಯೇ ಹಾಗೆ. ಅದು ಯಾವುದನ್ನೂ ಹೇರುವುದಿಲ್ಲ. ಆಯ್ಕೆಯ ಸ್ವಾತಂತ್ರ್ಯವನ್ನದು ನೀಡುವುದು. ಬುದ್ಧನ ಧರ್ಮವೇ ಸ್ವಾತಂತ್ರ್ಯ ಅನ್ನಬಹುದೇನೋ. ಬುದ್ಧ ಹೇಳುತ್ತಿದ್ದ ಮುಕ್ತಿ ಎಲ್ಲ ಬಗೆಯ ಮುಕ್ತಿ, ಎಲ್ಲದರಿಂದ ಮುಕ್ತಿ.
ಸ್ವಯಂ ಅರಿವು ಹಂಚುವ ಮಹತ್ಕಾರ್ಯಕ್ಕೆಂದೇ ಬೋಧಿಸತ್ವವೊಂದು ಸಿದ್ಧಾರ್ಥನ ರೂಪದಲ್ಲಿ ಭೂಮಿಗೆ ಬಂದಿತ್ತು; ಅಂದು ವೈಶಾಖ ಹುಣ್ಣಿಮೆಯಾಗಿತ್ತು.

ಸುಮಾರು ಎರಡು ಸಾವಿರ ವರ್ಷಗಳಾಚೆ ಒಂದು ನಟ್ಟಿರುಳಲ್ಲಿ ರಾಜಕುಮಾರ ಸಿದ್ಧಾರ್ಥ ಎಚ್ಚರಗೊಂಡ. ಅವನೇನೂ ನಿದ್ರಿಸುತ್ತಿರಲಿಲ್ಲ, ಆತನ ಎಚ್ಚರ ಆತ್ಮಜಾಗೃತಿಯಾಗಿತ್ತು. ಈ ಜಾಗೃತಿ ಒಂದು ಮಿಂಚಿನ ಘಳಿಗೆಯಲ್ಲಿ ಘಟಿಸಿತ್ತು. ಆದರೆ ಅದಕ್ಕೆ ಪೂರ್ವ ಸಿದ್ಧತೆ ಅನೇಕ ದಿನಗಳಿಂದ ನಡೆಯುತ್ತಲೇ ಇತ್ತು, ಮತ್ತು ಸಿದ್ಧಾರ್ಥ ಆ ಎಚ್ಚರವನ್ನು ಅರಿಯಲು ಅಣಿಯಾಗುತ್ತಿದ್ದ.

ಪ್ರಾಚೀನ ಸಾಹಿತ್ಯ ಬುದ್ಧನ ಬಾಲ್ಯದ ಕತೆಗಳನ್ನು ದಾಖಲಿಸುತ್ತದೆ. ಅವುಗಳಲ್ಲಿ ಪುಟ್ಟ ಸಿದ್ಧಾರ್ಥನೂ ಅವನ ದಾಯಾದಿ ದೇವದತ್ತನೂ ಒಂದು ಹಕ್ಕಿಯನ್ನು ಕುರಿತು ನಡೆಸುವ ವಾಗ್ವಾದವೂ ಒಂದು. ದೇವದತ್ತ ಬೆಳ್ಳಕ್ಕಿಯೊಂದಕ್ಕೆ ಬಾಣ ಬಿಟ್ಟು ಉರುಳಿಸುತ್ತಾನೆ. ಅದು ಗಾಯಗೊಂಡು ಸಿದ್ಧಾರ್ಥನ ತೆಕ್ಕೆಯಲ್ಲಿ ಬೀಳುತ್ತದೆ. ಅದನ್ನು ಹೊಡೆದವನು ತಾನಾದ್ದರಿಂದ ಅದು ತನಗೆ ಸೇರಬೇಕೆಂದು ದೇವದತ್ತನೂ, ತನ್ನ ತೆಕ್ಕೆಯಲ್ಲಿ ಬಿದ್ದುದರಿಂದ ತನ್ನದೆಂದು ಸಿದ್ಧಾರ್ಥನೂ ವಾದ ಹೂಡುತ್ತಾರೆ. ವಿಷಯ ಶುದ್ದೋಧನ ಮಹಾರಾಜನ ಬಳಿ ಹೋಗುತ್ತದೆ. ಆ ಹಕ್ಕಿಯನ್ನು ತೆಗೆದುಕೊಂಡು ಏನು ಮಾಡುತ್ತೀರಿ ಅನ್ನುವ ಮಹಾರಾಜನ ಪ್ರಶ್ನೆಗೆ ದೇವದತ್ತ ,`ನನಗೆ ಬೇಕಾದ್ದು ಮಾಡಿಕೊಳ್ತೀನಿ, ಅದು ನನ್ನ ಹಕ್ಕಿ’ ಅನ್ನುತ್ತಾನೆ. ಸಿದ್ಧಾರ್ಥ, `ಅದರ ಆರೈಕೆ ಮಾಡಿ ಬಿಟ್ಟುಬಿಡುತ್ತೀನಿ, ಅದು ಇರುವುದಾದರೆ ಇರಲಿ, ಹೋಗುವುದಾದರೆ ಹೋಗಲಿ’ ಅನ್ನುತ್ತಾನೆ. ಸಹಜವಾಗಿಯೇ ಹಕ್ಕಿ ಸಿದ್ಧಾರ್ಥನ ಪಾಲಾಗುತ್ತದೆ.


ಸಿದ್ಧಾರ್ಥನ ಈ ಉತ್ತರ ಗೌತಮ ಬುದ್ಧನಾಗಿ ಟಿಸಿಲೊಡೆದ ಮೊಳಕೆ ಅನ್ನಬಹುದು. ಸಿದ್ಧಾರ್ಥ ಹಕ್ಕಿಗೆ ಆರೈಕೆ ಮಾಡಿ ಜೀವ ಹಾನಿಯನ್ನು ತಪ್ಪಿಸುವಲ್ಲಿ ಮಾತ್ರ ಉತ್ಸುಕನೇ ಹೊರತು ಅದನ್ನು ಸಾಕಿಕೊಂಡು ಅದರ ಸ್ವಾತಂತ್ರ್ಯ ಹರಣ ಮಾಡಲಿಕ್ಕಲ್ಲ. ಆ ಹಕ್ಕಿಯ ಮೇಲೆ ಒಡೆತನ ಸಾಧಿಸುವುದು ಅವನ ಉದ್ದೇಶವಾಗಿರಲೇ ಇಲ್ಲ. ಅಷ್ಟಾಗಿಯೂ ಆ ಹಕ್ಕಿ ತನ್ನ ಜೊತೆ ಇರುವುದಾದರೆ ಇರಲಿ, ಹಾರಿ ಹೋದರೆ ಬೇಸರವಂತೂ ಇಲ್ಲ!


ಪುಟ್ಟ ಸಿದ್ಧಾರ್ಥ ರಾಜಕುಮಾರನಾಗಿ ಬೆಳೆದುನಿಂತಾಗ ಎಲ್ಲ ವಿಧೇಯ ಮಕ್ಕಳಂತೆ ತಾಯ್ತಂದೆಯರ ಬಯಕೆಯನ್ನೊಪ್ಪಿ ಮದುವೆಯಾಗುತ್ತಾನೆ. ಯಶೋಧರೆಯ ಜೊತೆ ಅವನದ್ದು ಸಮರೂಪದ ದಾಂಪತ್ಯ. ರಾಹುಲನೆಂಬ ಮಗನೂ ಹುಟ್ಟುತ್ತಾನೆ.

ಬದುಕು ಯಾವ ಏರಿಳಿತಗಳೂ ಇಲ್ಲದೆ ಸಾವಧಾನ ಗತಿಯಲ್ಲಿ ಸಾಗಿರುವಾಗ ಸಿದ್ಧಾರ್ಥನಲ್ಲಿ ಬದುಕಿನ ಸಾರ್ಥಕತೆಯ ಬಗ್ಗೆ ಜಿಜ್ಞಾಸೆ ಮೂಡತೊಡಗುತ್ತದೆ. ಯಾವಾಗ ವ್ಯಕ್ತಿಯೊಬ್ಬ ಉತ್ಕಟ ಪ್ರೇಮವನ್ನು ಅನುಭವಿಸತೊಡಗುತ್ತಾನೋ ಆಗ ಅದರ ಉಳಿಗಾಲದ ಕುರಿತು ಆತಂಕಗೊಳ್ಳುವುದು ಸಹಜ. ಆ ಪ್ರೇಮವನ್ನು ಉಳಿಸಿಕೊಳ್ಳಲೇಬೇಕೆಂದು ಹಟಕ್ಕೆ ಬೀಳುವುದೂ ಸಹಜ. ತನಗೆ ಮಗುವಾದರೂ ಇನ್ನೂ ತುತ್ತಿಡುವ ತಾಯಿ, ಅಂಗೈ ಮೇಲೆ ನಡೆಸುವಂಥ ತಂದೆ, ಸದಾ ಕಣ್ರೆಪ್ಪೆಯಲ್ಲೇ ಇರಿಸಿಕೊಳ್ಳುವ ಹೆಂಡತಿ, ಜೀವದ ತುಣುಕೇ ಆದ ಮಗ – ಈ ಎಲ್ಲರು ಒಟ್ಟು ಸೇರಿ ತಾನು ರೂಪುಗೊಂಡಿದ್ದೇನೆ ಅನ್ನುವಷ್ಟು ಅನುರಾಗ ಸಿದ್ಧಾರ್ಥನದು.

ಹಾಗಾದರೆ, ಈ ಇಷ್ಟರಲ್ಲಿ ಯಾವುದಾದರೊಂದಕ್ಕೆ ಊನ ಬಂದರೂ ತಾನು ಅಪರಿಪೂರ್ಣನಾಗಿ ಬಿಡುವೆನೇ? ಸಿದ್ಧಾರ್ಥ ಅರ್ಥ ಕಳೆದುಕೊಳ್ಳುವನೆ? ಹಾಗಾದರೆ ವ್ಯಕ್ತಿಯೊಬ್ಬ ಯಾವೆಲ್ಲದರಿಂದ ರೂಪುಗೊಳ್ಳುತ್ತಾನೆ? ಯಾವುದರಿಂದ ಪರಿಪೂರ್ಣನಾಗುತ್ತಾನೆ? ಎಂದಿಗೂ ಆತನನ್ನು ಬಿಟ್ಟು ಹೋಗದ, ಆತನ ಪೂರ್ಣತೆಗೆ ಭಂಗ ತರದೆ ಇರುವಂಥ ವಸ್ತುವೇನಾದರೂ ಇದೆಯೇ? ಅದು ಏನು? ಅದನ್ನು ಹೊಂದುವುದು ಹೇಗೆ?
ಈ ಪ್ರಶ್ನೆಗಳು ಸಿದ್ಧಾರ್ಥನನ್ನು ಮುತ್ತಿಕೊಂಡಿದ್ದು ನಗರ ಸಂಚಾರದ ಸಮಯದಲ್ಲಿ.

ಸಿದ್ಧಾರ್ಥನ ಈ ನಗರ ಸಂಚಾರ ಎರಡು ಸಂಗತಿಗಳನ್ನು ಸೂಚ್ಯವಾಗಿ ಹೇಳುತ್ತದೆ. ಮೊದಲನೆಯದಾಗಿ, ಗೋಡೆಗಳ ಮುಚ್ಚಟೆಯಾಚೆ ನಿಜದ ಬದುಕು ತೆರೆದುಕೊಳ್ಳುವುದನ್ನು; ಎರಡನೆಯದಾಗಿ, ಚಲನೆಯಲ್ಲಿ ಮಾತ್ರ ನಿರಂತರವೂ ಆದ ಶಾಶ್ವತ ಸತ್ಯದ ಭೇಟಿ ಸಾಧ್ಯ ಅನ್ನುವುದನ್ನು.

ಗೋಡೆಗಳ ಸ್ವಯಂವಿಧಿತ ಬಂಧನದಲ್ಲಿ ಬೆಳೆದ ಸಿದ್ಧಾರ್ಥ ಲೋಕಾರೂಢಿಗೆ ಪರಿಚಿತನಲ್ಲ. ಅವನು ಮುಕ್ತವಾಗಿ ಸಂಚರಿಸಿದ್ದೂ ಆವರೆಗೆ ಇಲ್ಲ. ಅವನು ಬಯಲಿಗೆ ಬಂದೊಡನೆ, ಚಲನೆಗೆ ಹೊಂದಿಕೊಂಡ ಒಡನೆ, ಬದುಕಿನ ನಿತ್ಯ ಸತ್ಯಗಳು ಗೋಚರವಾಗುತ್ತವೆ.

ಹಾಗಂತ ಸಿದ್ಧಾರ್ಥ ನೋಡಿದ ರೋಗ, ಮುಪ್ಪು, ಸಾವುಗಳೆಲ್ಲವೂ ಅವನಿಗೆ ಮಾತ್ರ ಕಂಡದ್ದೇ? ಅದೆಷ್ಟು ಮಂದಿ ನಿತ್ಯವೂ ಅವಕ್ಕೆ ಸಾಕ್ಷಿಯಾಗಿಲ್ಲ?

ನಿಜ. ಎಲ್ಲರೂ ಜೀವನದ ನಾಲ್ಕು ಸತ್ಯಗಳನ್ನು ನೋಡುತ್ತಿದ್ದರು, ಸಿದ್ಧಾರ್ಥ ಕಾಣತೊಡಗಿದ. ನೋಟಕ್ಕೂ ಕಾಣ್ಕೆಗೂ ವ್ಯತ್ಯಾಸವಿದೆ. ನೋಟ, ಹೊರಗಣ್ಣಿನ ಪರದೆ ಮೇಲೆ ಮೂಡಿ ಅಳಿಯುವ ಪ್ರಕ್ರಿಯೆ. ಕಾಣ್ಕೆ, ಒಳಗಣ್ಣಿಗೆ ದಕ್ಕಿ ಉಳಿಯುವ ಪ್ರಕ್ರಿಯೆ.

ಸಿದ್ಧಾರ್ಥ ಜೀವನದ ನಾಲ್ಕು ಸತ್ಯಗಳನ್ನು ಕಂಡ. ಬಯಲಲ್ಲಿ ದಕ್ಕಿದ್ದು, ಗೋಡೆಗಳ ಒಳಗೆ ಅವನನ್ನು ಇರಗೊಡದಾಯಿತು. ತನ್ನ ಹೆಂಡತಿಯನ್ನು ನೋಡಿದ. ತಾಯಿ, ತಂದೆ, ಮಗು, ಎಲ್ಲರಲ್ಲೂ ನಾಲ್ಕು ಸತ್ಯಗಳ ಪರಿಣಾಮವನ್ನು ಕಂಡ. ಚಡಪಡಿಸತೊಡಗಿದ.

ಹಾಗಾದರೆ, ಸಿದ್ಧಾರ್ಥ ಅವುಗಳನ್ನು ಎದುರಿಸದೆ ಹೋದ ಪಲಾಯನವಾದಿಯೇ? ಇನ್ನೆಂದೋ ಎದುರಿಸಬೇಕಾದ ವಿರಹವನ್ನು, ಕಳೆದುಕೊಳ್ಳುವ ನೋವನ್ನು ಇಂದೇ ದಾಟಿಬಿಡೋಣ ಅಂದುಕೊಂಡನೆ? ಅಥವಾ ಆ ನೋವು, ಆ ನಷ್ಟ ಯಾವುದೂ ತನ್ನನ್ನು ಬಾಧಿಸದಂತೆ ಭವಾಬ್ದಿಯನ್ನೆ ದಾಟುವ ಇಚ್ಛೆಯಿಂದ ಹೊರಟನೇ?

ಸಿದ್ಧಾರ್ಥ ಅರಮನೆಯಿಂದ ಯಾರಿಗೂ ತಿಳಿಸದಂತೆ ಹೊರಟು ಬಂದುದರ ಕಾರಣ ತನ್ನ ಕಾಣ್ಕೆಯ ಮುಂದೆ ಏನಿದೆ ಅನ್ನುವುದನ್ನು ಅರಿತುಕೊಳ್ಳುವುದೇ ಆಗಿತ್ತು. ಜೀವನದ ನಾಲ್ಕು ಸತ್ಯಗಳೇ ಅಂತಿಮವಲ್ಲ. ಅವು ಯಾವುದೇ ಜೀವಿಯ ಆತ್ಯಂತಿಕ ಗತಿಯನ್ನು ಹೇಳುವುದಿಲ್ಲ. ಈ ಕಾಣ್ಕೆಯಾಚೆಗೂ ಮತ್ತೇನೋ ಇದೆ. ಅವು ಹುಟ್ಟಿಸುವ ಆತಂಕಗಳಿಗೆ ಪರಿಹಾರವೊಂದಿದೆ. ಆ ಆತಂಕಗಳೇ ಹುಟ್ಟದಂತೆ ಸಂಭಾಳಿಸಬಲ್ಲ ತಿಳಿವೊಂದಿದೆ ಅನ್ನುವುದು ಸಿದ್ಧಾರ್ಥನಿಗೆ ಮನವರಿಕೆಯಾಗಿತ್ತು.

ಮನೆ ಬಿಟ್ಟು ಹೊರಟವನೇ ತನ್ನ ಸಾರಥಿಯನ್ನೂ ಕುದುರೆ ಕಂಥಕನನ್ನೂ ಮರಳಿ ಕಳುಹಿಸಿದ. ದಿನಗಟ್ಟಲೆ, ವಾರಗಟ್ಟಲೆ ಅನ್ನಾಹಾರಗಳಿಲ್ಲದೆ ತಪೋನಿರತನಾದ. ಅವನ ಪ್ರಯತ್ನದ ಪ್ರಮಾಣವರಿಯುವ ಪರೀಕ್ಷೆಗಳೂ ಬಂದವು. ಎಲ್ಲವನ್ನೂ ಗೆದ್ದ ಗೌತಮ ಮಹಾಬೋಧಿಯ ಕೆಳಗೆ ಜ್ಞಾನವನ್ನು ಪಡೆದ. ಯಾವ ಜ್ಞಾನವನ್ನು ಪಡೆಯುವುದರಿಂದ ಆತ ಎಲ್ಲ ದುಃಖ ಕ್ಲೇಶಗಳನ್ನು ಮೀರಿ ಕೇವಲ ಆನಂದ ಮಾತ್ರದಲ್ಲಿ ಸ್ಥಾಯಿಯಾಗಿರಬಲ್ಲನೋ ಆ ಜ್ಞಾನವನ್ನು ಪಡೆದ. ಅದು ಕೂಡ ವೈಶಾಖ ಹುಣ್ಣಿಮೆಯ ದಿನವಾಗಿತ್ತು.

ಸಿದ್ಧಾರ್ಥ ಬುದ್ಧನಾದ. ಬೋಧೆ ಪಡೆದವನು ಬುದ್ಧ. ಬುದ್ಧರು ಎಂದಿಗೂ ಬದ್ಧರಲ್ಲ. ಅವರು ಯಾವ ಸುಖದಲ್ಲೂ ಸವಲತ್ತಿನಲ್ಲೂ ಬಂಧಿಯಾಗಿರುವುದಿಲ್ಲ. ಅವರು ಎಲ್ಲದರಿಂದಲೂ – ಜನನಮರಣ ಚಕ್ರದಿಂದಲೂ ಮುಕ್ತರು. ಅವರು ರಾಗದ್ವೇಷಗಳಿಂದಲೂ ಮುಕ್ತರು. ಅಂತೆಯೇ ಬುದ್ಧ ತಾನು ಪಡೆದ ತಿಳಿವಿನ ಆನಂದಕ್ಕೆ ಬದ್ಧನಾಗಿ ಉಳಿದುಬಿಡಲಿಲ್ಲ. ಆತ ಅದನ್ನೂ ಮೀರಿ ಚಲಿಸತೊಡಗಿದ. ಪಡೆದದ್ದನ್ನು ಹಂಚಿದಾಗಲಷ್ಟೇ ಅದು ನಮ್ಮೊಡನೆ ಉಳಿದುಕೊಳ್ಳುತ್ತದೆ. ಹಾಗೆಯೇ ಇರಿಸಿಕೊಂಡರೆ ಅದಕ್ಕೆ ಮಹತ್ವವೇ ಬರುವುದಿಲ್ಲವಾದ್ದರಿಂದ ವ್ಯರ್ಥವಾಗಿಹೋಗುತ್ತದೆ.

ಬುದ್ಧ ಯಾವುದನ್ನೂ ಒಂದು ಗೊತ್ತುವಳಿ ಇಟ್ಟುಕೊಂಡು ಮಾಡಲಿಲ್ಲ. `ಸುಧಾರಣೆ’ ಮಾಡುತ್ತೇನೆಂದು ಆತ ಹೇಳಿಕೊಳ್ಳಲೂ ಇಲ್ಲ. ದಾರಿಯಲ್ಲಿ ನಡೆದು ಹೋಗುವಾಗ ಬೆಸ್ತನೊಬ್ಬ ಬಲೆ ಎಸೆಯುತ್ತಿದ್ದುದನ್ನು ಕಂಡ, `ನನ್ನ ಜೊತೆ ಬಾ’ ಅಂದ.

ಇದು ಬಹಳ ಸರಳವಾಗಿದೆ. ಬುದ್ಧ ಮತ್ತೇನೂ ಹೇಳಲಿಲ್ಲ. ಆಗಿನ ಕಾಲಮಾನದಲ್ಲಿ (ಇಂದು ಕೂಡ) ಬೆಸ್ತರು ತಳವರ್ಗದವರಾಗಿ ಪರಿಗಣಿಸಲ್ಪಟ್ಟಿದ್ದರು. ಅವರನ್ನು ಸಮಾಜ ಮುಖ್ಯವಾಹಿನಿಯಲ್ಲಿ ಸೇರಿಸಿಕೊಳ್ತಿರಲಿಲ್ಲ. ವಿದ್ಯಾಬುದ್ಧಿಗಳಾಗಲೀ ಧರ್ಮಾಧ್ಯಾತ್ಮಗಳಾಗಲೀ ಅವರಿಗೆ ಸಲ್ಲುವ ಸಂಗತಿಗಳೇ ಆಗಿರಲಿಲ್ಲ. ಬುದ್ಧ ವಿಶೇಷವಾಗಿ ಏನನ್ನೂ ಮಾಡಲಿಲ್ಲ. ಜೊತೆಯಲ್ಲಿ ಬಾ ಎಂದ. ಬಂದವನ ಹೆಗಲ ಮೇಲೆ ಕೈಹಾಕಿ ತನ್ನವನನ್ನಾಗಿಸಿಕೊಂಡ.

ನಾಲ್ಕು ಸತ್ಯಗಳಲ್ಲಿ ಯಾವುದೊಂದರ ಅನುಭವದ ಹೊಡೆತಕ್ಕೋ ನೋಟಕ್ಕೋ ಸಿಕ್ಕು ಜರ್ಝರಿತರಾದವರನ್ನು ಕಂಡು ಸಹಾನುಭೂತಿ ತೋರಿಸಿದ. ತಾನು ಅದರ ಕಾಣ್ಕೆಯಾಚೆಯ ಬೆಳಕನ್ನು ಹೊಂದಿರುವೆನೆಂದು ಹೇಳಿ, ಅವರೂ ಅದನ್ನು ಪಡೆಯುವ ಭರವಸೆಯಿತ್ತ.

ಬೆಳಕಿನ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ!? ಸಾಗರದಂತೆ ಜನ ಬುದ್ಧನ ಸುತ್ತ ನೆರೆದರು. `ಸಂಘ’ವಾಯ್ತು. ತಮ್ಮನ್ನು ಬುದ್ಧಾನುಯಾಯಿಗಳೆಂದು ಗುರುತಿಸಿಕೊಳ್ಳುವ ಕಾವಿ ಉಡುಗೆಗಳು ಅರಳಿಕೊಂಡವು, ಬಿಕ್ಖುಗಳು ನಡೆದಾಡುವ ಸೂರ್ಯರಂತೆ ಕಂಗೊಳಿಸತೊಡಗಿದರು.

ಬುದ್ಧ ತನ್ನ ಬೋಧನೆಗಳ ಮೂಲಕ ಬೆಳಕನ್ನು ಬಿತ್ತಿದ. ಈ ಬೆಳಕು ಹಬ್ಬಿ ಶತಶತಮಾನಗಳನ್ನು ದಾಟುತ್ತ ಪೂರ್ವ – ಪಶ್ಚಿಮ – ಉತ್ತರ – ದಕ್ಷಿಣಗಳನ್ನೆಲ್ಲ ತಬ್ಬಿಕೊಂಡವು.

ಇಷ್ಟಕ್ಕೂ ಬುದ್ಧ ಹೇಳಿದ್ದು ಇಷ್ಟೇ; `ಹಿಂಸೆ ಮಾಡಬೇಡಿ, ಆಸೆ ಪಡಬೇಡಿ, ಶಾಂತಿಯಿಂದಿರಿ, ಸಾಕ್ಷಿಯಾಗಿರಿ’. ಎಷ್ಟು ಸರಳ ಮತ್ತು ಸುಲಭ!

ಬುದ್ಧ ಯಾಗ ಯಜ್ಞಗಳನ್ನಾಗಲೀ ಯಮನಿಯಮಗಳನ್ನಾಗಲೀ ಪೂಜೆಪುನಸ್ಕಾರಗಳನ್ನಾಗಲೀ ಮಾಡಿರೆಂದು ತಾಕೀತು ಮಾಡಲಿಲ್ಲ. ಅವೆಲ್ಲವನ್ನೂ ನಿಲ್ಲಿಸಿ, ನಿಮ್ಮನ್ನು ನೀವು ನೋಡಿಕೊಳ್ಳಿ, ಸೃಷ್ಟಿಯಲ್ಲಿ ನೀವೇನೆಂದು ಅರಿತುಕೊಳ್ಳಿ ಸಾಕು ಎಂದ. ಅವನ ಪ್ರೇಮಕಾರುಣ್ಯ ಝರಿಯಲ್ಲಿ ಅಧ್ಯಾತ್ಮ ನಿರಾಕರಿಸಲ್ಪಟ್ಟಿದ್ದ ದಲಿತರೂ ಹೆಣ್ಣುಗಳೂ ಸರ್ವಸಮಾನವಾಗಿ ಮಿಂದರು.

ಬುದ್ಧನ ವಿಶಾಲ ಎದೆಯಂಗಳದಲ್ಲಿ ತಾವಿಲ್ಲದೆ ಇದ್ದುದು ಒಂದೇ ಸಂಗತಿಗೆ. ಹೌದು, ಸಕಲ ನಕಾರಾತ್ಮಕ ಚಿಂತನೆಗೂ ಮೂಲಬೀಜವಾದ `ಭೇದ’ಕ್ಕೆ ಅಲ್ಲಿ ಜಾಗವಿರಲಿಲ್ಲ.
ಬುದ್ಧನಿಗೆ ತನ್ನ ಈ ಎಲ್ಲ ನಡೆ, ಈ ಎಲ್ಲ ನುಡಿ ಎರಡು ಸಹಸ್ರಮಾನಗಳಾಚೆ ಹೆಚ್ಚು ಅನಿವಾರ್ಯವಾಗುತ್ತದೆಂಬ ಅರಿವಿತ್ತೇನೋ; ಇಂದಿಗೆ ಸಲ್ಲುವ ಎಲ್ಲ ಬೋಧೆಗಳ ಬೀಜ ಬಿತ್ತಿ ನಿರ್ವಾಣ ಪಡೆದ. ಆತ ಕುಶೀನಗರದಲ್ಲಿ ಕಣ್ಮುಚ್ಚಿದ ದಿನವೂ ವೈಶಾಖ ಹುಣ್ಣಿಮೆಯೇ ಆಗಿತ್ತು.

2 Comments

  1. ಉತ್ತಮ ಲೇಖನ.ಅಭಿನಂದನೆಗಳು.

Leave a Reply