ಬುದ್ಧ ಸೂಚಿಸಿದ ಧ್ಯಾನದ ಬಗೆಗಳಲ್ಲಿ ಐದು ‘ನಿತ್ಯಧ್ಯಾನ’ಗಳನ್ನು ಇಲ್ಲಿ ನೀಡಲಾಗಿದೆ. ಇವು ನಿಮ್ಮ ವ್ಯಕ್ತಿತ್ವವನ್ನು ಅರಳಿಸಿ ಆಧ್ಯಾತ್ಮಿಕ ಸ್ತರಕ್ಕೆ ಕೊಂಡೊಯ್ಯುವ ಮಾರ್ಗಗಳೂ ಆಗಿವೆ.
ಮೊದಲನೆಯದು ಪ್ರೀತಿಯ ಧ್ಯಾನ. ಇದರಲ್ಲಿ ನಿಮ್ಮ ಹೃದಯದ ಹೊಂದಾಣಿಕೆ ಮಾಡಿಕೊಳ್ಳಬೇಕು. ನಿಮ್ಮ ಪಾಲಿನದು ಮಾತ್ರವಲ್ಲ; ಎಲ್ಲರ ಸುಖ, ಸಂತೋಷಗಳನ್ನು ಬಯಸಬೇಕು; ನಿಮ್ಮ ಶತ್ರುಗಳ ಆನಂದವನ್ನೂ
ನೀವು ಬಯಸಬೇಕು.
ಎರಡನೆಯದು ಅನುಕಂಪದ ಧ್ಯಾನ. ಸಂಕಟದಲ್ಲಿರುವ ಎಲ್ಲ ಜೀವಿಗಳನ್ನು ಕುರಿತು ನೀವು ಚಿಂತಿಸಬೇಕು; ಅವರ ದುಃಖವನ್ನು ನೀವು ಅನುಭವಿಸಲಾರಿರಿ. ಆದರೆ, ಅದನ್ನು ಕುರಿತು ಆಳವಾಗಿ ಆಲೋಚಿಸಿ, ಅರಿಯಲು ಪ್ರಯತ್ನಿಸಿ. ಅದರಿಂದ ನಿಮ್ಮ ಆತ್ಮದಲ್ಲಿ ಅವರಿಗಾಗಿ ಆಳವಾದ ಅನುಕಂಪ – ಸಹಾನುಭೂತಿ ಉಂಟಾಗುವುದು.
ಮೂರನೆಯದು ಆನಂದದ ಧ್ಯಾನ. ಇಲ್ಲಿ ನೀವು ಇತರರ ಸಮೃದ್ಧಿಯನ್ನು ಕುರಿತು ಚಿಂತಿಸಬೇಕು. ಇತರರ ಸಂತೋಷದಲ್ಲಿ
ನೀವು ಸಂತೋಷವನ್ನು ಕಾಣಬೇಕು.
ನಾಲ್ಕನೆಯದು ಅಶುಚಿಯ ಧ್ಯಾನ. ಕೆಡುಕಿನ, ಭ್ರಷ್ಟಜೀವನದ ಕೆಟ್ಟ ಪರಿಣಾಮಗಳನ್ನು ಕುರಿತು ನೀವು ಚಿಂತಿಸಬೇಕು. ಒಂದು
ಕ್ಷಣದ ಸುಖ ಎಷ್ಟು ಕ್ಷುಲ್ಲಕ; ಆದರೆ ಅದರ ಪರಿಣಾಮಗಳು ಎಷ್ಟು ಘೋರ ಎಂಬುದನ್ನು ಮನದಟ್ಟು ಮಾಡಿಕೊಂಡು. ಅವುಗಳಿಂದ ದೂರ ಉಳಿಯುವ ಸಂಕಲ್ಪ ತೊಡಬೇಕು.
ಐದನೆಯದು ಶಾಂತಿಯ ಧ್ಯಾನ. ಇಲ್ಲಿ ನೀವು ಪ್ರೀತಿ – ದ್ವೇಷ, ಸರ್ವಾಧಿಕಾರ – ಸ್ವಾತಂತ್ರ್ಯ, ಬಡತನ – ಶ್ರೀಮಂತಿಕೆಗಳನ್ನು ಮೀರಿ ಉನ್ನತ ಭಾವದಲ್ಲಿರುತ್ತೀರಿ. ನಿಮ್ಮ ವಿಧಿಯನ್ನು ನೀವು ನಿಷ್ಪಕ್ಷಪಾತ ಶಾಂತಭಾವದಿಂದ, ಪರಿಪೂರ್ಣ ಶಾಂತಿಯಿಂದ ಪರಿಗಣಿಸುವಿರಿ.
(ಆಕರ : ಬುದ್ಧ ಸೂಕ್ತಿ)