ಬುದ್ಧ ಹೇಳಿದ್ದು : ಅರಳಿಮರ POSTER

ನಾವು ಏನಾಗಿದ್ದೇವೋ ಅದು ನಮ್ಮ ಯೋಚನೆಯ ಫಲ. ಯೋಚನೆಗಳೇ ನಮ್ಮ ಸ್ಥಿತಿಗೆ ತಳಹದಿ ~ ಗೌತಮ ಬುದ್ಧ

b new

ನಾವು ಯಾವಾಗಲೂ ಏನನ್ನು ಆಲೋಚಿಸುತ್ತ ಇರುತ್ತೇವೋ ಅದೇ ಆಗಿ ಹೊರಹೊಮ್ಮುತ್ತೇವೆ. ಸದಾ ಕೆಡುಕನ್ನೆ ಕುರಿತು ಯೋಚಿಸುತ್ತಿದ್ದರೆ ನಮ್ಮೊಳಗೆ ಆ ವಿಚಾರವೇ ತುಂಬಿಕೊಂಡು, ಕ್ರಮೇಣ ನಾವೂ ಕೆಡುಕರಾಗಿಬಿಡುತ್ತೇವೆ. ಆದ್ದರಿಂದಲೇ, ‘ಸದಾ ಸಚ್ಚಿಂತನೆ ಮಾಡುತ್ತಿರಿ’ ಎಂದು ಜ್ಞಾನಿಗಳು ಹೇಳುವುದು. 

ನಿಮಗೆ ಸೂಳೆ ಮತ್ತು ಸನ್ಯಾಸಿಯ ಕಥೆ ಗೊತ್ತಿರಬೇಕು. ದೇಗುಲದ ಜಗಲಿ ಮೇಲೆ ಒಬ್ಬ ಸನ್ಯಾಸಿ, ಅದರ ಎದುರು ಭಾಗದ ಕೋಠಿಯಲ್ಲೊಬ್ಬ ಸೂಳೆ ಇರುತ್ತಿದ್ದರು. ಸನ್ಯಾಸಿ ಯಾವಾಗಲೂ ಸೂಳೆ ಮನೆಯತ್ತಲೇ ದೃಷ್ಟಿ ನೆಟ್ಟು; ಅಲ್ಲಿ ಯಾರು ಬರುತ್ತಾರೆ, ಯಾರು ಹೋಗುತ್ತಾರೆ ಎಂದು ಗಮನಿಸುತ್ತಲೇ ಇರುತ್ತಿದ್ದ. ಅವರು ಏನೆಲ್ಲ ಮಾಡಬಹುದು ಎಂದು ಕಲ್ಪಿಸಿಕೊಳ್ಳುತ್ತ ಅದನ್ನೆ ಆಲೋಚಿಸುತ್ತಿದ್ದ. 

ಸೂಳೆ ತನ್ನ ಕೋಠಿಯ ದ್ವಾರದಲ್ಲಿ ನಿಂತು ದೇವಸ್ಥಾನಕ್ಕೆ ಬರುವ – ಹೋಗುವವರನ್ನೆಲ್ಲ ನೋಡುತ್ತ ನಿಲ್ಲುತ್ತಿದ್ದಳು. ಅವರು ಭಗವಂತನನ್ನು ಹೇಗೆ ಪೂಜಿಸಬಹುದು, ಹೇಗೆ ಧ್ಯಾನಿಸಬಹುದು ಎಂದು ಚಿಂತಿಸುತ್ತಿದ್ದಳು. 

ಅವರಿಬ್ಬರೂ ತೀರಿಕೊಂಡು ತಮ್ಮ ತಮ್ಮ ಕರ್ಮಾನುಸಾರ ಸ್ಥಾನಗಳನ್ನು ಪಡೆದರು. ಸೂಳೆ ಸದಾ ದೇವಾಲಯವನ್ನೆ ಆಲೋಚಿಸುತ್ತ ದೇವರ ಸ್ಮರಣೆಯಲ್ಲೇ ಇರುತ್ತಿದ್ದರಿಂದ ಸ್ವರ್ಗ ಪಡೆದಳು; ಸಂನ್ಯಾಸಿ, ಸದಾ ಕೋಠಿಯನ್ನೆ ನೋಡುತ್ತ ವಿಷಯ ಚಿಂತನೆಯಲ್ಲಿ ಮುಳುಗಿದ್ದರಿಂದ ನರಕವನ್ನು ಪಡೆದ!

ಆದ್ದರಿಂದ, ನೀವು ತೋರಿಕೆಗೆ ಏನಿದ್ದೀರೋ, ಅದು ನೀವಲ್ಲ. ತೋರಿಕೆಯ ಇರುವಿನ ಫಲ ನಿಮಗೆ ದೊರೆಯುವುದಿಲ್ಲ. ದೊರೆತರೂ ಅದು ತಾತ್ಕಾಲಿಕ. ಅಂತರಂಗದಲ್ಲಿ ನೀವು ಏನಾಗಿ ರೂಪುಗೊಂಡಿದ್ದೀರೋ; ಯಾವ ಆಲೋಚನೆಗಳ ಮೊತ್ತವಾಗಿದ್ದೀರೋ, ಅದೇ ನಿಜವಾದ ನೀವು. ಅದಕ್ಕೆ ದೊರೆಯುವ ಫಲವೇ ನಿಮ್ಮ ಕರ್ಮಫಲ. 

Leave a Reply